ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಉಪ್ಪುಂದದ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಬೈಂದೂರಿನ ಎಚ್‌ಎಂಎಂಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಒಡೆತನವನ್ನು ಧಾರವಾಡ ಕೇಂದ್ರಿತ ಯು. ಬಿ. ಶೆಟ್ಟಿ ಟ್ರಸ್ಟ್ ವಹಿಸಿಕೊಂಡಿದ್ದು, ಈ ಶಾಲೆಗಳನ್ನು ಲಾಭದ ದೃಷ್ಟಿಯಿಂದ ನೋಡದೆ, ಹುಟ್ಟೂರಿನ ಜನರಿಗೆ ಕೈಗೆಟಕುವ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ನಡೆಸಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಉದ್ಯಮಿ ಯು. ಬಿ. ಶೆಟ್ಟಿ ಹೇಳಿದರು.
ವಿವೇಕಾನಂದ ಶಾಲೆಯಲ್ಲಿ ಬುಧವಾರ ನಡೆದ ಶಾಲಾ ಹಸ್ತಾಂತರ ಸಮಾರಂಭದಲ್ಲಿ ಅವರು ಮಾತನಾಡಿದರು. ಶಾಲಾ ಶಿಕ್ಷಣ ಕೇವಲ ಪಠ್ಯ ಬೋಧನೆಗೆ ಸೀಮಿತವಾಗಿ ಉತ್ತಮ ಫಲಿತಾಂಶ ತರುವ ಗುರಿ ಹೊಂದಿದರೆ ಸಾಲದು. ಅಲ್ಲಿ ಕಲಿಯುವ ಎಲ್ಲವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದ ದೃಷ್ಟಿ ಅದಕ್ಕಿರಬೇಕು. ಎರಡೂ ಶಾಲೆಗಳಲ್ಲಿ ಅದರತ್ತ ಗಮನ ಹರಿಸಿ ಜಿಲ್ಲೆಯ ಮಾದರಿ ಶಾಲೆಗಳಾಗಿ ಅವುಗಳನ್ನು ರೂಪಿಸಲಾಗುವುದು. ಎರಡೂ ಸಂಸ್ಥೆಗಳ ಆಡಳಿತದ ನೇತೃತ್ವವನ್ನು ಪ್ರಧಾನ ಕಾರ್ಯದರ್ಶಿ ಯಶಶ್ರೀ ಬಿ. ಶೆಟ್ಟಿ ನೋಡಿಕೊಳ್ಳುವರು. ವಿವೇಕಾನಂದ ಶಾಲೆ ಅದೇ ಹೆಸರಿನಲ್ಲಿ ಮತ್ತು ಬೈಂದೂರಿನದು ಯು.ಬಿ.ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆ ಎಂಬ ಹೆಸರಿನಲ್ಲಿ ಮುಂದುವರಿಯಲಿವೆ ಎಂದು ಅವರು ಹೇಳಿದರು.
ಶಾಲೆಯನ್ನು ಹಸ್ತಾಂತರಿಸಿ ಮಾತನಾಡಿದ ಹಿಂದಿನ ಆಡಳಿತ ಮಂಡಳಿ ಅಧ್ಯಕ್ಷ ಎಂ. ರಾಜಶೇಖರ ಹೆಬ್ಬಾರ್ ವಿವೇಕಾನಂದ ಪ್ರೌಢಶಾಲೆ ಈ ವರೆಗೆ ಉತ್ಕೃಷ್ಟ ಸಾಧನೆಯ ದಾಖಲೆ ಹೊಂದಿದೆ. ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿಯಲ್ಲಿ ಶೇ 100 ಫಲಿತಾಂಶ ಪಡೆಯುತ್ತ ಬಂದಿದೆ. ಯು. ಬಿ. ಶೆಟ್ಟರ ನೇತೃತ್ವದಲ್ಲಿ ಅದು ಹೊಸ ಎತ್ತರಕ್ಕೇರುವುದು ಖಚಿತ ಎಂದರು.
ರಂಜಿತಾ ಹೆಗ್ಡೆ ಸ್ವಾಗತಿಸಿದರು. ಆಶಾ ಡಾಯಸ್ ವಂದಿಸಿದರು. ಹಿಂದಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಪ್ರಥ್ವಿರಾಜ ಹೆಬ್ಬಾರ್, ಸಹ ಕಾರ್ಯದರ್ಶಿ ಪಲ್ಲವಿ ಹೆಬ್ಬಾರ್, ನೂತನ ಆಡಳಿತ ಮಂಡಳಿಯ ಕಾರ್ಯದರ್ಶಿ ಯಶಶ್ರೀ ಶೆಟ್ಟಿ, ಸಂಸ್ಥೆಯ ಸ್ಥಾಪಕಾಧ್ಯಕ್ಷ ಯು. ಗಣೇಶ ಮಯ್ಯ, ನಿವೃತ್ತ ಮುಖ್ಯೋಪಾಧ್ಯಾಯ ಬಿಯಾರ ಕರುಣಾಕರ ಶೆಟ್ಟಿ, ಶಾಲೆಯ ಮುಖ್ಯೋಪಧ್ಯಾಯ ಸಂದೇಶ್‌ಕುಮಾರ ಶೆಟ್ಟಿ, ಪ್ರಕಾಶ ಐತಾಳ್ ಇದ್ದರು.