ಅನುಮಾನಾಸ್ಪದವಾಗಿ ಯುವಕ ಸಾವು, ಕೊಲೆ ಶಂಕೆ?

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಸಹೋದರರ ನಡುವೆ ನಡೆದ ಜಗಳ ಓರ್ವ ಸಹೋದರರನ್ನು ಬಲಿ ಪಡೆದ ಘಟನೆ ತಾಲೂಕಿನ ಗೋಳಿಹೊಳೆ ಗ್ರಾಮದ ಕಂಬಳಗದ್ದೆ ಎಂಬಲ್ಲಿ ಗುರುವಾರ ರಾತ್ರಿ ನಡೆದಿದ್ದು ರಾತ್ರಿ ಬೆಳಗಾಗುವುದರೊಳಗೆ ಶವವನ್ನು ದುರ್ಗಮ ಅರಣ್ಯದಲ್ಲಿ ಸುಟ್ಟಿರುವುದರಿಂದ ಕೊಲೆ ಶಂಕೆ ವ್ಯಕ್ತವಾಗಿದೆ. ಮುತ್ತಯ್ಯ ನಾಯ್ಕ (೩೫) ಅನುಮಾನಾಸ್ಪದವಾಗಿ ಸಾವಿಗೀಡಾದಾತ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಗೋಳಿಹೊಳೆ ಗ್ರಾಮದ ಕಂಬಳಗದ್ದೆ ನಿವಾಸಿ ಸಾಕು ಎಂಬುವವರಿಗೆ ನಾಲ್ವರು ಪುತ್ರರು, ಇಬ್ಬರು ಪುತ್ರಿಯರಿದ್ದಾರೆ. ಆಕೆಯ ಮೂರನೇ ಮಗನಾದ ಮುತ್ತಯ್ಯ ನಾಯ್ಕ ಅವಿವಾಹಿತನಾಗಿದ್ದು, ಮುಂಬೈ ಹೊಟೇಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, ತನ್ನ ತಂದೆ ಸಾವಿಗೀಡಾದ ಸಂದರ್ಭದಲ್ಲಿ ಅಂದರೆ ಆರು ತಿಂಗಳ ಹಿಂದೆ ಊರಿಗೆ ಬಂದವನು ಮತ್ತೆ ಮುಂಬೈಗೆ ವಾಪಾಸ್ಸಾಗಲಿಲ್ಲ, ಊರಿನಲ್ಲಿ ಯಾವುದೇ ಕೆಲಸ ಮಾಡಿಕೊಂಡಿರದ ಆತ, ವಿವಾಹ ಮಾಡುವಂತೆ ಮನೆಯವರನ್ನು ಪೀಡಿಸುತ್ತಿದ್ದನ್ನು ಎನ್ನಲಾಗಿದೆ, ಆತ ವಿಪರೀತ ಕುಡಿತದ ಚಟ ಹೊಂದಿದ್ದು, ಕುಡಿದು ಬಂದು ಮನೆಯಲ್ಲಿ ನಿತ್ಯವೂ ಜಗಳ ಮಾಮೂಲಿಯಾಗಿತ್ತು. ಅಲ್ಲದೇ ಆತನ ಅನೈತಿಕ ಚಟುವಟಿಕೆಯು ಈ ಘಟನೆಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.

ಎಂದಿನಂತೆ ಗುರುವಾರ ರಾತ್ರಿಯೂ ಮನೆಯಲ್ಲಿ ಗಲಾಟೆ ನಡೆದಿದೆ ಎನ್ನಲಾಗಿದ್ದು, ಗಲಾಟೆಯ ನಡುವೆ ಅನುಮಾನಾಸ್ಪದ ಸಾವು ಸಂಭವಿಸಿದೆ ಎನ್ನಲಾಗಿದೆ. ಬಳಿಕ ಈ ಪ್ರಕರಣವನ್ನು ಮುಚ್ಚಿ ಹಾಕುವ ಸಲುವಾಗಿ ಮನೆಯಿಂದ ಸುಮಾರು ಒಂದು ಕಿ.ಮೀ ದೂರದ ನಿರ್ಜನ ಅರಣ್ಯ ಪ್ರದೇಶದಲ್ಲಿ ಅವರಿಗೆ ಸಂಬಂಧಪಟ್ಟ ಜಾಗದಲ್ಲಿಯೇ ಶವವನ್ನು ದಹಿಸಲಾಗಿದೆ ಎನ್ನಲಾಗಿದೆ.

ಶವವನ್ನು ದಹಿಸಲು ಅಲ್ಲಿನ ನಾಲ್ಕಾರು ಮರಗಳನ್ನು ಕಡಿದು, ಕಟ್ಟಿಗೆ ಮಾಡಿಲ್ಲದೇ ಅದರ ಅನತಿ ದೂರದಲ್ಲಿಯೇ ದಹಿಸಲು ಬಳಸಿದ ಹಾರೆ, ಪಿಕಾಸಿ, ಕತ್ತಿ, ಗರಗಸ, ಸೀಮೆಎಣ್ಣೆ ಕ್ಯಾನ್ ಪತ್ತೆಯಾಗಿದೆ.

ಮೂವರ ವಿಚಾರಣೆ: ಘಟನೆಯ ಬಳಿಕ ಪ್ರಕರಣ ಮುಚ್ಚಿ ಹಾಕಲು ಸಹೋದರರು ಎಲ್ಲಾ ಪ್ರಯತ್ನ ಮಾಡಿದಾದ್ದರೂ, ಸಾರ್ವಜನಿಕ ಮಾಹಿತಿಯೊಂದು ಮಾಧ್ಯಮ ಪ್ರತಿನಿಗಳಿಗೆ ತಿಳಿಸಿದ್ದು, ಮಾಧ್ಯಮದವರು ಈ ಪ್ರಕರಣವನ್ನು ಪೋಲೀಸರ ಗಮನಕ್ಕೆ ತಂದು ಈ ಪ್ರಕರಣವನ್ನು ಬೆಳಕಿಗೆ ತಂದಿದ್ದಾರೆ. ಬೈಂದೂರು ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೂವರು ಸಹೋದರರಾದ ದುರ್ಗಾ ನಾಯ್ಕ, ರಾಘವೇಂದ್ರ ನಾಯ್ಕ ಹಾಗೂ ಅಣ್ಣಪ್ಪ ನಾಯ್ಕ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ಇದೊಂದು ಕೊಲೆ ಪ್ರಕರಣ ಎಂದು ಪೋಲೀಸ್ ಮೂಲಗಳು ತಿಳಿಸಿದೆ.

Leave a Reply

Your email address will not be published. Required fields are marked *

thirteen + seven =