ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಗ್ರಾಮೀಣ ಭಾಗದ ವಿದ್ಯಾರ್ಥಿನಿಯೊಬ್ಬಳು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 98.33% ಅಂಕಗಳಿಸಿ ರಾಜ್ಯಕ್ಕೆ 7ನೇ ರ‍್ಯಾಂಕ್ ಪಡೆದುಕೊಳ್ಳುವ ಮೂಲಕ ವಿಶಿಷ್ಟ ಸಾಧನೆಗೈದಿದ್ದಾಳೆ. ಸುಣ್ಣಾರಿ ಎಕ್ಸಲೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ, ಸಳ್ವಾಡಿಯ ಶಹರಿ ಶೆಟ್ಟಿ ವಿಜ್ಞಾನ ವಿಭಾಗದಲ್ಲಿ 590 ಅಂಕಗಳಿಸಿದ ಪ್ರತಿಭಾನ್ವಿತೆ.
ತಾಲೂಕಿನ ಕಾಳವಾರ ಗ್ರಾಮದ ಸಳ್ವಾಡಿ ನಡುಮನೆಯಲ್ಲಿ ನೆಲೆಸಿರುವ ಬಿ. ಸದಾನಂದ ಶೆಟ್ಟಿ ಆಲೂರು ಹಾಗೂ ಶಾಂತಾ ಎಸ್. ಶೆಟ್ಟಿ ದಂಪತಿಗಳ ಏಕೈಕ ಪುತ್ರಿಯಾದ ಶಹರಿ ಶೆಟ್ಟಿ ಬಾಲ್ಯದಿಂದಲ್ಲೂ ಶೈಕ್ಷಣಿಕವಾಗಿ ಉತ್ತಮ ಸಾಧನೆಗೈಯುತ್ತಲೇ ಬಂದಿದ್ದಾಳೆ. ಎಸ್.ಎಸ್.ಎಲ್‌ಸಿಯಲ್ಲಿ 98.54% ಅಂಕದೊಂದಿಗೆ ರ‍್ಯಾಂಕ್ ಪಡೆದಿದ್ದ ಶಹರಿ, ಪ್ರಥಮ ಪಿಯುಸಿಯಲ್ಲಿಯೂ 98.56% ಅಂಕಗಳಿಸಿ ದ್ವಿತೀಯ ಪಿಯುಸಿಯಲ್ಲಿಯೂ ಉತ್ತಮ ಸಾಧನೆಗೈಯುವ ಸೂಚನೆ ನೀಡಿದ್ದಳು. ಕಾಳಾವರದ ಸಳ್ವಾಡಿ ಗ್ರಾಮದಿಂದ ಕಾಲೇಜಿಗೆ ತೆರಳಿದರೂ, ಯಾವುದೇ ಟ್ಯೂಷನ್ ಪಡೆಯದೇ ಸ್ವಂತ ಪರಿಶ್ರಮದಿಂದ ಈ ಸಾಧನೆ ಮಾಡಿದ್ದಾಳೆ. ಪಠ್ಯಪುಸ್ತಕ ಓದಿನ ಜೊತೆಗೆ ಕಥೆ, ಕಾದಂಬರಿಗಳನ್ನು ಓದುವುದರಲ್ಲಿಯೂ ಆಕೆಗೆ ಅತೀವ ಆಸಕ್ತಿ ಹೊಂದಿದ್ದಾಳೆ.
ರ‍್ಯಾಂಕ್ ಗಳಿಸಿರುವ ಬಗ್ಗೆ ‘ಕುಂದಾಪ್ರ ಡಾಟ್ ಕಾಂ’ ಗೆ ಪ್ರತಿಕ್ರಿಯಿಸಿರುವ ಶಹರಿ, ಶಾಲೆಯಲ್ಲಿ ಉಪನ್ಯಾಸಕರು ನನ್ನ ವಿದ್ಯಾಭ್ಯಾಸಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದ್ದರು. ಮನೆಯಲ್ಲಿಯೂ ಪೋಷಕರು ಶಿಕ್ಷಣಕ್ಕೆ ಪೂರಕವಾದ ವಾತಾವರಣ ಒದಗಿಸಿಕೊಟ್ಟಿದ್ದರು. ಹಾಗಾಗಿ ಪ್ರತಿನಿತ್ಯ 4-5ಗಂಟೆ ನಿರಂತವಾಗಿ ಅಭ್ಯಸಿಸುತ್ತಿದ್ದೆ ಎಂದಿರುವುದಲ್ಲದೇ ಮುಂದೆ ಇಂಜಿನಿಯರಿಂಗ್ ಪದವಿ ಪಡೆಯುವ ಹಂಬಲವಿದೆ ಎಂದು ತಿಳಿಸಿದ್ದಾರೆ.
ಮಗಳ ಸಾಧನೆಯ ಬಗೆಗೆ ಪ್ರತಿಕ್ರಿಯಿಸಿರುವ ತಂದೆ ಸದಾನಂದ ಶೆಟ್ಟಿ, ಸಹಜವಾಗಿ ಆಕೆಯ ಸಾಧನೆ ಖುಷಿ ತಂದಿದೆ. ಸ್ವಪ್ರಯತ್ನದಿಂದ ಓದಿ ರ‍್ಯಾಂಕ್ ಪಡೆದಿದ್ದಾಳೆ. ಅವಳ ಇಚ್ಚೆಯಂತೆ ಮುಂದಿನ ವಿದ್ಯಾಬ್ಯಾಸಕ್ಕೆ ಅನುವು ಮಾಡಿಕೊಡುತ್ತೇವೆ ಎಂದಿದ್ದಾರೆ. /ಕುಂದಾಪ್ರ ಡಾಟ್ ಕಾಂ ವರದಿ/