ಉಡುಪಿ ಎಸ್ಪಿ ಅಣ್ಣಾಮಲೈ ವರ್ಗಾವಣೆ ವದಂತಿ ಕೊನೆಗೂ ನಿಜವಾಯಿತೆ?

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಳೆದ ಕೆಲವು ದಿನಗಳಿಂದ ಸಾಕಷ್ಟು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದ್ದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಅವರ ವರ್ಗಾವಣೆ ವಿಚಾರ ಒಂದು ತಾರ್ಕಿಕ ಅಂತ್ಯಕ್ಕೆ ಬಂದು ನಿಲ್ಲುವ ಲಕ್ಷಣಗಳು ಮೇಲ್ನೊಟಕ್ಕೆ ಗೋಚರಿಸುತ್ತಿದೆ. ಆದರೆ ಉಡುಪಿ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಎಸ್ಪಿ ವರ್ಗಾವಣೆ ವಿಚಾರನನ್ನು ಅಲ್ಲಗಳೆದಿದ್ದು ಸದ್ಯಕ್ಕೆ ಆ ಪ್ರಸ್ತಾಪವಿಲ್ಲವೆಂದಿದ್ದಾರೆ.

ಡಿಸೆಂಬರ್ 31ರಂದು ಅಣ್ಣಾಮಲೈ ಅವರು ಉಡುಪಿಯಿಂದ ವರ್ಗಾವಣೆಗೊಳ್ಳಲಿದ್ದಾರೆ ಎಂಬ ಸಂದೇಶ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿ ಹರಿದಾಡಿ, ಜಿಲ್ಲಾದ್ಯಂತ ಸಾರ್ವಜನಿಕರು ಪ್ರತಿಭಟನೆ, ಮುಷ್ಕರ ನಡೆಸಲು ಮುಂದಾಗಿದ್ದರು. ಕೊನೆಗೆ ಸ್ವತಃ ಅಣ್ಣಾಮಲೈ ಅವರೇ ಇದು ಸರಕಾರದ ಆದೇಶದಂತೆ ನಡೆಯುವ ಪ್ರಕ್ರಿಯೆ. ಈ ವಿಚಾರಕ್ಕೆ ಸಾರ್ವಜನಿಕ ಸಂಘಟನೆಗಳು ಪ್ರತಿಭಟಿಸುವುದು ಸಮಂಜಸವಲ್ಲ ಎಂದು ವಿನಂತಿಸಿಕೊಂಡ ಮೇಲೆ ಎಲ್ಲವೂ ತಣ್ಣಗಾಗಿತ್ತು. ಆದರೆ ಮತ್ತೆ ಎಸ್ಪಿ ಅವರ ವರ್ಗಾವಣೆ ದೃಢ ಪಟ್ಟಿರುವ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಸಂದೇಶ ಹರಿದಾಡುತ್ತಿದೆ. ಅಣ್ಣಾಮಲೈ ಅವರು ಬೆಂಗಳೂರು ಪೂರ್ವ ವಿಭಾಗಕ್ಕೆ ಡಿಸಿಪಿಯಾಗಿ ಭಡ್ತಿ ಪಡೆದು ವರ್ಗಾವಣೆಗೊಂಡಿದ್ದಾರೆ ಎಂದು ಸಂದೇಶದಲ್ಲಿ ಹೇಳಲಾಗಿದೆ. ಆದರೆ ಅಣ್ಣಾಮಲೈ ಅವರು ಈ ಬಗ್ಗೆ ಪ್ರತಿಕ್ರಿಯಿಸಿಲ್ಲದಿರುವುದರಿಂದ ಸತ್ಯಾಸತ್ಯತೆಯ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ. (ಕುಂದಾಪ್ರ ಡಾಟ್ ಕಾಂ)

ಪೊಲೀಸ್ ಮೂಲಗಳ ಪ್ರಕಾರ ಸ್ವತಃ ಅಣ್ಣಾಮಲೈ ಅವರೇ ಬೆಂಗಳೂರಿಗೆ ವರ್ಗಾವಣೆ ಪಡೆಯಲು ಇಲಾಖೆಗೆ ಕೋರಿಕೊಂಡಿದ್ದರು. ಆದರೆ ಅವರಿಗೆ ಬೆಂಗಳೂರು ಬದಲಿಗೆ ಉತ್ತರ ಕನ್ನಡಕ್ಕೆ ವರ್ಗಾವಣೆ ಮಾಡಿರಬಹುದು ಇಲ್ಲವೇ ಶಿವಮೊಗ್ಗ, ಮಂಗಳೂರಿಗೆ ವರ್ಗಾಯಿಸಬಹುದು ಎನ್ನಲಾಗಿದೆ. ಇದರಲ್ಲಿ ರಾಜಕೀಯ ಒತ್ತಡ ಅಷ್ಟಾಗಿ ಇದ್ದಿರಲಿಲ್ಲ ಎಂದು ಮೂಲಗಳು ದೃಢಪಡಿಸಿವೆ. ಇದರ ನಡುವೆ ಉಡುಪಿಯಲ್ಲಿ ಪರ್ಯಾಯ ಮಹೋತ್ಸವವಿರುವುದರಿಂದ ಈ ಸಮಯದಲ್ಲಿ ಎಸ್ಪಿ ವರ್ಗಾವಣೆ ಸಾಧ್ಯವಿಲ್ಲದ ಮಾತು ಎಂಬ ಅಭಿಪ್ರಾಯ ಅನುಭವಿಗಳ ಪಡಸಾಲೆಯಿಂದ ಕೇಳಿಬರುತ್ತಿದೆ. (ಕುಂದಾಪ್ರ ಡಾಟ್ ಕಾಂ)

ಭೂ ಮಾಫಿಯಾ, ಮರಳು ಮಾಫಿಯ, ವೇಶ್ಯಾವಾಟಿಕೆ, ಮಟ್ಕಾ, ಕೋಮು ವಿವಾದ, ಸಮಾಜ ಘಾತುಕ ಕೃತ್ಯಗಳು ಹೀಗೆ ಉಡುಪಿ ಜಿಲ್ಲೆಗೆ ಕೆಲವು ದಶಕಗಳ ಕಾಲ ಅಂಟಿದ್ದ ಪಿಡುಗುಗಳಿಗೂ ಒಂದಿಷ್ಟು ಬಿಸಿ ಮುಟ್ಟಿಸಿದ್ದ ಅಣ್ಣಾಮಲೈ ರಿಯಲ್ ಸಿಂಗಂ ಎಂದೇ ಜನಜನಿತರಾಗಿದ್ದರು. ಅತ್ಯಾಚಾರದಂತಹ ಸೂಕ್ಷ್ಮ ಪ್ರಕರಣಗಳನ್ನೂ ಕೂಡ ಶೀಘ್ರ ಭೇದಿಸಿ ಆರೋಪಿಗಳನ್ನು ಜೈಲಿಗಟ್ಟಿದ್ದು ಈಗ ಇತಿಹಾಸ. ಸಮಾಜ ಸ್ನೇಹಿ ಪೊಲೀಸ್ ಇಲಾಖೆ, ಸ್ನೇಹಪರ ನಡತೆ, ವಿದ್ಯಾರ್ಥಿ ಸುರಕ್ಷಾ ಕ್ರಮಗಳು ಅಣ್ಣಾಮಲೈ ಅವರ ಸಾಮಾಜಿಕ ಕಾಳಜಿಯನ್ನು ಜನ ಕೊಂಡಾಡುವಂತೆ ಮಾಡಿತ್ತು. (ಕುಂದಾಪ್ರ ಡಾಟ್ ಕಾಂ)

ಒಟ್ಟಿನಲ್ಲಿ ವರ್ಗಾವಣೆ ವಿಚಾರದಲ್ಲಿ ಬಿಡದೇ ಕೇಳುತ್ತಿರುವ ಊಹಾಪೊಹಾಗಳಿಗೆ ಎಸ್ಪಿ ಅಣ್ಣಾಮಲೈ ಅವರೇ ಉತ್ತರಿಸಬೇಕಿದೆ. ಒಂದು ವೇಳೆ ವರ್ಗಾವಣೆ ನಿಜವೇ ಆಗಿದ್ದರೇ ಉಡುಪಿ ಜಿಲ್ಲೆಯ ಜನ ಸುಮ್ಮನೆ ಕುರುವವರಲ್ಲ ಎಂಬುದಂತೂ ನಿಜ.

Leave a Reply

Your email address will not be published. Required fields are marked *

12 + 10 =