ಕುಂದಾಪ್ರ ಡಾಟ್ ಕಾಂ ಸುದ್ದಿ,
ಕುಂದಾಪುರ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಉದ್ಘವಿಸುವುದಿಲ್ಲ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಇಡೀ ರಾಜ್ಯವೇ ಹೆಮ್ಮೆಪಡುವಂತೆ ಕೆಲಸ ಮಾಡುತ್ತಿದ್ದು, ಕರೋನಾ ತಡೆ ನಿಟ್ಟಿನಲ್ಲಿಯೂ ಅವರು ತೆಗೆದುಕೊಂಡ ನಿರ್ಧಾರ ಯಥಾವತ್ತು ಜಾರಿಗೆ ತರುವ ಮೂಲಕ ಕರೋನಾ ನಿರ್ಮೂಲನೆಗೆ ಪ್ರಯತ್ನಿಸಲಾಗುತ್ತದೆ ಎಂದು ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಅವರು ಬುಧವಾರ ಬೈಂದೂರು ತಾಲೂಕು ವಿವಿಧ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಕರೋನಾ ನಿಯಂತ್ರಣ ಕಾರ್ಯಪಡೆ ನಿರ್ವಾಹಣೆ ಕುರಿತು ಪರಿಶೀಲನಾ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲೇ ಬಿಜೆಪಿ ಸರ್ಕಾರ ಅವಧಿ ಪೂರ್ಣ ಮಾಡಲಿದೆ ಎಂದರು.
ಕರೋನಾ ನಿಯಂತ್ರಣಕ್ಕೆ ಬರಬೇಕಿದ್ದರೆ, ಗ್ರಾಮ ಪಂಚಾಯತಿ ಮುಖ್ಯಪಾತ್ರ ವಹಿಸಲಿದ್ದು, ತಮ್ಮ ತಮ್ಮ ವ್ಯಾಪ್ತಿಯಲ್ಲಿ ಪಾಸಿಟಿವ್ ಬಂದವರ ಹೋಮ್ ಕ್ವಾರಂಟೈನ್ ಮಾಡಿ ಹೊರಗೆ ಬಾರದಂತೆ ನಿಗಾ ಇಡಬೇಕು. ಪಾಸಿಟಿವ್ ಬಂದವರು ಕಣ್ಣುತಪ್ಪಿಸಿ ಹೊರಗೆ ತಿರುವುದರಿಂದ ಕರೋನಾ ಮತ್ತಷ್ಟು ಶೀಘ್ರವಾಗಿ ಹಬ್ಬಲಿದ್ದು, ಪಾಸಿಟಿವ್ ಮನೆಯ ಸೀಲ್ ಡೌನ್ ಮಾಡಿ, ಕರೋನಾ ವಾರಿಯರ‍್ಸ್ ಹೆದರಿಸುವುದು ಮುಂತಾದ ಸಂಗತಿಗಳಿದ್ದರೆ ಪೊಲೀಸ್ ಸಹಕಾರ ಪಡೆದು ಕರೋನಾ ನಿಯಂತ್ರಣ ಮಾಡುವಂತೆ ಸೂಚಿಸಿದರು.
ಗ್ರಾಮ ಪಂಚಾಯಿತಿ ಪಿಡಿಒ, ಕಾರ‍್ಯದರ್ಶಿ ಸಿಬ್ಬಂದಿ ಕರೋನಾ ವಾರಿಯರ‍್ಸ್ ಎಂದು ವಾಕ್ಸಿನ್ ನೀಡಲಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಕರೋನಾ ಕಾರ‍್ಯಪಡೆ ಸದಸ್ಯರಾಗಿದ್ದು, ಅವರನ್ನೂ ಯೋಧರೆಂದು ಪರಿಗಣಿಸಿ ವಾಕ್ಸಿನ್ ನೀಡುವ ಬಗ್ಗೆ ಚರ್ಚೆ ಮಾಡಿದ್ದು, ಈಗಾಗಲೇ ಮುಖ್ಯಮಂತ್ರಿ ಜೊತೆ ಗ್ರಾಪಂ ಸದಸ್ಯರಿಗೆ ವಾಕ್ಸಿನ್ ನೀಡುವಂತೆ ವಿನಂತಿ ಮಾಡಿದ್ದೇನೆ. ರಾಜ್ಯದ ಒಟ್ಟು 99 ಸಾವಿರ ಜನ ಗ್ರಾಮ ಸದಸ್ಯರಿದ್ದು, ಸಚಿವ ಸಂಪುಟದಲ್ಲಿ ಗಮನ ಸೆಳೆದು ವಾಕ್ಸಿನ್ ಬೇಡಿಕೆ ಪೂರೈಸಲಾಗುತ್ತದೆ ಎಂದು ಹೇಳಿದರು.
ಸಾಮಾಜಿಕ ಅಂತರ ಕಾಪಾಡುವುದು ಕರೋನಾ ನಿಯಂತ್ರಣದಲ್ಲಿ ಅನಿವಾರ್ಯವಾಗಿದ್ದು ನಿಯಮ ಉಲ್ಲಂಘನೆ ಆಗುವ ಯಾವುದೇ ಕಾರ‍್ಯಕ್ರಮಕ್ಕೆ ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟ ಪಡಿಸಿದ ಅವರು, ಬೈಂದೂರಿಗೆ ಕೊಲ್ಲೂರು ದೇವಸ್ಥಾನ ಮೂಲಕ 25 ಲಕ್ಷ ವೆಚ್ಚದಲ್ಲಿ ಡಯಾಲಿಸಿಸ್ ಯಂತ್ರ ನೀಡುವ ನಿರ್ಧಾರ ಮಾಡಿದ್ದು, ಜಾಗದ ಅವಕಾಶ ಇಲ್ಲದ ಕಾರಣ ಸಮಸ್ಯೆ ಆಗಿದ್ದು, ಸ್ಥಳಾವಕಾಶ ಆದರೆ ಡಯಾಲಿಸಿಸ್ ಯಂತ್ರ ಪೂರೈಕೆ ಮಾಡಲಾಗುತ್ತದೆ ಎಂದರು.
ಪ್ರತೀ ಜಿಲ್ಲೆಯಲ್ಲಿ ಬ್ಲಾಕ್ ಪಂಗಸ್ ಚಿಕಿತ್ಸೆ ನೀಡುಲು ಜಿಲ್ಲಾಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಗೆ ಸರ್ಕಾರ ನಿರ್ಧರಿಸಿದ್ದು, ಮಂಗಳೂರು ಮೆನ್‌ಲಾಕ್ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಸರ್ಕಾರಿ ಅಸ್ಪತ್ರೆ ಸೇವೆ ಇಲ್ಲದ ಕಡೆಯಲ್ಲಿ ಬೇರೆ ವ್ಯವಸ್ಥೆ ಮೂಲಕ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಯಾರೂ ಭಯಪಡುವ ಅವಶ್ಯವಿಲ್ಲ ಎಂದು ಹೇಳಿದರು.
ಬೈಂದೂರು ತಾಪಂ ಅಧ್ಯಕ್ಷ ಮಹೇಂದ್ರ ಪೂಜಾರಿ, ತಾಪಂ ಸದಸ್ಯ ಪ್ರವೀಣ್ ಕುಮಾರ್ ಶೆಟ್ಟಿ ಕಡ್ಕೆ, ಬೈಂದೂರು ತಹಸೀಲ್ದಾರ್ ಶೋಭಾಲಕ್ಷ್ಮೀ, ಇಒ ಭಾರತಿ, ತಾಲೂಕು ಆಸ್ಪತ್ರೆ ವೈದ್ಯೆ ಡಾ. ನಂದಿನಿ, ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ, ಕಿರಿಮಂಜೇಶ್ವರ ಗ್ರಾಪಂ ಅಧ್ಯಕ್ಷೆ ಗೀತಾ, ಕಿರಿಂಜೇಶ್ವರ ವೈದ್ಯಾಧಿಕಾರಿ ಡಾ.ನಿಶಾ ರೆಬೆಲ್ಲೊ ಇದ್ದರು.