ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶ್ರೀನಿಧಿ ಟ್ರಸ್ಟ್ ಕೆರ್ಗಾಲು, ಕರ್ನಾಟಕ ಕಾರ್ಮಿಕ ವೇದಿಕೆ ಉಪ್ಪುಂದ, ಅಂಜಲಿ ಆಸ್ಪತ್ರೆ ಬಂದೂರು ಇವರ ಸಹಯೋಗದೊಂದಿಗೆ ಉಪ್ಪುಂದ ಸಪಪೂ ಕಾಲೇಜಿನಲ್ಲಿ ನಡೆದ ಉಚಿತ ಅಂಬ್ಯುಲೆನ್ಸ್ ಸೇವೆ ಲೋಕಾರ್ಪಣೆ ಮತ್ತು ಸಂಪೂರ್ಣ ಉಚಿತ ಕಣ್ಣು ಮತ್ತು ದಂತ ಹಾಗೂ ಆರೋಗ್ಯ ತಪಾಸಣೆ ಶಿಬಿರ ಜರುಗಿತು.
ಶಿಬಿರವನ್ನು ಉದ್ಘಾಟಿಸಿದ ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್ ಮಾತನಾಡಿ ಪ್ರತಿಯೊಂದು ಜೀವಗಳು ಅಮೂಲ್ಯವಾಗಿದ್ದು, ಅಪಘಾತ ಸಂಭವಿಸಿದ ಮೊದಲ ಒಂದು ಗಂಟೆ ಅತೀ ಮುಖ್ಯವಾಗಿರುತ್ತದೆ. ತತ್‌ಕ್ಷಣ ಅಂಬ್ಯುಲೆನ್ಸ್ ಸೇವೆ ಲಭ್ಯವಾದರೆ ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಲು ಸಾಧ್ಯವಾಗುತ್ತದೆ. ನಾನು ಮತ್ತು ನನ್ನ ಸಂಸಾರ ಎಂಬ ತತ್ವವನ್ನು ಬಿಟ್ಟು ಪರರ ಸುಖ, ಕಷ್ಟಗಳಿಗೂ ಸ್ಪಂದಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು. ತಾನು ದುಡಿದ ಸ್ವಲ್ಪ ಭಾಗವನ್ನು ಇಂತಹ ಸಾಮಾಜಿಕ ಸೇವೆಗೆ ಮಿನಿಯೋಗಿಸಿದಾಗ ಮನುಷ್ಯ ತನ್ನ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ನಿಸ್ವಾರ್ಥ ಹಾಗೂ ಮಾನವೀಯತೆಯಿಂದ ಇಂತಹ ಮಹತ್ಕಾರ್ಯಗಳನ್ನು ಮಾಡುವುದರಿಂದ ದೇವರು ಕೂಡಾ ಮೆಚ್ಚುತ್ತಾನೆ ಎಂದರು.
ಬೈಂದೂರು ಅಂಜಲಿ ಆಸ್ಪತ್ರೆಯ ನಿರ್ದೇಶಕ ಡಾ| ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭ ಯಕ್ಷಗಾನ ರಂಗದ ಹಿರಿಯ ಕಲಾವಿದ ತೀರ್ಥಹಳ್ಳಿ ಗೋಪಾಲ ಆಚಾರ್ಯ ಮತ್ತು ರಾಣಿಬಲೆ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ವೆಂಕಟರಮಣ ಖಾರ್ವಿ ಇವರನ್ನು ಹಿರಿಯ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಸಮ್ಮಾನಿಸಿದರು.
ಕೆರ್ಗಾಲು ಶ್ರೀನಿಧಿ ಟ್ರಸ್ಟ್ ಅಧ್ಯಕ್ಷ ಬಾಲಕೃಷ್ಣ ಪ್ರಭು, ಕರ್ನಾಟಕ ಕಾರ್ಮಿಕ ವೇದಿಕೆ ಉಡುಪಿ ಅಧ್ಯಕ್ಷ ರವಿ ಶೆಟ್ಟಿ, ಉಪ್ಪುಂದ ಸ. ಪ. ಪೂ. ಕಾಲೇಜು ಪ್ರಾಂಶುಪಾಲ ಶ್ರೀಧರ್ ಐತಾಳ. ಬಂಕೇಶ್ವರ ನಾಗರಾಜ ಗಾಣಿಗ, ಉಪ್ಪುಂದ ಕಾರ್ಮಿಕ ವೇದಿಕೆ ಅಧ್ಯಕ್ಷ ಮಣಿಕಂಠ ಆಚಾರ್ಯ, ಆನೆಗಣಪತಿ ಆಟೋ ಚಾಲಕ, ಮಾಲಕರ ಸಂಘ ಅಧ್ಯಕ್ಷ ಮಹಾಬಲ ಪೂಜಾರಿ, ಮಾನ್ಸೂರ್ ಇಬ್ರಾಹಿಂ, ಯಾಸಿನ್ ಉಪ್ಪುಂದ ಮೊದಲಾದವರು ಉಪಸ್ಥಿತರಿದ್ದರು. ರಾಜೇಶ ಕಿಣಿ ಸ್ವಾಗತಿಸಿದರು. ಸುಬ್ರಹ್ಮಣ್ಯ ಜಿ. ಉಪ್ಪುಂದ ಕಾರ‍್ಯಕ್ರಮವನ್ನು ನಿರೂಪಿಸಿದರು. ರಾಘವೇಂದ್ರ ಆಚಾರ್ಯ ವಂದಿಸಿದರು.
ನಂತರ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಲಯನ್ಸ್ ಆಸ್ಪತ್ರೆ ಕೋಟ, ಲಯನ್ಸ್ ಟ್ರಸ್ಟ್ ಫಾರ್ ಸರ್ವಿಸಸ್ ಮತ್ತು ಚಾರಿಟೀಸ್ ಕೋಟ, ಲಯನ್ಸ್ ಕ್ಲಬ್ ಬ್ರಹ್ಮಾವರ-ಬಾರ್ಕೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಅಂಧತ್ವ ನಿವಾರಣ ವಿಭಾಗ ಉಡುಪಿ, ಆನೆಗಣಪತಿ ಆಟೋ ಚಾಲಕ, ಮಾಲಕರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಸಂಪೂರ್ಣ ಉಚಿತ ಕಣ್ಣು ಮತ್ತು ದಂತ ಹಾಗೂ ಆರೋಗ್ಯ ತಪಾಸಣೆ ಶಿಬಿರದಲ್ಲಿ ನೂರಾರು ಜನ ಪ್ರಯೋಜನ ಪಡೆದರು.