ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಮುಂಬಯಿಯಲ್ಲಿ ನೆಲೆಸಿರುವ ಕರಾವಳಿಗರು ತಮ್ಮ ಊರಿಗೆ ಮರಳಲು ಉಡುಪಿ ಜಿಲ್ಲಾಡಳಿತ ಷರತ್ತುಬದ್ಧ ಅನುಮತಿ ನೀಡಿದ್ದು, ಸೇವಾಸಿಂಧುವಿನ ಮೂಲಕ ಅರ್ಜಿ ಸಲ್ಲಿಸಿ, ಪಾಸ್ ಪಡೆದು ಊರಿನಲ್ಲಿ ಕ್ವಾರಂಟೈನ್‌ಗೆ ಒಳಪಡುವವರಿಗೆ ಮಾತ್ರ ಜಿಲ್ಲೆಗೆ ಪ್ರವೇಶಿಸಲು ಅವಕಾಶ ನೀಡಲಾಗಿದೆ.
ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಸಂಸದೆ ಶೋಭಾ ಕರಂದ್ಲಾಜೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ವಿಶೇಷ ಚರ್ಚೆ ನಡೆದು ಮುಂಬಯಿಯಿಂದ ಆಗಮಿಸುವವರಿಗೆ ಷರತ್ತುಬದ್ಧ ಅನುಮತಿ ನೀಡಲು ಸಭೆ ನಿರ್ಧರಿಸಿತು. ಇವರು ಮೊದಲು 14 ದಿನ ಶಾಲೆ, ಕಾಲೇಜು, ಹಾಸ್ಟೆಲ್‌ಗಳಲ್ಲಿ (ಇಸ್ಟಿಟ್ಯೂಷನಲ್ ಕ್ವಾರಂಟೈನ್) ಕ್ವಾರಂಟೈನ್‌ನಲ್ಲಿರಬೇಕು, ಬಳಿಕ 14 ದಿನ ಹೋಮ್ ಕ್ವಾರಂಟೈನ್‌ನಲ್ಲಿರಬೇಕು. ಶಾಲೆ ಕಾಲೇಜುಗಳಲ್ಲಿ ಉಳಿದುಕೊಳ್ಳಲು ಕಷ್ಟ ಎನ್ನುವವರು ಹಣ ಪಾವತಿಸಿ ಹೊಟೇಲ್ ಲಾಡ್ಜ್ ಗಳಲ್ಲಿ ಉಳಿದುಕೊಳ್ಳಲು ಅವಕಾಶ ನೀಡಲಾಗಿದೆ.
ಹೊರ ರಾಜ್ಯಗಳಲ್ಲಿರುವ ಉಡುಪಿ ಜಿಲ್ಲೆಯವರು ಸೇವಾಸಿಂಧು ವೆಬ್ ಸೈಟ್‌ನಲ್ಲಿ ಅರ್ಜಿ ಸಲ್ಲಿಸಿ ಪಾಸ್ ಪಡೆದು ಖಾಸಗಿ ವಾಹನಗಳ ಮೂಲಕ ಜಿಲ್ಲೆ ಪ್ರವೇಶಿಸಬೇಕು. ಗಡಿ ಪ್ರವೇಶಿಸಿದ ನಂತರ ಚೆಕ್‌ಪೋಸ್ಟ್‌ಗಳಲ್ಲಿ ಪ್ರಯಾಣಿಕರನ್ನು ತಾಲ್ಲೂಕುವಾರು ವಿಂಗಡಿಸಬೇಕು. ಬಳಿಕ ಪ್ರಯಾಣಿಕರನ್ನು ಆಯಾ ತಾಲ್ಲೂಕು ಅಧಿಕಾರಿಗಳಿಗೆ ಹಸ್ತಾಂತರಿಸಿ ನಿಗದಿಪಡಿಸಿದ ಇನ್‌ಸ್ಟಿಟ್ಯೂಷ್‌ಗಳಿಗೆ ಕರೆದೊಯ್ದು ನಿರ್ದಿಷ್ಟ ಅವಧಿಯವರೆಗೂ ಕ್ವಾರಂಟೈನ್ ಮಾಡಬೇಕು ಎಂದು ಸಂಸದೆ ಶೋಭಾ ಅಧಿಕಾರಿಗಳಿಗೆ ಸೂಚಿಸಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಸೇವಾ ಸಿಂಧು ಇ ಪಾಸ್‌ನಡಿ ಸುಮಾರು 5,000 ಜನರು ಹೆಸರು ನೋಂದಾಯಿಸಿದ್ದು ಇದರಲ್ಲಿ 4,000 ಮಂದಿ ಮುಂಬಯಿ ನಿವಾಸಿಗಳಾಗಿದ್ದಾರೆ. ಒಟ್ಟು ಸುಮಾರು 10,000 ಜನರು ಆಗಮಿಸುವ ನಿರೀಕ್ಷೆ ಇದೆ.
ಸಭೆಯಲ್ಲಿ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿ.ಎಂ. ಸುಕುಮಾರ ಶೆಟ್ಟಿ, ಸುನಿಲ್ ಕುಮಾರ್, ಲಾಲಾಜಿ ಮೆಂಡನ್, ಜಿಲ್ಲಾಧಿಕಾರಿ ಜಿ. ಜಗದೀಶ್, ಎಸ್‌ಪಿ ವಿಷ್ಣುವರ್ಧನ್, ಜಿ.ಪಂ. ಸಿಇಒ ಪ್ರೀತಿ ಗೆಹಲೋತ್, ಜಿಲ್ಲಾ ಆರೋಗ್ಯಾಧಿಕಾರಿ ಡಾ|ಸುಧೀರ್‌ಚಂದ್ರ ಸೂಡ, ನೋಡಲ್ ಅಧಿಕಾರಿ ಡಾ| ಪ್ರಶಾಂತ ಭಟ್ ಕರಾವಳಿಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
ಆನ್‌ಲೈನ್ ನೋಂದಣಿ ಕಡ್ಡಾಯ:
ಹೊರ ಜಿಲ್ಲೆಗಳಿಂದ ಬರುವ ಪ್ರಯಾಣಿಕರು ಕಡ್ಡಾಯವಾಗಿ https://sevasindhu.karnataka.gov.in/ ಆನ್‌ಲೈನ್ ಮೂಲಕ ನೋಂದಣಿ ಮಾಡಕೊಳ್ಳಬೇಕು:
ಸೇವಾಸಿಂಧು ವಿಳಂಬ: ಹೊರರಾಜ್ಯ ಕನ್ನಡಿಗರ ಅಸಮಾಧಾನ:
ಹೊರ ರಾಜ್ಯಗಳಲ್ಲಿ ಬಾಕಿಯಾಗಿ ಜಿಲ್ಲೆಗೆ ಪ್ರವೇಶ ಪಡೆಯಲು ಕಾಯುತ್ತಿರುವವರು ಸೇವಾಸಿಂಧು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡವರಿಗೆ ಅವಕಾಶ ಸಿಗುವಾಗ ವಿಳಂಬವಾಗುತ್ತಿದೆ ಎಂದು ಹೊರ ರಾಜ್ಯಗಳಲ್ಲಿರುವ ಅನೇಕ ಮಂದಿ ಕನ್ನಡಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತರ ರಾಜ್ಯಗಳಲ್ಲಿ ಆನ್‌ಲೈನ್ ನೋಂದಣಿಯ ಅನಂತರ ಒಂದು ದಿನದ ಅಂತರದಲ್ಲಿ ಪ್ರಯಾಣಕ್ಕೆ ಅವಕಾಶ ಸಿಗುತ್ತಿದೆ. ಆದರೇ ಸೇವಾ ಸಿಂಧುವಿನಲ್ಲಿ ನೋಂದಾಯಿಸಿಕೊಂಡಲ್ಲಿ ತಡವಾಗುತ್ತಿದೆ ಎಂಬುದು ಅವರ ಆರೋಪ. ಐದು ದಿನಗಳಾದರೂ ನಮ್ಮ ಅರ್ಜಿ ವಿಲೇವಾರಿಯಾಗಿರಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಸೇವಾ ಸಿಂಧುವಿನಲ್ಲಿ ನೊಂದಣಿ ಹೇಗೆ? ವೀಡಿಯೋ ನೋಡಿ
► ಅಂತರಾಜ್ಯ ಸಂಚಾರಕ್ಕೆ ಸೇವಾಸಿಂಧುವಿನಲ್ಲಿ ನೊಂದಣಿ ಅಗತ್ಯ – https://kundapraa.com/?p=37276 .
I am going to village