ಕುಂದಾಪುರದ ಕೋಡಿಯಲ್ಲಿ ವಿಶ್ವದ ಪ್ರಥಮ ಪರಿಸರ ಸ್ನೇಹಿ ಹಸಿರು ಮಸೀದಿ

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಕೋಡಿ ಸಮುದ್ರದ ತೆರೆಗಳಿಗೆ ಕಣ್ಣಾಗಿ, ತಂಪು ಗಾಳಿಗೆ ಮುಖವೊಡ್ಡುತ್ತಿದ್ದ ಪ್ರವಾಸಿಗರಿಗೆ ಈಗ ವೀಕ್ಷಿಸಲು ಮತ್ತೊಂದು ತಾಣ ಸಿದ್ದಗೊಂಡಿದೆ. ನೀವೊಮ್ಮೆ ಅಲ್ಲಿನ ಶ್ವೇತವರ್ಣದ ಕಟ್ಟಡದ ಒಳಹೊಕ್ಕು ವಾಸ್ತುಶಿಲ್ಪಕ್ಕೆ ಆಧುನಿಕ ಟಚ್ ನೀಡಿರುವುದನ್ನು ನೋಡಿದರೆ ಒಂದು ಬೆರಗು, ಸಣ್ಣ ಮನೊಲ್ಲಾಸ ದೊರಕದೆ ಇರದು. ಅಷ್ಟು ವಿನೂತನ, ವಿಶಿಷ್ಟವಾದ ಕಟ್ಟಡ ನಿಮ್ಮನ್ನೊಮ್ಮೆ ಅತ್ತ ಕಡೆ ಸೆಳೆಯುವಂತೆ ಮಾಡುತ್ತದೆ. ಅದು ಸಮುದ್ರದ ಅಲೆಗಳಿಗೆ ಅಭಿಮುಖವಾಗಿ ಕೊಡಿಯಲ್ಲಿ ನಿರ್ಮಾಣಗೊಂಡಿರುವ ಬದ್ರಿಯಾ ಜುಮಾ ಮಸೀದಿ. ಮಸೀದಿಯು ಬರಿಯ ಬೆರಗಿನ ಕಟ್ಟಡವಾಗಿರದೇ ಶೂನ್ಯ ವಿದ್ಯುತ್, ಪರಿಸರ ಸ್ನೇಹಿ ಹಸಿರು ಮಸೀದಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

[quote font_size=”15″ bgcolor=”#ffffff” bcolor=”#61d60e” arrow=”yes” align=”right”]* ಸರ್ವ ಸಮುದಾಯಗಳೊಳಗೆ ಸಾಮರಸ್ಯವನ್ನು ಕಾಣುವ ಇಸ್ಲಾಂನ ಆಧುನಿಕ ಪರಿಚಯವನ್ನು ಈ ಮಸೀದಿ ತೆರದಿಡಲಿದೆ. ಆಧುನಿಕ ತಂತ್ರಜ್ಞಾನಗಳ ಮೂಲಕ ನಿರ್ಮಾಣವಾಗಿರುವ ಮಸೀದಿಯ ವಿನ್ಯಾಸವು ಇಸ್ಲಾಮಿಕ್ ವಾಸುಶಿಲ್ಪದಲ್ಲೊಂದು ಕ್ರಾಂತಿಕಾರಕ ಹೆಜ್ಜೆ. ಅಭಿವೃದ್ಧಿಯೆಡೆಗೆ ಭಾರತದ ನಡಿಗೆಯಲ್ಲಿ ನಮ್ಮದೊಂದು ಪುಟ್ಟ ಕೊಡುಗೆ. – ಸೈಯ್ಯದ್ ಮಹಮ್ಮದ್ ಬ್ಯಾರಿ, ಬ್ಯಾರೀಸ್ ಗ್ರೂಪ್‌[/quote]

ಪವನ ಮತ್ತು ಸೌರ ಶಕ್ತಿಯನ್ನು ಉಪಯೋಗಿಸಿಕೊಂಡು ಕಟ್ಟಡಕ್ಕೆ ಅಗತ್ಯವಿರುವ ವಿದ್ಯುತ್‌ನ್ನು ಪೂರೈಸಿಕೊಳ್ಳುವುದು ಈ ಹಸಿರು ಸ್ನೇಹಿ ಮಸೀದಿಯ ಒಂದು ವಿಶೇಷತೆ. ಇದರೊಂದಿಗೆ ಪ್ರಕೃತಿಯ ಅಂಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಕಟ್ಟಡ ಸದಾ ತಂಪಾಗಿರುವಂತೆ ಮಾಡಲಾಗಿದೆ. ಮಸೀದಿಯೊಳಗೆ ತಾಪಮಾನ ಏರಿಕೆ ಕನಿಷ್ಡ ಮಟ್ಟದಲ್ಲಿರುವಂತೆ ಸುತ್ತಮುತ್ತಲೂ ಹಸಿರು ಮರಗಿಡಗಳು, ನೀರಿನ ಟ್ಯಾಂಕ್‌ಗಳಿವೆ. ಎಲ್ ಆಕಾರದ ಕಟ್ಟಡದ ಯೋಜನೆ ಮತ್ತು ಎತ್ತರಿಸಿದ ಮಸೀದಿಯು ಸಭಾಂಗಣಗಳನ್ನು ನೈಸರ್ಗಿಕವಾಗಿ ತಂಪಾಗಿರುವಂತೆ ನಿರ್ಮಿಸಲಾಗಿದೆ. ಸೌರತಾಪ ತಾಕದಂತೆ ನೋಡಿಕೊಳ್ಳುವ ಬಿಳಿ ಚೀನಾ ಟೈಲ್ಸ್‌ಗಳನ್ನು ಹಾಕಿ ವಿಶೇಷ ಟರ್ಬೊ ದ್ವಾರಗಳನ್ನು ಅಳವಡಿರುವ ತಾರಸಿ ಇಡೀ ಮಸೀದಿಯನ್ನು ತಂಪಾಗಿಡುವುದು ಮಾತ್ರವಲ್ಲದೇ ಅಕ್ಕಪಕ್ಕದಲ್ಲೂ ಬಿಸಿಲಿನ ತಾಪವನ್ನು ಕಡಿಮೆಗೊಳಿಸುತ್ತದೆ. (ಕುಂದಾಪ್ರ ಡಾಟ್ ಕಾಂ ವರದಿ) ಮಸೀದಿಯು ಮುಕ್ತ ಹೊದಿಕೆಯಿಂದ ಕೂಡಿದ್ದು ಕಟ್ಟಡದ ನಿರ್ಮಾಣಕ್ಕೆ ಅವಾಹಕ ಗ್ಲಾಸ್ ರಿಇನ್‌ಫೋರ್ಸ್‌ಡ್ ಕಾಂಕ್ರೀಟ್ ಬಳಸಿ ಸ್ವಾಭಾವಿಕ ಗಾಳಿ-ಬೆಳಕು ಧಾರಾಳ ಸಿಗುವಂತೆ ರೂಪಿಸಲಾಗಿದೆ. ಇದರಿಂದ ಮಸೀದಿಯೊಳಗೆ ಬಿಸಿಲಿನ ಧಗೆ ಮತ್ತಷ್ಡು ಕಡಿಮೆಯಾಗುವಂತೆ ಮಾಡಲಾಗಿದೆ. ಮಸೀದಿಯ ಮಿನಾರ ಕೇವಲ ಪ್ರಾರ್ಥನೆಗೆ ಕರೆನೀಡಲು ಹಾಗೂ ಸೌಂದರ್ಯ ಹೆಚ್ಚಿಸಲು ಮಾತ್ರ ಸೀಮಿತವಾಗದೇ, 70 ಅಡಿ ಎತ್ತರದ ಬಹೋಪಯೋಗಿ ಮಿನಾರದಿಂದ ಒಳ ಬರುವ ತಂಗಾಳಿ ಪ್ರಾರ್ಥನಾ ಸಭಾಂಗಣವನ್ನು ತಣ್ಣಗಾಗಿಸುತ್ತದೆ. ಈ ಮಿನಾರದ ಮೇಲೆಯೇ ಗಾಳಿಯನ್ನು ಬಳಸಿ ವಿದ್ಯುತ್ ಉತ್ಪಾದಿಸುವ ವಿಂಡ್ ಟರ್ಬೈನನ್ನು ಅಳವಡಿಸಲಾಗಿದೆ. ಇದರಿಂದಾಗಿ ಮಸಿದಿಗೆ ಅತೀ ಕಡಿಮೆ ವಿದ್ಯುತ್ ಬಳಕೆಯಾಗುತ್ತದೆ. ವಾಚನಾಲಯ, ಕೈಕಾಲು ತೊಳೆಯುವ ಸ್ಥಳ ಎಲ್ಲವೂ ವಿನೂತನ ಶೈಲಿಯಲ್ಲಿ ನಿರ್ಮಾಣಗೊಂಡಿದೆ. ಮಸೀದಿಯ ಆವರಣದಲ್ಲಿರುವ ತೆಂಗಿನ ಮರಗಳು ಮತ್ತು ಮಾವಿನ ಮರವನ್ನು ಹಾಗೆಯೆ ಇಟ್ಟುಮಸೀದಿಯನ್ನು ನಿರ್ಮಿಸಲಾಗಿದೆ. (ಕುಂದಾಪ್ರ ಡಾಟ್ ಕಾಂ ವರದಿ)

ಬ್ಯಾರೀಸ್ ಗ್ರೂಪ್ ನ ಸೈಯ್ಯದ್ ಬ್ಯಾರಿ ಕನಸು:
ಇಡೀ ವಿಶ್ವವೇ ಹವಮಾನ ವೈಪರಿತ್ಯಗಳಿಂದ ತತ್ತರಿಸುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಹಸಿರು ಮಸೀದಿಯು ಸುಸ್ಥಿರ ಅಭಿವೃದ್ಧಿಗಳ ಮೂಲಕ ಜಾಗತಿಕ ತಾಪಮಾನವನ್ನು ಕಡಿಮೆ ಮಾಡುವಲ್ಲಿ ಪೂರಕವಾಗಲಿದೆ. ಸುಸ್ಥಿರ ಅಭಿವೃದ್ಧಿ ಬಗ್ಗೆ ಮುತುವರ್ಜಿ ವಹಿಸುತ್ತಿರುವ, ಪರಿಸರ ಸ್ನೇಹಿ ಕಟ್ಟಡಗಳಿಗೆ ಹೆಸರುವಾಸಿಯಾದ ಬ್ಯಾರೀಸ್ ಗ್ರೂಪ್ ಈ ವಿನೂತನ ಮಸೀದಿ ನಿರ್ಮಾಣದ ಕಲ್ಪನೆಯನ್ನು ಸಾಕಾರಗೊಳಿಸಿದೆ. ಬ್ಯಾರೀಸ್ ಗ್ರೂಪ್‌ನ ಸೈಯ್ಯದ್ ಮಹಮ್ಮದ್ ಬ್ಯಾರಿ ಅವರ ಅಜ್ಜ ಸೂಫಿ ಸಾಹೇಬ್ ಅವರು ನಿರ್ಮಿಸಿದ್ದ ಬದ್ರಿಯಾ ಜುಮಾ ಮಸೀದಿಗೆ ಸುಮಾರು 70 ವರ್ಷಕ್ಕೂ ಪುರಾತನವಾದ್ದದ್ದು. ಇದಕ್ಕೊಂದು ಹೊಸ ರೂಪ ಕೊಡಬೇಕೆಂಬ ಆಸೆ ಹೊಂದಿದ್ದ ಸೈಯ್ಯದ್ ಮಹಮ್ಮದ್ ಬ್ಯಾರಿ ಅವರ ಕನಸು ಈಗ ಈಡೇರಿದೆ. (ಕುಂದಾಪ್ರ ಡಾಟ್ ಕಾಂ ವರದಿ)

worlds First Eco Friendly - Green Mosque in Kodi Kundapur (1) worlds First Eco Friendly - Green Mosque in Kodi Kundapur (2) worlds First Eco Friendly - Green Mosque in Kodi Kundapur (3) worlds First Eco Friendly - Green Mosque in Kodi Kundapur (4) worlds First Eco Friendly - Green Mosque in Kodi Kundapur (5) worlds First Eco Friendly - Green Mosque in Kodi Kundapur (6) worlds First Eco Friendly - Green Mosque in Kodi Kundapur (7) worlds First Eco Friendly - Green Mosque in Kodi Kundapur (8) worlds First Eco Friendly - Green Mosque in Kodi Kundapur (9) worlds First Eco Friendly - Green Mosque in Kodi Kundapur (10)

Leave a Reply

Your email address will not be published. Required fields are marked *

three × 3 =