ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಹೊರರಾಜ್ಯಗಳಿಂದ ಬರುತ್ತಿರುವವರಿಗೆ ಸೂಕ್ತ ಮೂಲಭೂತ ಸೌಕರ್ಯ ಕಲ್ಪಿಸಿ ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ವಿಫಲವಾಗಿದೆ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್. ಹರಿಪ್ರಸಾದ ಶೆಟ್ಟಿ ಕಾನ್ಕಕ್ಕಿ ಆರೋಪಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಹುಟ್ಟಿ ಬೆಳೆದು ಹೊರ ರಾಜ್ಯಗಳಲ್ಲಿ ದುಡಿದು ಜಿಲ್ಲೆಯ ಆರ್ಥಿಕ, ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಿಗೆ ಮಹತ್ತರ ಕೊಡುಗೆ ನೀಡುತ್ತಿದ್ದ ಜನರನ್ನು ಈಗ ತೃತೀಯ ದರ್ಜೆ ನಾಗರಿಕರಂತೆ ನಡೆಸಿಕೊಳ್ಳುತ್ತಿರುವುದು ಜಿಲ್ಲೆಗೆ ಕಪ್ಪುಚುಕ್ಕೆಯಾಗಿದೆ. ಜಿಲ್ಲೆಯ ಶಿರೂರು ಗಡಿಯಲ್ಲಿರುವ ತಪಾಸಣಾ ಕೇಂದ್ರದಿಂದ ಪ್ರಾರಂಭಿಸಿ ಕ್ಟಾರೆಂಟೈನ್ ತನಕದ ಎಲ್ಲಾ ಪ್ರಕ್ರಿಯೆಗಳು ಅವ್ಯವಸ್ಥಿತವಾಗಿದ್ದು ಬಹು ದೂರದಿಂದ ಬಂದವರನ್ನು ಚೆಕ್ ಪೊಸ್ಟ್ ನಲ್ಲಿ ಗಂಟೆಗಟ್ಟಲೆ ಕಾಯಿಸಲಾಗುತ್ತಿದೆ. ಸರಕಾರಿ ಕ್ವಾರಂಟೈನ್‌ನಲ್ಲಿ ಇರುವವರಿಗೆ ಸರಿಯಾದ ಶೌಚಾಲಯ ಸ್ನಾನಗ್ರಹಗಳಲ್ಲಿ ಸಮರ್ಪಕ ನೀರು ಮತ್ತು ವಿದ್ಯುತ್ ವ್ಯವಸ್ಥೆ, ಶುದ್ಧ ಕುಡಿಯುವ ನೀರು ಕೂಡಾ ಇಲ್ಲ. ಕೆಲವೆಡೆ ಸಾಮಾಜಿಕ ಅಂತರ ಪಾಲನೆಯಾಗುತ್ತಿಲ್ಲ. ಬೆಳಗ್ಗಿನ ಉಪಹಾರ ಮದ್ಯಾಹ್ನದ ಊಟ ಮತ್ತು ರಾತ್ರಿಯ ಊಟ ಸರಿಯಾದ ಸಮಯಕ್ಕೆ ಸರಬರಾಜು ಆಗುತ್ತಿಲ್ಲ.
ಜಿಲ್ಲಾಡಳಿತ ಈ ಕೂಡಲೇ ಗಮನಹರಿಸಿ ಕ್ವಾರಂಟೈನ್ ಕೇಂದ್ರದಲ್ಲಿ ಸರಿಯಾದ ಸಮಯಕ್ಕೆ ಗುಣಮಟ್ಟದ ಊಟ ಮತ್ತು ಉಪಹಾರ ನೀಡಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಶೌಚಾಲಯ ಮತ್ತು ಸ್ನಾನಗೃಹಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಹಲವು ಗಂಟೆಗಳ ವಿದ್ಯುತ್ ವ್ಯತ್ಯಯ ಆಗದಂತೆ ನೋಡಿಕೊಳ್ಳಬೇಕು. ಬಹು ಮುಖ್ಯವಾಗಿ ಸಾಮಾಜಿಕ ಅಂತರ ಪಾಲನೆಯಾಗುವಂತೆ ನೋಡಿಕೊಳ್ಳಬೇಕು ಎಂದವರು ಆಗ್ರಹಿಸಿದ್ದಾರೆ.
ಜಿಲ್ಲೆಯ ಉನ್ನತ ಮಟ್ಟದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೇವಲ ಸಭೆ ನಡೆಸುವುದಕ್ಕೆ ಸೀಮಿತವಾಗಿದ್ದು ಕ್ಟಾರಂಟೈನ್ ಕೇಂದ್ರದ ಉಸ್ತುವಾರಿ ವಹಿಸಿಕೊಂಡಿರುವ ಕಿರಿಯ ಅಧಿಕಾರಿಗಳು ಹೈರಾಣಾಗಿದ್ದಾರೆ. ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ತಾನು ನಡೆದದ್ದೆ ದಾರಿ ಎನ್ನುವ ರೀತಿಯಲ್ಲಿ ಜಿಲ್ಲಾಡಳಿತ ಊಹಿಸಿದ್ದು ಇಷ್ಟೇಲ್ಲಾ ಅವಂತಾರಕ್ಕೆ ಕಾರಣ. ಇನ್ನಾದರೂ ವಾಸ್ತವಿಕ ಸಂಗತಿಗಳನ್ನು ಅರಿತು ಜಿಲ್ಲಾಡಳಿತ ಕೆಲಸ ಮಾಡಲಿ ಎಂದು ಎಚ್ ಹರಿಪ್ರಸಾದ ಶೆಟ್ಟಿ ಕಾನ್ಕಕ್ಕಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.