ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯಾವುದೇ ಸಾಕ್ಷ್ಯ ಉಳಿಸದೇ ಒಂಟಿ ಮಹಿಳೆಯ ಕೊಲೆಗೈದ ಪ್ರಕರಣವನ್ನು ಒಂದು ವಾರದ ಅಂತರದಲ್ಲಿ ಭೇದಿಸಿ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಉಡುಪಿ ಜಿಲ್ಲಾ ಪೊಲೀಸ್ ತಂಡ ಯಶಸ್ಸಿಯಾಗಿದೆ.
ಕುಮ್ರಗೋಡು ಅಪಾರ್ಟ್‌ಮೆಂಟ್‌ನಲ್ಲಿ ನಡೆದ ವಿಶಾಲ ಗಾಣಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಪಿ ವಿಷ್ಣುವರ್ದನ್ ಅವರು 5 ವಿಶೇಷ ತನಿಖಾ ತಂಡವನ್ನು ರಚಿಸಿದ್ದರು. ತಾಂತ್ರಿಕ ಸಾಕ್ಷಿಗಳ ಆಧಾರದಲ್ಲಿ ಲಭ್ಯವಾದ ಸುಳಿವಿನಂತೆ ಬೇರೆ ಬೇರೆ ರಾಜ್ಯಗಳಿಗೆ ತೆರಳಿ ಆರೋಪಿ ಹುಡುಕಾಟ ನಡೆಸಿದ್ದು, ಉತ್ತರ ಪ್ರದೇಶದ ಗೋರಖ್‌ಪುರ್‌ದಲ್ಲಿ ಪೊಲೀಸ್ ಅಧಿಕಾರಿಗಳ ಸಹಕಾರದೊಂದಿಗೆ ಸ್ವಾಮಿನಾಥ ನಿಶಾದ (38) ಎಂಬ ವ್ಯಕ್ತಿಯನ್ನು ಬಂಧಿಸಿದ್ದರು. ಬಂಧಿತ ವ್ಯಕ್ತಿ ನೀಡಿದ ಮಾಹಿತಿಯಂತೆ ವಿಶಾಲ ಗಾಣಿಗ ಅವರ ಪತಿ ರಾಮಕೃಷ್ಣ ಗಾಣಿಗನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯ ಬಾಯಿ ಬಿಟ್ಟಿದ್ದ.
6 ತಿಂಗಳ ಹಿಂದೆಯೇ ಸಂಚು:
ಪತ್ನಿ ವಿಶಾಲಾರನ್ನು ಕೊಲೆ ಮಾಡಬೇಕೆಂದು ಸಂಚು ರೂಪಿಸಿದ್ದ ರಾಮಕೃಷ್ಣ ಗಾಣಿಗ ಇದಕ್ಕಾಗಿ ಆರು ತಿಂಗಳ ಹಿಂದೆಯೇ ದುಬೈನಲ್ಲಿ ಕುಳಿತು ಸಂಚು ರೂಪಿಸಿದ್ದ. ಇದಕ್ಕಾಗಿ ಇದಕ್ಕಾಗಿ 2 ಲಕ್ಷವನ್ನು ಸುಪಾರಿ ಎಂದು ಪಾವತಿಸಲಾಗಿತ್ತು. ಮಾರ್ಚ್ ನಲ್ಲಿ ದುಬೈನಿಂದ ಕುಟುಂಬ ಸಮೇತ ಊರಿಗೆ ಬಂದಿದ್ದಾಗ ಸುಪಾರಿ ಕಿಲ್ಲರ್ಸ್‌ಗಳಿಗೆ ತನ್ನ ಮನೆ ಮತ್ತು ಇತರ ಸ್ಥಳಗಳಿಗೆ ಪರಿಚಯಿಸಲು ತನ್ನ ಕಮ್ರಗೋಡು ಉಪ್ಪಿನ ಕೋಟೆಯ ಫ್ಲ್ಯಾಟ್‌ಗೆ ಕರೆಯಿಸಿಕೊಂಡಿದ್ದ. ಮಾತ್ರವಲ್ಲದೆ ಸುಪಾರಿ ಕಿಲ್ಲರ‍್ಸ್‌ಗಳನ್ನು ಪತ್ನಿ ವಿಶಾಲ ಗಾಣಿಗರಿಗೆ ತನ್ನ ಆಪ್ತ ಸ್ನೇಹಿತರೆಂದು ಪರಿಚಯಿಸಿದ್ದ.
ಕೊಲೆಗೆ ವಾರದಿಂದ ಸ್ಕೆಚ್:
ವಿದೇಶದಲ್ಲಿದ್ದ ವಿಶಾಲ ಗಾಣಿಗ ಜು.2ರಂದು ತನ್ನ ಪುತ್ರಿಯೊಂದಿಗೆ ಊರಿಗೆ ಬಂದಿದ್ದು, ಉಪ್ಪಿನ ಕೋಟೆಯ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದರು. ಕೊಲೆಯಾಗುವ ವಾರದ ಹಿಂದೆಯಷ್ಟೇ ಪತ್ನಿ ತನ್ನ ಅಣತಿಯಂತೆ ಫ್ಲ್ಯಾಟ್ ಬರಬಹುದೇ ಎಂದು ಪರೀಕ್ಷಿಸಲು, ಸ್ನೇಹಿತರ ಮೂಲಕ ಕಳುಹಿಸಿದ ಪಾರ್ಸೆಲ್ ಪಡೆದುಕೊಳ್ಳಲು ಪತ್ನಿ ವಿಶಾಲಗೆ ಹೇಳಿದ್ದ. ಗಂಡನ ಅಣತಿಯಂತೆ ಪತ್ನಿ ಫ್ಲ್ಯಾಟ್ ಗೆ ಬಂದು, ಸ್ನೇಹಿತರೊಬ್ಬರ ಮೂಲಕ ಕಳುಹಿಸಿದ ಚಾಕಲೇಟ್, ಕಾಸ್ಮೆಟಿಕ್ಸ್ ಮುಂತಾದ ವಸ್ತುಗಳಿದ್ದ ಪಾರ್ಸೆಲ್ ಪಡೆಕೊಂಡಿದ್ದರು.
ಜುಲೈ 12ರಂದು ವಿಶಾಲ ಗಾಣಿಗ ತನ್ನ ತಂದೆ, ತಾಯಿ ಹಾಗೂ ಪುತ್ರಿಯೊಂದಿಗೆ ಆಟೋ ರಿಕ್ಷಾದಲ್ಲಿ ತಾಯಿ ಮನೆ ಗುಜ್ಜಾಡಿಗೆ ಹೋಗಿದ್ದರು. ಇದಾದ ಬಳಿಕ ಗಂಡನ ಅಣತಿಯಂತೆಯೇ ಬ್ಯಾಂಕ್ ನಲ್ಲಿ ಕೆಲಸವಿದೆ ಎಂದು ವಿಶಾಲ ಗಾಣಿಗ ಆಟೋರಿಕ್ಷಾದಲ್ಲಿ ಮತ್ತೆ ಫ್ಲ್ಯಾಟ್‌ಗೆ ಹಿಂತಿರುಗಿದ್ದರು. ದಾರಿ ಮಧ್ಯೆ ವಿಶಾಲ ಅವರಿಗೆ ಕರೆಮಾಡಿ ಅವರ ಬರುವಿಕೆ ಬಗ್ಗೆ ಖಚಿತ ಪಡಿಸಿಕೊಂಡ ರಾಮಕೃಷ್ಣ ಆರೋಪಿಗಳಿಗೆ ಮಾಹಿತಿ ರವಾನಿಸಿದ್ದಾನೆ. ಅದರಂತೆ ಇಬ್ಬರೂ ಆರೋಪಿಗಳು ಫ್ಲ್ಯಾಟ್‌ಗೆ ತೆರಳಿದ್ದಾರೆ. ಈ ಇಬ್ಬರೂ ಆರೋಪಿಗಳನ್ನು ಮೊದಲೇ ಸ್ನೇಹಿತರು ಎಂದು ಪರಿಚಹಿಸಿದ್ದ ಕಾರಣ, ಪತಿಯ ಕುತಂತ್ರ ಅರಿಯದೇ ಘಟನೆ ದಿನ ಬಂದಿದ್ದ ಆರೋಪಿಗಳ ಬಗ್ಗೆ ಯಾವುದೇ ಅನುಮಾನಪಡದೇ ಫ್ಲ್ಯಾಟ್ ಒಳಗೆ ಕರೆಸಿ ಕೊಂಡಿದ್ದಾರೆ. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡ ಆರೋಪಿಗಳು ವಿಶಾಲ ಗಾಣಿಗ ಅವರನ್ನು ಕೊಂದಿದ್ದು ಮಾತ್ರವಲ್ಲದೆ ಕೃತ್ಯದ ದಿಕ್ಕು ತಪ್ಪಿಸುವ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು.
ಪೊಲೀಸರ ಕ್ಷೀಪ್ರ ಕಾರ್ಯಾಚರಣೆ:
ಎರಡು ಟೀ ಕಪ್ ಹೊರತುಪಡಿಸಿ ಯಾವುದೇ ಸಾಕ್ಷ್ಯಾಧಾರಗಳು ಇದ್ದಲ್ಲರಿಂದ ಆರಂಭದಲ್ಲಿ ತನಿಕೆ ಕ್ಲಿಷ್ಟಕರವೆನಿಸಿತ್ತು. ಕೊಲೆ ತನಿಖೆ ಸಂಬಂಧ ಕುಂದಾಪುರದಿಂದ ಪಡುಬಿದ್ರಿಯವರೆಗೆ ಎಲ್ಲಾ ಸಿ.ಸಿ.ಟಿ.ವಿಗಳನ್ನು ಪರಿಶೀಲಿಸಲಾಗಿತ್ತು. ಆದರೂ ಯಾವುದೇ ಸುಳಿವು ಕಂಡುಬಂದಿರಲಿಲ್ಲ.ವಿಮಾನ ಪ್ರಯಾಣದ ವಿವರಗಳನ್ನು, ಟ್ಯಾಕ್ಸಿ ಚಾಲಕರನ್ನು, 20ಕ್ಕೂ ಹೆಚ್ಚು ಅಪಾರ್ಟ್ ಮೆಂಟ್ ನಿವಾಸಿಗಳನ್ನು ಪ್ರಶ್ನಿಸಿದರೂ ಪೊಲೀಸರಿಗೆ ಕೊಲೆಗಾರರ ಸುಳಿವು ಸಿಕ್ಕಿರಲಿಲ್ಲ. ಕೊಲೆ ಕೇಸ್ ಭೇದಿಸುವಲ್ಲಿ ಐದು ವಿಶೇಷ ತಂಡದ ಜೊತೆಗೆ ಮಣಿಪಾಲ್ ಫೋರೆನ್ಸಿಕ್ ತಂಡ, ಮಂಗಳೂರು ಎಫ್ಎಸ್ಎಲ್ ತಂಡವೂ ಸಾಥ್ ನೀಡಿದ್ದರು. ತಾಂತ್ರಿಕ ಸಾಕ್ಷಿಗಳ ಆಧಾರದಲ್ಲಿ ಲಭ್ಯವಾದ ಸುಳಿವಿನಂತೆ ಆರೋಪಿಗಳನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣ ಸಂಬಂಧ ಪತಿ ರಾಮಕೃಷ್ಣ ಗಾಣಿಗ, ಸುಪಾರಿ ಕಿಲ್ಲರ್ ಆರೋಪಿ ಸ್ವಾಮಿನಾಥ ನಿಶಾದ ( 38 ) ಬಂಧಿಸಲಾಗಿದ್ದು, ಕೊಲೆಗೆ ಸಾಥ್ ನೀಡಿರುವ ಮತ್ತೋರ್ವ ಆರೋಪಿ ಹಾಗೂ ರಾಮಕೃಷ್ಣ ಗಾಣಿಗರಿಗೆ ಸುಪಾರಿ ಕಿಲ್ಲರ್ ನನ್ನು ಪರಿಚಯಿಸಿದ ಕೇರಳ ಮೂಲದ ಆರೋಪಿತ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಪೊಲೀಸರಿಗೆ ದೊರಕಿದ ಸುಳಿವಿನ ಆಧಾರದಲ್ಲಿ ಉತ್ತರ ಪ್ರದೇಶದ ಗೋರಖ್ ಪುರ ಪೊಲೀಸರ ಸಹಕಾರದೊಂದಿಗೆ, ಗೋರುರ ಜಿಲ್ಲೆಯ ಚಾರ್ಪನ್ ಬುಹುರಾಗ್ಗ್ರಾಮದ ಸ್ವಾಮಿನಾಥ ನಿಶಾದ ಪ್ರಾಯ ( 38 ) ಜು.19 ರಂದು ನೇಪಾಳದ ಗಡಿಯಲ್ಲಿ ಬಂಧಿಸಲಾಯಿತು.
ದುಬೈನಲ್ಲಿದ್ದುಕೊಂಡು ಕೃತ್ಯ ಎಸಗಿದ್ದ ರಾಮಕೃಷ್ಣ ಗಾಣಿಗ ತಾನು ಮಾಡಿದ ಕುಕೃತ್ಯ ಯಾರಿಗೂ ತಿಳಿಯುವುದಿಲ್ಲ, ಪೊಲೀಸರು ಈ ಬಗ್ಗೆ ತನ್ನನ್ನು ಹೆಚ್ಚು ವಿಚಾರಿಸುವುದಿಲ್ಲ ಅಂದುಕೊಂಡು ಆರಂಭದಲ್ಲಿ ವಿಚಾರಣೆ ನಡೆಸಿದಾಗ ಆತ ತಾನು ಈ ಕೃತ್ಯದಲ್ಲಿ ಭಾಗಿಯಾಗಿಲ್ಲ ಎನ್ನುತ್ತಲೇ ಬಂದಿದ್ದ. ಅಲ್ಲದೆ ಇತರರ ಮೇಲೆ ಆರೋಪ ಹೊರಿಸಿದ್ದ. ಬಳಿಕ ತನಿಖೆ ತೀವ್ರಗೊಳಿಸಿದಾಗ ಆರೋಪಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.
ಗಂಡ ಹೆಂಡತಿಯ ಮನಸ್ತಾಪ ಕೊಲೆಗೆ ಕಾರಣ:
ಪತ್ನಿ ವಿಶಾಲ ಗಾಣಿಗ ಸಾಯುವ ಮುನ್ನ ವಿದೇಶದಲ್ಲಿದ್ದ ಪತಿ ರಾಮಕೃಷ್ಣ ಗಾಣಿಗ ಅವರು ಪತ್ನಿ ಸತ್ತ ವಿಷಯ ತಿಳಿದು ಊರಿಗೆ ಬಂದಿದ್ದರು. ಬಳಿಕ ಆತನ ಮನೆಯಲ್ಲೇ ಪತ್ನಿಯ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆಯೂ ಮಾಡಲಾಗಿತ್ತು. ಪತ್ನಿಯ ಅಂತ್ಯಸಂಸ್ಕಾರ, ಬಳಿಕ ನಡೆಯುವ ಕ್ರಿಯೆಯಲ್ಲಿಯೂ ಪತಿ ಪಾಲ್ಗೊಂಡಿದ್ದರು
ವಿಶಾಲ ಗಾಣಿಗ ಅವರ ಕೊಲೆಗೆ ಪತಿ, ಪತ್ನಿಯ ನಡುವಿನ ವೈಮನಸ್ಸು ಕಾರಣ ಎನ್ನುವ ಅಂಶ ಪ್ರಾಥಮಿಕ ತನಿಖೆ ವೇಳೆ ಕಂಡುಬಂದಿದೆ. ಆದರೆ ಪತಿಯೊಂದಿಗಿದ್ದ ಮನಸ್ತಾಪದ ಕುರಿತು ವಿಶಾಲಾ ತನ್ನ ತವರು ಮನೆಯವರಿಗೆ ತಿಳಿಸಿರಲಿಲ್ಲ. ಪೊಲೀಸರಿಗೆ ಕೊಲೆಗೆ ಬೇರೆ ಕಾರಣವಿರುವ ಅನುಮಾನ ಹಾಗೂ ವಿಸ್ತೃತವಾದ ವಿವರಗಳಿಗಾಗಿ ರಾಮಕೃಷ್ಣನನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ತನಿಖೆ ಮುಂದುವರಿಸುತ್ತಿದ್ದಾರೆ.
ಪೊಲೀಸರಿಗೆ 50,000 ನಗದು ಬಹುಮಾನ:
ಕೊಲೆ ಪ್ರಕರಣವನ್ನು ಪರಿಹರಿಸುವಲ್ಲಿ ಭಾಗಿಯಾಗಿರುವ ಇಡೀ ತಂಡಕ್ಕೆ ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಮತ್ತು ನಿರೀಕ್ಷಕ ಪ್ರವೀಣ್ ಸೂದ್ ₹ 50000 ನಗದು ಬಹುಮಾನ ಹಾಗೂ ತಂಡದ ಎಲ್ಲಾ ಸದಸ್ಯರಿಗೆ ಪ್ರಶಂಸನೀಯ ಪ್ರಮಾಣಪತ್ರ ಘೋಷಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಅವರ ನಿರ್ದೇಶನದಂತೆ ಬ್ರಹ್ಮಾವರ ಠಾಣೆಯ ಸಿಪಿಐ ಅನಂತ ಪದ್ಮನಾಭ, ಮಣಿಪಾಲ ಠಾಣೆಯ ಸಿಪಿಐ ಮಂಜುನಾಥ, ಮಲ್ಪೆ ವೃತ್ತ ಕಚೇರಿಯ ಸಿಪಿಐ ಶರಣಗೌಡ, ಉಡುಪಿ ನಗರ ಠಾಣೆಯ ಸಿಪಿಐ ಪ್ರಮೋದ್, ಕಾರ್ಕಳ ಸಿಪಿಐ ಸಂಪತ್ ಕುಮಾರ್ ಎ, ಬ್ರಹ್ಮಾವರ ಪಿಎಸ್ಐ ಗುರುನಾಥ ಬಿ ಹಾದಿಮನಿ, ಕಾರ್ಕಳ ನಗರ ಠಾಣೆ ಪಿಎಸ್ ಐ ಮಧು, ಕಾಪು ಪಿಎಸ್ಐ ರಾಘವೆಂದ್ರ, ಶಂಕರನಾರಾಯಣ ಠಾಣೆಯ ಪಿಎಸ್ಐ ಶ್ರೀಧರ ನಾಯ್ಕ, ಬ್ರಹ್ಮಾವರ ಠಾಣೆಯ ಪಿಎಸ್ಐ ಕೆ.ಆರ್.ಸುನಿತಾ, ಕೋಟ ಠಾಣೆಯ ಪಿಎಸ್ಐ ಸಂತೋಷ ಬಿಪಿ, ಬ್ರಹ್ಮಾವರ ವೃತ್ತಕಚೇರಿಯ ಎಎಸ್ಐ ಕೃಷ್ಣಪ್ಪ , ಎಎಸ್ಐ ಗೋಪಾಲ ಪೂಜಾರಿ, ನಾರಾಯಣ, ಕೆ.ಎಸ್., ಸುಂದರ, ಬ್ರಹ್ಮಾವರ ಠಾಣೆ ಹಾಗೂ ಸಿಬ್ಬಂದಿಯವರಾದ ಚಂದ್ರ ಶೆಟ್ಟಿ, ವೆಂಕಟರಮಣ ದೇವಾಡಿಗ, ಪ್ರವೀಣ ಶೆಟ್ಟಿಗಾರ್, ಪ್ರದೀಪ್ ನಾಯಕ, ಸತೀಶ, ವಾಸುದೇವ ಪೂಜಾರಿ, ಅಶೋಕ ಮೆಂಡನ್, ರಾಘವೇಂದ್ರ, ಸಂತೋಷ ಶೆಟ್ಟಿ, ಗಣೇಶ ದೇವಾಡಿಗ, ಸಬಿತಾ, ಜ್ಯೋತಿ ಎಂ. ಶಾಂಭವಿ ಮಹಮ್ಮದ್ ಆಜ್ಮಲ್ ದಿಲೀಪ್ ಕುಮಾರ್, ರವೀಂದ್ರ ಎಚ್, ಪ್ರಕಾಶ, ಬಸೀರ್, ಸಂದೀಪ್ಪಿಕೆ, ವಿಕ್ರಮ್, ನೇತ್ರಾವತಿ, ಅಪೂರ್ವ, ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ತಂಡದ ಸಿಬ್ಬಂದಿಯವರಾದ ಶಿವಾನಂದ, ದಿನೇಶ, ನಿತಿನ್ ಚಾಲಕರಾದ ಶೇಖರ್ , ಸಂತೋಷ ಪೂಜಾರಿ ಮತ್ತು ಅಣ್ಣಪ್ಪ ಭಾಗಿಯಾಗಿದ್ದರು.
ಇದನ್ನೂ ಓದಿ:
► ವಿಶಾಲ ಗಾಣಿಗ ಕೊಲೆ ಪ್ರಕರಣ: ಪತಿ ರಾಮಕೃಷ್ಣ ಹಾಗೂ ಓರ್ವ ಕಿಲ್ಲರ್ ಬಂಧನ – https://kundapraa.com/?p=50281 .
► ತಾರ್ಕಿಕ ಅಂತ್ಯಕ್ಕೆ ವಿಶಾಲ ಗಾಣಿಗ ಕೊಲೆ ಪ್ರಕರಣ? ಸುಪಾರಿ ಕೊಲೆಗೆ ಪತಿಯೇ ಸೂತ್ರದಾರ? – https://kundapraa.com/?p=50218 .
► ಮಗಳ ಹುಟ್ಟುಹಬ್ಬ ಮಾಡಬೇಕಿದ್ದ ಮನೆಯಲ್ಲೀಗ ಸೂತಕದ ಛಾಯೆ – https://kundapraa.com/?p=50073 .
► ಅಪಾರ್ಟ್‌ಮೆಂಟ್‌ನಲ್ಲಿ ಗಂಗೊಳ್ಳಿ ಮೂಲದ ಮಹಿಳೆ ಕೊಲೆ – https://kundapraa.com/?p=50015 .