Kundapra.com ಕುಂದಾಪ್ರ ಡಾಟ್ ಕಾಂ

ದಿನವಿಡಿ ಬಿಸಿನೀರು ಪಡೆಯಲು ಹೀಗೊಂದು ‘ಪಾಕೆಟ್ ಸ್ನೇಹಿ ಸೋಲಾರ್ ವಾಟರ್ ಹೀಟರ್’

ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ
ಕುಂದಾಪುರ: ಬಿಸಿನೀರಿನಿಂದ ಸ್ನಾನ ಮಾಡಲು ಕಟ್ಟಿಗೆಯನ್ನು ತಂದು ಹಂಡೆ ಬಿಸಿ ಮಾಡಬೇಕೆಂದಿಲ್ಲ. ಸಾವಿರಾರು ರೂಪಾಯಿ ತೆತ್ತು ಗ್ಯಾಸ್ ಗ್ಲಿಝರಿನ್, ಸೋಲಾರ್ ವಾಟರ್ ಹೀಟರ್‌ಗೆ ಮೊರೆ ಹೋಗಬೇಕೆಂದೂ ಇಲ್ಲ. ಒಂದು ಭಾರಿ ಅತಿ ಕಡಿಮೆ ಬಂಡವಾಳ ವಿನಿಯೋಗಿಸಿದರೆ ಸಾಕು. ಸೌರ ಶಕ್ತಿಯನ್ನು ಉಪಯೋಗಿಸಿಕೊಂಡು ನಿಮ್ಮ ಮನೆ, ಹೋಟೆಲ್‌ಗಳಿಗೆ ದಿನವಿಡಿ ಸುಲಭವಾಗಿ ಬಿಸಿನೀರು ಪಡೆದುಕೊಳ್ಳುವ ಸರಳ ತಂತ್ರಜ್ಞಾನವನ್ನು ನೀವೆ ಅಳವಡಿಸಿಕೊಳ್ಳಬಹುದು!

ಅಂದ ಹಾಗೆ ಈ ಸರಳ ತಂತ್ರಜ್ಞಾನದ ಆವಿಷ್ಕಾರವನ್ನು ಮಾಡಿರುವುದಲ್ಲದೇ, ತನ್ನದೇ ಮನೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಅಳವಡಿಸಿಕೊಂಡು ಅವಶ್ಯಕತೆಗೆ ತಕ್ಕಷ್ಟು ಬಿಸಿನೀರು ಪಡೆದುಕೊಳ್ಳುತ್ತಿದ್ದಾರೆ ಸಾಲಿಗ್ರಾಮದ ನಿವಾಸಿ ದಿನೇಶ್ ಸಿ ಹೊಳ್ಳ.

ತನ್ನ ಆವಿಷ್ಕಾರವನ್ನು ’ಪಾಕೆಟ್ ಸ್ನೇಹಿ ಸೋಲಾರ್ ವಾಟರ್ ಹೀಟರ್’ ಎಂದು ಕರೆದಿರುವ ಹೊಳ್ಳರು, ಬಿಸಿನೀರಿಗಾಗಿ ಕಟ್ಟಿಗೆಯನ್ನು ತಂದು ಬೆಂಕಿ ಹೊತ್ತಿಸಿ ಕಾಯಿಸುವುದಲ್ಲದೇ ಅದರ ಹೊಗೆಯನ್ನೂ ಸಹಿಸಿಕೊಳ್ಳಬೇಕು. ಇದು ಪರಿಸರಕ್ಕೂ ಹಾನಿ ಎಂಬುದನ್ನು ಅರಿತು ಬೇರೆನು ಮಾಡಬಹುದು ಎಂದು ಯೋಚಿಸುತ್ತಿರುವಾಗಲೇ ಅವರಿಗೆ ಹೊಳೆದದ್ದು ಈ ಸರಳ ಉಪಾಯ. ಕುಂದಾಪ್ರ ಡಾಟ್ ಕಾಂ ವರದಿ.

ಪ್ರಾಯೋಗಿಕವಾಗಿ ಮನೆಯ ಟ್ಯಾಂಕಿಯಿಂದ ಒಂದಕ್ಕೊಂದು ಜೋಡಿಸಿದ ಪಿವಿಸಿ ಪೈಪ್ ಮೂಲಕ ಹಾದು ಬರುವ ನೀರು ಸೂರ್ಯನ ಶಾಖದಿಂದಲೇ ಬಿಸಿಯಾಗುವಂತೆ ಮಾಡಿದ್ದಾರೆ. ಬೇಸಿಗೆ ಹಾಗೂ ಚಳಿಗಾಲದಲ್ಲಿ ಬೆಳಿಗ್ಗೆ 9 ಗಂಟೆಯ ಹೊತ್ತಿಗೆ ಉಗುರು ಬಿಚ್ಚಗಿನ ನೀರು ಬಳಕೆಗೆ ಲಭ್ಯವಾದರೇ, ಮಧ್ಯಾಹ್ನವಾಗುತ್ತಿದ್ದಂತೆ ಕುದಿ ನೀರು ಪೈಪ್ ನಳ್ಳಿಯಲ್ಲಿ ಹರಿದು ಬರುತ್ತದೆ. ಸಂಜೆ ಸುಮಾರು 5 ಗಂಟೆಯ ವರೆಗೆ ಕಾದ ನೀರು ಲಭ್ಯವಾಗುತ್ತದೆ. ಮಧ್ಯಾಹ್ನ ದೊರೆಯುವ ಕುದಿ ನೀರನ್ನು ಸೂಕ್ತವಾಗಿ ಹಿಡಿದಿಟ್ಟುಕೊಳ್ಳುವ ವ್ಯವಸ್ಥೆಯಿದ್ದರೇ ರಾತ್ರಿಯ ಹಾಗೂ ಮರುದಿನದ ವರೆಗೂ ಬಿಸಿನೀರನ್ನು ಬಳಸಿಕೊಳ್ಳಬಹುದಾಗಿದೆ. ಆದರೆ ಮಳೆಗಾಲದಲ್ಲಿ ಸೂರ್ಯನ ಶಾಖ ಅಭಾವವಿರುವಾಗ ಬಿಸಿನೀರಿಗೆ ಸಹಜವಾಗಿ ಸ್ಪಲ್ಪ ಕೊರತೆ ಉಂಟಾಗುವುದು. ಈ ಹೊತ್ತಿನಲ್ಲಿ ಬದಲಿ ವ್ಯವಸ್ಥೆಯನ್ನು ಮಾಡಿಕೊಂಡರೇ ಮತ್ತೆ ವರ್ಷದ 7-8 ತಿಂಗಳು ಬಿಸಿನೀರನ್ನು ನಿರಂತರವಾಗಿ ಪಡೆದುಕೊಳ್ಳಬಹುದು.

ನಿಮ್ಮ ಮನೆಗೆ ಅಳವಡಿಸಿಕೊಳ್ಳುವುದು ಹೇಗೆ?
ಈಗಾಗಲೇ ಮನೆಯ ಮಹಡಿಯಲ್ಲಿ ವಾಟರ್ ಟ್ಯಾಂಕ್ ಇದ್ದರೇ ಅದರ ಒಂದು ಬದಿಯಲ್ಲಿ ಇರುವ ಪೈಪ್‌ಲೈನ್ ಮುಖಾಂತರ ಅವಶ್ಯವಿರುವಲ್ಲಿ ನೀರು ಸರಬರಾಜಾಗುತ್ತದೆ. ಅದರ ಪಕ್ಕದಲ್ಲೇ ಇನ್ನೊಂದು ಕಡೆಯಲ್ಲಿ ಮುಕ್ಕಾಲು ಇಂಚಿನ ಪಿವಿಸಿ ಪೈಪ್‌ಗಳನ್ನು ಅಳವಡಿಸಬೇಕು. ನೀರು ಸೂರ್ಯನ ಶಾಖದಿಂದಲೇ ಬಿಸಿಯಾಗಬೇಕಾದ್ದರಿಂದ ಅವಶ್ಯಕತೆಗೆ ತಕ್ಕಂತೆ ಆದರೆ ಕನಿಷ್ಠ ನಾಲ್ಕು ಲೆಂತ್ ಪಿವಿಸಿ ಪೈಪ್ ಅಳವಡಿಸಿ ಅದರ ಮೂಲಕವೇ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಿಬೇಕು. (ಚಿತ್ರದಲ್ಲಿ ಇರುವಂತೆ) ನಾಲ್ಕು ಲೆಂತ್ ಪೈಪ್ ಮರದ ನೆರಳು ಬೀಳದ ಕಡೆ ಮನೆಯ ಮೇಲ್ಛಾವಣಿಯಲ್ಲಿಯೇ ಇರಿಸಿ ನಂತರ ಅದೇ ಪೈಪ್‌ಲೈನ್ ಮುಂದುವರಿಸಿ ನಿಮಗೆ ಅಗತ್ಯವಿರುವಲ್ಲಿಗೆ ತಲುಪುವಷ್ಟು ದೂರಕ್ಕೆ ಅಳವಡಿಸಿಕೊಂಡರಾಯಿತು. ಹಂಚಿನ ಮನೆ ಇರುವವರು ಸೂರ್ಯನ ಬಿಸಿಲು ಹಾಗೂ ಎತ್ತರ ಪ್ರದೇಶವಿರುವಲ್ಲಿ ಇದನ್ನು ಅಳವಡಿಸಿಕೊಳ್ಳಬಹುದು. ಒಮ್ಮೆ ಅಳವಡಿಸಿಕೊಂಡರೇ, ಮುಂದಿನ ನಾಲ್ಕೈದು ವರ್ಷಗಳಿಗಂತೂ ತೊಂದರೆ ಇಲ್ಲ.

ಹೋಟೆಲ್ ಹಾಗೂ ಅಸ್ಪತ್ರೆಗಳಲ್ಲಿ ನಿರಂತರವಾಗಿ ಬಿಸಿನೀರಿನ ಅವಶ್ಯಕತೆ ಇರುವುದುರಿಂದ ಅವರ ಅಗತ್ಯಕ್ಕೆ ಅನುಗುಣವಾಗಿ ಮೇಲ್ಘಾವಣಿಯಲ್ಲಿ ಹೆಚ್ಚಿನ ಪೈಪ್ ಅಳವಡಿಸಿಕೊಂಡರೇ ಸರಳವಾಗಿ, ಕಡಿಮೆ ಖರ್ಚಿನಲ್ಲಿಯೇ ಬಿಸಿನೀರು ಪಡೆದುಕೊಳ್ಳಬಹುದು ಎನ್ನುತ್ತಾರೆ ದಿನೇಶ್ ಹೊಳ್ಳ. ಕುಂದಾಪ್ರ ಡಾಟ್ ಕಾಂ ವರದಿ.

ಒಟ್ಟಿನಲ್ಲಿ ಸುಲಭ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದರಿಂದ ನಮ್ಮ ಅಗತ್ಯವೂ ಈಡೇರುವುದಲ್ಲದೇ, ಪರಿಸರವೂ ಮಲಿನಮುಕ್ತವಾಗುವುದು. ಹೆಚ್ಚಾಗಿ ಪಾಕೆಟ್‌ನಲ್ಲಿರುವ ದುಡ್ಡೂ ಕೂಡ ಕಡಿಮೆ ವ್ಯಯವಾಗುವುದು.

[quote font_size=”16″ bgcolor=”#ffffff” arrow=”yes”]

ಆವಿಷ್ಕಾರಗಳೆಂದೇ ದಿನೇಶ್ ಹೊಳ್ಳರಿಗೆ ಪ್ರೀತಿ
ಸಾಲಿಗ್ರಾಮದ ನಿವಾಸಿಯಾದ ದಿನೇಶ್ ಸಿ. ಹೊಳ್ಳರದ್ದು ಆಸಕ್ತಿ ಭಿನ್ನವಾದದ್ದು ಮತ್ತು ಮೆಚ್ಚಬೇಕಾದ್ದು. ಟಿ.ವಿ ರಿಪೇರಿಯಿಂದ ಆರಂಭಗೊಂಡ ಅವರ ವೃತ್ತಿ ಬದುಕು ಇಂದು ಹಲವು ಮಜಲುಗಳಲ್ಲಿ ವಿಸ್ತರಿಸಿಕೊಂಡಿದೆ. ಹೊಸತನಗಳ ಬೆನ್ನೆತ್ತಿ ನಡೆಯುವ ಹೊಳ್ಳರು 2002ರ ಹೊತ್ತಿಗೆ ಕನ್ನಡದಲ್ಲಿ ಕಂಪ್ಯೂಟರ್ ಕಲಿಕೆ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದರು. ಕಂಪ್ಯೂಟರ್ ಕೋರ್ಸ್ ಮುಗಿಸಿ ಬರುವವರಿಗೆ ಕಂಪ್ಯೂಟರ್ ಬಳಕೆಯೇ ಸಲೀಸಲ್ಲದ ಹೊತ್ತಿನಲ್ಲಿ ಸ್ವತಃ ತನಗೇ ತಾನೇ ಗುರುವಾಗಿ ಯಾರ ಸಹಾಯವೂ ಇಲ್ಲದೇ ಇತರರೂ ಕಂಪ್ಯೂಟರ್ ಕಲಿಯಬಹುದಾದ ತಂತ್ರಾಂಶ ಅಭಿವೃದ್ಧಿ ಪಡಿಸಿದ್ದು ಅವರ ಹೆಚ್ಚುಗಾರಿಕೆಯೇ ಸರಿ.

ಇಷ್ಟಕ್ಕೆ ನಿಲ್ಲದೇ ಅವರ ಆಸಕ್ತಿ ಹೊರಳಿದ್ದು ವೆಬ್ ಡಿಸೈನಿಂಗ್ ಕ್ಷೇತ್ರದತ್ತ. ಖಾಸಗಿ ಕಂಪೆನಿಯೊಂದರಲ್ಲಿ ಕೆಲ ವರ್ಷಗಳ ಕಾಲ ಉದ್ಯೋಗದಲ್ಲಿದ್ದು ಬಳಿಕ ವೆಬ್ ಡಿಸೈನಿಂಗ್‌ನಲ್ಲಿ ತೊಡಗಿಸಿಕೊಂಡ ಹೊಳ್ಳರಿಗೆ ಇಂದು ವಿದೇಶಿ ಗ್ರಾಹಕರುಗಳಿಂದಲೇ ವೆಬ್‌ಸೈಟ್ ಅಭಿವೃದ್ಧಿ ಪಡಿಸಲು ಹೆಚ್ಚಿನ ಬೇಡಿಕೆ ಇರುವುದು ಅವರ ಕಾರ್ಯಕ್ಷಮತೆಗೆ ಹಿಡಿದ ಕನ್ನಡಿ. ಕಾಲಕ್ಕೆ ತಕ್ಕಂತೆ ಬದಲಾವಣೆ ಆಗುತ್ತಿರಬೇಕೆಂದು ಅವರು ನಿಲುವು. ಇದಕ್ಕೂ ಮೊದಲು ಕೆಲ ವರ್ಷ ಪೋಟೋಗ್ರಾಫರ್ ಆಗಿದ್ದರು. ಆಗಾಗ್ಗೆ ಅವರ ಕಂಪ್ಯೂಟರ್‌ನಲ್ಲಿ ಕ್ಯಾರಿಕೇಚರ್ ಮೂಡುತ್ತಿರುತ್ತದೆ. ಒಮ್ಮೊಮ್ಮೆ ಕವಿಯೂ ಆಗುತ್ತಾರೆ. ಹೀಗೆ ಅವರ ಹವ್ಯಾಸಗಳನ್ನು ಬದುಕಿನ ಭಾಗವಾಗಿಸಿಕೊಂಡು ಸಾಗಿದ ದೊಡ್ಡ ಪಟ್ಟಿಯೇ ದೊರೆಯುತ್ತದೆ.

ಸಾಲಿಗ್ರಾಮದ ಗಡಿಯಾರಕ್ಕೆ ಎಲ್ಲಿಲ್ಲದ ಬೇಡಿಕೆ
ದಿನೇಶ್ ಹೊಳ್ಳ ಮತ್ತೊಂದು ರಚನಾತ್ಮಕ ಕಾರ್ಯಗಳಲ್ಲಿ ಗಡಿಯಾರವೂ ಒಂದು. ಕಳೆದ ಒಂದು ವರ್ಷದ ಹಿಂದೆ ಆರಂಭಿಸಿದ ‘ಲೇಸರ್ ಎನ್‌ಗ್ರೇವಲ್ಡ್ ವುಡನ್ ಕ್ಲಾಕ್’ ಈಗ ಸಾಲಿಗ್ರಾಮದ ಗಡಿಯಾರ ಎಂದು ಪ್ರಸಿದ್ಧಿ ಪಡೆದಿದೆ. ಎಲ್ಲಿಯೂ ಪ್ರಚಾರ ಮಾಡದೇ ಆರಂಭಿಸಿದ ಮರದಿಂದ ತಯಾರಿಸುವ ಆಂಟಿಕ್ ಲುಕ್ ಇರುವ ಗಡಿಯಾರಕ್ಕೆ ದೇಶದ ಮೂಲೆ ಮೂಲೆಗಳಿಂದ ಬೇಡಿಕೆ ಇದೆ. ಮದುವೆ, ಹುಟ್ಟುಹಬ್ಬ ಮುಂತಾದ ಶುಭಸಮಾರಂಭಗಳಲ್ಲಿ ಉಡುಗೊರೆಯಾಗಿ ನೀಡಲು, ಶುಭಾಷಯ ಕೋರಲು ಸಾಲಿಗ್ರಾಮದ ಈ ಗಡಿಯಾರ ಇಂಡಿಯನ್ ಕ್ಲಾಕ್ ಆಗಿ ಎಲ್ಲಿಡೆಗೂ ತಲುಪುತ್ತಿದೆ. [/quote]

ಸಂಪರ್ಕ: ದಿನೇಶ್ ಸಿ. ಹೊಳ್ಳ, ಸಾಲಿಗ್ರಾಮ

Facebook: https://www.facebook.com/dinesh.c.holla
Saligrama Clocks: http://www.indianclock.in/
Web Designing: http://www.dinetmedia.net/

Exit mobile version