ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ
ಸಾಧಿಸುವ ಛಲ, ಪೂರಕ ಧೈರ್ಯ, ಜೊತೆಯಲ್ಲಿ ಆತ್ಮವಿಶ್ವಾಸ ಇದ್ದರೆ ಅಸಾಧ್ಯವೆಂಬುವುದನ್ನು ಸಾಧಿಸಬಹುದು ಎನ್ನುವುದಕ್ಕೆ ಆರ್ಡಿಯ ಹರ್ಷಾದ್ ರಾವ್ ಅವರೇ ಜ್ವಲಂತ ಸಾಕ್ಷಿ. ಇವರು ಮಾಡಿರುವುದು ಅಂತಿಂಥ ಸಾಧನೆಯಲ್ಲ ವಿಶ್ವದ ಅತೀ ಎತ್ತರದ 8,848 ಮೀ. ಎತ್ತರದ ಮೌಂಟ್ ಎವರೆಸ್ಟ್ ಶಿಖರದ ತುತ್ತ ತುದಿ ಏರಿದ್ದು. ಮೂಲತಃ ಕುಂದಾಪುರ ತಾಲೂಕಿನ ಆರ್ಡಿಯ ಕೆರ್ಜಾಡಿಯ ಯುವಕ ಹುಬ್ಬೆರಿಸುವ ಮೇರು ಸಾಧನೆ ಮಾಡಿದ್ದಾರೆ.
ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿಯಾದ ಕಮಲಾಕ್ಷ ಮಹಾಲಿಂಗ ರಾವ್ ಮತ್ತು ಹೇಮಾಲತಾ ದಂಪತಿಗಳ ಪುತ್ರ ಹರ್ಷದ್ ಕಮಲಾಕ್ಷ ರಾವ್ ಈ ಸಾಧನೆ ಮಾಡಿರುವ ಅಪ್ರತಿಮ ಸಾಧಕ. ಪುಣೆಯಲ್ಲಿ ಕಂಪ್ಯೂಟರ್ ಇಂಜಿನಿಯರ್ ಆಗಿರುವ ಹರ್ಷದ್ ಮೇ.21ರಂದು ಎವರೆಸ್ಟ್ ತುತ್ತ ತುದಿ ತಲುಪಿ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ. ಈ ಸಾಧನೆ ಮಾಡಲು ಅವರು ೮ ತಿಂಗಳುಗಳ ಕಾಲ ತಯಾರಿ ನಡೆಸಿದ್ದಾರೆ. ಸುಮಾರು ೨೮ಲಕ್ಷಕ್ಕೂ ಹೆಚ್ಚು ಹಣ ವಿನಿಯೋಗಿಸಿದ್ದಾರೆ. ಮಾ.29ರಂದು ಪರ್ವತಾರೋಹಣಕ್ಕೆ ಮುಂದಾದ ಅವರು ಕೊನೆಗೂ ಛಲದಿಂದ ಕುಂದಾಪುರದ ಯುವಕ ಎವರೆಸ್ಟ್ ಶಿಖರ ಏರಿದ ಸಾಧನೆ ಮಾಡಿದ್ದಾರೆ.
ಹರ್ಷದ್ ತಂದೆ ಕಮಲಾಕ್ಷ ಮಹಾಲಿಂಗ ರಾವ್ ಆರ್ಡಿ ಸಮೀಪದ ಕೆರ್ಜಾಡಿಯವರು. ಬ್ಯಾಂಕ್ ಅಧಿಕಾರಿಯಾಗಿ ಉತ್ತಮ ಹೆಸರು ಗಳಿಸಿದವರು. ಇವರ ಸುಪುತ್ರನೇ ಹರ್ಷಾದ್ ಕಮಲಾಕ್ಷ ರಾವ್. ಬಿಎಸ್ಸಿ ಪದವೀಧರರಾಗಿರುವ ಇವರು ವೃತ್ತಿಯಲ್ಲಿ ಕಂಪ್ಯೂಟರ್ ಇಂಜಿನಿಯರ್. ವೃತ್ತಿಯ ಜಂಜಾಡದ ನಡುವೆ ಇವರು ಖುಷಿ ಪಡುವುದು ಪ್ರಕೃತಿ, ಪರಿಸರದ ನಡುವೆ ಚಾರಣ, ಪರ್ವತ ಆರೋಹಣದ ಮೂಲಕ. ಬಾಲ್ಯದಿಂದಲೇ ಸಾಹಸಿ ಮನೋಭಾವ ಬೆಳೆಸಿಕೊಂಡಿರುವ ಈ ಕನ್ನಡಿಗ ಬಾಲ್ಯದಲ್ಲಿ ಗಿರಿ, ಶಿಖರಗಳನ್ನು ಕಂಡಾಗ ಕುತೂಹಲ ಹೊಂದಿದ್ದರು. ಪರ್ವತದ ಶಿಖರ ಮುಟ್ಟಬೇಕು ಎನ್ನುವ ತುಡಿತ ಇವರದ್ದಾಗಿರುತ್ತಿತ್ತು. ಈ ಆಸಕ್ತಿಗೆ ಹೆತ್ತವರು, ಸ್ನೇಹಿತರು ಪ್ರೋತ್ಸಾಹ ನೀಡಿದರು. ಅದರಿಂದ ಹರ್ಷದ್ ಇವತ್ತು ಹತ್ತಾರು ಪರ್ವತಗಳ ಏರಿದ ಕೀರ್ತಿ ಸಂಪಾದಿಸಿದ್ದಾರೆ. ಅವುಗಳಲ್ಲಿ ಮುಕುಟಪ್ರಾಯವಾದುದು ಮೌಂಟ್ ಎವರೆಸ್ಟ್. ಕುಂದಾಪ್ರ ಡಾಟ್ ಕಾಂ ವರದಿ.
ಧಕ್ ಬಾಹಿರಿ, ಡೂಕ್ಸ್ ನೋಸ್, ಕೈಲಾ ಬೈಲಾ, ಖಡಪರ್ಶಿ, ನಾಪ್ತಾ, ವಾಜೀರ್, ಉತ್ತರಖಂಡದ ಜಾನ್ಲಿ, ಗಂಗೊತ್ರಿ ಸಮೀಪದ ಜೋಗಿನ್ ಶಿಖರಗಳನ್ನು ಏರಿ ಸಾಹಸ ಮೆರೆದ ಹರ್ಷದ್ ಮುಂದಿನ ಗುರಿ ಮೌಂಟ್ ಎವರೆಸ್ಟ್ ಆಗಿತ್ತು. ಅದಕ್ಕೆ ಒಂದು ನಿರ್ದಿಷ್ಟ ಗುರಿ ಹಾಕಿಕೊಂಡರು. ಸುಮಾರು ೮ ತಿಂಗಳಿಂದ ತರಬೇತಿ ಆರಂಭಿಸಿದರು. ನುರಿತ ಪರ್ವತರೋಹಿಗಳ ಸಲಹೆ ಪಡೆದರು. ಮೌಂಟ್ ಎವರೆಸ್ಟ್ ಏರುವ ನಿಲುವು ಅಚಲವಾಯಿತು. ಎವರೆಸ್ಟ್ ಶಿಖರ ಮುಟ್ಟಿಯೇ ಬರುತ್ತೇನೆ ಎಂದು ಹೊರಟಿದ್ದು…
ಮಾರ್ಚ್ 29-2016ರಂದು ಹರ್ಷದ್ ಮೌಂಟ್ ಎವರೆಸ್ಟ್ ಏರಲು ದಿನ ನಿಗದಿ ಪಡಿಸಿಕೊಂಡು ಪುಣೆಯಿಂದ ಹೊರಟರು. ನೇರವಾಗಿ ನೇಪಾಳದ ಕಾಠ್ಮಂಡು ತಲುಪಿದರು. ಅಲ್ಲಿ ಬೇಸ್ನ ನುರಿತರಿಂದ ಮಾರ್ಗದರ್ಶನ ತರಬೇತಿಯಲ್ಲಿ ತೊಡಗಿಸಿಕೊಂಡರು. ಕಠಿಣ ಅಭ್ಯಾಸ, ನಿಯಮಿತ ಆಹಾರ, ಹೊಸ ಪರಿಸರದಲ್ಲಿ ಯಾವುದಕ್ಕೂ ಹೆದರದೆ ಅವರು ತರಬೇತಿ ಪಡೆದರು. ಅವರಲ್ಲಿ ಅತುಲ ಛಲವಿತ್ತು. ಕನ್ನಡಿಗನಾಗಿ ನಾನು ಮೌಂಟ್ ಎವರೆಸ್ಟ್ ಏರಲೇ ಬೇಕು ಎಂಬ ಛಲಕ್ಕೆ ಅದಮ್ಯ ಉತ್ಸಾಹ ಅವರಲ್ಲಿ ಇತ್ತು. ಕುಂದಾಪ್ರ ಡಾಟ್ ಕಾಂ ವರದಿ.
ಕೊನೆಗೂ ತರಬೇತಿ ಮುಗಿಯಿತು. ಮೇ.17-2016ರಂದು ಅವರ ಮೌಂಟ್ ಎವರೆಸ್ಟ್ ಏರುವ ಸಾಹಸ ಆರಂಭವಾಯಿತು. ಮೇ.20ರಂದು ಬೆಳಿಗ್ಗೆ ೮ರಿಂದ ಕ್ಯಾಂಪ್ ಮೂರು ಹಂತದಿಂದ ನಾಲ್ಕರ ಹಂತಕ್ಕೆ ತಲುಪಿದರು. ಶೆರ್ಪಾಗಳು ಎವರೆಸ್ಟ್ ಏರಲು ಅನುಕೂಲವಾಗಿದೆ ಎಂಬ ಸೂಚನೆ ನೀಡದಾಗ ಧೈರ್ಯದಿಂದ ಮುನ್ನುಗಿದ್ದರು. ಮೇ.೨೧ರಂದು ಗಮ್ಯ ತಲುಪಿ, ರಾಷ್ಟ್ರಧ್ವಜವನ್ನು ಹಾರಿಸಿದರು.
ಈ ಪರ್ವತ ಆರೋಹಣಕ್ಕೆ ಅವರು ವಿನಿಯೋಗಿಸಿದ್ದು 28 ಲಕ್ಷ ರೂಪಾಯಿ. ಸರ್ಕಾರ ಮಟ್ಟದಿಂದ ಯಾವುದೇ ಆರ್ಥಿಕ ಸಹಕಾರ ಸಿಕ್ಕಿಲ್ಲವಂತೆ. ಆದರೆ ಹರ್ಷದ್ ಅತ್ಯಂತ ಸಂತೋಷ ತಂದುಕೊಟ್ಟಿದೆಯಂತೆ. ಹರ್ಷದ್ ರಾವ್ ಸಾಧನೆಗೆ ಮೇ.29ರಂದು ನೇಪಾಲ ಸರಕಾರದ ಮಿಲಿಟರಿ ಗೌರವ ನೀಡಿದೆ. ಮೆರವಣಿಗೆ ಮೂಲಕ ಕರೆತಂದು ನೇಪಾಳದ ಪ್ರಧಾನ ಮಂತ್ರಿ ವಿಶೇಷವಾಗಿ ಸನ್ಮಾನಿಸಿದ್ದಾರೆ.
ಪುಣೆಯಲ್ಲಿ ಉದ್ಯೋಗದಲ್ಲಿರುವ ಕನ್ನಡದ ಈ ಕುವರ ಕನ್ನಡ ಭಾಷೆಯ ಬಗ್ಗೆ ಅತೀವ ಆಸಕ್ತಿ ಉಳ್ಳವರಾಗಿದ್ದಾರೆ. ಅವರು ಎವರೆಸ್ಟ್ ಏರಿದ ಬಗ್ಗೆ ಪ್ರೀತಿಯಿಂದ ಮಾತನಾಡಿದ್ದಾರೆ. ತನ್ನ ಹುಟ್ಟೂರು ಆರ್ಡಿಯ ಕೆರ್ಜಾಡಿಯ ಬಗ್ಗೆ ಹೆಮ್ಮೆಯಿಂದ ಹೇಳಿದ್ದಾರೆ. ಇಂಥಹ ಓರ್ವ ಸಾಧಕ ಮೂಲತಃ ಕುಂದಾಪುರ ತಾಲೂಕಿನವರು ಎನ್ನುವುದು ಹೆಮ್ಮೆಯ ವಿಚಾರ/ಕುಂದಾಪ್ರ ಡಾಟ್ ಕಾಂ ವರದಿ/