ಮಾಡುವ ಕಾರ್ಯ ಭಿನ್ನ, ನ್ಯಾಯಸಮ್ಮತವಾಗಿದ್ದರೆ ಆತ್ಮತೃಪ್ತಿ: ಡಾ. ರಘು ನಾಯ್ಕ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಯಾವುದೇ ಕೆಲಸವಿರಲಿ ಅದನ್ನು ಜವಾಬ್ದಾರಿಯುತವಾಗಿ ನಿಭಾಯಿಸುವುದು, ಅದನ್ನು ಮತ್ತಷ್ಟು ಉತ್ತಮಗೊಳಿಸುವುದು ಮತ್ತು ನ್ಯಾಯಸಮ್ಮತವಾಗಿರುವಂತೆ ನೋಡಿಕೊಳ್ಳುವುದು ಬಹುಮುಖ್ಯವಾಗಿದ್ದು, ಈ ಮೂರು ಅಂಶಗಳು ಸಸೂತ್ರವಾಗಿ ನಡೆದರೆ ಮಾಡುವ ಕಾರ್ಯ ಸಾರ್ಥಕತೆ ಕಂಡುಕೊಳ್ಳುವುದಲ್ಲದೇ, ಆತ್ಮತೃಪ್ತಿಯೂ ದೊರೆಯುತ್ತವೆ ಎಂದು ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ರಘು ನಾಯ್ಕ್ ಹೇಳಿದರು.

ಅವರು ನೆಹರು ಯುವ ಕೇಂದ್ರ ಉಡುಪಿ, ರಾಷ್ಟ್ರೀಯ ಸೇವಾ ಯೋಜನೆ ಸರಕಾರಿ ಪ್ರಥಮದರ್ಜೆ ಕಾಲೇಜು ಬೈಂದೂರು ಹಾಗೂ ಸ್ನೇಹ ತರಂಗ ಬೈಂದೂರು ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಕಾಲೇಜಿನ ಎ.ವಿ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ’ವಿಷಯಾಧಾರಿತ ಶಿಕ್ಷಣ & ಜಾಗೃತಿ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಮಾತನಾಡಿದರು.

ಮಾಡುವ ಕೆಲಸವನ್ನು ಭಿನ್ನವಾಗಿಯೂ, ಆತ್ಮಸಾಕ್ಷಿಗೆ ತಕ್ಕುದಾಗಿಯೂ ಮಾಡಿದರೆ ಯಾರನ್ನೂ ಮೆಚ್ಚಿಸುವ, ಓಲೈಸುವ ಸಂದರ್ಭ ಬರುವುದಿಲ್ಲ. ಮಾತು ಮತ್ತು ಕೃತಿಯಲ್ಲಿ ಸಾಮ್ಯತೆ ಇರಬೇಕಾದರೆ ಅಂತಹದ್ದೊಂದು ಬದ್ಧತೆ ನಮ್ಮಲ್ಲಿರಬೇಕು.

ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ವಿಲ್‌ಫ್ರೆಡ್ ಡಿಸೋಜಾ ಅಧ್ಯಕ್ಷತೆ ವಹಿಸಿ ಮಾತನಾಡಿ ನೆಹರು ಯುವ ಕೇಂದ್ರ ಯುವಕರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವರ ಸಬಲೀಕರಣಕ್ಕಾಗಿ ಶ್ರಮಿಸುತ್ತಿದೆ. ದೇಶದಲ್ಲಿಯು ಸಮಸ್ಯೆಗಳ ಬಗೆಗೆ ಅರಿವು ಮೂಡಿಸುವುದು ಹಾಗೂ ಆ ಮೂಲಕ ಜಾಗೃತರಾಗಿ ಸಮಸ್ಯೆ ನಿವಾರಣೆಗೆ ಶ್ರಮಿಸುವಂತೆ ಮಾಡುವುದು ವಿಷಯಾಧಾರಿತ ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮದ ಉದ್ದೇಶವಾಗಿದ್ದು, ಪ್ರತಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಉದ್ಘಾಟನಾ ಸಮಾರಂಭದ ಬಳಿಕ ನಾಲ್ಕು ವಿಷಯಗಳ ಕುರಿತು ಉಪನ್ಯಾಸ ಜರುಗಿತು. ಅಬ್ದುಲ್ ರವೂಫ್ ಅವರು ರಾಷ್ಟ್ರೀಯ ಐಕ್ಯತೆ, ಪಾಂಡುರಂಗ ಅವರು ಭ್ರಷ್ಟಾಚಾರ ಮುಕ್ತ ಭಾರತ, ಜ್ಯೋತಿ ಸಾಲಿಗ್ರಾಮ ಜಲ ಸಾಕ್ಷರತೆ, ಉದಯಕುಮಾರ್ ಶೆಟ್ಟಿ ಸ್ವಚ್ಛ ಭಾರತ ವಿಷಯದ ಕುರಿತು ಉಪನ್ಯಾಸ ನೀಡಿದರು.

ನೆಹರು ಯುವ ಕೇಂದ್ರದ ಸುನಿಲ್ ಹೆಚ್. ಜಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಲತಾ ಪೂಜಾರಿ ವಂದಿಸಿದರು. ವಿದ್ಯಾರ್ಥಿನಿ ಗೀತಾ ಕಾರ್ಯಕ್ರಮ ನಿರೂಪಿಸಿದರು.

 

Leave a Reply

Your email address will not be published. Required fields are marked *

13 + 2 =