Kundapra.com ಕುಂದಾಪ್ರ ಡಾಟ್ ಕಾಂ

ಹೊಸೂರು: ಎಸ್.ಎಸ್.ಎಲ್.ಸಿ ಕನ್ನಡ ಮಾಧ್ಯಮ ವಿದ್ಯಾರ್ಥಿ ಶಶಿಕಾಂತ್ ಜಿಲ್ಲೆಗೆ ಪ್ರಥಮ

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಹೊಸೂರು ಶ್ರೀ ಮಾಕಾಂಬಿಕಾ ದೇವಳ ಪ್ರೌಢಶಾಲೆ ಕನ್ನಡ ಮಾಧ್ಯಮ ವಿದ್ಯಾರ್ಥಿ ಶಶಿಕಾಂತ್ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಒಟ್ಟು 618 ಅಂಕಗಳಿಸಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾನೆ. ಕನ್ನಡ ಮಾಧ್ಯಮದಲ್ಲಿಯೂ 125ಕ್ಕೆ 125ಅಂಕ ಪಡೆದು ವಿಶೇಷ ಸಾಧನೆಗೈದಿದ್ದಾನೆ.

ಹೊಸೂರಿನ ಗೋಪಾಲ ಮತ್ತು ಶಾರದಾ ದಂಪತಿಗಳ ಇಬ್ಬರು ಮಕ್ಕಳಲ್ಲಿ ಶಶಿಕಾಂತ್ ಹಿರಿಯವ. ಬೆಂಗಳೂರಿನಲ್ಲಿ ಅಡಿಗೆ ವೃತ್ತಿ ಮಾಡುತ್ತಿರುವ ಗೋಪಾಲ್, ಮನೆಯಲ್ಲಿ ಬೀಡಿ ಕಟ್ಟುವ ತಾಯಿ ಶಾರದಾ ಮಗನ ಓದಿಗೆ ಒತ್ತಾಸೆಯಾಗಿ ನಿಂತಿದ್ದಾರೆ. ತಂಗಿ ಸೃಜನ ಶ್ರೀ ಮೂಕಾಂಬಿಕಾ ಪ್ರೌಢಶಾಲೆಯಲ್ಲಿ ಈ ಭಾರಿ 10ನೇ ತರಗತಿ ವಿದ್ಯಾರ್ಥಿಯಾಗಿದ್ದು ಆಕೆಯೂ ಕಲಿಕೆಯಲ್ಲಿ ಚುರುಕು.

ತನ್ನ ಸಾಧನೆಯ ಬಗ್ಗೆ ಕುಂದಾಪ್ರ ಡಾಟ್ ಕಾಂ ಗೆ ಪ್ರತಿಕ್ರಿಯಿಸಿರುವ ಶಶಿಕಾಂತ್, ದಿನದಲ್ಲಿ ಆರು ಗಂಟೆ ವ್ಯಾಸಂಗ ಮಾಡುತ್ತಿದ್ದೆ. ರಾತ್ರಿ ಓದುತ್ತಿದ್ದು, ಬೆಳಗ್ಗೆ ಓದುತ್ತಿರಲಿಲ್ಲ. ಶಾಲಾ ಆಧ್ಯಾಪಕ ವೃಂದ ಸಪೋರ್ಟ್ ಉತ್ತಮವಾಗಿತ್ತು. ವಿಜ್ಞಾನ ನನ್ನ ನೆಚ್ಚಿನ ಸಬ್ಜೆಕ್ಟ್ ಆಗಿದ್ದು, ಪಿಸಿಎಂಸಿ ತೆಗೆದುಕೊಂಡು ಟೆಕ್ನೀಶನ್ ಆಗಬೇಕು ಎನ್ನೋದು ನನ್ನ ಮುಂದಿನ ಗುರಿ. ಹಿಂದಿ ಉತ್ತರ ಪತ್ರಿಕೆಯಲ್ಲಿ ಮೂರು ಅಂಕ ಕಡಿಮೆ ಬಂದಿದ್ದು, ರೀ ವ್ಯಾಲಿವೇಶನ್ ಮಾಡಿಸಲಾಗುತ್ತದೆ. ನಾನು 620ಕ್ಕೂ ಹೆಚ್ಚು ಅಂಕ ನಿರೀಕ್ಷಿಸಿದ್ದೆ. ವಿಜ್ಞಾನ ನನ್ನ ಇಷ್ಟದ ವಿಷಯವಾಗಿದ್ದು, ಮೂಡುಬಿದ್ರೆ ಆಳ್ವಾಸ್ ಅಥವಾ ಕುಂದಾಪುರ ಎಜುಕೇಶನ್ ಸೊಸೈಟಿ ಪಿಯು ಕಾಲೇಜಿಗೆ ಸೇರಬೇಕೆಂದಿದ್ದೇನೆ ಎಂದಿದ್ದಾನೆ.

ಓದಿನೊಂದಿಗೆ ಚಿತ್ರಕಲೆಯಲ್ಲೂ ಅಸಕ್ತ ಇರುವ ಶಶಿಕಾಂತ್ ಉತ್ತಮ ಚಿತ್ರಕಲಾವಿನಾಗುವ ಎಲ್ಲಾ ಲಕ್ಷಣ ಹೊಂದಿದ್ದಾರೆ. ಪ್ರಬಂಧ ಬರೆಯುವುದು, ಭಾಷಣ ಇನ್ನಿತರ ಹವ್ಯಾಸ ಶಶಿಕಾಂತ್ ಬೆಳೆಸಿಕೊಂಡಿದ್ದಾರೆ. ಟ್ಯೂಶನ್ ಪಡೆಯದೆ ಸ್ವಂತ ಪರಿಶ್ರಮದಿಂದ ಶಶಿಕಾಂತ್ ಜಿಲ್ಲೆಯ ಕನ್ನಡ ಮಾಧ್ಯಮ ವಿಭಾಗದ ಪ್ರಥಮ ವಿದ್ಯಾರ್ಥಿಯಾಗಿದ್ದು, ಕನ್ನಡದಲ್ಲಿ 125ಕ್ಕೆ 125 ಅಂಕ ಪಡೆದು ಸಾಧನೆ ಮಾಡಿದ್ದಾನೆ.

Exit mobile version