ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ತ್ರಾಸಿ-ಮರವಂತೆ ಹಾಗೂ ಸೋಮೇಶ್ವರ ಬೀಚ್ ಅಭಿವೃದ್ಧಿ ಬಗ್ಗೆ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ಸಂಸದ ಬಿ. ವೈ. ರಾಘವೇಂದ್ರ ಅವರ ನೇತೃತ್ವದಲ್ಲಿ ಗುರುವಾರ ತ್ರಾಸಿ ಕೊಂಕಣ ಖಾರ್ವಿ ಸಭಾಭವನದಲ್ಲಿ ಪ್ರವಾಸೋದ್ಯಮ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಯಿತು.
ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಮಾತನಾಡಿ ಮರವಂತೆ ತ್ರಾಸಿ ಬೀಚ್ ಹಾಗೂ ಒತ್ತಿನಣೆಗೆ ಬೀಚ್ ಅಭಿವೃದ್ಧಿಗೆ ಒಟ್ಟು25 ಕೋಟಿ ರೂ ಯೋಜನೆ ಸಿದ್ಧವಾಗುತ್ತಿದೆ. ಮರವಂತೆ ಬೀಚ್‌ಗೆ ಈ ಮೊದಲೇ 5 ಕೋಟಿ ಯೋಜನೆ ಸಿದ್ಧಗೊಂಡಿದ್ದು ಬಜೆಟ್‌ನಲ್ಲಿ 10 ಕೋಟಿ ಹಾಗೂ ಸೋಮೇಶ್ವರ ಬೀಚ್‌ಗೆ10 ಕೋಟಿಗೆ ಅನುಮೋದನೆ ದೊರೆತಿದೆ. ಶೀಘ್ರವೇ ಎರಡೂ ಬೀಚ್‌ಗಳು ಮಾದರಿ ಪ್ರವಾಸಿ ತಾಣವಾಗಿ ರೂಪುಗೊಳ್ಳಲಿದೆ ಎಂದರು.
ಸಂಸದರಾದ ಬಿ. ವೈ. ರಾಘವೇಂದ್ರ ಅವರು ಮಾತನಾಡಿ ಪ್ರವಾಸೋದ್ಯಮಕ್ಕಾಗಿ ರಾಜ್ಯ ಸರಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಈ ಮೂಲಕ ಪ್ರವಾಸಿ ತಾಣ ಅಭಿವೃದ್ಧಿ ಜೊತೆಗೆ ಯುವಶಕ್ತಿಗೆ ಉದ್ಯೋಗವು ದೊರೆಯಲಿದೆ. ಸೋಮೇಶ್ವರ ಬೀಚ್ ಹಾಗೂ ತ್ರಾಸಿ ಮರವಂತೆ ಬೀಚ್ ಅಭಿವೃದ್ಧಿಗೆ ನೀಲನಕ್ಷೆ ತಯಾರಾಗಿದ್ದು ಶೀಘ್ರದಲ್ಲಿ ಡಿಪಿಆರ್ ತಯಾರಿಸಿ ಟೆಂಡರ್ ಕರೆಯಲಾಗುವುದು. ಬೈಂದೂರು ಒತ್ತಿನಣೆಯಲ್ಲಿ ಉಡಾನ್ ಯೋಜನೆಯಡಿ ಎರ್‌ಸ್ಟ್ರೀಪ್ ಮಾಡುವ ಅಪೇಕ್ಷೆ ಇದೆ ಎಂದರು.
ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್ ಅನಿತಾ ಭಾಸ್ಕರ್, ಅಸಿಸ್ಟೆಂಟ್ ಡೈರೆಕ್ಟರ್ ಸೋಮಶೇಖರ ಬಿ.ಕೆ, ಮಂಗಳೂರು ಪ್ರವಾಸೋದ್ಯಮ ಇಲಾಖೆಯ ಎಇಇ ಎ ಮಂಜಪ್ಪ, ಎನ್‌ಹೆಚ್‌ಆರ್ ಇಂಜಿನಿಯರ್ ರಮೇಶ್, ಕುಂದಾಪುರ ತಾಲೂಕು ಪಂಚಾಯತ್ ಅಧ್ಯಕ್ಷೆ ಇಂದಿರಾ ಶೆಟ್ಟಿ, ಬೈಂದೂರು ತಾಲೂಕು ಪಂಚಾಯತ್ ಅಧ್ಯಕ್ಷ ಮಹೇಂದ್ರ ಪೂಜಾರಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಶಂಕರ ಪೂಜಾರಿ ಯಡ್ತರೆ, ರೋಹಿತ್ ಕುಮಾರ್ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯರಾದ ಸುರೇಂದ್ರ ಖಾರ್ವಿ, ಉಮೇಶ್ ಶೆಟ್ಟಿ, ದೀಪಕ್‌ಕುಮಾರ್ ಶೆಟ್ಟಿ, ಪ್ರಕಾಶ್ ಜಿಡ್ಡು, ಪ್ರಿಯದರ್ಶಿನಿ ಬೆಸ್ಕೂರು, ವೆಂಕಟೇಶ್ ಕಿಣಿ, ಭಾಗೀರಥಿ ಸುರೇಶ್ ಮೊದಲಾದವರು ಇದ್ದರು.