ಖಂಬದಕೋಣೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

ಕನ್ನಡದ ಉಳಿವಿಗೆ ಸರಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕು: ಹರಿಕೃಷ್ಣ ಪುನರೂರು
ಕುಂದಗನ್ನಡಕ್ಕೆ ಅಧ್ಯಯನ ಪೀಠ ಸ್ಥಾಪನೆಯಾಗಲಿ: ಸಮ್ಮೇಳನಾಧ್ಯಕ್ಷ ಡಾ. ಎಚ್. ಶಾಂತರಾಮ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಂದು ಕನ್ನಡ ಭಾಷೆ ಸಂದಿಗ್ದತೆಯಲ್ಲಿದೆ, ಅದರ ಉಳಿವಿಗಾಗಿ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಸರ್ಕಾರಕ್ಕೆ ಭಾಷೆಯ ಬಗ್ಗೆ ಕಾಳಜಿಯಿಲ್ಲದ ಕಾರಣದಿಂದಾಗಿ ದಿನಕ್ಕೊಂದು ಆಂಗ್ಲಮಾಧ್ಯಮ ಶಾಲೆ ತೆರೆಯಲು ಅನುಮತಿ ನೀಡುತ್ತಿದೆ. ಇದರಿಂದಾಗಿ ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯ ಕೊರತೆಯಿಂದ ಮುಚ್ಚಲ್ಪಡುತ್ತಿದೆ. ಅಧಿಕಾರಿಗಳಿಗೆ ಕನ್ನಡದ ಅರಿವಿಲ್ಲ ಎಂದು ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ವಿಷಾದ ವ್ಯಕ್ತಪಡಿಸಿದರು.

ಖಂಬದಕೋಣೆ ಸರಕಾರಿ ಪದವಿಪೂರ್ವ ಕಾಲೇಜಿನ ಮೊಗೇರಿ ಗೋಪಾಲ ಕೃಷ್ಣ ವೇದಿಕೆಯ, ಪುಂಡಲೀಕ ಹಾಲಂಬಿ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ೧೨ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ವರ್ಧಮಾನ ೨೦೧೮ನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಕನ್ನಡದ ಉಸಿರುಗಟ್ಟುತ್ತಿದೆ ಎಂದ ಅವರು ಸಾಮಾಜಿಕ ಜಾಲತಾಣದ ಪ್ರಭಾವದಿಂದಾಗಿ ಪುಸ್ತಕಗಳನ್ನು ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ. ಯುವ ಪೀಳಿಗೆ ಮನಸ್ಸನ್ನು ಅರಳಿಸುವ ಸಾಹಿತ್ಯ ಕೃತಿಗಳನ್ನು ಕೊಂಡು ಓದುವ ಹವ್ಯಾಸ ರೂಢಿಸಿಕೊಳ್ಳಬೇಕಲ್ಲದೇ, ರಾಜ್ಯದಲ್ಲಿರುವ ಪರಭಾಷಿಕರಿಗೆ ಕನ್ನಡ ಕಲಿಸುವ ಕೆಲಸ ಮಾಡಬೇಕು, ಆಗ ಮಾತ್ರ ಕನ್ನಡ ನಿರಂತರವಾಗಿ ಉಳಿಸಲು ಸಾಧ್ಯವಾಗುತ್ತದೆ ಎಂದರು.

ಸಮ್ಮೇಳನಾಧ್ಯಕ್ಷ, ಶಿಕ್ಷಣತಜ್ಞ ಡಾ. ಎಚ್. ಶಾಂತರಾಮ್ ಮಾತನಾಡಿ, ಸುಮಾರು ೨ ಸಾವಿರ ವರ್ಷಗಳ ದೀರ್ಘ ಹಾಗೂ ಶ್ರೀಮಂತ ಪರಂಪರೆಯುಳ್ಳ ಕನ್ನಡದ ಇತಿಹಾಸದಲ್ಲಿ ೨೦ ಮತ್ತು ೨೧ನೇ ಶತಮಾನ ಬಹು ಪ್ರಮುಖವಾದ ಕಾಲಘಟ್ಟವಾಗಿದ್ದು, ಹೊಸ ತೆರನಾದ ಅನುಭವ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತೆರೆದು ತೋರಿಸಿದ, ಸೃಜನಶೀಲ ಮನಸ್ಸುಗಳ ಕಾಳಜಿ, ಒಲುವುಗಳನ್ನು, ಗುರುತಿಸುವ ಅವಲೋಕಿಸುವ ಪ್ರಯತ್ನ ಈ ಶತಮಾನದಲ್ಲಾಗಿದೆ ಎಂದರು.

ಭಾಷೆ ಮಾನವ ಜೀವನದ ಅಮೂಲ್ಯ ಆವಿಷ್ಕಾರವಾಗಿದೆ, ಇದು ಇಲ್ಲದೇ ಬದುಕನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಭಾಷೆ ಕೇವಲ ಸಂವಹನದ ಸಲಕರಣೆಯಾಗದೇ, ಆಚಾರ ವಿಚಾರ ರೀತಿ-ನೀತಿ, ಸಂಸ್ಕೃತಿ ಅಸ್ಮಿತೆಯಾಗಿದೆ. ಇಂದು ಆಂಗ್ಲ ಭಾಷೆಯ ವ್ಯಾಮೋಹದಿಂದಾಗಿ ಪಾಲಕರು ತಮ್ಮ ಮಕ್ಕಳಿಗೆ ಮಾತೃಭಾಷೆಯಶಿಕ್ಷಣ ನೀಡದೇ, ಆಂಗ್ಲ ಮಾಧ್ಯಮ ಶಾಲೆಗೆ ದಾಖಲು ಮಾಡುತ್ತಿದ್ದಾರೆ, ಹೀಗಾಗಿ ಮಕ್ಕಳು ಪರಿಣತಿಯ ಕೊರತೆಯಿಂದಾಗಿ ಯಾವ ಭಾಷೆಯ ಮೇಲೂ ಹಿಡಿತಸಾಧಿಸಲು ಸಾಧ್ಯವಾಗದೆ ತ್ರಿಶಂಕು ಸ್ಥಿತಿ ಎದುರಿಸುತ್ತಿದ್ದಾರೆ. ಮಕ್ಕಳಿಗೆ ಮಾತೃಭಾಷೆ ಶಿಕ್ಷಣ ನೀಡಿದಾಗ ಮಾತ್ರ ನಮ್ಮ ಜನ, ನಮ್ಮ ಸಂಸ್ಕೃತಿ ಮತ್ತು ನಮ್ಮ ನೆಲದ ಬಗ್ಗೆ ಅಭಿಮಾನ ಮೂಡುತ್ತದೆ ಎಂದರು.

ಭಾಷಾ ಕಲಿಕೆಗೆ ಒತ್ತು ನೀಡಲಿ:
ಇಂದು ಆಂಗ್ಲ ಮಾಧ್ಯಮ ಕಲಿಯುತ್ತಿರುವ ಮಕ್ಕಳು ಮಾತ್ರವಲ್ಲ, ಕನ್ನಡ ಮಾಧ್ಯಮದಲ್ಲೂ ಕಲಿಯುತ್ತಿರುವ ಮಕ್ಕಳ ಭಾಷಾ ಪರಿಜ್ಞಾನ ಕಡಿಮೆಯಾಗುತ್ತಿದೆ. ಕನ್ನಡ ಕಲಿತು ಏನಾಗಬೇಕೆಂಬ ಅಸಡ್ಡೆ ಭಾವನೆ, ನಿರ್ಲಕ್ಷಗಳು ಅಸ್ಖಲಿತವಾಗಿ ಮಾತನಾಡಲಾರದ, ತಪ್ಪಿಲ್ಲದೇ ಬರೆಯಲಾರದ ಸ್ಥಿತಿಗೆ ವಿದ್ಯಾರ್ಥಿಗಳನ್ನು ಒಡ್ಡಿದೆ. ಅಲ್ಲದೆ ವಿದ್ಯಾರ್ಥಿಗಳಲ್ಲಿ ಬರೆಯುವ ಪದ್ಧತಿಯು ಕ್ಷೀಣಿಸುತ್ತಿದ್ದು, ಸಾಹಿತ್ಯ ಕೃತಿಗಳನ್ನು ಓದುವ ಪ್ರವೃತಿಯು ಕಡಿಮೆಯಾಗುತ್ತಿರುವುದು ವಿಷಾಧನೀಯ ಸಂಗತಿಯಾಗಿದೆ. ಶಿಕ್ಷಕರು ಮಕ್ಕಳ ಭಾಷಾ ಕಲಿಗೆ ಒತ್ತು ನೀಡುವ ಕೆಲಸ ಮಾಡಬೇಕು ಎಂದರು.

ಕುಂದಾಪ್ರ ಕನ್ನಡದ ಅಧ್ಯಯನ ಪೀಠ ಸ್ಥಾಪನೆಯಾಗಲಿ:
ಕುಂದಾಪ್ರ ಕನ್ನಡ ವಿಶಿಷ್ಠ ಸೊಗಡಿನ ಭಾಷೆಯಾಗಿದ್ದು, ಮಾತಿನ ಲಯ, ಬಾಗುಬಳುಕು, ತೀಕ್ಷ್ಣತೆ, ಇಲ್ಲಿನ ಆಡುನುಡಿಯ ಗಾದೆ ಮಾತುಗಳು, ನಾಣ್ಣುಡಿ, ಹಾಡುಗಳು, ಕತೆಗಳು ಜನಪದರ ಅಸ್ಮಿತೆಯ ಸಾಕ್ಷಿ ಪ್ರಜ್ಞೆಗಳಂತಿದ್ದು, ಇದರ ಅಧ್ಯನಕ್ಕೆ ಅಪಾರ ಸಾಧ್ಯತೆಗಳಿರುವುದರಿಂದ ಅಧ್ಯಯನ ಪೀಠ ಸ್ಥಾಪನೆಯಾಗಬೇಕು ಎಂದರು.

ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿದರು, ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಬಾಬು ಶೆಟ್ಟಿ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ವಿಜಯಲಕ್ಷ್ಮೀ ನಾಯಕ್, ದ.ಕ ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ ಕಲ್ಕೂರ, ಉ.ಕ ಕಸಾಪ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ, ಕಾಸರಗೋಡು ಕಸಾಪ ಅಧ್ಯಕ್ಷ ಸುಬ್ರಹ್ಮಣ್ಯಭಟ್, ಕಂಬದಕೋಣೆ ಕಾಲೇಜಿನ ಪ್ರಿನ್ಸಿಪಲ್ ಜಯಲಕ್ಷ್ಮೀ ಜಿ. ಕಾರಂತ, ಜಿ.ಪಂ. ಸದಸ್ಯೆ ಗೌರಿ ದೇವಾಡಿಗ, ಕೆರ್ಗಾಲ್ ಗ್ರಾ.ಪಂ. ಅಧ್ಯಕ್ಷೆ ಸೋಮು, ಕಂಬದಕೋಣೆ ಗ್ರಾ.ಪಂ. ಅಧ್ಯಕ್ಷ ರಾಜೇಶ್ ದೇವಾಡಿಗ, ಬೈಂದೂರು ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹಿರಿಯ ಗಾಯಕ ಎಚ್. ಚಂದ್ರಶೇಖರ ಕೆದ್ಲಾಯ ಅವರಿಗೆ ಪ್ರೋ. ಮೊಗೇರಿ ಗೋಪಾಲಕೃಷ್ಣ ಅಡಿಗ ವಿಶೇಷ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಖಂಬದಕೋಣೆ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕಾರ್ಯಾಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಬ್ರಹ್ಮಣ್ಯ ಶೆಟ್ಟಿ ಸ್ವಾಗತಿಸಿ, ಸೂರಾಲು ನಾರಾಯಣ ಮಡಿ ವಂದಿಸಿ, ಡಾ. ಸುಬ್ರಹ್ಮಣ್ಯಭಟ್ ನಿರೂಪಿಸಿದರು.

Leave a Reply

Your email address will not be published. Required fields are marked *

six − six =