Kundapra.com ಕುಂದಾಪ್ರ ಡಾಟ್ ಕಾಂ

ನೂಜಾಡಿ – ಕುಂದಾಪುರ: ಒಂದೇ ಪರವಾನಿಗೆಯಲ್ಲಿ ಓಡುತ್ತಿದೆ ಆರು ಖಾಸಗಿ ಬಸ್ಸು!

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ನೂಜಾಡಿ – ಕುಂದಾಪುರ ಬಸ್ ಸಂಚಾರಕ್ಕೆ ಇರುವುದು ಒಂದೇ ಪರ್ಮಿಟ್, ಆದರೆ ಪರವಾನಿಗೆ ಇಲ್ಲದೆಯೇ ಈ ಮಾರ್ಗದಲ್ಲಿ ಓಡುತ್ತಿದೆ ಐದು ಖಾಸಗಿ ಬಸ್ಸು. ಆರ್.ಟಿ.ಓ ನಿಯಮವನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದರೂ ಈವರೆಗೂ ಸಂಬಂಧಪಟ್ಟ ಅಧಿಕಾರಿಗಳೂ ಗಮನ ಹರಿಸಿಲ್ಲ. ಹೆಚ್ಚು ಕಮ್ಮಿಯಾದರೆ ಬಸ್ಸಿನಲ್ಲಿ ಸಂಚರಿಸುವವರ ಜೀವಗಳಿಗೆ ಹೊಣೆಯಾರು ಎಂಬ ಈ ಭಾಗದ ಜನರ ಪ್ರಶ್ನೆಗೂ ಉತ್ತರ ದೊರೆತಿಲ್ಲ.

ನೂಜಾಡಿ ಕುಂದಾಪುರ ಕೆಲವು ವರ್ಷಗಳಿಂದ ಸಾರಿಗೆ ಸಂಪರ್ಕ ಸಮಸ್ಯೆಯಿದ್ದು, ಇರುವ ಬಸ್‌ನಲ್ಲಿ ನಿಯಮಕ್ಕೂ ಮೀರಿದ ಜನರನ್ನು ತುಂಬಲಾಗುತ್ತದೆ. ಶಾಲಾ ಮಕ್ಕಳು ಬಸ್ಸಿನಲ್ಲಿ ನೇತಾಡಿಕೊಂಡು ಹೋಗಬೇಕಾದ ಸ್ಥಿತಿ. ರಸ್ತೆ ಮಧ್ಯೆ ಪೊಲೀಸರು ನೇತಾಡುಕೊಂಡು ಹೋಗುವ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಳ್ಳುತ್ತಾರೆ. ಆದರೆ ಶಾಲಾ ಅವಧಿಯಲ್ಲಿ ಬಸ್ ಹೆಚ್ಚಿಸಲು ಯಾರೊಬ್ಬರೂ ಕ್ರಮ ಕೈಗೊಳ್ಳುತ್ತಿಲ್ಲ. ಕುಂದಾಪ್ರ ಡಾಟ್ ಕಾಂ ವರದಿ.

ನೂಜಾಡಿ ಕುಂದಾಪುರ ಮಾರ್ಗವಾಗಿ ಸಂಚಾರಕ್ಕೆ ಬಸ್ ಬಿಡುವಂತೆ ಈ ಹಿಂದೆ ಹೋರಾಟ ಮಾಡಿದ್ದರೂ ಪ್ರಯೋಜನವಾಗಿಲ್ಲ. ಕುಂದಾಪುರ ನೂಜಾಡಿ ಮಾರ್ಗದಲ್ಲಿ ರಾಜ್ಯ ಸಾರಿಗೆ ವಾಹನ ಸಂಚಾರಕ್ಕೆ ಮೂರು ಪರವಾನಿಗೆ ಇದ್ದರೂ, ಟೈಮ್ ಫಿಕ್ಸ್ ಮಾಡಿ ಬಸ್ ಓಡಿಸುತ್ತಿಲ್ಲ. ಸಂಜೆ ಮಾತ್ರ ಕೆಎಸ್‌ಆರ್‌ಟಿಸಿ ಬಸ್ ನೂಜಾಡಿಗೆ ಬರುತ್ತಿದ್ದು, ಇದರಿಂದ ಶಾಲಾ ಮಕ್ಕಳಿಗೆ ಅನುಕೂಲ ಆಗದು. ಶಾಲಾ ಕಾಲೇಜು ಆರಂಭ ಹಾಗೂ ಬಿಡುವ ಸಮಯಕ್ಕೆ ಸರಿಯಾಗಿ ರಾಜ್ಯ ಸಾರಿಗೆ ಬಸ್ ಬಿಡಬೇಕು ಎಂಬುದು ಗ್ರಾಮಸ್ಥರೊಬ್ಬರ ಆಗ್ರಹ.

ಪರವಾನಿಗೆ ಇಲ್ಲದ ಬಸ್ ಸಂಚಾರದ ಬಗ್ಗೆ ಗ್ರಾಮ ಪಂಚಾಯತ್ ಗಮನಕ್ಕೆ ಬಂದಿದ್ದು, ಗ್ರಾಮ ಸಭೆಯಲ್ಲಿ ನಿರ್ಣಯ ಮಂಡಿಸಿ, ಸಂಬಂಧಪಟ್ಟ ಇಲಾಖೆಗೆ ವರದಿ ಸಲ್ಲಿಸಲಾಗಿದೆ. ರಾಜ್ಯ ಸಾರಿಗೆ ಬಸ್ ಸಂಚಾರಕ್ಕೆ ಟೈಮ್ ಫಿಕ್ಸ್ ಮಾಡಿ ಓಡಿಸುವಂತೆ ಗ್ರಾಮ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದ್ದು ಸಾರಿಗೆ ಇಲಾಖೆಗೆ ಕಳುಹಿಸಲಾಗಿದೆ. – ಮಧುಸೂಧನ ಪ್ರಸಾದ್ ಹಕ್ಲಾಡಿ ಗ್ರಾ.ಪಂ. ಪಿಡಿಓ

Exit mobile version