ಕುಂದಾಪುರ: ಅಲ್ಲಿ ಒಂದಿಷ್ಟು ವಿದ್ಯಾರ್ಥಿಗಳು ಹಾಡು ನೃತ್ಯಕ್ಕೆ ಹೆಜ್ಜೆ ಹಾಕುತ್ತಿದ್ದರೆ, ಮತ್ತೊಂದಿಷ್ಟು ಮಂದಿ ಚನ್ನೆಮಣೆಯಂತಹ ಅಪರೂಪದ ಆಟವಾಡುತ್ತಿದ್ದರು. ಕೆಲವರು ಜೇಡಿಮಣ್ಣಿನ ಮಾದರಿಗಳನ್ನು ತಯಾರಿಸುತ್ತಿಸುತ್ತಿದ್ದರೇ, ಕೆಲವರು ಇನ್ನೂ ಮುಂದೆ ಹೋಗಿ ರಗೋಲಿ, ಕುಂಟೆಬಿಲ್ಲೆ ಮುಂತಾದ ಆಟಗಳನ್ನಾಡುವುದರಲ್ಲಿ ಮಗ್ನರಾಗಿದ್ದರು. ಆದರೆ ಇಲ್ಯಾವುದೇ ಸ್ವರ್ಧೆ ಇರಲಿಲ್ಲ. ಬದಲಿಗೆ ವಿದ್ಯಾರ್ಥಿಗಳ ಪ್ರತಿಭೆಯ ಪ್ರದರ್ಶನಕ್ಕೊಂದು ಸಂದರ ವೇದಿಕೆ ನಿರ್ಮಾಣವಾಗಿತ್ತು. ಇಂತಹ ಅಪರೂಪದ ವೇದಿಕೆ ನಿರ್ಮಾಣಗೊಂಡಿದ್ದು ಕುಂದಾಪುರದಲ್ಲಿ ನಡೆದ ‘ಮಕ್ಕಳ ಹಬ್ಬ’ದಲ್ಲಿ.
ಇಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ, ಕುಂದಾಪುರ ತಾಲೂಕು ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಕುಂದಾಪುರದ ಪಿ.ವಿ.ಎಸ್. ಸರೋಜಿನಿ ಮಧುಸೂದನ ಕುಶೆ ಸರಕಾರಿ ಪ್ರೌಡಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ‘ಮಕ್ಕಳ ಹಬ್ಬ’ ಹಲವು ವಿಶೇಷತೆಗಳೊಂದಿಗೆ ಸುಂದರವಾಗಿ ಮೂಡಿಬಂದಿತ್ತು.
18ವರ್ಷದೊಳಗಿನವರಿಗಾಗಿ ಆಯೋಜಿಸಿದ್ದ ಮಕ್ಕಳ ಹಬ್ಬದಲ್ಲಿ ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತರುವ ಪ್ರಯತ್ನವನ್ನು ಮಾಡಲಾಗಿತ್ತು. ಜಿಲ್ಲೆಯ ವಿವಿಧ ಸರಕಾರಿ ಹಾಗೂ ವಸತಿ ಶಾಲೆಗಳಿಂದ ಬಂದಿದ್ದ ವಿದ್ಯಾರ್ಥಿಗಳು ಹಾಡು, ನೃತ್ಯ, ಏಕಪಾತ್ರ ಅಭಿನಯ, ಪ್ರಹಸನ, ಮಣ್ಣಿನ ಮಾದರಿ ತಯಾರಿ, ಚನ್ನೆಮಣೆ, ರಗೋಲಿ, ಕುಂಟೆಬಿಲ್ಲೆ ಮುಂತಾದ ಒಳಾಂಗಣ, ಹೊರಾಂಗಣ ಚಟುವಟಿಕೆಗಳು, ಗ್ರಾಮೀಣ ಕ್ರೀಡೆಗಳಲ್ಲಿ ಸ್ವಇಚ್ಚೆಯಿಂದ ಭಾಗವಹಿಸುತ್ತಿರುವ ದೃಶ್ಯ ಇಲ್ಲಿ ಸಾಮಾನ್ಯವಾಗಿತ್ತು. ಓದು, ಪರೀಕ್ಷೆಗಳ ನಡುವೆ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ಸ್ವಲ್ಪ ರಿಲೀಫ್ ನೀಡಿತು.
ಮೊಬೈಲ್, ಕಂಪ್ಯೂಟರ್, ಟಿ.ವಿ. ಲೋಕದಲ್ಲಿಯೇ ಮುಳುಗಿರುವ ವಿದ್ಯಾರ್ಥಿಗಳು ಗ್ರಾಮೀಣ ಕ್ರೀಡೆ, ಸಂಸ್ಕೃತಿಯನ್ನು ಮರೆಯುತ್ತಿರುವ ಹೊತ್ತಿನಲ್ಲಿ ಸ್ವರ್ಧರಹಿತವಾದ ಕಾರ್ಯಕ್ರಮಗಳನ್ನು ಆಯೋಜಿಸಿ, ಮಕ್ಕಳ ಭಾಗವಹಿಸುವಿಕೆ ಮೂಲಕ ಅವರಲ್ಲಿ ಸೃಜನಾತ್ಮಕತೆ, ಕ್ರೀಯಾಶೀಲತೆಯನ್ನು ತುಂಬುವ ಇಲಾಖೆಯ ಕಾರ್ಯ ಮಾತ್ರ ಶ್ಲಾಘನೀಯವಾದುದು. ಮುಂದಿನ ದಿನಗಳಲ್ಲಿ ಪಿಯುಸಿ ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ಆಪ್ತ ಸಮಾಲೋಚನೆ ಹಾಗೂ ಶೈಕ್ಷಣಿಯ ಪ್ರಗತಿಗೆ ಪೂರಕವಾಗುವ ಮತ್ತಷ್ಟು ಕಾರ್ಯಕ್ರಮವನ್ನು ಆಯೋಜಿಸುವ ಯೋಜನೆಯೂ ಇದೆ ಎನ್ನುತ್ತಾರೆ ಉಡುಪಿಯ ಸಿಡಿಪಿಓ ಸದಾನಂದ ನಾಯ್ಕ್