ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಂದಿನ ಯುವ ಸಮುದಾಯಕ್ಕೆ ನಮ್ಮ ಸಂಸ್ಕೃತಿ, ದೇಶದ ಪರಂಪರೆಯನ್ನು ಕಲಿಸುವ ಶಿಕ್ಷಣ ಅತ್ಯವಶ್ಯವಾಗಿದೆ. ನಾವು ಜಗತ್ತಿನ ಅಲೌಕಿಕ ಸುಖದ ಭ್ರಮೆಗೆ ಒಳಗಾಗುತ್ತಿದ್ದೇವೆ. ಇದರಿಂದ ಹೊರಬಂದು ನಮ್ಮೊಳಗಿನ ಆನಂದ ಕಾಣುವಂತಾಗಬೇಕು. ಇದು ಭಜನೆಯಿಂದ ಮಾತ್ರ ಸಾಧ್ಯ ಎಂದು ಬಸ್ರೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಸ್ರೂರು ಅಪ್ಪಣ್ಣ ಹೆಗ್ಡೆ ಹೇಳಿದರು.
ಬೈಂದೂರು ವತ್ತಿನೆಣೆ ಶ್ರೀ ಮಹಾಸತಿ ದೇವಸ್ಥಾನದಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ಅಷ್ಟಬಂಧ ಪುನಃಪ್ರತಿಷ್ಠೆ ಮತ್ತು ಶ್ರೀನಿವಾಸ ಕಲ್ಯಾಣೋತ್ಸವದ ಪ್ರಯುಕ್ತ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಯೋಜಿಸಿದ ಅಖಂಡ ಭಜನೋತ್ಸವ ಉದ್ಘಾಟಿಸಿ ಮಾತನಾಡಿದರು. ಹಿಂದು ಧರ್ಮದಲ್ಲಿ ಭಜನೆಗೆ ಹೆಚ್ಚಿನ ಮಹತ್ವವಿದೆ. ಅನೇಕ ದಾಸವರೇಣ್ಯರು ಕೂಡ ಭಜನೆ ಮೂಲಕ ಸದ್ಗತಿ ಪಡೆದುಕೊಂಡಿದ್ದಾರೆ. ಪ್ರತಿನಿತ್ಯ ವಿವಿಧ ರೀತಿಯಲ್ಲಿ ದೇವರ ಸ್ಮರಣೆ ಮಾಡುತ್ತಿರಬೇಕು. ದೇವರ ಸೇವೆ, ಭಜನೆಯನ್ನು ಭಕ್ತಿಯಿಂದ ಮಾಡಿದರೆ ಫಲ ಪ್ರಾಪ್ತಿಯಾಗುತ್ತದೆ. ದೇವರ ವಿಸ್ತಾರವನ್ನು ಅರಿತುಕೊಂಡು ಹಾಗೂ ಉಪಕರಣಗಳ ಜತೆಗೆ ಅಂತಃಕರಣದಿಂದ ಭಜಿಸಿದಾಗ ದೇವರ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದರು.
ಭಜನೆ ಹೃದಯ ಸಂಸ್ಕಾರವನ್ನು ನೀಡುವ ಜತೆಗೆ ಸಮಾಜವನ್ನು ಸುಸಂಸ್ಕೃತವನ್ನಾಗಿಸಲು ಮತ್ತು ಜ್ಞಾನ ಸಂಪಾದನೆಗೆ ಸಹಕಾರಿಯಾಗಿದೆ. ಆದ್ದರಿಂದ ಪ್ರತೀ ಮನೆಗಳಲ್ಲಿ ಭಜನಾ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರಬೇಕು. ಧರ್ಮಸ್ಥಳ ಭಜನಾ ಪರಿಷತ್ ವತಿಯಿಂದ ಎಲ್ಲಾ ಧಾರ್ಮಿಕ ಕೇಂದ್ರಗಳ ಭಜನಾ ಮಂಡಳಿಗಳನ್ನು ಪ್ರೋತ್ಸಾಹಿಸಿ ಬೆಳೆಸುವ ಕಾರ್ಯ ನಡೆಯಬೇಕು. ಭಕ್ತಿಯಿಂದ ದೇವರ ಆರಾಧನೆ, ಉಪಾಸನೆ ಮಾಡುತ್ತಿರಬೇಕು. ದೇವಳದಲ್ಲಿ ನಡೆಯುವ ಪ್ರತಿಯೊಂದು ಉತ್ಸವ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಮಾಜದ ಜನರು ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದರು.
ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ನಾಲ್ವರು ಹಿರಿಯ ಭಜನಾ ಕಲಾವಿದರನ್ನು ಗುರುತಿಸಿ ಗೌರವಿಸಲಾಯಿತು. ಸೇವಾ ಸಮಿತಿ ಗೌರವಾಧ್ಯಕ್ಷ ಎಸ್. ರಾಜು ಪೂಜಾರಿ, ಪ್ರಧಾನ ಅರ್ಚಕ ಬಿ. ಕೃಷ್ಣಮೂರ್ತಿ ನಾವಡ, ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ರಾಜ್ಯ ಕಾರ್ಯದರ್ಶಿ ಬಿ. ಜಯರಾಮ ನೆಲ್ಲಿತ್ತಾಯ, ಪರಿಷತ್ ಬೈಂದೂರು ತಾಲೂಕು ಅಧ್ಯಕ್ಷ ಜಿ. ಸುಬ್ಬ ನಾಯಕವಾಡಿ, ಕಾರ್ಯದರ್ಶಿ ಕೃಷ್ಣ ಪೂಜಾರಿ, ಧಗ್ರಾಯೋ ಬೈಂದೂರು ತಾಲೂಕು ಕೇಂದ್ರ ಸಮಿತಿ ಅಧ್ಯಕ್ಷ ರಘುರಾಮ ಕೆ. ಪೂಜಾರಿ, ಕಡಕೆ ಶ್ರೀ ಭೀರೇಶ್ವರ ಹರಿಸೇವಾ ಸಮಿತಿ ಅಧ್ಯಕ್ಷ ಸಣ್ಣು ಗೊಂಡ, ಧಗ್ರಾಯೋ ತಾಲೂಕು ಯೋಜನಾಧಿಕಾರಿ ಶಶಿರೇಖಾ ಪಿ., ಉಪಸ್ಥಿತರಿದ್ದರು. ಸೇವಾ ಸಮಿತಿ ಕಾರ್ಯದರ್ಶಿ ಯಡ್ತರೆ ಶಿವರಾಮ ಪೂಜಾರಿ ಸ್ವಾಗತಿಸಿ, ಸುಧಾಕರ ಪಿ. ನಿರೂಪಿಸಿ, ವಂದಿಸಿದರು.