ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜಪ್ತಿ ಗ್ರಾಮದ ಸುಣ್ಣಾರಿಯ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಉಡುಪಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ವಾರಾಹಿ ಎಡದಂಡೆ ನೀರಾವರಿ ಯೋಜನೆ ಅಚ್ಚುಕಟ್ಟು ಪ್ರದೇಶದ ರೈತರ ಸಭೆ ನಡೆಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯರಾದ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ವಾರಾಹಿ ನೀರಾವರಿ ಯೋಜನೆಯ ಉದ್ದೇಶ ರೈತರಿಗೆ ನೀರು ಕೊಡುವುದು. ಮೂಲ ಯೋಜನೆಯಲ್ಲಿರುವಂತೆ ನೀರು ಆರ್ಹ ರೈತರನ್ನು ತಲುಪಬೇಕು. ರೈತರ ತಾಳ್ಮೆಯನ್ನು ಪರೀಕ್ಷೆ ಮಾಡುವುದು ಸರಿಯಲ್ಲ. ಅದಷ್ಟು ಬೇಗ ಮೂಲಯೋಜನೆಯಲ್ಲಿರುವ ಎಲ್ಲ ಗ್ರಾಮಗಳಿಗೂ ನೀರು ಕೊಡುವ ಕೆಲಸ ಆಗಬೇಕು ಎಂದರು.
ರೈತ ಸಂಘ ಧರಣಿ ಸತ್ಯಾಗ್ರಹ ನಡೆಸಿ ಆರು ವರ್ಷವಾಯಿತು. ಇನ್ನೂ ಕೂಡಾ ಎಡದಂಡೆ ಯೋಜನೆಯೇ ಪೂರ್ಣವಾಗಿಲ್ಲ. ಇಷ್ಟು ಸಮಯ ಕಾದಿದ್ದೇವೆ. ತಾಂತ್ರಿಕ ಸಮಸ್ಯೆಗಳು, ಹಣಕಾಸು, ಇಂಜಿನಿಯರ್, ಭೂಸ್ವಾಧೀನ ಇತ್ಯಾದಿ ಸಮಸ್ಯೆಗಳು ನಮಗೂ ಅರಿವಿದೆ. ಇನ್ನೂ ಅದೆಷ್ಟು ಬೇಗ ಕೆಲಸ ಪೂರ್ಣಗೊಳಿಸಿ. ಇವತ್ತು ಎಲ್ಲರಿಗೂ ವಾರಾಹಿ ನೀರಾವರಿ ಯೋಜನೆಯ ಮೇಲೆ ಕಣ್ಣಿದೆ. ಮೊದಲು ಯೋಜನೆಯಲ್ಲಿರುವ ಗ್ರಾಮಗಳಿಗೆ ನೀರು ಕೊಟ್ಟು ಬಳಿಕ ಎಲ್ಲಿಗೆ ಬೇಕಾದರೂ ತಗೆದುಕೊಂಡು ಹೋಗಿ ಎಂದರು.
ವಾರಾಹಿ ಯೋಜನೆಗೆ ಭೂಮಿ ನೀಡಿದ ರೈತರು ಪರಿಹಾರ ಮೊತ್ತದ ಬಗ್ಗೆ ಚಿಂತೆ ಮಾಡದೆ ಕಾಮಗಾರಿ ನಡೆಸಲು ಒತ್ತು ನೀಡಬೇಕಾಗಿದೆ. ಮೊದಲು ನೀರು ಬರಲಿ, ನಂತರ ಹಣ ಪಡೆಯೋಣ ಎಂದ ಅವರು, ಎಲ್ಲೆಲ್ಲಿ ಅವಶ್ಯಕತೆ ಅಲ್ಲಿಗೆ ಸೇರಿಸಲು ಅವಕಾಶವಿದೆ. ವಾರಾಹಿ ಯೋಜನೆ ಆರಂಭವಾಗಿ 41 ವರ್ಷಗಳು ಆದವು. ಇನ್ನಾದರೂ ಯೋಜನೆ ನಿರ್ದಿಷ್ಟ ದಿಕ್ಕಿನಲ್ಲಿ ಸಾಗಲಿ, ರೈತರ ಅನುಕೂಲತೆಗೆ ತಕ್ಕಂತೆ ಹೊಸ ಅಳವಡಿಕೆಗಳನ್ನು ಮಾಡಿಕೊಂಡು ರೈತಸ್ನೇಹಿಯಾಗಿ ಯೋಜನೆಗೆ ಮುಂದುವರಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ವಾರಾಹಿ ಬಲದಂಡೆ ಯೋಜನೆಯ ಚರ್ಚೆಗಳು ನಡೆಯುತ್ತಿದೆ. ಶಂಕರನಾರಾಯಣ, ಅಂಪಾರು, ಹಳ್ನಾಡು ಗ್ರಾಮಗಳಿಗೆ ಸಂಬಂಧಪಟ್ಟಂತೆ ಸಭೆಯೂ ನಡೆಸಲು ರೈತರು ಉತ್ಸುಕರಾಗಿದ್ದಾರೆ. ವಾರಾಹಿ ಅಧಿಕಾರಿಗಳ ಸ್ಪಂದನವೂ ಉತ್ತಮವಾಗಿದೆ ಎಂದರು.
ಜನ್ನಾಡಿ ಬಳಿಯ ಮದಗಕ್ಕೆ ನೀರು ಹಾಯಿಸುವಂತೆ ರೈತರು ಆಗ್ರಹಿಸಿದರು. ಮೊಳಹಳ್ಳಿ ಗ್ರಾಮದಲ್ಲಿ ದೊಡ್ಡ ಕೆರೆ ಇದ್ದು ಕೆರೆಗೆ ನೀರು ಹಾಯಿಸುವಂತೆ ಅಲ್ಲಿನ ರೈತರು ಒತ್ತಾಯಿಸಿದರು. ವಾರಾಹಿ ಕಾಲುವೆಯಿಂದ ಉಳಿದ ಜಾಗದಲ್ಲಿ ಮನೆ ನಿರ್ಮಿಸಲು ಬ್ಯಾಂಕಿನಿಂದ ಸಾಲ ಸಿಗುವುದಿಲ್ಲ. ಖಾತೆ ಬದಲಾವಣೆ ಮಾಡಿಕೊಡದೆ ಸಮಸ್ಯೆಯಾಗುತ್ತಿದೆ ಎಂದು ಮಹಿಳೆಯೊಬ್ಬರು ಸಭೆಯ ಗಮನಕ್ಕೆ ತಂದರು. ಇದಕ್ಕೆ ವಾರಾಹಿ ಇಲಾಖೆಯಿಂದ ನಿರಪೇಕ್ಷಣಾ ಪತ್ರ ನೀಡುವ ಭರವಸೆ ನೀಡಲಾಯಿತು. ಕಾಲುವೆ ಮಾಡುವಾಗ ಪ್ರಾರಂಭ ಸ್ಥಳದಿಂದ ಮಾಡದೇ ಯದ್ವತದ್ವಾ ಕಾಮಗಾರಿ ಮಾಡಲಾಗುತ್ತಿದೆ. ವ್ಯವಸ್ಥಿತವಾಗಿಯೇ ಕಾಮಗಾರಿ ನಡೆಸುವಂತೆ ಸಲಹೆ ನೀಡಲಾಯಿತು.
ಉಡುಪಿ ಜಿಲ್ಲಾ ರೈತ ಸಂಘದ ವಕ್ತಾರ ವಿಕಾಸ್ ಹೆಗ್ಡೆ, ಉಡುಪಿ ಜಿಲ್ಲಾ ರೈತ ಸಂಘದ ವಲಯ ಪ್ರಮುಖರಾದ ಕೆದೂರು ಸದಾನಂದ ಶೆಟ್ಟಿ, ಕ್ರಷ್ಣರಾಜ ಶೆಟ್ಟಿ, ಬೋಜ ಕುಲಾಲ ಹೆಬ್ರಿ, ಸತೀಶ್ ಕಿಣಿ, ಮಲ್ಯಾಡಿ ಶಿವರಾಮ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಹೆರಿಯಣ್ಣ ಚಾತ್ರಬೆಟ್ಟು, ಮಹೇಶ್ ಹೆಗ್ಡೆ ಮೊಳಹಳ್ಳಿ, ರವಿರಾಜ ಶೆಟ್ಟಿ ಅಸೋಡು, ಬಿ.ಅರುಣ್ ಕುಮಾರ್ ಹೆಗ್ಡೆ, ಗಣೇಶ ಶೆಟ್ಟಿ ಹೊಂಬಾಡಿ ಮಂಡಾಡಿ, ಮೊಳಹಳ್ಳಿ ಗ್ರಾ.ಪಂ.ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ಶ್ರೀನಿವಾಸ ಶೆಟ್ಟಿ ಕೊರ್ಗಿ, ಉಮೇಶ್ ಶೆಟ್ಟಿ, ಕಾಳಾವರ ಗ್ರಾ.ಪಂ ಉಪಾಧ್ಯಕ್ಷ ರಾಮಚಂದ್ರ ನಾವಡ ಮೊದಲಾದವರು ಉಪಸ್ಥಿತರಿದ್ದರು.
ವಾರಾಹಿ ನೀರಾವರಿ ಯೋಜನೆಯ ಕಾರ್ಯಪಾಲಕ ಇಂಜಿನಿಯರ್, ಸಹಾಯಕ ಇಂಜಿನಿಯರ್ ಸೇರಿದಂತೆ ವಿವಿಧ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದು ಮಾಹಿತಿ ನೀಡಿದರು. ಉಡುಪಿ ಜಿಲ್ಲಾ ರೈತ ಸಂಘ ಬೀಜಾಡಿ, ಹಾಲಾಡಿ ಮತ್ತು ಮಂದರ್ತಿ ವಲಯದ ರೈತರು ಭಾಗವಹಿಸಿದ್ದರು. ಉಡುಪಿ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ ಕುಮಾರ್ ಶೆಟ್ಟಿ ಬಲಾಡಿ ವಂದಿಸಿದರು.