ಕುಂದಾಪ್ರ ಡಾಟ್ ಕಾಂ ವರದಿ.
ಬೈಂದೂರು: ಸುಮಾರು ಎಂಟು ನೂರು ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿರುವ ಬೈಂದೂರು ತಾಲೂಕು ತಗ್ಗರ್ಸೆ ಗ್ರಾಮದ ಯತ್ತಾಬೇರು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನ, ಭಕ್ತರ ಪಾಲಿನ ವನದುರ್ಗಾ ಮಾತೆ ಸನ್ನಿಧಿಯಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಸಲು ಸಂಕಲ್ಪಿಸಲಾಗಿದ್ದು, ಈ ಸಂಬಂಧ ಭಕ್ತರು ಹಾಗೂ ಊರಿನವರ ಸಭೆ ಕರೆಯಲಾಗಿದೆ.
ಜೈನರ ಕಾಲದ ದೇವಸ್ಥಾನ:
ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನವು ಜೈನರ ಕಾಲದಲ್ಲಿ ಪ್ರತಿಷ್ಟಾಪನೆಗೊಂಡಿರುವುದು ಎಂಬುದಕ್ಕೆ ಸಾಕ್ಷಿಯಾಗಿ ಈ ಅಮ್ಮನವರನ್ನು ಬಹಳ ಹಿಂದೆ ಜೈನರ ಆರಾಧ್ಯ ದೇವಿಯಾದ ಪದ್ಮಾವತಿ ಅಮ್ಮನವರು ಎಂದು ಕರೆಯುತ್ತಿದ್ದರಂತೆ ಮತ್ತು ಇಲ್ಲಿ ಪರಿವಾರ ದೈವಗಳಾಗಿ ಜೈನ ಜಟ್ಟಿಗೇಶ್ವರ ಮತ್ತು ಜೈನ ಯಕ್ಷಿ ಗುಡಿಯು ಸ್ಥಾಪಿತಗೊಂಡಿತ್ತು. ದೇವಸ್ಥಾನ ಆಸುಪಾಸಿನ ಪರಿಸರದಲ್ಲಿ ವಾಸವಿದ್ದ ಬುಡಕಟ್ಟು ಜನಾಂಗದವರು ಈ ಅಮ್ಮನವರನ್ನು “ವನದುರ್ಗೆ” ಎಂದು ಕರೆಯುತ್ತಿದ್ದರಂತೆ. ಅಲ್ಲದೇ ಪಶ್ಚಿಮ ಘಟ್ಟಗಳ ದಟ್ಟ ಕಾಡಿನ ಮಧ್ಯೆ ಇರುವ ಈ ಪುಣ್ಯ ಸಾನಿಧ್ಯವು ಪರಮ ಪಾವನ ಶಕ್ತಿ ಸನ್ನಿಧಾನಗಳಲ್ಲಿ ಒಂದಾಗಿದೆ. ಈ ದೇವಸ್ಥಾನವು ಯಡ್ತರೆ ಶೆಟ್ಟರ ಕುಟುಂಬದ ಕುಲದೇವಿಯೂ ಹೌದು.
ಎಡ ಹಸ್ತದಿಂದ ಆಶೀರ್ವದಿಸುವ ಭಂಗಿ ಅಪರೂಪ:
ಅವಿಭಜಿತ ದ.ಕ ಜಿಲ್ಲೆಯಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಬಹುಪಾಲು ವಿಗ್ರಹಗಳು ಕುಳಿತು, ಬಲ ಹಸ್ತದಿಂದ ಆಶೀರ್ವಾದ ನೀಡುವ ಭಂಗಿಯಲ್ಲಿದ್ದರೇ, ಈ ಬೈಂದೂರಿನ ಯತ್ತಾಬೇರು ದುರ್ಗಾಪರಮೇಶ್ವರಿ ಅಮ್ಮನವರು ವಿಗ್ರಹವು ವಿಭಿನ್ನ ಹಾಗೂ ಅಪರೂಪವೆಂಬಂತೆ ನಿಂತು, ಎಡ ಹಸ್ತದಿಂದ ಆಶೀರ್ವಾದ ನೀಡುವ ಭಂಗಿಯಲ್ಲಿದೆ. ಇಂತಹದ್ದೇ ಮಾದರಿಯ ಎಡಗೈ ಆಶೀರ್ವಾದ ಭಂಗಿಯ ಅಮ್ಮನವರ ವಿಗ್ರಹವು ಭಾರತದ ಅತ್ಯಂತ ಪ್ರಸಿದ್ಧ ಮತ್ತು ಶಕ್ತಿಶಾಲಿ ಭಗವತಿ ಅಮ್ಮನವರ ದೇವಾಲಯಗಳಾದ ಕನ್ಯಾಕುಮಾರಿ ಮತ್ತು ಕೇರಳದ ಚೊಟ್ಟಾನಿಕೆರೆಯಲ್ಲಿ ಮಾತ್ರ ಕಾಣಸಿಗುತ್ತದೆ. ಹಾಗಾಗಿ ಬೈಂದೂರಿನ ಯತ್ತಾಬೇರು ದುರ್ಗಾಪರಮೇಶ್ವರೀ ದೇವಸ್ಥಾನವು ಅಖಂಡ ಭಾರತದಲ್ಲಿಯೇ ಬಹಳ ಪುರಾತನವಾದದ್ದು ಮತ್ತು ಇಲ್ಲಿನ ಅಮ್ಮನವರ ವಿಗ್ರಹದ ಮಾದರಿಗೆ ವಿಸ್ತಾರವಾದ ಭೂಖಂಡದಲ್ಲಿಯೇ 3ನೇ ಸ್ಥಾನ ಸಲ್ಲುತ್ತದೆ ಎಂಬುದು ಬಲ್ಲವರ ಅಂಬೋಣ.
ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ:
ಪ್ರಾಚೀನ ದೇಗುಲವನ್ನು ಜೀರ್ಣೋದ್ಧಾರ ಮಾಡುವ ಮೂಲಕ ದಿವ್ಯ ಸಾನಿಧ್ಯದ ಪವಿತ್ರತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಒಂದು ಪುಣ್ಯದ ಕೆಲಸ ನಡೆಯಲಿದೆ. ಈ ಪವಿತ್ರ ಕಾರ್ಯಕ್ರಮದ ಪೂರ್ವಭಾವಿ ಸಭೆ ಎಪ್ರಿಲ್ 12ರ ಭಾನುವಾರ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಅಂದು ಬೆಳಿಗ್ಗೆ ದುರ್ಗಾ ಹೋಮ ಜರುಗಲಿದೆ. ಈ ಹಿನ್ನೆಲೆಯಲ್ಲಿ ಊರ ಪರವೂರ ಸಮಸ್ತ ಭಕ್ತಾದಿಗಳು ಮತ್ತು ಯಡ್ತರೆ ಕುಟುಂಬದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.