Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರದಲ್ಲಿ ಭಿಕ್ಷೆ ಬೇಡುತ್ತಿದ್ದ ಹುಡುಗಿ ಎಸ್ಸೆಸ್‌ಎಲ್ಸಿ ಫಸ್ಟ್ ಕ್ಲಾಸ್ ಪಾಸ್!

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಯಾರ ಬದುಕು ಹೇಗೆ ತಿರುವು ಪಡೆಯುತ್ತದೆ ಎನ್ನೋದಕ್ಕೆ ಬಾಲಕಿ ಬದಲಾದ ಜೀವನವೇ ಸಾಕ್ಷಿ. ಕುಂದಾಪುರ ಪರಿಸರದಲ್ಲಿ ಭಿಕ್ಷೆ ಬೇಡುತ್ತಿದ್ದ ಬಾಲಕಿ ಎಸ್ಸೆಸ್‌ಎಲ್ಸಿ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್ ಪಾಸ್!

ಕೆದೂರು ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಕಾವೇರಿ ವಿಶಿಷ್ಟ ಸಾಧನೆ ಮಾಡಿದ ವಿದ್ಯಾರ್ಥಿನಿ. ಕಳೆದ ಏಳು ವರ್ಷದ ಹಿಂದೆ ತಾಯಿ ಜೊತೆ ಕುಂದಾಪುರ ಶಾಸ್ತ್ರಿ ವೃತ್ತ, ಬಸ್ ಸ್ಟ್ಯಾಂಡ್ ಬಳಿ ಭಿಕ್ಷೆ ಬೀಡುತ್ತಿದ್ದ ಈಕೆ ಕೆದೂರು ಸ್ಪೂರ್ತಿಧಾಮ ಸೇರಿದ ನಂತರ ಬದುಕೇ ಬದಲಾಯಿತು.

ಕಾವೇರಿ ದಾವಣಗೆರೆ ಜಿಲ್ಲೆ ಹೊನ್ನಾಳಿ ಹುಟ್ಟೂರು. ತಾಯಿ ರತ್ನಾ, ತಂದೆ ಗಂಗಣ್ಣ. ತಂದೆ ಎಲ್ಲಿದ್ದಾರೋ ಗೊತ್ತಿಲ್ಲ. ತಾಯಿ ತೀರಿಕೊಂಡಿದ್ದು, ಇಬ್ಬರ ತಮ್ಮಂದಿರ ಜೊತೆ ಸ್ಪೂರ್ತಿಯಲ್ಲಿದ್ದಾಳೆ. ಒಬ್ಬ ತಮ್ಮ 1ನೇ ತರಗತಿ ಓದುತ್ತಿದ್ದರೆ, ಮತ್ತೊಬ್ಬ ತಮ್ಮ 3ನೇ ತರಗತಿ ವಿದ್ಯಾರ್ಥಿ. 2008-09ರಲ್ಲಿ ಸ್ಪೂರ್ತಿಧಾಮ ಸೇರಿದ ಕಾವೇರಿ ಕೆದೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ತರಗತಿಗೆ ದಾಖಲಾದ ನಂತರ ಯಾವ ತರಗತಿಯಲ್ಲೂ ಫೇಲ್ ಆಗದೆ ಪಾಸಾಗುತ್ತಾ ಬಂದಿದ್ದು ಎಸ್ಸೆಸ್‌ಎಲ್ಸಿಯಲ್ಲಿ ಶೇ.67 (416) ಅಂಕ ಪಡೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದಾಳೆ.  ಕುಂದಾಪ್ರ ಡಾಟ್ ಕಾಂ ಸುದ್ದಿ.

ಉತ್ತಮ ಗಾಯಕಿಯಾದ ಈಕೆ ಸಂಗೀತ ಆಭ್ಯಾಸ ಮಾಡಿದ್ದೂ, ನೃತ್ಯದಲ್ಲೂ ಪಳಗಿದ್ದಾಳೆ. ಸ್ಪೂರ್ತಿಧಾಮ ವಿದ್ಯಾರ್ಥಿಗಳಿಗೆ ಕಾವೇರಿ ಸಂಗೀತ, ನೃತ್ಯ ಗುರು. ಮುಂದೆ ಪಿಯುಸಿ ಮಾಡಬೇಕು. ನಂತರ ಗಾಯಕಿ ಆಗಬೇಕು ಎನ್ನೋದು ಕಾವೇರಿ ಕನಸು. ಸ್ಪೂರ್ತಿಧಾಮ ನನಗೆ ಆಶ್ರಯ ನೀಡದಿದ್ದರೆ ನಾನು ಏನಾಗಿ ಹೋಗುತ್ತಿದ್ದನೋ ಎನ್ನುತ್ತಾಳೆ. ಕಲಿಕೆಯಲ್ಲಿ ಹುಷಾರರಿರುವ ಕಾವೇರಿಗೆ ಶಿಕ್ಷಣ ಕೊಡುವ ಜೊತೆ ಅವಳ ಇತರೆ ಹವ್ಯಾಸಕ್ಕೂ ಪ್ರೋತ್ಸಾಹ ನೀಡಲಾಗುತ್ತದೆ ಎಂದು ಸ್ಪೂರ್ತಿಧಾಮದ ಡಾ.ಕೇಶವ ಕೋಟೇಶ್ವರ ತಿಳಿಸಿದ್ದಾರೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/

Exit mobile version