ಕುಂದಾಪುರ: ನಗರದ ಇಲ್ಲಿನ ಪಾರಿಜಾತ ವೃತ್ತದ ಬಳಿ ಇರುವ ಹೂವಿನ ಮಾರುಕಟ್ಟೆಯಲ್ಲಿ 6-7 ವರ್ಷದಿಂದ ಕರವನ್ನು ಕಟ್ಟದ ಹೂವಿನ ಟೇಬಲ್ ತೆರವು ಕಾರ್ಯಾಚರಣೆ ಕುಂದಾಪುರ ಪುರಸಭೆಯಿಂದ ನಡೆಯಿತು.
ಪುರಸಭೆಯ ಮುಖ್ಯಾಧಿಕಾರಿ ಗೋಪಾಲ ಶೆಟ್ಟಿ ಅವರ ನೇತೃತ್ವದಲ್ಲಿ ಪೌರಕಾರ್ಮಿಕರು ಕರವನ್ನು ಕಟ್ಟದ ನಾಲ್ಕು ಟೇಬಲ್‌ಗಳನ್ನು ತೆರವುಗೊಳಿಸಿದರು.
ಏಳು ಟೇಬಲುಗಳ ಹೂವಿನ ವ್ಯಾಪಾರಿಗಳು ಕಳೆದ ಏಳು ವರ್ಷಗಳಿಂದ ಪುರಸಭೆಗೆ ಕರವನ್ನು ಕಟ್ಟುತ್ತಿರಲಿಲ್ಲ. ಈ ಬಗ್ಗೆ ಪುರಸಭೆ ಬಹಳ ಹಿಂದೆಯೇ ನೋಟಿಸು ನೀಡಿ ಎಚ್ಚರಿಸಿತ್ತು. ಆದಾಗ್ಯೂ ಕರವನ್ನು ಕಟ್ಟಿರಲಿಲ್ಲ. ಕೊನೆಯ ಕ್ರಮವಾಗಿ ಈ ತೆರವು ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಬೇಕಾಯಿತು. ಏಳು ಜನರ ಪೈಕಿ ಮೂವರು ಸ್ಥಳದಲ್ಲಿಯೇ ಹಣವನ್ನು ಕಟ್ಟಿದ್ದರಿಂದ ನಾಲ್ಕು ಟೇಬಲುಗಳನ್ನು ತೆರವುಗೊಳಿಸಲಾಗಿದೆ ಎಂದು ಮುಖ್ಯಾಧಿಕಾರಿ ಕುಂದಾಪ್ರ ಡಾಟ್ ಕಾಂ ಗೆ ತಿಳಿಸಿದ್ದಾರೆ.
ಹೂವಿನ ಟೇಬಲ್ ವಿಷಯವಾಗಿ ಪುರಸಭೆಯ ಸಾಮಾನ್ಯ ಸಭೆಯಲ್ಲಿಯೂ ಚರ್ಚೆಗಳಾಗಿ, ತೆರವುಗೊಳಿಸುವ ನಿರ್ಣಯವನ್ನು ಕೈಗೊಳ್ಳಲಾಗಿತ್ತು.