ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ಪಟ್ಟಣದ ಉದ್ಯಮಿಗಳು, ಅಧಿಕಾರಿಗಳಿಗೆ ಆರ್ಟಿಐ ಕಾರ್ಯಕರ್ತ ಕೆ. ವೆಂಕಟೇಶ ಕಾರಂತ ಎಂಬುವವರು ನೀಡುತ್ತಿರುವ ಕಿರುಕುಳ ಬಗ್ಗೆ ಬೈಂದೂರು ಕ್ಷೇತ್ರ ಅಭಿವೃದ್ಧಿ ಸಮಿತಿ ಸಂಚಾಲಕ ಕೃಷ್ಣಪ್ರಸಾದ ಅಡ್ಯಂತಾಯ ಅವರು ಕೆಲವು ದಿನಗಳ ಹಿಂದೆ ದೂರು ಸಲ್ಲಿಸಿದ್ದು, ಅದರಲ್ಲಿ ಕೆ. ವೆಂಕಟೇಶ ಕಾರಂತ ಎಂಬವವರಿಂದಾದ ತೊಂದರೆ ಹಾಗೂ ಹಣದ ಬೇಡಿಕೆ ಇಟ್ಟಿರುವ ಬಗ್ಗೆ ತಿಳಿಸಿದ್ದರು. ಈ ವಿಚಾರಕ್ಕೆ ಸ್ಪಷ್ಟನೆ ನೀಡುವ ವೇಳೆ ವೆಂಕಟೇಶ ಕಾರಂತ ಎಂಬುವವರು ಮಾಧ್ಯಮಗಳಲ್ಲಿ ನನ್ನ ವಿಚಾರವನ್ನು ಎಳೆದು ತಂದಿರುವುದಲ್ಲದೇ ನನ್ನ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ. ಕೆರೆಕಟ್ಟೆ ವೆಂಕಟೇಶ್ ಕಾರಂತ ಎಂಬ ವ್ಯಕ್ತಿಯು ನಾವು ಬೈಂದೂರಿನಲ್ಲಿ ಕಟ್ಟಿದ ಸಿಟಿ ಪಾಯಿಂಟ್ ಎಂಬ ಕಟ್ಟಡದ ವಿಚಾರಕ್ಕೆ ಸಂಬಂಧಿಸಿ ನಮ್ಮ ಬಳಿ ಹಣಕ್ಕೆ ಬೇಡಿಕೆ ಇಟ್ಟಿರುವುದು ಸತ್ಯವಾಗಿದ್ದು, ಅದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ನಮ್ಮ ಬಳಿ ಇವೆ ಎಂದು ಉದ್ಯಮಿ ಕೆ. ವೆಂಕಟೇಶ ಕಿಣಿ ತಮ್ಮ ಮೇಲಿನ ಆರೋಪಗಳಿಗೆ ಅವರು ಪ್ರತಿಕ್ರಿಯಿಸಿದ್ದು, ತನಿಕಾ ಸಂಸ್ಥೆಗಳಿಗೆ ದೂರು ನೀಡಿದ್ದಾರೆ.
ಕೆ. ವೆಂಕಟೇಶ್ ಕಿಣಿ ಅವರ ಸ್ಪಷ್ಟನೆ:
2013ರ ಸಮಯದಲ್ಲಿ ನಾವು ಬೈಂದೂರು ಮುಖ್ಯರಸ್ತೆಯಲ್ಲಿ ಸಿಟಿ ಪಾಯಿಂಟ್ ಹೆಸರಿನ ಕಟ್ಟಡ ನಿರ್ಮಿಸುವ ಹೊತ್ತಿಗೆ ಹೆಚ್ಚಿನ ಸೆಟ್ಬ್ಯಾಕ್ ಬಿಡಲಿಲ್ಲ ಎಂಬ ಕಾರಣಕ್ಕೆ ಗ್ರಾಮ ಪಂಚಾಯತಿ, ಇಲಾಖೆಗಳು, ಲೋಕಾಯುಕ್ತ ಸೇರಿದಂತೆ ವಿವಿಧ ಇಲಾಖೆಗಳಿಗೆ ವೆಂಕಟೇಶ ಕಾರಂತ ಎಂಬುವವರು ಪತ್ರ ಬರೆದಿದ್ದರು. ಆದರೆ ಈ ಹೊತ್ತಿಗಾಗಲೇ ನಾವು ಕಟ್ಟಡ ನಿರ್ಮಾಣದ ಅಂತಿಮ ಹಂತದಲ್ಲಿದ್ದೇವೆ. ಅಲ್ಲದೇ ರಾಹುತನಕಟ್ಟೆ-ಯಡ್ತರೆಯಿಂದ ಹೊಸ ಬಸ್ ನಿಲ್ದಾಣದ ವರೆಗೆ ಪಿಡಬ್ಲ್ಯೂಡಿ ರಸ್ತೆಯ ಯಾವ ಕಟ್ಟಡಗಳಿಗೂ ಅನ್ವಯವಾಗದ ಸೆಟ್ಬ್ಯಾಕ್ ನಮ್ಮ ಕಟ್ಟಡಕ್ಕೆ ಮಾತ್ರ ಅನ್ವಯವಾಗುವುದೇ? ಬೈಂದೂರು ಪೊಲೀಸ್ ಠಾಣೆ ಎದುರಿನ ಗ್ರಾಮ ಪಂಚಾಯತಿ ಹಾಗೂ ಇನ್ನಿತರ ಕಟ್ಟಡಗಳಿಗಿಂತ ಹೆಚ್ಚಿನ ಸೆಟ್ಬ್ಯಾಕ್ ಬಿಟ್ಟಿದ್ದರೂ ನಮ್ಮ ಕಟ್ಟಡವನ್ನೇ ಗುರಿಯಾಗಿಸಿಕೊಂಡು ಇಲಾಖೆಗಳಿಗೆ ದೂರು ಸಲ್ಲಿಸುವ ಹಿಂದಿನ ಉದ್ದೇಶ ಸಾಮಾನ್ಯ ವ್ಯಕ್ತಿಗೂ ಅರ್ಥವಾಗುವುದಿಲ್ಲವೇ?
ಸಿಟಿ ಪಾಯಿಂಟ್ ಕಟ್ಟಡವನ್ನು ಸುಮಾರು ಮೂರು ಕೋಟಿ ರೂ. ಸಾಲ ಮಾಡಿ ನಿರ್ಮಿಸಲಾಗಿದ್ದು, ಅದರ ತೊಂದರೆಯಲ್ಲಿರುವಾಗಲೇ ಅಧಿಕಾರಿಗಳಿಗೆ ಅನಗತ್ಯವಾಗಿ ದೂರು ಸಲ್ಲಿಸುತ್ತಿರುವುದು ಮತ್ತು ಆ ಕಾರಣಕ್ಕೆ ನಿರ್ಮಾಣ ಕಾರ್ಯ ವಿಳಂಬವಾಗುತ್ತಿರುವುದರಿಂದ ನಾನೇ ವೆಂಕಟೇಶ ಕಾರಂತ ಎಂಬುವವರಲ್ಲಿ ದೂರು ಹಿಂದೆಗೆದುಕೊಳ್ಳಲು ಮನವಿ ಮಾಡಿಕೊಂಡಿದ್ದೆ. ಆದರೆ ಆ ದೂರು ಹಿಂದೆಗೆದುಕೊಳ್ಳಲು ಮೂರು ಲಕ್ಷ ರೂ ಹಣದ ಬೇಡಿಕೆ ಇಟ್ಟಿದ್ದರು. ಅಷ್ಟೊಂದು ಹಣ ನೀಡಲು ಸಾಧ್ಯವಿಲ್ಲ ಎಂದು ಹೇಳಿದಾಗ ಮತ್ತಷ್ಟು ಕಿರಿಕಿರಿ ಉಂಟುಮಾಡಿದ್ದರು. ತಮ್ಮ ಟ್ರಸ್ಟ್ಗೆ ದೇಣಿಗೆ ನೀಡುವಂತೆ ನಿರಂತರವಾಗಿ ಪೀಡಿಸಿದ್ದರು.
ವೆಂಕಟೇಶ ಕಾರಂತ ಎಂಬುವವರ ನಿರಂತರ ಕಿರುಕುಳ ತಾಳಲಾರದೇ, ಅವರು ಪೋನಿನಲ್ಲಿ ಸೂಚಿಸಿದಂತೆ 12 ಜನವರಿ 2015ರಂದು ಮೂರು ಲಕ್ಷದ ಬಾಬ್ತು ಮೊದಲ ಕಂತಿನ ಹಣವಾಗಿ ದಿ| ಅಣ್ಣಪ್ಪಯ್ಯ ಕಾರಂತ್ ಅವರಿಗೆ ರೂ.35,000 ನೀಡಲಾಗಿತ್ತು. ಆದಾಗ್ಯೂ ಬೇಡಿಕೆ ಇಟ್ಟಿರುವ ಪೂರ್ತಿ ಹಣ ನೀಡಿದರೆ ಮಾತ್ರವೇ ರಶೀದಿ ಕೊಡಲಾಗುವುದು ಮತ್ತು ಆಕ್ಷೇಪಣಾ ಅರ್ಜಿಗಳನ್ನು ಹಿಂದೆಗೆದುಕೊಳ್ಳಲಾಗುವುದು ಎಂದು ಪಟ್ಟು ಹಿಡಿದಿದ್ದರು.
ಕೊಟ್ಯಾಂತರ ರೂ. ಸಾಲದ ಹೊರೆಯಲ್ಲಿದ್ದ ನಮಗೆ ಈ ವ್ಯಕ್ತಿಯ ನಿರಂತರ ಕಿರಿಕಿರಿ ಹೆಚ್ಚಾಗಿದ್ದಲ್ಲದೇ ಅಂತಿಮ ಹಂತದಲ್ಲಿದ್ದ ಕಟ್ಟಡ ನಿರ್ಮಾಣ ಕಾರ್ಯವೂ ವಿಳಂಬವಾಯಿತು. ಇದನ್ನು ಕಂಡು ನಮ್ಮ ಮಾವನವರಾದ ದಿವಂಗತ ನರೇಂದ್ರ ಕಿಣಿ ಅವರು ವೆಂಕಟೇಶ್ ಕಾರಂತನಿಗೆ ನನ್ನ ವಿನಂತಿಯ ಮೇರೆಗೆ ತಮ್ಮ ಸ್ವಂತ ಹಣ ರೂ. 2,65,000 ನೀಡಿ ಅಕ್ಷೇಪಣೆ ಹಿಂಪಡೆಯುವಂತೆ ಕೇಳಿಕೊಂಡಿದ್ದರು.
ಅವರಿಗೆ ನೀಡಿರುವ ಒಟ್ಟು 3,00,000 ರೂ ಹಣಕ್ಕೆ ರಶೀದಿ ಕೇಳಿದಾಗ ತಾನು ಕೇವಲ ಮೂಕಾಂಬಿಕಾ ಡೆವಲಪರ್ಸ್ ಮೂಲಕ ಪಡೆದ ರೂ.35,000ಕ್ಕೆ ಮಾತ್ರ ರಶೀದಿ ನೀಡುತ್ತೇನೆ. ನಿಮ್ಮ ಮಾವನವರು ನೀಡಿದ ಹಣಕ್ಕೆ ರಶೀದಿ ನೀಡುವುದಿಲ್ಲ ಎಂದು ಪಟ್ಟು ಹಿಡಿದರು. ಈಗಾಗಲೇ ಸಮಸ್ಯೆ ಎದುರಿಸುತ್ತಿದ್ದ ನಾವು ಅದಕ್ಕೆ ಒಪ್ಪಿ ಗ್ರಾಮ ಪಂಚಾಯತ್ ಹಾಗೂ ಇನ್ನಿತರ ಇಲಾಖೆಗಳಿಗೆ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಹಿಂಪಡೆಯಲು ವಿನಂತಿಸಿಕೊಂಡೆವು. ಅದರಂತೆ ದಿ. 15-07-2015ರಂದು ಗ್ರಾಮ ಪಂಚಾಯತಿಯಲ್ಲಿ ತನ್ನ ಯಾವುದೇ ಆಕ್ಷೇಪಣೆ ಇಲ್ಲವೆಂದು ದೂರು ಅರ್ಜಿಯನ್ನು ಹಿಂಪಡೆದಿದ್ದರು.
ತಾನು ಬಹಳ ಪ್ರಾಮಾಣಿಕ, ಯಾರಿಂದಲೂ ಹಣ ಪಡೆದಿಲ್ಲ ಎನ್ನುವ ವ್ಯಕ್ತಿ 2015ರ ಜನವರಿ 12ನೇ ತಾರೀಕಿನಂದು ಪಡೆದ ಹಣಕ್ಕೆ 2015ರ ಜೂನ್ 16ನೇ ತಾರೀಕಿಗೆ ರಶೀದಿ ನೀಡುವ ಉದ್ದೇಶವೇನಿತ್ತು? ಆರು ತಿಂಗಳುಗಳ ಕಾಲ ಟ್ರಸ್ಟಿನ ಹೆಸರಿನಲ್ಲಿ ಪಡೆದ ಹಣವನ್ನು ಬ್ಯಾಂಕಿಗೆ ಹಾಕದೇ ಇಟ್ಟುಕೊಂಡ ಹಿಂದಿನ ಉದ್ದೇಶವೇನಿತ್ತು? ರಶೀದಿ ನೀಡುವ ಸಲುವಾಗಿ ರೂ.3,00,000ದಲ್ಲಿ ಕೇವಲ 35,000 ಹಣವನ್ನಷ್ಟೇ ಡಿಪಾಸಿಟ್ ಮಾಡಿರುವುದು ಮತ್ತು 2,65,000 ಯಾವುದೇ ರೀತಿಯ ರಶೀದಿ ನೀಡದಿರುವುದು ಭ್ರಷ್ಟಾಚಾರವಲ್ಲದೇ ಮತ್ತೇನು?
ತಾನು ಯಾರಿಂದಲೂ ಹಣ ಪಡೆದಿಲ್ಲ ಎಂಬ ವ್ಯಕ್ತಿಯು 16-06-2015ರಂದು ತಮಗೆ ಪೂರ್ತಿ ಹಣ ದೊರೆತ ಬಳಿಕವೇ ಕೇವಲ ಕೇವಲ ರೂ.35,000ಕ್ಕೆ ರಶೀದಿ ನೀಡಿ 15-07-2015 ರಂದು ಗ್ರಾಮ ಪಂಚಾಯತಿಯಲ್ಲಿ ತನ್ನ ಆಕ್ಷೇಪಣೆ ಇಲ್ಲ ಎಂದು ದೂರು ಹಿಂದೆಗೆದುಕೊಳ್ಳುವ ಹಿಂದಿನ ಉದ್ದೇಶವೇನಿತ್ತು?
ಬೈಂದೂರು ನಗರದೊಳಗಿನ ಮುಖ್ಯರಸ್ತೆ ಪಿಡಬ್ಲ್ಯೂಡಿ ಇಲಾಖೆಗೆ ಸೇರಿದ್ದರೂ, ಅದು ಅಂದಿನ ಗ್ರಾಮ ಪಂಚಾಯತಿಗೆ ಹಸ್ತಾಂತರವಾಗಬೇಕಿದ್ದ ರಸ್ತೆಯಾಗಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಗ್ರಾಮ ಪಂಚಾಯತ್ ರಸ್ತೆಯ ಸೆಟ್ ಬ್ಯಾಕ್ನಂತೆಯೇ ನಮ್ಮ ಕಟ್ಟಡನವನ್ನು ನಿರ್ಮಿಸಲಾಗಿತ್ತು. ಅಲ್ಲದೇ ರಸ್ತೆಗೆ ತಾಕಿಕೊಂಡೇ ಇರುವ ಇತರೆ ಕಟ್ಟಡಗಳ ಬಗ್ಗೆ ಆಕ್ಷೇಪ ಎತ್ತದೇ ಒಂದು ಕಟ್ಟಡದ ಬಗ್ಗೆ ಮಾತ್ರ ಆಕ್ಷೇಪಣೆ ಸಲ್ಲಿಸಿದುದರ ಹಿಂದೆ ಅದ್ಯಾವ ಸದುದ್ದೇಶವಿದೆ?
ಇದೇ ವ್ಯಕ್ತಿಯೂ ರಾಷ್ಟ್ರೀಯ ಹೆದ್ದಾರಿ ಹಾಗೂ ಬೈಂದೂರು ಪೇಟೆಯಲ್ಲಿ ನಿರ್ಮಿಸಲಾಗುತ್ತಿರುವ ಇತರೆ ಕೆಲವು ಕಟ್ಟಡಗಳ ಬಗ್ಗೆ ಕೂಡ ಆಕ್ಷೇಪಣೆ ಎತ್ತಿ ಪತ್ರಿಕಾ ಹೇಳಿಕೆ ನೀಡಿದ್ದಲ್ಲದೇ ಇಲಾಖೆಗಳಿಗೆ ದೂರು ಸಲ್ಲಿಸಿದ್ದರು. ಆದರೆ ದೂರು ನೀಡಿ ಹಲವು ಸಮಯಗಳ ಕಳೆದರೂ ಯಾವುದೇ ತನಿಕೆಯೂ ನಡೆಯದಿರುವುದು ಹಾಗೂ ಇವರೇ ನೀಡಿದ ದೂರನ್ನು ತನ್ನದಲ್ಲ ಎಂದು ನುಣುಚಿಕೊಳ್ಳುವುದು ಕಂಡುಬಂದಿದೆ. ಇದರ ಹಿಂದಿನ ಮರ್ಮವೇನು? ಅಲ್ಲದೇ ಆ ಕಟ್ಟಡಗಳ ಬಗ್ಗೆ ತಟಸ್ಥ ನಿಲುವು ಅನುಸರಿಸುತ್ತಿರುವುದು ಯಾಕೆ? ಸಾಮಾಜಿಕ ಕಾರ್ಯಕರ್ತ ಎಂದು ಬಿಂಬಿಸಿಕೊಂಡು ಹಣ ಪಡೆದ ಬಳಿಕ ತಟಸ್ಥ ನಿಲುವು ಅನುಸರಿಸುವುದರ ಹಿಂದೆ ಯಾವ ಸಾಮಾಜಿಕ ಕಾಳಜಿ ಇದೆ? ಅಥವಾ ಭ್ರಷ್ಟಾಚಾರದಲ್ಲಿ ತೊಡಗುವುದೇ ಇವರ ಸಾಮಾಜಿಕ ಕಾಳಜಿಯೇ?
ಪ್ರಸ್ತತ ನಾವು ನಿರ್ಮಿಸುತ್ತಿರುವ ಬೈಂದೂರು ಪ್ಯಾಲೇಸ್ ವಸತಿ ಸಮುಚ್ಚಯದ ಬಗ್ಗೆಯೂ ವಿನಾಕಾರಣ ವಿವಿಧ ಇಲಾಖೆಗಳಿಗೆ ಆಕ್ಷೇಪಣಾ ಅರ್ಜಿ ಸಲ್ಲಿಸುತ್ತಿರುವುದು, ಸಾಮಾಜಿಕ ಜಾಲತಾಣಗಳಲ್ಲಿ ಅದರ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುತ್ತಿರುವುದು ಅಲ್ಲದೇ ಮೂರನೇ ವ್ಯಕ್ತಿಗಳ ಮೂಲಕ ಹಣಕ್ಕೆ ಬೇಡಿಕೆ ಇರಿಸಿರುವುದರ ಹಿಂದೆ ಯಾವ ಸಾಮಾಜಿಕ ಕಾಳಜಿ ಇದೆ? ಈ ಪ್ರಕರಣದ ಸಂಬಂಧ ಪೊಲೀಸ್ ಠಾಣೆಯಲ್ಲಿ ಈಗಾಗಲೇ ದೂರು ದಾಖಲಿಸಿ ಎಫ್.ಐ.ಆರ್ ಕೂಡ ಮಾಡಲಾಗಿದೆ. ಇವರು ಸಾಚಾ ವ್ಯಕ್ತಿಯಾಗಿದ್ದರೇ ಎಫ್.ಐ.ಆರ್ ದಾಖಲಾಗುತ್ತಿತ್ತೇ?
ಯಾವುದೇ ಸಾಮಾಜಿಕ ಕಾರ್ಯ ಮಾಡದೇ ಟ್ರಸ್ಟ್ ಹೆಸರಿನಲ್ಲಿ ಹಣ ಮಾಡುತ್ತಿರುವ ವೆಂಕಟೇಶ ಕಾರಂತರು ನೀಡಿದ ಸ್ಪಷ್ಟಿಕರಣದಲ್ಲಿ ನಾನಾಗಿಯೇ ಟ್ರಸ್ಟ್ ಬ್ಯಾಂಕ್ ಖಾತೆ ಅವರ ದಿವಂಗತ ತಮ್ಮನಾದ ಅಣ್ಣಪ್ಪಯ್ಯ ಕಾರಂತರ ಮೂಲಕ ಹಣ ಹಾಕಿಸಿದ್ದೇನೆ ಎಂದು ದೂರಿದ್ದಾರೆ. ಬೈಂದೂರಿನಲ್ಲಿ ಒಳ್ಳೆಯ ಕಾರ್ಯ ಮಾಡುವ ಹಲವಾರು ಟ್ರಸ್ಟ್’ಗಳಿದ್ದು ಅವೆಲ್ಲವನ್ನೂ ಬಿಟ್ಟು ಯಾರೂ ಕೇಳಿರದ, ಯಾವುದೇ ಸಾಮಾಜಿಕ ಕಾರ್ಯ ಮಾಡದ ಟ್ರಸ್ಟಿಗೆ ನಾನಾಗಿಯೇ ಹಣ ಹಾಕಿದ್ದೇನೆ ಎಂಬುದು ನಂಬಲರ್ಹವೇ?
ಕಳೆದ ಎರಡೂವರೆ ದಶಕದಿಂದ ಬೈಂದೂರಿನಲ್ಲಿ ಉದ್ಯಮ ನಡೆಸುತ್ತಿರುವ ನಾನು, ಉದ್ಯಮದ ಜೊತೆಗೆ ಊರಿನ ಅಭಿವೃದ್ಧಿಯ ಚಿಂತನೆಯನ್ನಿಟ್ಟುಕೊಂಡೇ ಕೆಲಸ ಮಾಡುತ್ತಾ ಬಂದಿದ್ದೇನೆ. ನನ್ನ ಎಲ್ಲಾ ವ್ಯವಹಾರಗಳು ಇಂದಿಗೂ ಕಾನೂನುಬದ್ಧವಾಗಿದೆ ಮತ್ತು ಯಾವುದೇ ಸಮಯದಲ್ಲಿ ಯಾವುದೇ ತನಿಕೆ ನಡೆದರೂ ನಿಖರ ದಾಖಲೆ ನೀಡುವಷ್ಟು ಪಾರದರ್ಶಕವಾಗಿದೆ. ಆದರೆ ಹಣ ಮಾಡುವ ಉದ್ದೇಶದಿಂದ ಕೆರೆಕಟ್ಟೆ ವೆಂಕಟೇಶ ಕಾರಂತ ಎಂಬ ವ್ಯಕ್ತಿಯು ಈ ತನಕ ನನಗೆ ಹಾಗೂ ಹತ್ತಾರು ವ್ಯವಹಾರಸ್ಥರಿಗೆ ವಿನಾಕಾರಣ ಕಿರುಕುಳ ನೀಡುತ್ತಲೇ ಬಂದಿದ್ದಾರೆ.
ವೆಂಕಟೇಶ ಕಾರಂತ ಎಂಬ ವ್ಯಕ್ತಿ ನನ್ನಲ್ಲಿ ನಿರಂತರವಾಗಿ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಅವರ ಟ್ರಸ್ಟ್ಗೆ ಸಂದಾಯ ಮಾಡಲಾಗಿರುವ ಹಣದ ಬಗ್ಗೆ ದಾಖಲೆ ಒದಗಿಸಲಾಗಿದೆ. ಅಲ್ಲದೇ ಆ ವ್ಯಕ್ತಿ ಹಣಕ್ಕಾಗಿ ಬೇಡಿಕೆ ಇಟ್ಟು ಸಾಕಷ್ಟು ಬಾರಿ ಪೋನ್ ಕರೆಗಳನ್ನು ಮಾಡಿದ್ದಾರೆ. ಇದನ್ನೇ ಸಾಕ್ಷಿಯನ್ನಾಗಿ ಪರಿಗಣಿಸಿ ಈ ಎಲ್ಲದರ ಬಗ್ಗೆಯೂ ಸಂಬಂಧಪಟ್ಟ ಇಲಾಖೆಗಳು ಸಮಗ್ರ ತನಿಕೆ ನಡೆಸಲಿ ಹಾಗೂ ಈ ವಿಚಾರದಲ್ಲಿ ನಾನು ಯಾವುದೇ ತನಿಕೆಗೂ ಸಿದ್ಧನಿದ್ದೇನೆ ಮತ್ತು ಸಹಕರಿಸುತ್ತೇನೆ ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇನೆ ಎಂದು ಅವರು ಪತ್ರಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.