ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹಿರಿಯ ಪತ್ರಕರ್ತ, ಕುಂದಪ್ರಭ ವಾರಪತ್ರಿಕೆಯ ಸಂಪಾದಕ ಯು.ಎಸ್. ಶೆಣೈಯವರು ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದಿಂದ ನೀಡಲ್ಪಡುವ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಡಿ.11ರಂದು ನಡೆದ ಬ್ರಹ್ಮಾವರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಭೆಯಲ್ಲಿ ಸರ್ವಾನುಮತದಿಂದ ಇವರನ್ನು ಆಯ್ಕೆ ಮಾಡಲಾಗಿದೆ. ಡಿಸೆಂಬರ್ 26ರಂದು ಅಪರಾಹ್ನ ಗಂಟೆ 3ಕ್ಕೆ ಬ್ರಹ್ಮಾವರದ ಬಂಟರ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು ಜಸ್ಟೀಸ್ ಸಂತೋಷ್ ಹೆಗ್ಡೆಯವರು ಪ್ರಶಸ್ತಿ ಪ್ರದಾನಿಸಲಿದ್ದಾರೆ.
ಯು. ಎಸ್. ಶೆಣೈಯವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸುದೀರ್ಘ 40 ವರ್ಷಗಳ ಅನುಭವವನ್ನು ಹೊಂದಿದವರು. ಮಂಗಳೂರಿನ ನವಭಾರತ, ಇಂಡಿಯನ್ ಎಕ್ಸ್‌ಪ್ರೆಸ್, ಮುಂಗಾರು, ಹೊಸದಿಗಂತ ಪತ್ರಿಕೆಗಳಲ್ಲೂ ಪತ್ರಕರ್ತರಾಗಿ ಸೇವೆ ಸಲ್ಲಿಸಿ ಮುಂದೆ 1991ರಲ್ಲಿ ಕುಂದಾಪುರ ತಾಲೂಕಿನ ಪ್ರಥಮ ಪತ್ರಿಕೆಯಾಗಿ ‘ಕುಂದಪ್ರಭ’ ವಾರಪತ್ರಿಕೆಯನ್ನು ಅವರು ಆರಂಭಿಸಿದರು. ಅಂದಿನಿಂದ ನಿರಂತರ ಮೂರು ದಶಕಗಳಿಂದ ಈ ಪತ್ರಿಕೆಯನ್ನು ನಡೆಸಿಕೊಂಡು ಬಂದಿರುವ ಹೆಗ್ಗಳಿಕೆ ಶೆಣೈಯವರದ್ದು.
ಕುಂದಪ್ರಭ ಟ್ರಸ್ಟ್ ಹಾಗೂ ಜೈ ಕೊಂಕಣಿ ಸಂಸ್ಥೆಯ ಅಧ್ಯಕ್ಷರಾಗಿದ್ದು ಪಂಚಗಂಗಾವಳಿ ಉತ್ಸವ ಸಮಿತಿಯ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಕುಂದಾಪುರ ಜೇಸಿಸ್, ಕುಂದಾಪುರ ದಕ್ಷಿಣ ರೋಟರಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಜೈ ಕೊಂಕಣಿ ಮಾಸ ಪತ್ರಿಕೆಯ ಸಂಪಾದಕರಾಗಿಯೂ ಪತ್ರಿಕೆಯನ್ನು ನಡೆಸುತ್ತಿದ್ದಾರೆ.
ಶೆಣೈಯವರು ಶೈಕ್ಷಣಿಕ ಮತ್ತು ಸಾಹಿತ್ಯಿಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕುಂದಾಪುರದ 101 ಗ್ರಾಮಗಳು, ಪುಣ್ಯನದಿ ಪಂಚಗಂಗಾವಳಿ, ಕಂಪ್ಯೂಟರ್ ಕಲಿಯಿರಿ, ಏಡ್ಸ್ ಮಹಾಮಾರಿ, ಇನ್ನಿತರ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.