ಕತ್ತಲೆಕೋಣೆ ಶೂಟಿಂಗ್ ವೇಳೆ ಅವಘಡ. ಚಿತ್ರತಂಡವನ್ನು ಕಾಡಿತ್ತಾ ಆ ಆತ್ಮ!

ಕುಂದಾಪ್ರ ಡಾಟ್ ಕಾಂ ಲೇಖನ.
ಆಕಸ್ಮಿಕಗಳು ನಡೆಯುವುದೇ ಹಾಗೆ. ಆಕಸ್ಮಿಕವಾಗಿ! ಬಹುನಿರೀಕ್ಷಿತ ‘ಕತ್ತಲೆಕೋಣೆ’ ಕನ್ನಡ ಸಿನೆಮಾದ ಶೂಟಿಂಗ್ ವೇಳೆ ಸಂಭವಿಸಿದ ಆಕಸ್ಮಿಕ ಘಟನೆಗಳು ಇಡಿ ಚಿತ್ರತಂಡವನ್ನು ಆಶ್ಚರ್ಯಕ್ಕೆ ನೂಕಿರುವುದಲ್ಲದೇ ಒಂದಿಷ್ಟು ಭಯ ಹಾಗೂ ಆತಂಕವನ್ನುಂಟುಮಾಡಿದೆ. ಒಂದು ಹಂತದಲ್ಲಿ ಅಂದುಕೊಂಡಂತೆ ನಡೆಯುತ್ತಿದ್ದ ಚಿತ್ರೀಕರಣದ ನಡುವೆಯೇ ಹಲವು ಘಟನೆಗಳು ಕೈಮೀರಿ ಘಟಿಸಿವೆ. ಶೂಟಿಂಗ್ ವೇಳೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡ ಹೊರತಾಗಿಯೂ ನಡೆದ ಇಂತಹ ಘಟನೆಗಳು ಒಂದು ತೆರನಾದ ಭಯವನ್ನು ಸೃಷ್ಠಿಸಿಬಿಟ್ಟಿವೆ.

ಘಟನೆ 1
ಅದು ಕುಂದಾಪುರದ ತಾಲೂಕಿನ ಒಂದು ಕಾಡುದಾರಿ. ಸೀನ್ ಒಂದರಲ್ಲಿ ಮರದ ಮೇಲಿರಿ ನಟಿಸುತ್ತಿದ್ದ ಕಲಾವಿದ. ಇನ್ನೇನು ಆತ ಕೆಳಕ್ಕಿಳಿಬೇಕು ಎಂಬಷ್ಟರಲ್ಲಿ ಹಠಾತ್ತನೆ ಮರದ ಕೊಂಬೆಯೇ ತುಂಡಾಯಿತು. ನೋಡನೋಡುತ್ತಿದ್ದಂತೆಯೇ ಕೊಂಬೆಯೊಂದಿಗೆ ೮ ಅಡಿ ಎತ್ತರದಿಂದ ಆತ ನೆಲಕ್ಕುರುಳಿದ. ಅಷ್ಟು ಮೇಲಿಂದ ಬಿದ್ದರೂ ಅದೃಷ್ಟವಶಾತ್ ಆತ ಅಪಾಯದಿಂದ ಪಾರಾಗಿದ್ದ! ಸಾಕಷ್ಟು ಮುಂಜಾಗೃತಾ ಕ್ರಮ ಕೈಗೊಂಡಿದ್ದರೂ ಇಂತಹದ್ದೊಂದು ಅವಘಡ ಸಂಭವಿಸಿಬಿಟ್ಟಿತ್ತು. ಎಲ್ಲವನ್ನೂ ಪರೀಕ್ಷಿಸಿದ ಬಳಿಕವಷ್ಟೇ ಮರವೇರಿದ್ದರೂ ಕೊಂಬೆ ಮುರಿದ್ದದ್ದು ಹೇಗೆ ಎಂಬುದು ಮಾತ್ರ ಚಿತ್ರತಂಡವನ್ನು ಕಾಡುತ್ತಿದೆ. (ಕೆಳಗಿನ ವಿಡಿಯೋ ನೋಡಿ) ಕುಂದಾಪ್ರ ಡಾಟ್ ಕಾಂ ವರದಿ.

 

ಘಟನೆ – 2
ಅದು ಮಧ್ಯರಾತ್ರಿಯ ಹೊತ್ತು. ಸಿನೆಮಾದ ಹಾರರ್ ಸೀನ್ ಶೂಟಿಂಗ್ ನಡೆಯುತ್ತಿತ್ತು. ಕಲಾವಿದರು ತಂತ್ರಜ್ಞರು ಅದರಲ್ಲಿಯೇ ಮಗ್ನರಾಗಿದ್ದರು. ಅಷ್ಟರಲ್ಲೇ ದೂರದಲ್ಲಿದ್ದ ಜನರೇಟರ್‌ನಲ್ಲಿ ಒಮ್ಮೆಲೇ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿ ಹಾಗೇಯೇ ಮುಂದುವರಿದು ಇನ್ನೇನು ಇಡಿ ಸೆಟ್‌ಗೆ ಆರಿಸಿಕೊಳ್ಳುತ್ತದೆ ಎಂಬಷ್ಟರಲ್ಲಿ ರಾಘು ಎಂಬುವವರ ಸಮಯಪ್ರಜ್ಞೆಯಿಂದ ಭಾರಿ ಅಪಾಯದಿಂದ ಚಿತ್ರತಂಡ ಪಾರಾಗಿತ್ತು. ಹಾಗಾದರೆ ಸರಿಯಾಗಿಯೇ ಇದ್ದ ಜನರೇಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡದ್ದು ಹೇಗೆ ಎಂಬುದು ಮಾತ್ರ ನಿಗೂಡ!

ಘಟನೆ – 3
ಅದು ರಾತ್ರಿ 2:30ರ ಸಮಯ. ಕಾಡಿನ ಮಧ್ಯೆ ಶೂಟಿಂಗ್ ಸಾಗುತ್ತಿತ್ತು. ಚಿತ್ರದ ನಿರ್ದೇಶಕರು ಹಿರೋಯಿನ್‌ಗೆ ಡೈಲಾಗ್ ಹೇಳಿ ಸನ್ನಿವೇಶವನ್ನು ವಿವರಿಸಿದ್ದರು. ಇನ್ನೇನು ಆ ಸೀನ್‌ಗೆ ಚಿತ್ರೀಕರಿಸಬೇಕಿತ್ತು. ರೇಡಿಯಾಗಿರಿ ಎಂದು ಹೇಳಿ ನಿರ್ದೇಶಕರು ಹಾಗೂ ನಟಿ ಸ್ವಲ್ವ ಹಿಂದಕ್ಕೆ ಹೆಜ್ಜೆ ಹಾಕಿದ್ದೇ ತಡ, ದೊಡ್ಡ ಮರವೊಂದು ಬಡಸಮೇತ ಕಳಚಿ ಬಿದ್ದಿತ್ತು! ಕ್ಷಣಕಾಲ ಅವರಿಬ್ಬರೂ ಅಲ್ಲೇ ನಿಂತಿದ್ದರೂ ದೊಡ್ಡ ಅವಘಡವೇ ಸಂಭವಿಸುವುದಿತ್ತು. ಅರ್ಧರಾತ್ರಿಯಲ್ಲಿ ನಡೆದ ಆ ಘಟನೆ ಸೆಟ್‌ನಲ್ಲಿದ್ದವರನ್ನು ದಂಗುಬಡಿಸಿತ್ತು!

ಘಟನೆ – 4
ಅಂದೂ ಕೂಡ ರಾತ್ರಿ ಶೂಟಿಂಗ್. ಅಸಿಸ್ಟೆಂಟ್ ಹುಡುಗರು ಸ್ಕ್ಯಾಲಿಟಾನ್ ಮಾಡುತ್ತಿದ್ದರು. ಅವರವರ ಕೆಲಸದಲ್ಲಿ ಮಗ್ನರಾಗಿದ್ದರು. ಅಲ್ಲಿಯ ತನಕ ಆಫ್ ಆಗಿದ್ದ ಶೂಟಿಂಗ್ ಲೈಟ್‌ಗಳು ಇದ್ದಕ್ಕಿದ್ದಂತೆ ಆನ್ ಆದವು. ಅಲ್ಲಿಯೇ ಇಟ್ಟಿದ್ದ ಫ್ಯಾನ್ ತನ್ನಷ್ಟಕ್ಕೆ ತಿರುಗಲಾರಂಭಿಸಿತು. ನಿರ್ದೇಶಕರು ಯಾರಾದರೂ ಬೇಕಂತಲೇ ಮಾಡಿದ್ದರೋ ಎಂದು ಕ್ರಾಸ್‌ಚೆಕ್ ಕೂಡ ಮಾಡಿಕೊಂಡರು. ಆದರೆ ಯಾರೂ ಅಂತಹ ಕೆಲಸ ಮಾಡಿರಲಿಲ್ಲ. ರಾತ್ರಿಯ ಸಮಯದಲ್ಲಿ ನಡೆದ ಘಟನೆ ನಡುಕ ಹುಟ್ಟಿಸಿತ್ತು.

ಘಟನೆ – 5
ಮತ್ತೆ ರಾತ್ರಿ ಹಾರರ್ ಸೀನ್ ಶೂಟಿಂಗ್. ಇನ್ನೇನು ಶೂಟಿಂಗ್ ಆರಂಭವಾಗಬೇಕು ಅನ್ನುವಷ್ಟರಲ್ಲಿ ಅಲ್ಲೇ ನಿಂತಿದ್ದ ಕ್ಯಾಮರಾ ಅಸಿಸ್ಟೆಂಟ್ ತಲೆಯ ಮೇಲೆ ಹಠಾತ್ತನೆ ಮೇಲಿನಿಂದ ಲೈಟೊಂದು ಕಳಚಿ ಬಿದ್ದಿತ್ತು! ಲೈಟ್ ಇಂಜಿನಿಯರ್‌ಗೆ ಕೂಡ ಇಂತಹ ಅನುಭವವಾಗಿತ್ತು. ಚಿತ್ರತಂಡದ ಕ್ಯಾಮರಾ, ಲೈಟ್ ನಿರ್ವಹಿಸುವುದು ಪರಿಣತ ತಂಡವೇ. ಲೈಟ್ ಕಳಚಿ ಬೀಳುವಂತಹ ಘಟನೆ ನಡೆಯಲು ಸಾಧ್ಯವೇ ಇಲ್ಲ. ಆದಾಗ್ಯೂ ಅಂದು ಲೈಟ್ ಬಿದ್ದದ್ದು ಹೇಗೆ? ಬೀಳಿಸಿದ್ದು ಯಾರು ಎಂಬುದು ಮಾತ್ರ ನಿಗೂಡ! ಕುಂದಾಪ್ರ ಡಾಟ್ ಕಾಂ.

ಇವೆಲ್ಲ ಕತ್ತಲೆಕೋಣೆ ಚಿತ್ರತಂಡದಲ್ಲಿ ಚಿತ್ರೀಕರಣದ ವೇಳೆ ಘಟಿಸಿದ ಕೆಲವು ಘಟನೆಗಳ ಸ್ಯಾಂಪಲ್ ಅಷ್ಟೇ. ಇಂತಹ ಹತ್ತಾರು ಬೆಚ್ಚಿಬೀಳಿಸುವ ಸನ್ನಿವೇಶಗಳು ಚಿತ್ರತಂಡಕ್ಕೆ ಎದುರಾಗಿದೆ. ನೈಜ ಘಟನೆಯಾಧಾರಿತ ಚಿತ್ರಕಥೆಯ ಹಾರಾರ್ ಸೀನ್‌ಗಳನ್ನು ಶೂಟ್ ಮಾಡುವಾಗಲೇ ಇಂತಹ ಅವಘಡಗಳು ಸಂಭವಿಸಿದ್ದು ಯಾಕೆ? ಅಪಾಯಕಾರಿ ಘಟನೆಗಳು ಸಂಭವಿಸಿದಾಗಲೂ ಕೂದಲೆಳೆಯಲ್ಲಿ ಪಾರಾದದ್ದು ಹೇಗೆ? ಕತ್ತಲೆಕೋಣೆ ಸಿನೆಮಾ ತಂಡವನ್ನು ಯಾವುದಾದರೂ ಆಗೋಚರ ಶಕ್ತಿಯೊಂದು ನಿಯಂತ್ರಿಸುತ್ತಿತ್ತಾ? ನೈಜ ಘಟನೆಯಾಧಾರಿತ ಸಿನೆಮಾದಲ್ಲಿ ರೂಪುಪಡೆದ ಆತ್ಮವೆನಾರೂ ಚಿತ್ರಿಕರಣಕ್ಕೆ ತಡೆಯೊಡ್ಡುತ್ತಿತ್ತಾ ಎಂಬಲ್ಲಾ ಸಂಶಯ ಮಾತ್ರ ಕಾಡುತ್ತಲೇ ಇದೆ. ಕುಂದಾಪ್ರ ಡಾಟ್ ಕಾಂ ವರದಿ.

 

ಚಿತ್ರಿಕರಣದ ವೇಳೆ ಈ ಎಲ್ಲಾ ಘಟನೆ ನಡೆದಿದ್ದಂತೂ ಸತ್ಯ. ಕಾರಣಗಳು ಏನೇ ಇದ್ದಿರಬಹುದು. ರಾತ್ರಿಯ ಸಮಯವಾಗಿದ್ದರಿಂದ ಚಿತ್ರತಂಡದಲ್ಲಿದ್ದವರಿಗೆ ಸಹಜವಾಗಿ ಭಯವಾಗಿತ್ತು. ನಾವು ಇವೆಲ್ಲ ಆಕಸ್ಮಿಕ ಅಂತಲೇ ತಿಳಿದು ಶೂಟಿಂಗ್ ಮುಂದುವರಿಸಿದ್ದೇವೆ. ಆದರೆ ಸಿನೆಮಾ ಶೂಟಿಂಗ್ ಆರಂಭದಿಂದ ಇಲ್ಲಿಯತನಕ ನಡೆದ ಒಂದಿಲ್ಲೊಂದು ಘಟನೆಗಳು ಹಾಗೂ ನಮ್ಮ ಚಿತ್ರದಲ್ಲಿ ಬರುವ ಅಂಶಗಳಿಗೆ ಒಂದಿಷ್ಟು ಸಂಬಂಧವಿದೆ.  – ಸಂದೇಶ ಶೆಟ್ಟಿ ಆಜ್ರಿ, ಕತ್ತಲೆಕೋಣೆ ಸಿನೆಮಾ ನಿರ್ದೇಶಕ

Leave a Reply

Your email address will not be published. Required fields are marked *

13 + three =