ಪರಿಸ್ಥಿತಿ ನಿಯಂತ್ರಣಕ್ಕೆ ಲಘು ಲಾಠಿ ಪ್ರಹಾರ. ಸ್ಥಳಕ್ಕೆ ಎಸ್ಪಿ ಅಣ್ಣಾಮಲೈ ಭೇಟಿ
ಕುಂದಾಪ್ರ ಡಾಟ್ ಕಾಂ ವರದಿ
ಬೈಂದೂರು: ಉಪ್ಪುಂದ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಭಟ್ಕಳದಿಂದ ಕುಂದಾಪುರಕ್ಕೆ ತೆರಳುತ್ತಿದ್ದ ಸರಕಾರಿ ಬಸ್ಸು ಹಾಗೂ ಹುಬ್ಬಳ್ಳಿ ಮುಂಬೈನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ಸುಗಳ ನಡುವಿನ ಅಫಘಾತದಲ್ಲಿ ಸರಕಾರಿ ಬಸ್ಸಿನಲ್ಲಿದ್ದ ವಿದ್ಯಾರ್ಥಿಯೋರ್ವ ಗಂಭೀರವಾಗಿ ಗಾಯಗೊಂಡು ದಾರುಣವಾಗಿ ಮೃತಪಟ್ಟ ಘಟನೆಗೆ ನಡೆಯುತ್ತಿದ್ದಂತೆ ಆಕ್ರೋಶಗೊಂಡ ವಿದ್ಯಾರ್ಥಿಗಳು ಹೆದ್ದಾರಿ ಮಧ್ಯೆಯೇ ನಿಂತು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರಗೆಡವಿದ ಘಟನೆ ನಡೆದಿದೆ.
ಸತತ ಎರಡು ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ತಡೆ ನಡೆಸಿದ ವಿದ್ಯಾರ್ಥಿಗಳು ಬಸ್ ಡ್ರೈವರ್‌ಗಳನ್ನು ಬಂಧಿಸಬೇಕು, ಮೃತರ ಹುಡುಗನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು, ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಠಿಯಿಂದ ಹೆಚ್ವುವರಿ ಸರಕಾರಿ ಬಸ್ಸುಗಳನ್ನು ಓಡಿಸಬೇಕು ಎಂದು ರಸ್ತೆಯಲ್ಲಿಯೇ ಕುಳಿತು ಆಗ್ರಹಿಸಿದರು. ಸರಕಾರಿ ಬಸ್ಸುಗಳಲ್ಲಿ ವಿದ್ಯಾರ್ಥಿಗಳ ಬಗ್ಗೆ ಬೇಜವಾಬ್ದಾರಿ ತೋರುತ್ತಿರುವುದಲ್ಲದೇ ಇತರೆ ಪ್ರಯಾಣಿಕರು ಹತ್ತಿದ ಮೇಲೆ ಬಸ್ ಹತ್ತಿಸಿಕೊಳ್ಳಲಾಗುತ್ತಿದೆ. ನೂರಾರು ವಿದ್ಯಾರ್ಥಿಗಳ ಈ ಭಾಗದಿಂದ ಕಾಲೇಜಿಗೆ ತೆರಳುತ್ತಿದ್ದರೂ ಸಮಯಕ್ಕೆ ಸರಿಯಾಗಿ ಬಸ್ ಬಿಡದೇ ನೂಕುನುಗ್ಗಲಾಗುತ್ತಿದೆ. ಇದು ವಿದ್ಯಾರ್ಥಿಯ ಜೀವಕ್ಕೆ ಕಂಟಕ ತಂದೊಡ್ಡಿತು ಎಂದು ಆರೋಪಿಸಿರು. ಕುಂದಾಪ್ರ ಡಾಟ್ ಕಾಂ ವರದಿ.
ಪೊಲೀಸರ ಲಾಠಿ ಪ್ರಹಾರ, ವಿದ್ಯಾರ್ಥಿನಿಗೆ ಗಾಯ:
ಸತತವಾಗಿ ಹೆದ್ದಾರಿ ತಡೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಚದುರಿಸಲು ಲಘುವಾಗಿ ಲಾಠಿ ಬೀಸಿದ್ದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಯಿತು. ಆರಂಭದಲ್ಲಿ ಪೊಲೀಸರು ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಸಿದರಾದರೂ ಮಾತು ಕೇಳದಿದ್ದಾಗ ಅನಿವಾರ್ಯವಾಗಿ ಲಾಠಿ ಪ್ರಹಾರ ನಡೆಸಿದರು. ಪೊಲೀಸರು ಲಾಠಿ ಬೀಸುತ್ತಿದ್ದಂತೆ ದಿಕ್ಕಾಪಾಲಾಗಿ ಓಡಿದ ವಿದ್ಯಾರ್ಥಿಗಳು ರಸ್ತೆಯ ಪಕ್ಕದಲ್ಲಿನ ಹೊಂಡಕ್ಕೆ ಬಿದ್ದು ಏಟು ಮಾಡಿಕೊಂಡರೇ, ಓರ್ವ ವಿದ್ಯಾರ್ಥಿಯ ಕಾಲಿಗೆ ಬಲವಾದ ಗಾಯಗಳಾದರೇ, 2-3 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಕುಂದಾಪ್ರ ಡಾಟ್ ಕಾಂ ವರದಿ.
ಸ್ಥಳಕ್ಕೆ ಎಸ್ಪಿ ಅಣ್ಣಾಮಲೈ ಭೇಟಿ:
ಲಾಠಿ ಬೀಸಿದ ಪೋಲಿಸರ ವಿರುದ್ಧ ತಿರುಗಿಬಿದ್ದ ವಿದ್ಯಾರ್ಥಿಗಳು ರಸ್ತೆಯ ಪಕ್ಕದಲ್ಲಿಯೇ ನಿಂತು ಮತ್ತೆ ಪ್ರತಿಭಟನೆಗಿಳಿದರು. ವಿಷಯ ತಿಳಿದ ಎಸ್ಪಿ ಅಣ್ಣಾಮಲೈ ಅವರು ಚಿಕ್ಕಮಂಗಳೂರಿಗೆ ವರ್ಗಾವಣೆಗೊಂಡಿದ್ದರೂ ಕೊಲ್ಲೂರಿಗೆ ತೆರಳುವಾಗ ಪರಿಸ್ಥಿತಿ ಗಂಭೀರತೆ ಅರಿತು ಸ್ಥಳಕ್ಕಾಗಮಿಸಿ ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಿಸಿದರೂ ಆರಂಭದಲ್ಲಿ ವಿದ್ಯಾರ್ಥಿಗಳನ್ನು ನಿಯಂತ್ರಿಸಲಾಗಲಿಲ್ಲ. ಕೊನೆಗೂ ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಕೂಡಲೇ ಹೆದ್ದಾರಿ ತಡೆಯನ್ನು ತೆರವುಗೊಳಿಸಿ ಸಮೀಪದ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿದ ಮಾತನಾಡಲು ಭರವಸೆ ನೀಡಿದರು.
ಹೆಚ್ವುವರಿ ಬಸ್ಸಿಗಾಗಿ ಹೋರಾಡಿದ ವಿದ್ಯಾರ್ಥಿಯೇ ಹತನಾದ:
ಭಟ್ಕಳ ಕುಂದಾಪುರ ಮಾರ್ಗದಲ್ಲಿ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಅಧಿಕವಾಗಿದ್ದು ಇಲಾಖೆ ಹೆಚ್ಚುವರಿ ಸರಕಾರಿ ಬಸ್ಸುಗಳನ್ನು ನೀಡಬೇಕು ಎಂದು ಹಿಂದೊಮ್ಮೆ ವಿದ್ಯಾರ್ಥಿಗಳಲ್ಲಾ ಸೇರಿ ನಡೆಸಿದ್ದ ಪ್ರತಿಭಟನೆಯಲ್ಲಿ ರಾಘವೇಂದ್ರ ಶೆಟ್ಟಿ ಮುಂಚೂಣಿಯಲ್ಲಿದ್ದ. ಬಸ್ಸಿನ ಸಮಸ್ಯೆಗಳ ಕುರಿತು ಆಗಾಗ್ಗೆ ಪತ್ರಿಕೆಗೂ ಬರೆದು ಎಚ್ಚರಿಸುತ್ತಿದ್ದ. ಆದಾಗ್ಯೂ ಇಲಾಖೆ ಮಾತ್ರ ವಿದ್ಯಾರ್ಥಿಗಳ ಕೂಗಿಗೆ ಕಿವಿಗೊಡಲಿಲ್ಲ. ಕೊನೆಗೂ ಬಸ್ಸಿಗಾಗಿ ಹೋರಾಡಿದವನೇ ಪ್ರಾಣಕಳೆದುಕೊಳ್ಳುವಂತಾಯಿತು. ಇದು ಇತರ ವಿದ್ಯಾರ್ಥಿಗಳ ಆಕ್ರೋಶಕ್ಕೆ ಪ್ರಮುಖ ಕಾರಣವಾಯಿತು.
ವಿದಾರ್ಥಿ ಕುಟುಂಬಕ್ಕೆ ಎರಡೂವರೆ ಲಕ್ಷ ಪರಿಹಾರ ಘೋಷಣೆ
ಅಪಘಾತದಲ್ಲಿ ಮೃತಪಟ್ಟ ಕುಂದಾಪುರ ಡಾ. ಬಿ.ಬಿ ಹೆಗ್ಡೆ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿ ರಾಘವೇಂದ್ರ ಶೆಟ್ಟಿ ಕುಟುಂಬಕ್ಕೆ ಕುಂದಾಪುರ ಎಜುಕೇಶನ್ ಸೊಸೈಟಿಯ ಪ್ರವರ್ತಕ ಬಿ. ಎಂ ಸುಕುಮಾರ್ ಶೆಟ್ಟಿ 2.5ಲಕ್ಷ ಪರಿಹಾರ ಪರಿಹಾರ ಘೋಷಿಸಿದ್ದಾರೆ.
ಸಮಸ್ಯೆ ಬಗೆಹರಿಸುವ ಭರವಸೆ:
ಘಟನೆಯ ಬಗ್ಗೆ ಎಸ್ಪಿ ಅಣ್ಣಾಮಲೈ ಮಾತನಾಡಿ ವಿದ್ಯಾರ್ಥಿ ಸಾವಿನ ಪ್ರಕರಣ ನೋವು ತಂದಿದೆ. ಹೆದ್ದಾರಿ ತಡೆ ನಡೆಸುವುದರಿಂದ ಸಮಸ್ಯೆ ಬಗೆಹರಿಯದು. ಈ ಭಾಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹೆಚ್ಚುಸುವ ಸಲುವಾಗಿ ಭಾನುವಾರವೇ ಅಧಿಕಾರಿಗಳನ್ನು ವಿದ್ಯಾರ್ಥಿಗಳೊಂದಿಗೆ ಭೇಟಿ ಮಾಡುತ್ತೇವೆ. ಇಲ್ಲಿನ ಪರಿಸ್ಥಿಯನ್ನು ಮನಗಾಣಿಸಿ ಜಿಲ್ಲಾಧಿಕಾರಿಗಳಿಗೂ ಮನವರಿಕೆ ಮಾಡಲಾಗುವುದು ಎಂದ ಅವರು ಪೊಲೀಸರು ವಿನಾಕಾರಣ ವಿದ್ಯಾರ್ಥಿಗಳ ಮೇಲೆ ಲಾಠಿ ಬೀಸಿಲ್ಲ. ಹೆದ್ದಾರಿ ತಡೆ ನಡೆಸುವುದುದೇ ಅಪರಾಧವಾಗಿರುವಾಗ 2ಗಂಟೆ ತಡೆ ನಡೆಸಿದರೂ ಸಮ್ಮನಿರಲಾಗಿದೆ. ಅದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾದರೇ ಇತ್ತಿಚಿಗೆ ಅಧಿಕೃತವಾಗಿ ಬಿಡುಗಡೆಗೊಂಡ ವಾಟ್ಸ್‌ಪ್ ನಂಬರ್‌ಗೆ ಮೆಸೆಜ್ ಮಾಡಿದರೇ ಕ್ರಮಕೈಗೊಳ್ಳುವುದರ ಜೊತೆಗೆ ಉಪ್ಪುಂದ, ಶಾಸ್ತ್ರೀ ವೃತ್ತ ಬಳಿ ಪೊಲೀಸರು ನಿಲ್ಲುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ಇತ್ತ ಅವರು ಪ್ರಕರಣದಲ್ಲಿ ಯಾರ ಸರಿತಪ್ಪುಗಳನ್ನು ವಿಮರ್ಶಿಸುವ ಮೊದಲು ಮೃತರ ಕುಟುಂಬಕ್ಕೆ ನ್ಯಾಯ ಒದಗಿಸೋಣ ಎಂದರು. ಕುಂದಾಪ್ರ ಡಾಟ್ ಕಾಂ ವರದಿ.
ಡಿವೈಎಸ್ಪಿ ಪ್ರವೀಣ ನಾಯ್ಕ್, ವೃತ್ತ ನಿರೀಕ್ಷಕ ದಿವಾಕರ್, ಬೈಂದೂರು ಠಾಣಾಧಿಕಾರಿ ಸಂತೋಷ್ ಕಾಯ್ಕಿಣಿ ಸೇರಿದಂತೆ ಇತರ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದರು. /ಕುಂದಾಪ್ರ ಡಾಟ್ ಕಾಂ ವರದಿ/
► ಉಪ್ಪುಂದಲ್ಲಿ ಬಸ್ಸುಗಳ ನಡುವೆ ಅಪಘಾತ: ಓರ್ವ ವಿದ್ಯಾರ್ಥಿ ದಾರುಣ ಸಾವು – http://kundapraa.com/?p=16035 .