ಯು. ಶ್ರೀನಿವಾಸ ಪ್ರಭು ಅವರಿಗೆ ನಾಟಕ ಅಕಾಡೆಮಿಯ ವಾರ್ಷಿಕ ರಂಗ ಪ್ರಶಸ್ತಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಂಗಕರ್ಮಿ, ಸಂಗೀತಗಾರ ಯು. ಶ್ರೀನಿವಾಸ ಪ್ರಭು ಅವರಿಗೆ ಕರ್ನಾಟಕ ನಾಟಕ ಅಕಾಡೆಮಿಯ 2020ನೇ ಸಾಲಿನ ವಾರ್ಷಿಕ ರಂಗಪ್ರಶಸ್ತಿ ಲಭಿಸಿದೆ. ಬೈಂದೂರಿನ ಹೆಸರಾಂತ ರಂಗ ಸಂಸ್ಥೆ ಲಾವಣ್ಯದ ಸ್ಥಾಪಕಾಧ್ಯಕ್ಷರಾದ ಯು. ಶ್ರೀನಿವಾಸ ಪ್ರಭು ಅವರು ಹತ್ತು ಹಲವು ನಾಟಕ ರಚನೆ, ನಿರ್ದೇಶನ, ಸಂಗೀತ ನಿರ್ದೇಶನ ಸೇರಿದಂತೆ ರಂಗಭೂಮಿ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.

ಉಪ್ಪುಂದದ ಯ ದೇವಿದಾಸ ಪ್ರಭುಗಳ ಮಗನಾಗಿ 1952ರಲ್ಲಿ ಜನಿಸಿದ ಶ್ರೀನಿವಾಸ ಪ್ರಭು ತಮ್ಮ ಶಿಕ್ಷಣವನ್ನು ಉಪ್ಪುಂದ ಹಾಗೂ ಬೈಂದೂರಿನಲ್ಲಿ ಮುಗಿಸಿದರು. ತನ್ನ ಬಾಲ್ಯದಿಂದಲೇ ಹರಿಕಥೆ, ಭಜನೆ, ಯಕ್ಷಗಾನ, ನಾಟಕಗಳ ಕಡೆಗೆ ಆಕರ್ಷಿತರಾಗಿ ವಿದ್ಯಾರ್ಥಿ ಜೀವನದಲ್ಲಿಯೇ ಸಣ್ಣಪುಟ್ಟ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದಾಗ ಊರಿನ ಸ್ನೇಹಿತರನ್ನು, ಸಹೋದ್ಯೋಗಿಗಳನ್ನು ಕೂಡಿಸಿಕೊಂಡು ಕನ್ನಡ, ಕೊಂಕಣಿ ನಾಟಕಗಳನ್ನು ಆಡುವ ಹವ್ಯಾಸ ಬೆಳೆಸಿಕೊಂಡರು. ಇದರ ಜೊತೆಗೆ ಸಂಗೀತ ಶಾಲೆ ಸೇರಿ ಸಂಗೀತ ಉಪಕರಣಗಳನ್ನು ನುಡಿಸಲು ಕಲಿತರು. ನಾಟಕಗಳಲ್ಲಿ ನಟನೆ, ನಿರ್ದೇಶನ, ಸಂಗೀತ ಸಂಯೋಜನೆಯನ್ನು ಹವ್ಯಾಸವಾಗಿ ಬೆಳೆಸಿಕೊಂಡರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಗುರು ಉಸ್ತಾದ್ ಕೆ. ಎಲ್. ಜಮಾದಾರ್‌ರಿಂದ ತಬಲಾವನ್ನು ಕಲಿತ ಪ್ರಭುಗಳು, ದಿ. ಕೆ.ಎಸ್. ಮಧ್ಯಸ್ಥ ಇವರಲ್ಲಿ ಭರತನಾಟ್ಯವನ್ನು, ಡಾ. ವೈ. ಚಂದ್ರಶೇಖರ ಶೆಟ್ಟಿ ಇವರ ನಿರ್ದೇಶನದಲ್ಲಿ ಯಕ್ಷಗಾನವನ್ನು ಕಲಿತದ್ದಲ್ಲದೇ, ಹಾರ್ಮೋನಿಯಂ, ಕೀ ಬೋರ್ಡ್, ತಬಲ, ಡೋಲಕ್ ಇತ್ಯಾದಿ ಉಪಕರಣಗಳಲ್ಲಿ ಪರಿಣತಿ ಹೊಂದಿದ ಅವರು ಮುಂದೆ ಲಾವಣ್ಯ ಸಂಸ್ಥೆಯೊಂದಿಗೆ ಬೆಳೆದು, ತಾಲೂಕಿನ ಹತ್ತಾರು ಶಾಲಾ ಕಾಲೇಜುಗಳ ವಾರ್ಷಿಕೋತ್ಸವಗಳಲ್ಲಿ ನಿರ್ದೇಶನ, ಸಂಗೀತ ನೀಡಿ ಅಪಾರ ಮನ್ನಣೆ ಗಳಿಸಿದ್ದರು. ಈವರೆಗೆ 30ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿ, 120ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿ, 500ಕ್ಕೂ ಮಿಕ್ಕಿ ನಾಟಕಗಳಿಗೆ ಸಂಗೀತ ನೀಡಿದ ಹೆಗ್ಗಳಿಕೆ ಇವರದ್ದು. ಮಾತ್ರವಲ್ಲದೇ ನಾಟಕ ರಚನೆಯಲ್ಲೂ ತೊಡಗಿಕೊಂಡು ಕನ್ನಡ, ಕೊಂಕಣಿ ನಾಟಕಗಳನ್ನು ರಚಿಸಿದ್ದಾರೆ.  ಕುಂದಾಪ್ರ ಡಾಟ್ ಕಾಂ.

ರಾಜ್ಯಮಟ್ಟದ ನಾಟಕ ಸ್ವರ್ಧೆಗಳಲ್ಲಿ ಶ್ರೇಷ್ಠ ನಿರ್ದೇಶನ, ಸಂಗೀತಕ್ಕೆ ಹಲವಾರು ಬಾರಿ ಪ್ರಶಸ್ತಿ ಸನ್ಮಾನಗಳನ್ನು ಪಡೆದಿದ್ದಲ್ಲದೇ ಡಾ| ಶಿವರಾಮ ಕಾರಂತ ಸದ್ಭಾವನಾ ರಾಜ್ಯ ಪ್ರಶಸ್ತಿ, 2013ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಶ್ರೀನಿವಾಸ ಪ್ರಭು ಅವರನ್ನು ಅರಸಿ ಬಂದಿದೆ.

ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ ತಿಂಗಳಿನಲ್ಲಿ ಬಳ್ಳಾರಿಯಲ್ಲಿ ನಡೆಯಲಿದ್ದು, ರಂಗ ಪ್ರಶಸ್ತಿಯು ನಟರಾಜ ವಿಗ್ರಹ, ಪ್ರಶಸ್ತಿ ಫಲಕ, ಶಾಲು, ಹಾರ, ಪ್ರಶಸ್ತಿ ಪತ್ರ ಹಾಗೂ ರೂ. 25,000ಗಳನ್ನು ಒಳಗೊಂಡಿರುತ್ತದೆ.

Leave a Reply

Your email address will not be published. Required fields are marked *

14 + four =