Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಹೋಬಳಿ ಮಟ್ಟದ ಕೃಷಿ ಅಭಿಯಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ದೇಶದಲ್ಲಿ ಜನಸಂಖ್ಯೆ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಹಾರ ಭದ್ರತೆ ನೀಡಲು ಸಾಗುವಳಿ ಜಮೀನಿನಲ್ಲಿ ಗರಿಷ್ಟ ಕೃಷಿ ಆಹಾರ ಉತ್ಪಾದನೆಯ ಅಗತ್ಯವಿದೆ. ರೈತರು ಕೇವಲ ಒಂದೇ ಬೆಳೆಯನ್ನು ನಂಬಿಕೊಳ್ಳದೇ ಸಮಗ್ರ ಕೃಷಿಗೆ ಪೂರಕವಾದ ಉಪಕಸಬುಗಳನ್ನು ಅಳವಡಿಸಿಕೊಳ್ಳುವ ಅನಿವಾರ್ಯತೆಯಿದೆ. ಈಗಾಗಲೇ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯನ್ನು ಜಿಲ್ಲೆಯಾದ್ಯಂತ ಗ್ರಾಮ ಪಂಚಾಯತ್ ಮಟ್ಟಕ್ಕೆ ಅಧಿಸೂಚನೆ ನೀಡಲಾಗಿದೆ ಎಂದು ಜಿಪಂ ಸದಸ್ಯ ಶಂಕರ ಪೂಜಾರಿ ಹೇಳಿದರು.

ಗೋಳಿಹೊಳೆ ಶ್ರೀ ಮಹಿಷಮರ್ಧಿನಿ ಸಭಾಭವನದಲ್ಲಿ ಉಡುಪಿ ಜಿಪಂ ಹಾಗೂ ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖಾ ಸಹಯೋಗದಲ್ಲಿ ಬೈಂದೂರು ಹೋಬಳಿ ಮಟ್ಟದಲ್ಲಿ ನಡೆದ ಕೃಷಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು. ಇಂದಿನ ಕಾಲಘಟ್ಟದಲ್ಲಿ ರೈತರು ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಒಂದೆಡೆ ಕಾಡುಪ್ರಾಣಿಗಳ ಹಾವಳಿ, ಕೃಷಿ ಕಾರ್ಮಿಕರ ಕೊರತೆಯಿದ್ದರೆ ಇನ್ನೊಂದೆಡೆ ತಮ್ಮ ಬೆಳೆಗೆ ಸೂಕ್ತವಾದ ಮಾರುಕಟ್ಟೆ ಮತ್ತು ಬೆಲೆ ಪಡೆಯಲು ಹರಸಾಹಸ ಪಡೆಯುವ ಸ್ಥಿತಿಯಲ್ಲಿದ್ದಾರೆ. ಈ ನೆಲೆಯಲ್ಲಿ ಕೃಷಿ ಸಂಬಂಧಿತ ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಕೃಷಿಯ ಕುರಿತಾದ ಸಮಗ್ರ ಮಾಹಿತಿ, ಸರಕಾರದ ಯೋಜನೆಗಳನ್ನು ರೈತರಿಗೆ ಮನವರಿಕೆ ಮಾಡುವುದರ ಮೂಲಕ ಅವರಿಗೆ ಸ್ಪಂದಿಸಬೇಕು. ಬೆಳೆವಿಮೆ, ಬೆಳೆ ನಷ್ಟಕ್ಕೆ ಪರಿಹಾರ ತ್ವರಿತವಾಗಿ ಸಿಗುವ ಹಾಗೆ ನೆರವಾಗಬೇಕು. ನಮ್ಮಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಕೂಡಾ ಕೃಷಿಯನ್ನು ಉಳಿಸಿಕೊಳ್ಳುವ ಅನಿವಾರ್ಯತೆಯಿದೆ. ಹೊಸ ಆವಿಷ್ಕಾರಗಳ ಮೂಲಕ ಯೋಜನೆ ಹಾಗೂ ಪೂರಕ ಅಂಶಗಳಿಂದ ಕೃಷಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಬಹುದು. ಆಗ ಮಾತ್ರ ಯುವ ಪೀಳಿಗೆ ಕೃಷಿಯಿಂದ ವಿಮುಖರಾಗದಂತೆ ತಡೆಯಬಹುದು ಎಂದರು.

ಗೋಳಿಹೊಳೆ ಗ್ರಾಪಂ ಅಧ್ಯಕ್ಷ ರಾಜು ಪೂಜಾರಿ ಅಧ್ಯಕ್ಷತೆವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ, ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಯ ವಿವಿಧ ಯೋಜನೆಗಳ ಮಾಹಿತಿ ಕೈಪಿಡಿ ಬಿಡುಗಡೆಗೊಳಿಸಿದರು. ಈ ಸಂದರ್ಭ ಸ್ಥಳೀಯ ಪ್ರಗತಿಪರ ರೈತ ತಿಮ್ಮಣ್ಣ ಹೆಗಡೆಯವರನ್ನು ಸನ್ಮಾನಿಸಲಾಯಿತು. ತಾಪಂ ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ ಕಡ್ಕೆ ಕೃಷಿ ಅಭಿಯಾನದ ಸಂಚಾರಿ ಟ್ಯಾಬ್ಲೊ ಉದ್ಘಾಟಿಸಿದರು. ಜಿಪಂ ಸದಸ್ಯರಾದ ಬಟ್ವಾಡಿ ಸುರೇಶ್ ರೈತರಿಗೆ ಮಣ್ಣಿನ ಪ್ರಮಾಣಪತ್ರ ಹಾಗೂ ಗೌರಿ ದೇವಾಡಿಗ ನಾಲ್ಕು ಫಲಾನುಭವಿಗಳಿಗೆ ಟಿಲ್ಲರ್ ವಿತರಿಸಿದರು.

ತಾಪಂ ಸದಸ್ಯರಾದ ಪುಷ್ಪರಾಜ ಶೆಟ್ಟಿ, ಗಿರಿಜಾ ಖಾರ್ವಿ, ಸುಜಾತಾ ದೇವಾಡಿಗ, ಮಾಲಿನಿ ಕೆ., ಪ್ರಮಿಳಾ ದೇವಾಡಿಗ, ಜಗದೀಶ ದೇವಾಡಿಗ, ಮಹೇಂದ್ರ ಪೂಜಾರಿ, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಬ್ರಹ್ಮಾವರ ಕೆ.ವಿ.ಕೆ ಗೃಹ ವಿಜ್ಞಾನ ಸಹಪ್ರಧ್ಯಾಪಕ ಡಾ. ಸತೀಶ್ ಬಿ. ಮತ್ತು ಕಾರ್ಯಕ್ರಮ ಸಂಯೋಜಕ ಡಾ. ಧನಂಜಯ್ ಉಪಸ್ಥಿತರಿದ್ದರು.
ಜಂಟಿ ಕೃಷಿ ನಿರ್ದೇಶಕ ಚಂದ್ರಶೇಖರ್ ನಾಯ್ಕ್ ಪ್ರಾಸ್ತಾವಿಸಿದರು. ಸಹಾಯಕ ಕೃಷಿ ಅಧಿಕಾರಿಗಳಾದ ಗಾಯತ್ರಿದೇವಿ ಸ್ವಾಗತಿಸಿ, ವಿಠಲ ರಾವ್ ವಂದಿಸಿದರು. ದಿನೇಶ ವಿ ನಿರೂಪಿಸಿದರು. ನಂತರ ರೈತರೊಂದಿಗೆ ಕೃಷಿ ವಿಜ್ಞಾನಿಗಳು ಹಾಗೂ ಕೃಷಿ ಅಧಿಕಾರಿಗಳು ಸಂವಾದ ಕಾರ್ಯಕ್ರಮ ನಡೆಸಿದರು.

Exit mobile version