ಕುಂದಾಪ್ರ ಡಾಟ್ ಕಾಂ ವರದಿ
ಕುಂದಾಪುರ: ‘ನೈಕಂಬ್ಳಿಯ ಜನ ಮಳೆಗಾಲದಲ್ಲಿ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಪರಿಸ್ಥಿತಿ. ಅಲ್ಲಿನ ಶಾಲೆಗೆ ತೆರಳುವ ಮಕ್ಕಳೂ ಕೂಡ ಕಿರು ನದಿಗೆ ಅಡ್ಡಲಾಗಿ ಹಾಕಲಾದ ಕಾಲುಸಂಕವನ್ನೇ ದಾಟಿ ನಡೆಯಬೇಕಾದ ದುಸ್ಥಿತಿ’. ಹೀಗೆಂದು ಕುಂದಾಪುರ ತಾಲೂಕಿನ ಚಿತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನೈಕಂಬ್ಳಿಯ ಹಳೆಯಮ್ಮ ದೇವಸ್ಥಾನದ ಬಳಿ ಇರುವ ಹಾಗೂ ಆ ಊರಿನ ಇನ್ನಿತರ ಕಾಲುಸಂಕಗಳ ಅಪಾಯದ ಬಗ್ಗೆ ಕುಂದಾಪ್ರ ಡಾಟ್ ಕಾಂ ಜುಲೈ ತಿಂಗಳಿನಲ್ಲಿ ವಿಸ್ಕೃತ ವರದಿಯೊಂದನ್ನು ಪ್ರಕಟಿಸಿತ್ತು.
ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ನೈಕಂಬ್ಳಿಯ ಪ್ರೇರಣಾ ಯುವ ವೇದಿಕೆಯ ಯುವಕರುಗಳಿಂದ ಪಂಚಾಯತ್ ಮತದಾನದ ಬಹಿಷ್ಕಾರದ ಎಚ್ಚರಿಕೆ ನೀಡಲಾಗಿತ್ತು. ಇದೆಲ್ಲದರ ಪರಿಣಾಮ ನೈಕಂಬ್ಳಿಯ ಹಳೆಯಮ್ಮ ದೇವಸ್ಥಾನ ಬಳಿಯ ಉಂಬಳ್ಳಿ ಕಿರು ಹೊಳೆಗೆ ಕಿರು ಸೇತುವೆಯೊಂದನ್ನು ನಿರ್ಮಿಸಲಾಗಿದ್ದು, ಸಂಚಾರನ್ನು ಮುಕ್ತವಾಗಿದೆ. ಹಿಂದಿನ ಅವಧಿಯ ಜಿಲ್ಲಾ ಪಂಚಾಯತ್ ಸದಸ್ಯರಾದ ಇಂದಿರಾ ಶೆಟ್ಟಿ ಅವರ 5ಲಕ್ಷ ರೂ. ಜಿಪಂ ಅನುದಾನದಲ್ಲಿ ಕಿರು ಸೇತುವೆಯನ್ನು ನಿರ್ಮಿಸಲಾಗಿದೆ. ಇದೇ ಹಾದಿಯನ್ನು ನೆಚ್ಚಿಕೊಂಡಿದ್ದ ನೈಕಂಬ್ಳಿಯ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಅಲ್ಲಿನ ಅಂಗನವಾಡಿಗೆ ತೆರಳುವ ಮಕ್ಕಳು ಹಾಗೂ ಅವರ ಪೋಷಕರು, ಪಾದಾಚಾರಿಗಳು ನಿಟ್ಟುಸಿರು ಬಿಡುವಂತಾಗಿದೆ.
ಇಷ್ಟಕ್ಕೆ ಮುಗಿದಿಲ್ಲ. ಪುಟ್ಟ ಊರಲ್ಲಿ ಸಮಸ್ಯೆಗಳು ಬೆಟ್ಟದಷ್ಟಿವೆ
ನೈಕಂಬ್ಳಿ ಸುತ್ತೆಲ್ಲಾ ಕಾಲುಸಂಕ
ನೈಕಂಬ್ಳಿಯ ಬಹುಪಾಲು ಜನತೆ ಒಂದಾದರೂ ಕಾಲುಸಂಕವನ್ನು ದಾಟಿ ನಡೆದು ತಮ್ಮ ದಿನನಿತ್ಯದ ಕೆಲಸಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ. ಸುತ್ತಲಿನ ಕೋಳೂರು, ಮಲ್ಲೋಡ್, ಹಾಡಿಮನೆ, ಆಸೂರು ಜನರು ದಿನವೂ ಕಾಲುಸಂಕದ ಮೂಲಕ ತಿರುಗಾಡುವುದು ಮಾಮೂಲಿಯಾಗಿದೆ. ಇಲ್ಲಿ ಒಟ್ಟು ಸುಮಾರು 96ಕ್ಕೂ ಅಧಿಕ ಮನೆಗಳಿದ್ದು 700ಕ್ಕೂ ಅಧಿಕ ಜನಸಂಖ್ಯೆ ಇದೆ. ಜನಪ್ರತಿನಿಧಿಗಳಗೆ ಬೇಡಿಕೆ ಇಟ್ಟು ಸುಸ್ತಾಗಿರುವ ಇಲ್ಲಿನ ಜನರು ಮರದ ದಿಬ್ಬಗಳನ್ನೇ ನದಿಗೆ ಅಡ್ಡಲಾಗಿ ಹಾಕಿ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಳ್ಳುತ್ತಾರೆ. ಮಳೆಗಾಲದಲ್ಲಿ ನೀರು ಹೆಚ್ಚಾದಾಗ ಇವರುಗಳು ಮಾಡಿಕೊಂಡ ಕಾಲುಸಂಕಗಳು ಕೊಚ್ಚಿ ಹೋದ ಉದಾಹರಣೆಗಳೂ ಸಾಕಷ್ಟಿದೆ. ಆದರೂ ಮಳೆಯ ನೀರಿಗೆ ಜಾರುವ, ಶೀಥಿಲಗೊಂಡ ಕಾಲುಸಂಕವನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಇಲ್ಲಿನದ್ದು. ವೃದ್ಧರು, ಗರ್ಭಿಣಿಯರು, ಅನಾರೋಗ್ಯ ಪೀಡಿತರ ಪಾಡಂತೂ ಹೇಳತೀರದು. ಈ ಅಪಾಯಕಾರಿ ಕಾಲುಸಂಕದಲ್ಲಿ ಕಾಲು ಜಾರಿದರೆ ರಕ್ಷಿಸಿಕೊಳ್ಳುವ ಯಾವುದೇ ವ್ಯವಸ್ಥೆಗಳಿಲ್ಲ. ಕಳೆದ ವರ್ಷ ಮಾರಣಕಟ್ಟೆಯಲ್ಲಿ ಮೂರನೇ ತರಗತಿಯ ಬಾಲಕಿಯೊಬ್ಬಳು ಕಾಲಸಂಕದಿಂದ ಜಾರಿ ಮೃತಪಟ್ಟ ಘಟನೆ ಇಲ್ಲಿಯ ಜನರನ್ನು ಆತಂಕಕ್ಕೀಡು ಮಾಡಿದ್ದು, ಈ ನರಕಯಾತನೆಗೆ ಮುಕ್ತಿ ಯಾವಾಗೆಂದು ಪ್ರಶ್ನಿಸುತ್ತಿದ್ದಾರೆ.
ಮೂಲ ಸೌಕರ್ಯಗಳಿಲ್ಲದ ನೈಕಂಬಳ್ಳಿ ಶಾಲೆ
ನೈಕಂಬ್ಳಿಯ ಕಿರಿಯ ಪ್ರಾಥಮಿಕ ಶಾಲೆಯ ಸ್ಥಿತಿಯೂ ಚನ್ನಾಗಿಲ್ಲ. 1ರಿಂದ 3ನೇ ತರಗತಿಯವರೆಗೆ ನಲಿಕಲಿ ಶಿಕ್ಷಣವಿರುದರಿಂದ ಮಕ್ಕಳನ್ನು ಒಟ್ಟಾಗಿ ಕುಳ್ಳಿರಿಸಲಾಗಿದೆ. ಆದರೆ ಬೇರೆ ಕೊಠಡಿಗಳಿಲ್ಲದ ಕಾರಣ ಅದೇ ಹಾಲಿನಲ್ಲಿ 4 ಹಾಗೂ 5ನೇ ತರಗತಿಯನ್ನು ಮತ್ತು ಆಫೀಸ್ ರೂಂ ಸೇರಿಸಿಕೊಂಡಿದ್ದಾರೆ. 5ನೇ ತರಗತಿಯ ಮಕ್ಕಳನ್ನು ಅಕ್ಷರ ದಾಸೋಹದ ಕೊಠಡಿಯಲ್ಲಿ ಕುಳ್ಳಿರಿಸಿಕೊಂಡು ಪಾಠ ಮಾಡುತ್ತರಾದರೂ ಒಬ್ಬ ಶಿಕ್ಷಕಿ ರಜೆಯಲ್ಲಿರೇ ಹಾಲ್‌ನಲ್ಲಿ ಕುಳ್ಳಿರಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಇನ್ನು ಶಾಲೆಯ ಕಟ್ಟಡವಂತೂ ಶಿಥೀಲಾವಸ್ಥೆ ತಲುಪಿದೆ. ಮೇಲ್ಛಾವಣಿ ಶಿಥೀಲಗೊಂಡಿದ್ದು ಗಾಳಿ ಮಳೆಯ ಹೊಡೆತಕ್ಕೆ ಸಿಕ್ಕಿ ಬೀಳುವುದೇ ಎಂಬ ಆತಂಕವನ್ನು ವಿದ್ಯಾರ್ಥಿಗಳ ಪೋಷಕರು ವ್ಯಕ್ತಪಡಿಸುತ್ತಿದ್ದಾರೆ. ಸರ್ವಶಿಕ್ಷಾ ಅಭಿಯಾನ ಯೋಜನೆಯಡಿಯಲ್ಲಿ ಹೊಸ ಶಾಲಾ ಕಟ್ಟಡಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಅದು ಈವರೆಗೆ ಪುರಸ್ಕೃತಗೊಂಡಿಲ್ಲ. ಗುಣಮಟ್ಟದ ಶಿಕ್ಷಣದ ಮಾತನಾಡುವ ಇಲಾಖೆ ಹೀಗೆ ಅಪಾಯಕಾರಿಯಾದ ಕಟ್ಟಡದಲ್ಲಿ ಎಲ್ಲಾ ಮಕ್ಕಳನ್ನು ಒಟ್ಟಿಗೆ ಸೇರಿಸಿ ಪಾಠ ಮಾಡುವಂತೆ ಮಾಡಿದರೆ ಮುಂದಾಗುವ ಅಪಾಯಕ್ಕೆ ಹೊಣೆಯಾರು? ಶಿಕ್ಷಣದ ಉದ್ದೇಶವಾದರೂ ಇದರಿಂದ ಈಡೇರಿತೆ ಎಂದು ಜನಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ.
ರಸ್ತೆಗಳೂ ದುಸ್ತರ
96ಕ್ಕೂ ಅಧಿಕ ಮನೆಗಳಿರುವ ನೈಕಂಬ್ಳಿಯ ಡಾಂಬಾರು ಕಾಣದ ರಸ್ತೆಯ ಮಾರ್ಗವೂ ದುಸ್ಥರವಾಗಿದೆ. ಈ ಮಾರ್ಗದ ಮೂಲಕ ಸಂಚರಿಸುವುದು ಕೂಡ ಯಾತನೆಯೇ ಸರಿ. ಉಬ್ಬ ತಗ್ಗುಗಳ ಮಾರ್ಗದಲ್ಲಿ ಚರಂಡಿ ವ್ಯವಸ್ಥೆಯೂ ಇಲ್ಲ.
ಒಂದು ಊರಿನ ಮೂಲಭೂತ ಸೌಕರ್ಯಗಳೇ ಈ ಪ್ರದೇಶದಲ್ಲಿ ದುಸ್ತರವಾಗಿರುವಾಗ ಜನಪ್ರತಿನಿಧಿಗಳು ಮಾತ್ರ ಮೌನ ವಹಿಸುವ ಬಗ್ಗೆ ಜನರೂ ಅಸಮಾಧಾನ ತೋರುತ್ತಲೇ ಬಂದಿದ್ದಾರೆ. ಕಿರುಸೇತುವೆಯಾದಂತೆ ಇನ್ನಿತರ ಸೇತುವೆ, ಶಾಲೆಗಳ ದುರಸ್ಥಿಯ ಬಗ್ಗೆಯೂ ಹಂತ ಹಂತವಾಗಿ ಗಮನಹರಿಸಲಿ ಎಂದು ಆಗ್ರಹಿಸುತ್ತಿದ್ದಾರೆ.
- ನೈಕಂಬ್ಳಿಯ ಕಾಲುಸಂಕ – ಶಾಲೆ ಎರಡೂ ಸುರಕ್ಷಿತವಲ್ಲ! ಜನಪ್ರತಿನಿಧಿಗಳಿಗೆ ಸಮಸ್ಯೆಯೇ ಕಾಣೋಲ್ಲ – http://kundapraa.com/?p=3898
ಮೊದಲಿದ್ದ ಕಾಲುಸಂಕ