ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೊರೋನಾ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ದೇಶದೆಲ್ಲೆಡೆ ಲಾಕ್‌ಡೌನ್ ಜಾರಿಯಲ್ಲಿದ್ದು, ಈ ನಡುವೆ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 9ರಿಂದ ಸಂಜೆ 6 ಗಂಟೆಯ ತನಕ ಅಂಗಡಿಗಳು ತೆರೆದಿರುತ್ತವೆ. ಸಾರ್ವಜನಿಕರು ಗೊಂದಲಕ್ಕೆ ಒಳಗಾಗದೇ ಸಾಮಾಜಿಕ ಅಂತರ ಪಾಲಿಸಿ, ಅಗತ್ಯ ವಸ್ತುಗಳನ್ನು ಖರೀದಿಸಬಹುದಾಗಿದೆ ಎಂದು ಕುಂದಾಪುರ ಎಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ಜನಸಾಮಾನ್ಯರ ಅಗತ್ಯತೆಯನ್ನು ಮನಗಂಡು ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ. ಹಾಗೂ ಹಾಗೂ ಎಎಸ್ಪಿ ಹರಿರಾಂ ಶಂಕರ್ ಜಂಟಿಯಾಗಿ ಈ ತೀರ್ಮಾನಕ್ಕೆ ಬಂದಿದ್ದು ಮಾಚ್.27ರಿಂದ ಬೆಳಿಗ್ಗೆ 9ರಿಂದ ಸಂಜೆ 6ಗಂಟೆಯ ತನಕ ಅಗತ್ಯ ವಸ್ತುಗಳಾದ ತರಕಾರಿ, ದಿನಸಿ, ಮೀನು, ಮಾಂಸ, ಹಣ್ಣು ಹಂಪಲು, ಮೆಡಿಕಲ್ ಶಾಪ್, ಹಾಲಿನ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಹಾಲು ಮತ್ತು ತರಕಾರಿ ಅಂಗಡಿ ಬೆಳಿಗ್ಗೆ 9ಗಂಟೆಗೆ ಮುಂಚಿತವಾಗಿ ಮತ್ತು ಮೆಡಿಕಲ್ ಶಾಪ್‌ಗಳು ಸಂಜೆ 6ಗಂಟೆಯ ನಂತರವೂ ತೆರೆಯಲು ಅವಕಾಶವಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ:
ಅಂಗಡಿಗಳಿಗೆ ತೆರಳುವ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದ್ದು, ಅಂಗಡಿ ಎದುರು ಈಗಾಗಲೇ ಗುರುತು ಮಾಡಿದರು ಸ್ಥಳದಲ್ಲಿ ಸಾಲಾಗಿ ನಿಂತು ವಸ್ತುಗಳನ್ನು ಕೊಳ್ಳುವುದು ಕಡ್ಡಾಯ. ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಗುಂಪುಗೂಡುವುದು, ಗೊಂದಲ ಸೃಷ್ಟಿಸುವುದು ಮತ್ತು ಅನಗತ್ಯವಾಗಿ ತಿರುಗಾಡುವುದು ಮಾಡಿದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಎಸ್ಪಿ ಎಚ್ಚರಿಸಿದ್ದಾರೆ./ಕುಂದಾಪ್ರ ಡಾಟ್ ಕಾಂ ಸುದ್ದಿ/