ಕುಂದಾಪ್ರ ಕನ್ನಡ ಭಾಷಿಕರ ಸಂಭ್ರಮ: ವಿಶ್ವ ಕುಂದಾಪ್ರ ಕನ್ನಡ ದಿನ

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪ್ರ ಕನ್ನಡದ್ ತಾಕತ್ತೇ ಅಂತದ್ ಕಾಣಿ. ಅದ್ರೊಳಗ್ ಭಾವ-ಬಂಧ ಎರಡೂ ಇತ್ತ್. ಹಂಗಾಯೇ ಕುಂದಾಪ್ರ ಭಾಷಿ ಮಾತಾಡ್ವರ್ ಯಾರ್ ಯಾರ್ ಎಲ್ಲೆಲ್ಲಿದ್ರೋ ಅಲ್ಲಲ್ಲೇ ಭಾಷಿ ಉಳ್ಸಿ-ಬೆಳ್ಸು ಬಗ್ಗ್ ಒಂಚೂರಾರೂ ನಿಗಾ ವಯ್ಸ್ಲಿ ಅಂದೇಳಿ ಆಟಿ ಅಮಾಸಿ ದಿನವೇ ’ವಿಶ್ವ ಕುಂದಾಪ್ರ ಕನ್ನಡ ದಿನ ‘ ಅಂದೇಳಿ ಮಾಡ್ತಿದ್ರ್.

ಕಳ್ದ್ ಎರ್ಡ್ ವರ್ಷದ್ ಹಿಂದ್ ಸುರು ಆದ್ ಕುಂದಾಪ್ರ ಕನ್ನಡ ದಿನು ಅಂದಂದೆ ಸೈ, ಬ್ರಹ್ಮಾವರದಿಂದ್ ಬೈಂದೂರು ಶಿರೂರ್ ತನಕ್ , ದೇಶ-ವಿದೇಶದಂಗೆಲ್ಲಾ ಸದ್ದ್ ಮಾಡಿತ್. ಈ ಸರ್ತಿ ಕೊರೋನಾ ಇತ್ತಲಾ ಜನು ಸೇರ್ಸುಕಾತಿಲ್ಲ. ಆರೆ ಸೋಶಿಯಲ್ ಮೀಡಿಯಾದಗಂತೂ ಭಾರಿ ಸದ್ದ್ ಮಾಡ್ತಿತ್. ಬೇರ್ ಬೇರೆ ಬಗಿ ಸರ್ಧೆ, ಕಾರ್ಯಕ್ರಮ ಹಮ್ಮಕಂಡಿರ್.

ವಿಶ್ವ ಕುಂದಾಪ್ರ ಕನ್ನಡ ದಿನ:
ಕುಂದಾಪ್ರ ಕನ್ನಡ ಭಾಷೆಗೆ ತನ್ನದೇ ಆದ ಹಿರಿಮೆ-ಗರಿಮೆ ಇದೆ. ಕನ್ನಡ ಭಾಷೆಯ ಅತ್ಯಂತ ಸರಳ ಹಾಗೂ ಸಂಕ್ಷಿಪ್ತ ರೂಪವೆನಿಸಿಕೊಂಡಿರುವ ಕುಂದಾಪ್ರ ಕನ್ನಡ ಸರಿಸುಮಾರು ಬ್ರಹ್ಮಾವರದಿಂದ ಶಿರೂರಿನ ತನಕ ಮೂರು ತಾಲೂಕುಗಳಲ್ಲಿ ವ್ಯಾಪಿಸಿಕೊಂಡಿದೆ. ಕುಂದಾಪ್ರ ಕನ್ನಡ ಭಾಷಿಕರು ರಾಜ್ಯ ರಾಜಧಾನಿ ಸೇರಿದಂತೆ ಪ್ರಪಂಚದ ವಿವಿಧ ದೇಶಗಳಲ್ಲಿ ನೆಲೆನಿಂತಿದ್ದಾರೆ. ಇಷ್ಟ ಮಧ್ಯೆಯೂ ಭಾಷೆಗೊಂದು ತನ್ನದೇ ಆದ ಅಸ್ತಿತ್ವ ಬೇಕು. ಹಾಸ್ಯದ ಕಾರಣಕ್ಕಾಗಿ ಮಾತ್ರ ಬಳಸುವ ಭಾಷೆ, ಕುಂದಾಪುರಿಗರ ಬದುಕಿನ ಭಾಷೆಯೂ ಹೌದು ಎಂಬುದನ್ನು ವಿಶ್ವಕ್ಕೆ ಸಾರಬೇಕು ಎಂಬ ಸದುದ್ದೇಶದೊಂದಿಗೆ ವಿಶ್ವ ಕುಂದಾಪ್ರ ಕನ್ನಡ ದಿನಕ್ಕೆ ಮುನ್ನುಡಿ ಬರೆಯಲಾಗಿದೆ.

ಆಷಾಡ ಅಮವಾಸ್ಯೆ ದಿನ ಆಚರಣೆ:
ವಿಶ್ವ ಕುಂದಾಪ್ರ ಕನ್ನಡ ದಿನವನ್ನು ಪ್ರತಿವರ್ಷ ಆಷಾಡ ಅಮಾವಾಸ್ಯೆ (ಕರ್ಕಾಟಕ ಅಮವಾಸ್ಯೆ) ದಿನ ಅಗಸ್ಟ್ 8ರಂದು ಆಚರಿಸಲಾಗುತ್ತಿದೆ. ಪ್ರಾದೇಶಿಕ ಹಬ್ಬಗಳೊಂದಿಗಿನ ಭಾಷೆಯ ನಂಟು ಹೆಚ್ಚಿರುವ ಕಾರಣಕ್ಕೆ, ನಮ್ಮ ಮೊದಲ ಹಬ್ಬವೂ ಆಗಿರುವುದರಿಂದ ಪ್ರತಿವರ್ಷ ಹಬ್ಬದ ದಿನವೇ ಕಾರ್ಯಕ್ರಮ ಆಯೋಜಿಸಲಾಗುತ್ತದೆ.

ಭಾಷೆ ಗಟ್ಟಿಗೊಳ್ಳಲಿ. ಆಚರಣೆ ಯಶಸ್ವಿಯಾಗಲಿ:
ಕುಂದಾಪ್ರ ಕನ್ನಡ ಭಾಷೆಗೆ ನಮ್ಮ ಹಿರಿಕರ ಕೊಡುಗೆ ದೊಡ್ಡದಿದೆ. ಅದು ಅಷ್ಟಾಗಿ ಗ್ರಾಂಥಿಕ ರೂಪ ಪಡೆದುಕೊಳ್ಳದೇ ಇದ್ದರೂ, ಆಡುಭಾಷೆಯಾಗಿ ಉಳಿದಿದೆ. ಆದರೆ ಕೆಲವೊಂದಿಷ್ಟು ವರ್ಷಗಳ ಈಚೆಗೆ ಕುಂದಾಪ್ರ ಕನ್ನಡ ದಾಖಲೀಕರಣ ಪ್ರಕ್ರಿಯೆಗಳು ನಡೆದಿವೆ. ನಿಘಂಟು, ಜಾನಪದ ಕೋಶಗಳಲ್ಲಿ ಕುಂದಾಪ್ರ ಕನ್ನಡವನ್ನು ದಾಖಲಿಸುವ ಕಾರ್ಯ ನಡೆದಿದೆ. ಕುಂದಾಪ್ರ ಕನ್ನಡದ ಸಾಹಿತ್ಯ, ಹಾಡು, ಸಿನೆಮಾ ಭಾಷೆಯ ಸೊಬಗನ್ನು ಹೆಚ್ಚಿಸುತ್ತಲೇ ಯುವಜನರಿಗೆ ಆಪ್ತವಾಗುವಂತೆ ಮಾಡಿದೆ. ಆದರೆ ಅಷ್ಟಕ್ಕೇ ನಿಂತರೆ ಸಾಲದು. ಭಾಷಾ ಸಂಪತ್ತು ಸಂಪನ್ನಗೊಳಿಸುವ ಹಾಗೂ ಮತ್ತಷ್ಟು ಗಟ್ಟಿಗೊಳಿಸುವ ಪ್ರಕ್ರಿಯೆಗಳು ಹೆಚ್ಚೆಚ್ಚು ನಡೆಯಬೇಕಿದೆ. ಆ ನೆಲೆಯಲ್ಲಿ ಕುಂದಾಪ್ರ ಕನ್ನಡ ದಿನಾಚರಣೆ ಒಂದು ವೇದಿಕೆಯಾಗಲಿ ಎಂಬುದು ‘ಕುಂದಾಪ್ರ ಡಾಟ್ ಕಾಂ’ನ ಆಶಯ.

Leave a Reply

Your email address will not be published. Required fields are marked *

twenty + 3 =