ಉಪ್ಪಿನಕುದ್ರು ಗೊಂಬೆಗೆ ಮೆಸ್ಕಾಂ ಸೂತ್ರ…! ಗೊಂಬೆಯಾಟ ಅಕಾಡೆಮಿಗೆ ತಪ್ಪದ ಕಿರಿಕಿರಿ

Call us

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಉಪ್ಪಿನಕುದ್ರು ಗೊಂಬೆಗೆ ಮೊದಲು ಸೂತ್ರ ಹಿಡಿದು ಕುಣಿಸಿದ್ದು ಸಿಆರ್‌ಝಡ್ ನಿಯಮ. ನಂತರ ಸಾರಿಗೆ ಇಲಾಖೆ ಒಂದು ವರ್ಷ ಸೂತ್ರ ಕೈಗೆ ತೆಗೆದುಕೊಂಡಿತು. ಪ್ರಸಕ್ತ ಉಪ್ಪಿನಕುದ್ರು ಗೊಂಬೆಗೆ ಮೆಸ್ಕಾ ಸೂತ್ರ!

Call us

Call us

ತಲ್ಲೂರು ಗ್ರಾಮ ಪಂಚಾಯತ್ ಬೀದಿ ದೀಪ ಅಳವಡಿಕೆಗೆ ನಿರ್ಣಯ ಮಂಡಿಸಿ ಮೆಸ್ಕಾಂ ಕಚೇರಿಗೆ ಕಳುಹಿಸಿದ್ದೇ ತಡ ಹಿಂದೆ ಮುಂದೆ ನೋಡದೆ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಕಂಪೌಂಡ್ ಒಳಗೆ ನೆಟ್ಟ ಕಂಬದಿಂದ ಅಕಾಡೆಮಿಯ ಒಂದು ಮಾತು ಕೇಳದೆ ಲೈನ್ ಎಳೆದು, ಸ್ವಾಗತಗೋಪುರ ಕೆಲಸಕ್ಕೆ ವಿಘ್ನ ತಂದಿದೆ. ಎಲ್ಲಾದರೂ ಸ್ವಾಗತ ಗೋಪುರ ಕಾಮಗಾರಿ ಮಾಡಿದರೆ ಕಾರ್ಮಿಕ ವಿದ್ಯುತ್ ಸ್ಪರ್ಶಿಸಿ ಜೀವ ಕಳೆದುಕೊಳ್ಳುವಂತ ದುಃಸ್ಥಿತಿ ಕಾಡುತ್ತಿದೆ.

ಹೌದು.. ಗೊಂಬೆಯಾಟ ಅಕಾಡೆಮಿ ವಿದ್ಯುತ್ ಸಂಪರ್ಕ ಹಿನ್ನೆಲೆಯಲ್ಲಿ ಮೆಸ್ಕಾಂಗೆ ಕಂಬದ ಹಣತುಂಬಿ ಸಂಪರ್ಕ ಪಡೆದುಕೊಂಡಿತ್ತು. ಮೊನ್ನೆ ಮೊನ್ನೆ ಶಾಲೆಯೆಡೆಗೆ ಗೊಂಬೆ ನಡಿಗೆ ಕಾರ‍್ಯಕ್ರಮಕ್ಕೆ ಅಕಾಡೆಮಿ ಬಾಗಿಲು ಹಾಕಿ, ಗೇಟ್ ಬಂದ್ ಮಾಡಿ ಹೋದ ಸಂದರ್ಭದಲ್ಲಿ ಮೆಸ್ಕಾಂ ಕಂಪೌಂಡ್ ಜಿಗಿದು, ಸ್ವಾಗತ ಗೋಪುರ ಪಕ್ಕದಲ್ಲಿ ಲೈನ್ ಎಳೆದುಬಿಟ್ಟಿದೆ! ಇದಕ್ಕೆ ಮೆಸ್ಕಾಂ ಕೊಡುವ ಸ್ಪಷ್ಟೀಕರಣ ಎಂದರೆ ಗ್ರಾ.ಪಂ ನಿರ್ಣಯ ಆಧಾರದಲ್ಲಿ ನಾವು ಲೈನ್ ಎಳೆದಿದ್ದೇವೆ. ಗ್ರಾ.ಪಂ ಹೇಳಿದರೆ ಲೈನ್ ತೆರವು ಮಾಡುತ್ತೇವೆ ಎನ್ನುತ್ತಾರೆ. ಮತ್ತೆ ಅಕಾಡೆಮಿ ಕೆಲಸದೊಟ್ಟಿಗೆ ಅರ್ಜಿ ಹಿಡಿದು ಅಲೆಯುವ ಬಿಟ್ಟಿ ಕೆಲಸ ಮಾಡಬೇಕಾ? ಅದಕ್ಕೆ ತಗಲುವ ಖರ್ಚು ಯಾರು ಭರಿಸುತ್ತಾರೆ ಎಂದರೆ ಮೆಸ್ಕಾಂ ಇಂಜಿನಿಯರ್ ಬಳಿ ಉತ್ತರವಿಲ್ಲ. ಗೊಂಬೆಯಾಟದ ಮೂಲಕ ತಲ್ಲೂರು ಗ್ರಾ.ಪಂ. ಹಾಗೂ ಉಪ್ಪಿನಕುದ್ರು ಹೆಸರು ವಿಶ್ವಮಟ್ಟಕ್ಕೆ ಏರಿಸಿದ ಗೊಂಬೆಯಾಟ ಅಕಾಡೆಮಿ ನೆರವಿಗೆ ತಲ್ಲೂರು ಗ್ರಾ.ಪಂ. ಬಾರದಿರುವುದು ಅಚ್ಚರಿ. ಇದಕ್ಕೇ ಇರಬೇಕು ಹಿತ್ತಲುಗಿಡ ಮದ್ದಲ್ಲ ಎನ್ನುವ ಗಾದೆ ಹುಟ್ಟಿದ್ದು.

Call us

Call us

ನಿಯಮ ಪಾಲಿಸದ ಮೆಸ್ಕಾಂ : ಖಾಸಗಿ ಜಾಗದಲ್ಲಿ ಇರುವ ಕಂಬ ಬಳಸಿ ಬೇರೆ ಸಂಪರ್ಕ ಕೊಡಬೇಕಿದ್ದರೂ ಜಾಗದ ಮಾಲೀಕರ ಒಪ್ಪಿಗೆ ಪಡೆಯಬೇಕು. ಎನ್‌ಓಸಿ ಪಡೆದು ಕೆಲಸ ಮಾಡಬೇಕು. ಎಲ್ಲಾದರೂ ಎನ್‌ಒಸಿ ಕೊಟ್ಟ ಜಾಗದ ಮಾಲೀಕರು ಮನಸ್ಸು ಬದಲಾಯಿಸಿ ಎನ್‌ಒಸಿ ಹಿಂದಕ್ಕೆ ಪಡೆಯಲೂ ಅವಕಾಶಇದೆ ಎಂದು ಮೆಸ್ಕಾ ರೂಲ್ಸ್ ಹೇಳುತ್ತದೆ. ತಮ್ಮ ನಿಯಮ ಮೆಸ್ಕಾಂ ಬ್ರೇಕ್ ಮಾಡುವ ಮೂಲಕ ಅಕಾಡೆಮಿಗೆ ಮತ್ತೊಂದು ಸಂಕಷ್ಟ ತಂದೊಡ್ಡಿದೆ.
ಮೆಸ್ಕಾಂ ಲೈನ್ ಎಳೆದಿದ್ದರಿಂದ ಅಕಾಡೆಮಿ ಮುಂದಿನ ಸ್ವಾಗತಗೋಪುರ ಕೆಲಸಕ್ಕೆ ವಿಘ್ನ ಬಂದಿದೆ. ಗೊಂಬೆಯಾಟ ನಡೆದು ಬಂದದಾರಿ ಹಾಗೂ ಗೊಂಬೆಯಾಟದ ಸಂಸ್ಕೃತಿ ಪ್ರತಿಬಿಂಬಿಸುವ ಚಿತ್ರಗಳ ಮೂಲಕ ಸ್ವಾಗತ ಗೋಪುರ ನಿರ್ಮಾಣ ಆಗಲಿದೆ. ವಿದ್ಯುತ್ ಲೈನ್ ಬದಾಯಿಸದೇ ಕಾಮಗಾರಿ ನಡೆಸಿದರೆ ಅಪಾಯಕ್ಕೆ ಆಹ್ವಾನ ಕೊಟ್ಟಂತೆ. ಈ ಬಗ್ಗೆ ಮೆಸ್ಕಾಂ ಇಂಜಿನಿಯರ್ ವಿನಾಯಕ ಕಾಮತ್ ಹೇಳುವುದೇ ಬೇರೆ. ಅಕಾಡೆಮಿ ರಸ್ತೆ ಒತ್ತುವರಿ ಮಾಡಿ ಕಂಪೌಂಡ್ ಮಾಡಿದ್ದಾರೆ. ಹಾಗಾದರೆ ಕಂಬ ಹೂಳಬೇಕಿದ್ದರೆ ಮಸ್ಕಾಂ ಒತ್ತುವರಿ ಏಕೆ ಗಮನಿಸಲಿಲ್ಲ ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತಿದೆ. ಒತ್ತುವರಿ ಆಗಿದೆಯೋಇಲ್ಲವೋಎನ್ನೋದು ಕಂದಾಯ ಇಲಾಖೆ ಹೇಳಬೇಕು. ಅಲ್ಲವೇ ? ತೆರದ ಕನ್ನಡಿಯಂತೆ ಇರುವಾಗ ಅಕಾಡೆಮಿ ಮೇಲೆ ಗೂಬೆ ಕೂರಿಸುಸೋದು ಎಷ್ಟು ಸರಿ ಎನ್ನೋದು ಪ್ರಜ್ಞಾವಂತರ ಪ್ರಶ್ನೆ. ಒಟ್ಟಾರೆ ಒಂದೆಲ್ಲಾ ಒಂದು ಕಾರಣ ಇಟ್ಟುಕೊಂಡು ಅಕಾಡೆಮಿಗೆ ಕಾಡುತ್ತಾ ಬಂದರೆ, ಇದರಿಂದ ಬೇಸತ್ತು ಗೊಂಬೆಯಾಟದ ಸೂತ್ರ ಕಾಮತರು ಬಿಟ್ಟರೆ ನಷ್ಟ ನಮ್ಮ ಮಣ್ಣಿನ ಹಿರಿಮೆಕಲೆ ಗೊಂಬೆಯಾಟಕ್ಕೆ!

ಅತೀ ಹೆಚ್ಚು ಪ್ರದರ್ಶನ : ಈ ಹಿಂದೆ ಬೇರೆ ಕಡೆಗಳಲ್ಲಿ ಗೊಂಬೆಯಾಟವಿದ್ದರೂ, ವಿಶ್ವದ ಗಮನಸೆಳೆದ ಹಿರಿಮೆ ಉಪ್ಪಿನಕುದ್ರು ಗೊಂಬೆಯಾಟಕ್ಕೆ ಸಲ್ಲುತ್ತದೆ.ಇದೂವರಗೆ ೨೦ಕ್ಕೂ ಮಿಕ್ಕಿ ವಿದೇಶದಲ್ಲಿ ಗೊಂಬೆಯಾಟ ಪ್ರದರ್ಶನಕಂಡಿದೆ. ದೇಶದುದ್ದಗಲಕ್ಕೂ ಗೊಂಬೆಯ ಕಂಪು ಬಿತ್ತಿದೆ. ರಾಮಾಯಣದ ಲಂಕಾದಹನ ದಾಖಲೆ ಪ್ರದರ್ಶನಕಂಡಿದೆ. ಗರುಡ ಗರ್ವಭಂಗ, ನರಕಾಸುರ ವಧೆ ಹೆಚ್ಚು ಪ್ರದರ್ಶನದ ಪಟ್ಟಿಯಲ್ಲಿದೆ. ಲಂಕಾದಹನ ಪ್ರದರ್ಶನ ದಾಖಲೀಕರಣ ಮಾಡಿದ್ದರೆ ಇಷ್ಟೊತ್ತಿಗಾಗಲೇ ಗಿನ್ನಿಸ್ ಪುಸ್ತಕದಲ್ಲಿ ದಾಖಲಾಗಿರುತ್ತಿತ್ತು! ಶಾಲೆಯ ಕಡೆ ಗೊಂಬೆ ನಡಿಗೆ ಮೂಲಕ ಅಕಾಡೆಮಿ ಮುಂದಿನ ತಲೆಮಾರಿಗೂ ಗೊಂಬೆಯಾಟ ಪರಿಚಯಸುವ ಮೂಲಕ ವಿದ್ಯಾರ್ಥಿಗಳಲ್ಲೂ ನಮ್ಮ ಮಣ್ಣಿನಕಲೆಯ ಬಗ್ಗೆ ಆಸಕ್ತಿ ವಹಿಸುವಂತೆ ಮಾಡಿದೆ.

ಆರನೇ ತಲೆಮಾರಿಗೆ ವಿಸ್ತರಣೆ : ಉಪ್ಪಿನಕುದ್ರು ಗೊಂಬೆಯಾಟಕ್ಕೆ ಶತಶತಮಾನಗಳ ಇತಿಹಾಸವಿದೆ. ಪ್ರಸಕ್ತ ಉಪ್ಪಿನಕುದ್ರು ಗೊಂಬೆಯಾಟದ ಸೂತ್ರ ಹಿಡಿದ ಭಾಸ್ಕರ ಕೊಗ್ಗ ಕಾಮತ್ ಆರನೇ ತಲೆ ಮಾರಿನವರು. ಇವರ ಅಪ್ಪ, ಅಜ್ಜ ಮುತ್ತಜ್ಜ ಎಲ್ಲರೂ ಗೊಂಬೆ ಸೂತ್ರ ಹಿಡಿದು ಕಷ್ಟದ ಬದುಕು ಕಟ್ಟಿಕೊಂಡವರು. ಹಿಂದಿನವರ ಕಲೆ ಮೇಲಿನ ವ್ಯಾಮೋಹವೇ ಆರನೇ ತಲೆಮಾರಿನವರೆಗೂ ಮುಂದುವರಿಯಲು ಕಾರಣ. ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಮೂಲಕ ಉಪ್ಪಿನಕುದ್ರು ಗೊಂಬೆಯಾಟದ ಸವಿ ವೀಕ್ಷಕರಿಗೆ ಉಣಬಡಿಸಿದರೆ, ಗೊಂಬೆಯಾಟ ನಿಲ್ಲಂದತೆ ಮುಂದುವರಿಬೇಕು ಎಂಬ ಇರಾದೆಯೇ ೨೦೧೫ರಲ್ಲಿ ಗೊಂಬೆಯಾಟ ಅಕಾಡೆಮಿ ಹುಟ್ಟಿಗೆ ಕಾರಣವಾಯಿತು. ಆಸಕ್ತರಿಗೆ ಇಲ್ಲಿ ಗೊಂಬೆ ಸೂತ್ರ ಹಿಡಿಯೋದು ಕಲಿಸಲಾಗುತ್ತದೆ. ನೂರಾರು ಜನ ಗೊಂಬೆ ಆಡಿಸೊದು ಕಲಿತಿದ್ದಾರೆ. ಉಚಿತವಾಗಿ ಗೊಂಬೆ ಆಡಿಸೋದು ಹೇಳಿಕೊಡಲಾಗುತ್ತದೆ. ಆಸಕ್ತರಿಗೆಅಕಾಡೆಮಿ ಸದಾ ತೆರೆದ ಬಾಗಿಲು. ಅಕಾಡೆಮಿ ಎಜುಕೇಶನ್ ಇನ್ಸಿಟ್ಯೂಟ್ ಆಗಬೇಕು ಎನ್ನೋದು ಮೂಲೋದ್ದೇಶ. ಪ್ರಸಕ್ತ ೨೫ಕ್ಕೂ ಮಿಕ್ಕ ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಬೇರೆ ಬೇರೆ ಮೂಲಗಳಿಂದ ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ.

ವರ್ಷ ನಿಂತ ಬಸ್: ಕಲೆ, ಸಂಸ್ಕೃತಿ ಹಾಗೂ ಸಾಹಿತ್ಯದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದ ಬೆಂಗಳೂರು ಇಸ್ಫೋಸಿಸ್ ಸುಧಾ ಮೂರ್ತಿ ಹಾಗೂ ನಾರಾಯಣಮೂರ್ತಿ ಉಪ್ಪಿನಕುದ್ರು ಗೊಂಬೆಯಾಟ ತಿರುಗಾಟಕ್ಕೆ ಹೊಸ ಬಸ್ ಕೊಡುಗೆಯಾಗಿ ನೀಡಿದ್ದು, ಒಂದು ವರ್ಷ ಬಿಸಿಲು-ಮಳೆಗೆ ಒಣಗುತ್ತಾ ನಿಂತಿತ್ತು, ಇದಕ್ಕೆ ಕಾರಣ ಸಾರಿಗೆ ಇಲಾಖೆ. ಹೊಸ ಬಸ್ ನೋಂದಣಿಗೆ ಸಾರಿಗೆ ಇಲಾಖೆ ತಗಾದೆ ತೆಗೆದಿದ್ದರಿಂದ ಬಸ್ ಖಾಲಿ ನಿಲ್ಲಬೇಕಾಗಿದ್ದು, ನಿರಂತರ ಒಂದು ವರ್ಷದ ಹೋರಾಟದ ನಂತರ ಸಾರಿಗೆ ಇಲಾಖೆ ನೋಂದಣಿ ಮಾಡಿಕೊಂಡು ಪರವಾನಿಗೆ ನೀಡಿತು. ಬಸ್ ಪರವಾನಿಗೆ ಸಂದಿಗ್ದತೆಯಲ್ಲಿ ಅಕಾಡೆಮಿ ಬೆನ್ನಿಗೆ ನಿಂತಿದ್ದು ಮಾಧ್ಯಮಗಳು. ಈಗಲೂ ಬಸ್ ಪಾಸಿಂಗ್ ಸಮಯದಲ್ಲಿ ಸಾರಿಗೆ ಇಲಾಖೆ ಸತಾಯಿಸದೆ ದಾಖಲೆ ನವೀಕರಣ ಮಾಡೋದಿಲ್ಲ. ಪ್ರತಿಸಲ ಒಂದೆಲ್ಲಾ ಒಂದು ಕಾರಣಕ್ಕಾಗಿ ಹೋರಾಟ ಮಾಡೋದು ಅನಿವಾರ್ಯವಾಗಿ, ಗೊಂಬೆಯಾಟಕ್ಕೆ ಆತುಕೊಂಡ ಕಾಮತರಿಗೆ ಬೇಸರ ತರಿಸಿದೆ. ಹೀಗೆ ಪದೇ ಪದೇ ಸಮಸ್ಯೆ ಬರುತ್ತಲೇ ಇದ್ದರೆ ಕಾಮತ್‌ರು ಗೊಂಬೆ ಆಟದ ಸೂತ್ರ ಕೈಬಿಟ್ಟರೂ ಅಚ್ಚರಿಯಿಲ್ಲ. ಗೊಂಬೆ ಅಕಾಡೆಮಿ ಕಟ್ಟಡದ ಹಿಂದೆ ಉದ್ಯಮಿ ದಯಾನಂದ ಪೈ ಕೊಡುಗೆ ಕೂಡಾ ಅಷ್ಟೇ ದೊಡ್ಡದಿದೆ.

ಅನುಮಾನ ಹುಟ್ಟಿಸುವ ಅಧಿಕಾರಿಗಳ ವರ್ತನೆ : ಶಿಸ್ತುಬದ್ಧ ಜೀವನ ನಡೆಸುತ್ತಿರುವ ಭಾಸ್ಕರ ಕಾಮತ್‌ರದು ಭ್ರಷ್ಠಾಚಾರ ವಿರೋಧಿ ನಿಲುವು. ಅವರು ಬೆಳೆದು ಬಂದ ರೀತಿಯೇ ಹಾಗೆ. ಸರಕಾರಿ ಇಲಾಖೆಗಳಲ್ಲಿ ತಮಗೆ ಸಿಗಬೇಕಾದ ಹಕ್ಕನ್ನು, ಸೌಲಭ್ಯವನ್ನು ಪಡೆಯಲು ಅಧಿಕಾರಿಗಳಿಗೆ ಲಂಚ ಕೊಡುವ ಪರಿಪಾಠವನ್ನು ಇಟ್ಟುಕೊಂಡವರಲ್ಲ. ಅಳಿವಿನಂಚಿನಲ್ಲಿರುವ ಗೊಂಬೆಯಾಟ ಕಲೆಯನ್ನು ಉಳಿಸಿ, ಬೆಳಸಿ, ಪೋಷಿಸಲು ಶ್ರಮಿಸುತ್ತಿರುವ ಅಕಾಡೆಮಿಗೆ ಒಂದಿಲ್ಲೊಂದು ರೀತಿಯ ಸಮಸ್ಯೆ ಉದ್ಭವಿಸುತ್ತಿರುವುದಕ್ಕೆ ಕಾರಣ ಪ್ರತಿಯೊಬ್ಬರು ಅರ್ಥೈಸಬಲ್ಲರು. ಎಲ್ಲ ದಾಖಲೆಗಳು ಅಕಾಡೆಮಿ ಪರವಾಗಿದ್ದರೂ ಅಧಿಕಾರಿಗಳು ಒಂದೊಂದು ಕುಂಟು ನೆಪ ಹೇಳುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿರುವುದಂತೂ ಸತ್ಯ. ಈ ಬಗ್ಗೆ ಮೇಲಾಧಿಕಾರಿಗಳು, ಶಾಸಕರು ಗಮನ ಹರಿಸುವುದು ಒಳಿತು.

ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ನಿರಂತರ ಹೋರಾಟದ ಬದುಕಿನಲ್ಲಿ ಕಲೆಯನ್ನು ಉಳಿಸಿ ಬೆಳೆಸುವತ್ತ ಹೆಣಗಾಡುತ್ತಿದೆ. ಸಾಂಸ್ಕೃತಿಕ, ಪ್ರವಾಸೋದ್ಯಮ ಇಲಾಖೆ ಅಂತರ್ಜಾಲದಲ್ಲಿ ಲಿಂಕ್ ಮೂಲಕ ಅಕಾಡೆಮಿ ಪರಿಚಯಿಸುವ ಕೆಲಸ ಮಾಡಿಲ್ಲ. ಅಕಾಡೆಮಿ ಕಾಮತರದ್ದೂ ಅಂತಾಗಿದ್ದು, ನಮ್ಮದು ಅಂತಾಗದಿರುವುದು ವೈಪರೀತ್ಯ .ಗೊಂಬೆಯಾಟ ಸ್ಟೇಡಿಯಂಗೆ ಕಮರ್ಶಿಯಲ್ ಲೆಕ್ಕದಲ್ಲಿ ವಿದ್ಯುತ್‌ಬಿಲ್ ಕಟ್ಟುತ್ತಿದ್ದು, ನಾವೇನು ವ್ಯವಹಾರ ನಡೆಸುತ್ತಿಲ್ಲ. ನಮ್ಮ ಕಣ್ಣ ಮುಂದೆ ಗೊಂಬೆ ಬಿಟ್ಟರೆ ಹಣವೇ ತೋರದ ಕಾರಣ ಬ್ಯಾಂಕ್ ಉದ್ಯೋಗ ಬಿಟ್ಟು ಸೂತ್ರ ಹಿಡಿಯಬೇಕಾಯಿತು. ನಾನೇನು ಸಮಾಜಕ್ಕೆ ಕೆಟ್ಟದ್ದು ಮಾಡಲು ಹೊರಟಿದ್ದೇನೇನೋ ಎಂಬಂತೆ ಪ್ರತೀ ಸ್ಟೆಪ್‌ನಲ್ಲೂ ತೊಂದರೆ ಅನುಭವಿಸಿದ್ದೇನೆ. ಪ್ರಸಕ್ತ ನಾವು ಗೊಂಬೆಯಾಟ ತಿರುಗಾಟದಲ್ಲಿದ್ದಾಗ ಅಕಾಡೆಮಿಗೆ ಅತಿಕ್ರಮ ಪ್ರವೇಶ ಮಾಡಿ, ಲೈನ್ ಎಳೆಯಲಾಗಿದೆ. ಅದೂ ಪ್ರವೇಶದ್ವಾರದ ಕೆಲಸ ಪೂರ್ಣಗೊಂಡಿಲ್ಲ. ಇನ್ನು ಕೆಲಸ ಮುಂದುವರಿಸಬೇಕಾದರೆ ನಾವು ಮತ್ತೆ ಲೈನ್ ಬದಲಾಯಿಸುವಂತೆ ಮನವಿ ಮಾಡಬೇಕು, ಲಕ್ಷಾಂತರ ಹಣ ಖರ್ಚು ಮಾಡಬೇಕು. ಇದೆಕ್ಕೆಲ್ಲಾ ಹೊಣೆಯಾರು.ಎಲ್ಲವೂ ತೆರೆದ ಪುಸ್ತಕದಂತಿದ್ದೂ, ಯಾವುದೇ ಗ್ರಾಂಟ್‌ಇಲ್ಲದೆ ಅಕಾಡೆಮಿ ನಡೆಯುತ್ತಿದೆ, ಹಾಗಿದ್ದೂ ಉಪದ್ರ ಏಕೆ? – ಭಾಸ್ಕರ ಕೊಗ್ಗ ಕಾಮತ್, ಸಂಸ್ಥಾಪಕ, ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ

ಕಂದಾಯ ಇಲಾಖೆ ಜಾಗದ ಸರ್ವೇ ಮಾಡಬೇಕಿದ್ದರೂ ಸಂಬಂಧಪಟ್ಟ ನಾಲ್ಕಾರು ಜನರಿಗೆ ಮಾಹಿತಿ ನೀಡಿ ಪ್ರವೇಶಮಾಡಬೇಕು ಎಂದು ನ್ಯಾಯಾಲಯ ಹೇಳುತ್ತದೆ. ಆದರೆ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಗೇಟ್ ಹಾಕಿದ್ದು, ಯಾರೂ ಇಲ್ಲದ ಸಮಯದಲ್ಲಿ ಒಳ ಪ್ರವೇಶಮಾಡಿ ಖಾಸಗಿ ಜಾಗದಲ್ಲಿರುವ ಕಂಬದ ಮೂಲಕ ಲೈನ್ ಎಳೆದಿದ್ದು, ಕಾನೂನು ಬಾಹಿರ. ಖಾಸಗಿ ಜಾಗದವರ ಒಪ್ಪಿಗೆ ಪಡೆದು ಮುಸ್ಕಾಂ ಲೈನ್ ಎಳೆಯಬೇಕಿತ್ತು. ಹಾಗೆ ಲೈನ್ ಎಳೆಯಲು ಎನ್‌ಒಸಿ ಕೂಡಾ ಪಡೆಯಬೇಕಿದ್ದು, ಅದನ್ನು ಬಲಾಯಿಸವ ಹಕ್ಕು ಕೂಡಾ ಖಾಸಗಿ ಜಾಗದ ಮಾಲೀಕರಿಗೆ ಇದೆ. ಇದನ್ನೆ ಮೆಸ್ಕಾಂ ಕಾನೂನು ಕೂಡಾ ಹೇಳುತ್ತದೆ. ಗೊಂಬೆಯಾಟ ಅಕಾಡೆಮಿ ಮಿಷಯದಲ್ಲಿ ಮೆಸ್ಕಾಂ ಸರ್ವಾಧಿಕಾರಿ ಧೋರಣೆ ತೋರಿಸಿದೆ. – ರವಿಕುಮಾರ್ ಗಂಗೊಳ್ಳಿ, ನ್ಯಾಯವಾದಿ ಕುಂದಾಪುರ.

Leave a Reply

Your email address will not be published. Required fields are marked *

four − 1 =