ಸಿದ್ಧಾಪುರ ಗ್ರಾ.ಪಂ ನಿವಾಸಿಗಳಿಗೆ ಕಲುಷಿತ ನೀರು ಪೂರೈಕೆ: ಯುವ ಕಾಂಗ್ರೆಸ್ ನೇತೃತ್ವದಲ್ಲಿ ಪಂಚಾಯತಿಗೆ ಮುತ್ತಿಗೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಿದ್ದಾಪುರ ಗ್ರಾ.ಪಂ. ನಿವಾಸಿಗಳಿಗೆ ವಾರಾಹಿ ಕಾಲುವೆಯ ಕಲುಷಿತ ನೀರನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡಿರುವ ಬಗ್ಗೆ ವಂಡ್ಸೆ ಬ್ಲಾಕ್ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಸಾರ್ವಜನಿಕರು ಪಂಚಾಯತ್ಗೆ ಮುತ್ತಿಗೆ ಹಾಕಿದ ಘಟನೆಯು ಸೋಮವಾರ ನಡೆದಿದೆ.

ಈ ಸಂದರ್ಭ ಕಲುಷಿತ ನೀರನ್ನು ಗ್ರಾಮಸ್ಥರಿಗೆ ಕೊಡುತ್ತಿರುವ ಗುತ್ತಿಗೆದಾರ ಹಾಗೂ ಅದರ ನಿರ್ವಹಣೆ ಮಾಡುತ್ತಿರುವ ಗ್ರಾ.ಪಂ. ಸದಸ್ಯ ಶೇಖರ ಕುಲಾಲ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಟೆಂಡರ್ನ್ನು ರದ್ದು ಮಾಡುವುದರ ಜತೆಯಲ್ಲಿ ಬಿಲ್ನ್ನು ತಡೆಹಿಡಿಯಬೇಕು. ಗುತ್ತಿಗೆದಾರರ ವಿರುದ್ಧ ಕ್ರಮ ತೆಗೆದುಕೊಳ್ಳದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು. ಗುತ್ತಿಗೆದಾರರಿಂದ ಟ್ಯಾಂಕರ್ ಚಾಲಕನಿಗೆ ಜೀವ ಬೆದರಿಕೆ ಬರುತ್ತಿರುವುದರಿಂದ ಚಾಲಕನಿಗೆ ರಕ್ಷಣೆ ಕೊಡಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿದರು. ಸಂಬಂಧಪಟ್ಟವರು ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಪಂಚಾಯತ್ ಎದುರು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರಿನ ಬದಲಿಗೆ ವಾರಾಹಿ ಕಾಲುವೆಯ ಕಲುಷಿತ ನೀರನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡುತ್ತಿದ್ದರು. ಇದನ್ನು ಖಂಡಿಸಿದ ನೀರು ಬಳಕೆದಾರರು ತಮ್ಮ ಮೊಬೈಲ್ ಮೂಲಕ ಕಾರೆಬೈಲು ಬಳಿ ವಾರಾಹಿ ಕಾಲುವೆಯ ಕಲುಷಿತ ನೀರನ್ನು ಟ್ಯಾಂಕರ್ ಮೂಲಕ ತುಂಬಿಸುತ್ತಿರುವ ಚಿತ್ರವನ್ನು ಸೆರೆಹಿಡಿದರು. ಜತೆಯಲ್ಲಿ ವೀಡಿಯೋ ಮಾಡಿದ್ದರು. ಗುತ್ತಿಗೆದಾರರು ಕಲುಷಿತ ನೀರನ್ನು ಜನರಿಗೆ ಕೊಡುತ್ತಿದ್ದಾರೆ ಎನ್ನುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಮನವಿ ಸ್ವೀಕರಿಸಿ ಮಾತನಾಡಿ ವಾರಾಹಿ ಕಾಲುವೆಯ ಕಲುಷಿತ ನೀರನ್ನು ಗ್ರಾಮಸ್ಥರಿಗೆ ಕುಡಿಯಲು ನೀಡಿರುವ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವ ಮೂಲಕ ಬಿಲ್ನ್ನು ತಡೆಹಿಡಿಯುವಂತೆ ಸಂಬಂಧಪಟ್ಟ ಮೇಲಿನ ಅಧಿಕಾರಿಗಳಿಗೆ ಪತ್ರ ಬರೆಯುತ್ತೇವೆ ಎಂದರು. ಮನವಿಯನ್ನು ಸ್ವೀಕರಿಸಿ, ಸಂಬಂಧಪಟ್ಟವರಿಗೆ ಕಳುಹಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವಂಡ್ಸೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ಪೂಜಾರಿ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಂಪಿಗೇಡಿ ಸಂಜೀವ ಶೆಟ್ಟಿ, ತಾ.ಪಂ. ಸದಸ್ಯ ಎಸ್.ಕೆ. ವಾಸುದೇವ ಪೈ, ಗ್ರಾ.ಪಂ. ಸದಸ್ಯರಾದ ಮಂಜುನಾಥ ಕುಲಾಲ, ಕೆ. ಸತೀಶಕುಮಾರ ಸೆಟ್ಟಿ ಕಡ್ರಿ, ಮಾಜಿ ಸದಸ್ಯ ಎಚ್. ಸುಧಾಕರ ಶೆಟ್ಟಿ, ಕೆಪಿಸಿಸಿ ಸೋಷಿಯಲ್ ಮೀಡಿಯಾ ಉಡುಪಿ ಜಿಲ್ಲಾ ಸಂಚಾಲಕ ದಿನೇಶ ನಾಯ್ಕ ಹಳ್ಳಿಹೊಳೆ, ಬೈಂದೂರು ವಿಧಾನ ಪರಿಷತ್ನ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುದರ್ಶನ ಶೆಟ್ಟಿ ಬಾಳೆಬೇರು, ಜಯಕರ್ನಾಟಕ ಸಿದ್ದಾಪುರ ಘಟಕದ ಅಧ್ಯಕ್ಷ ರಾಘವೇಂದ್ರ ಕೊಠಾರಿ, ಕೃಷ್ಣ ಪೂಜಾರಿ, ಪ್ರಕಾಶ ಶೆಟ್ಟಿ ಹರ್ಕೆಬಾಳು, ಶಶಿಧರ ಜನ್ಸಾಲೆ, ರಾಘು ಜನ್ಸಾಲೆ, ರಮೇಶ ಜನ್ಸಾಲೆ, ಟ್ಯಾಂಕರ್ ಚಾಲಕ ಪುಂಡಲಿಕ ಇತರರರು ಇದ್ದರು.

ಇದನ್ನೂ ಓದಿ:
ಉಡುಪಿ ಜಿಲ್ಲೆ: ಸೋಮವಾರ 45 ಕೊರೋನಾ ಪಾಸಿಟಿವ್ ದೃಢ – https://kundapraa.com/?p=38421 .
► ತಾಲೂಕಿನ ದೇವಸ್ಥಾನಗಳಲ್ಲಿ ಭಕ್ತರಿಗೆ ತೆರೆದ ಬಾಗಿಲು: ಕೊಲ್ಲೂರಿನಲ್ಲಿ ಕರೋನಾ ನಿವಾರಣೆಗಾಗಿ ಚಂಡಿಕಾ ಹೋಮ – https://kundapraa.com/?p=38410 .

Leave a Reply

Your email address will not be published. Required fields are marked *

one × 5 =