Kundapra.com ಕುಂದಾಪ್ರ ಡಾಟ್ ಕಾಂ

ಸಾಲಿಗ್ರಾಮ ಪಟ್ಟಣ ಪಂಚಾಯಿತಿಯಲ್ಲಿ ಸಭೆಯ ಶಿಷ್ಟಾಚಾರ ಮರೆತು ವೈಯಕ್ತಿಕ ವಾಗ್ವಾದ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಮಾಸಿಕ ಸಭೆಯು ಅಕ್ಷರಶಃ ಹಾದಿ ರಂಪವಾಗಿ ಮಾರ್ಪಟ್ಟಿತ್ತು. ಹಿಂದಿನಿಂದಲೂ ವೈಯಕ್ತಿಕವಾದ ವಿಚಾರಗಳ ಚರ್ಚೆಗಳಿಗೆ ಸಾಕ್ಷಿಯಾಗುತ್ತಿದ್ದ ಮಾಸಿಕ ಸಭೆಯಲ್ಲಿ, ಮಂಗಳವಾರದಂದು ಸದಸ್ಯರು ತಮ್ಮ ಎಲ್ಲೆ ಮೀರಿ ವರ್ತಿಸಿದ್ದರು. ಸಾರ್ವಜನಿಕರ ಸಮಸ್ಯೆಗಳಿಗೆ ಧ್ವನಿಯಾಗಬೇಕಿದ್ದ ಸಭೆಯಲ್ಲಿ ಮಾಜಿ ಉಪಾಧ್ಯಕ್ಷೆ ನೀಡಿದ ಮಹಿಳಾ ದೌರ್ಜನ್ಯದ ದೂರಿನ ವಿಚಾರ ಪ್ರಸ್ತಾಪವಾಗಿ ಸಾಮಾನ್ಯ ಸಬೇ ರಣರಂಗವಾಯಿತು. ಹಿರಿಯ ಸದಸ್ಯರು ಸಭೆಯನ್ನು ಶಾಂತಗೊಳಿಸುವ ಪ್ರಯತ್ನ ಮಾಡಿದರೂ, ವೈಯಕ್ತಿಕ ಕೆಸರೆರಚಾಟದಲ್ಲಿಯೇ ಸಭೆ ಮುಂದುವರಿತು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯವರನ್ನು ಮೂಖ ಪ್ರೇಕ್ಷಕರನ್ನಾಗಿಸಿತು.

ಮಧ್ಯಾಹ್ನ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಸುಮತಿ ನಾಯಿರಿ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಸಭೆಯ ಪ್ರಾರಂಭದಲ್ಲಿ ಪಟ್ಟಣ ಪಂಚಾಯಿತಿಯಲ್ಲಿ ಹೊಂಡ, ಕೆಸರು ತುಂಬಿರುವ ರಸ್ತೆಗಳಿಗೆ ಸಭೆಯ ಗಮನಕ್ಕೆ ತರದೆ, ಸದಸ್ಯರ ಗಮನಕ್ಕೂ ತರದೆ ಮಣ್ಣು ತುಂಬಿಸುವ ಕಾಮಗಾರಿ ನಡೆಸಿ ಘಟನೋತ್ತರ ಮಂಜೂರಾತಿ ಪಡೆಯುವ ವಿಚಾರ ಪ್ರಸ್ತಾಪವಾಯಿತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹಿರಿಯ ಸದಸ್ಯ ಶ್ರೀನಿವಾಸ ಅಮೀನ್ ಅವರು ಸಾಲಿಗ್ರಾಮ ಪಟ್ಟಣ ಪಂಚಾಯಿತಿಯಲ್ಲಿ ಮಣ್ಣು ಹಾಕುವ ಗುತ್ತಿಗೆ ಪಡೆದವರು ಕೂಡ ರಾಜಕೀಯ ಮಾಡುವ ವ್ಯವಸ್ಥೆ ಜಾರಿಗೆ ಬಂದಿದೆ. ಸಭೆ ಬಿಡಿ, ಸದಸ್ಯರ ಗಮನಕ್ಕೂ ತರದೆ ರಸ್ತೆಗಳಿಗೆ ಮಣ್ಣು ಹಾಕುವ ಕಾರ್ಯಕ್ಕೆ ಹಣ ನೀಡಲಾಗಿದೆ. ಇದು ಸರಿಯಲ್ಲ ಕೇವಲ ಓರ್ವ ವ್ಯಕ್ತಿಯ ನಿರ್ಧಾರವೇ ಆಗಿದ್ದರೆ ಸದಸ್ಯರು ಯಾಕೆ ಸಭೆ ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಾಧಿಕಾರಿಯವರು ಮಾತನಾಡಿ, ಅಧ್ಯಕ್ಷರ ಅನುಮತಿಯ ಮೇರೆ ಮಣ್ಣು ಹಾಕಿಸಲಾಗಿದೆ ಎಂದರು. ಇದರಿಂದ ಮತ್ತಷ್ಟು ಕುಪಿತರಾದ ಶ್ರೀನಿವಾಸ ಅಮೀನ್ ಅವರು, ಅಧ್ಯಕ್ಷರಿಗೆ ಕರೆ ಮಾಡುವ ಒಂದು ಸೌಜನ್ಯವು ಇಲ್ಲವಾಗಿದೆ. ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ. ಮಣ್ಣು ಹಾಕುವ ವಿಚಾರವಾಗಿ ಸದಸ್ಯರ ಗಮನಕ್ಕೆ ತರದಿರುವುದು ನೋಡಿದರೆ, ಅಲ್ಲಿ ಅಧ್ಯಕ್ಷರು ಭೃಷ್ಠಾಚಾರ ಮಾಡಿದ್ದಾರೆ ಎನ್ನುವ ಅನುಮಾನ ಮೂಡುತ್ತಿದೆ ಎಂದರು. ಇದೇ ವಿಚಾರವಾಗಿ ಅಧ್ಯಕ್ಷರು ಕೆಂಡಾಮಂಡಲವಾಗಿ ಅಧ್ಯಕ್ಷರೆನ್ನುವ ಸೌಜನ್ಯ ಮರೆತು ವಾಗ್ವಾದ ಮಾಡಿದರು. ಇದು ಸಭೆಯ ಸ್ವಾಸ್ಥ್ಯ ಕೆಡಲು ಕಾರಣವಾಗಿತು. ಹಿರಿಯ ಸದಸ್ಯ ಶ್ರೀನಿವಾಸ ಅಮೀನ್ ಜೊತೆಗೆ, ಶಿವ ಪೂಜಾರಿ, ರತ್ನಾ ಗಾಣಿಗ, ಕುಸುಮ ಬಸವ ಪೂಜಾರಿ, ಅಚ್ಚುತ ಪೂಜಾರಿ, ಮಹಾಬಳ ಮಡಿವಾಳ ಮತ್ತು ದಿನೇಶ್ ಬಂಗೇರ ಎದ್ದು ನಿಂತು ಅಧ್ಯಕ್ಷರು ಸೌಜನ್ಯವಾಗಿ ವರ್ತಿಸಬೇಕು, ಸರ್ವಾಧಿಕಾರಿ ಧೋರಣೆ ಬಿಡಬೇಕು ಎಂದು ಪಟ್ಟು ಹಿಡಿದು, ವಾಗ್ವಾದ ನಡೆಸಿದರು. ಬಳಿಕ ಮಾಜಿ ಅಧ್ಯಕ್ಷ ಕಾರ್ಕಡ ರಾಜು ಪೂಜಾರಿ, ಭೋಜ ಪೂಜಾರಿ ಮತ್ತು ಕರುಣಾಕರ ಪೂಜಾರಿ ಮತ್ತು ಮುಖ್ಯಾಧಿಕಾರಿಯವರು ಸಭೆಯನ್ನು ಶಾಂತಗೊಳಿಸಿದರು.

ಇದೇ ವಿಚಾರವಾಗಿ ಚರ್ಚೆ ನಡೆಯುತ್ತಿರುವಾಗ ಸದಸ್ಯೆ ರತ್ನಾ ಗಾಣಿಗ ಅವರು ಮಾಜಿ ಉಪಾಧ್ಯಕ್ಷೆ ಸುಲತಾ ಹೆಗ್ಡೆ ಅವರ ಮೇಲೆ ವೈಯಕ್ತಿಕವಾಗಿ ಹರಿಹಾಯ್ದರು. ಉಪಾಧ್ಯಕ್ಷೆಯವರು ರತ್ನಾ ಗಾಣಿಗ ಅವರ ಪತಿ ನಾಗರಾಜ ಗಾಣಿಗ ಅವರ ಮೇಲೆ ನೀಡಿದ ಮಹಿಳಾ ದೌರ್ಜನ್ಯ ಪ್ರಕರಣ ಹಿಡಿದು, ನನ್ನ ಗಂಡ ನಿನಗೆ ಏನು ಮಾಡಿದರು, ನನ್ನಲ್ಲಿ ಹೇಳಬಹುದಿತ್ತಲ್ಲಾ, ಪೊಲೀಸ್ ದೂರು ನೀಡುವ ಅಗತ್ಯತೆ ಏನಿತ್ತು ಎಂದು ಏಕವಚನದಲ್ಲಿ ಕೇಳಿದರು. ಅದಕ್ಕೆ ಸುಲತಾ ಹೆಗ್ಡೆ ಅವರು ನಿಮ್ಮ ಮನೆಯವರು ಸಾರ್ವಜನಿಕವಾಗಿ ನನ್ನೊಂದಿಗೆ ಹಿಂದಿನಿಂದಲೂ ಅಸಭ್ಯವಾಗಿ ವರ್ತಿಸುತ್ತಿದ್ದರು. ನನಗು ತಾಳ್ಮೆ ಇದೆ ನನಗು ಹೇಳುವವರು ಇದ್ದಾರೆ. ನನ್ನನ್ನು ನಿಂದಿಸಿ ಫೋಟೊ ತೆಗೆದಿದ್ದಾರೆ ಇದು ಸರಿಯೇ ಎಂದು ಪ್ರಶ್ನಿಸಿದರು. ಇದಕ್ಕೆ ರತ್ನ ಗಾಣಿಗ ಮಾತನಾಡಿ, ಅಸಭ್ಯವಾಗಿ ಚಿತ್ರ ತೆಗೆದಿಲ್ಲ, ದೂರು ನೀಡುವ ಮೊದಲು ನನಗೆ ತಿಳಿಸಬಹುದಿತ್ತಲ್ಲ, ನಾವು ಹಿಂದೆ ನಿಮಗೆ ಮಾಡಿದ ಸಹಾಯ ನೆನಪಿಸಿಕೊಳ್ಳಬೇಕಿತ್ತು ಎಂದರು. ಇದೇ ವಿಚಾರವಾಗಿ ಸಭೆಯ ಶಿಷ್ಟಾಚಾರ ಮರೆತು ವಾಗ್ವಾದ ನಡೆಯಿತು. ಬಳಿಕ ರಾಜು ಪೂಜಾರಿಯವರು ಮಾತನಾಡಿ, ಸುಲತಾ ಹೆಗ್ಡೆ ಅವರು ಹಿಂದೆ ಕೂಡ ನಾಗರಾಜ ಗಾಣಿಗರು ತನ್ನೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ಕುರಿತು ತಿಳಿಸಿದ್ದರು, ನಾನು ಈ ಬಗ್ಗೆ ಗಮನಿಸಿದ್ದೇನೆ ರಾಜಕೀಯ ಭಿನ್ನಾಭಿಪ್ರಾಯದ ಹಿನ್ನಲೆಯಲ್ಲಿ ಈ ರೀತಿ ನಡೆದಿರಬಹುದು ಎಂದು ಸುಮ್ಮನಿರಲು ಅವರಿಗೆ ತಿಳಿಸಿದ್ದೆ. ಆದರೆ ಈ ಘಟನೆಯಾದಗ ನಾನು ಸ್ಥಳದಲ್ಲಿರಿರಲಿಲ್ಲ ಎಂದರು. ಇದಕ್ಕೆ ಧ್ವನಿಗೂಡಿಸಿದ ಶ್ರೀನಿವಾಸ ಅಮೀನ್ ಅವರು ಈ ರೀತಿಯ ಪ್ರಕರಣಗಳು ಮರುಕಳಿಸುವುದರಿಂದ ಸಾರ್ವಜನಿಕ ವಲಯದಲ್ಲಿ ಸದಸ್ಯಗಿರುವ ಮಾರ್ಯಾದೆ ಧಕ್ಕೆಯಾಗುತ್ತಿದೆ ಎಂದರು. ರತ್ನಾ ಗಾಣಿಗ ಮಾತನಾಡಿ, ನನ್ನ ಗಂಡ ಮಾಹಿತಿ ಹಕ್ಕುಯಡಿ ಅರ್ಜಿ ಸಲ್ಲಿಸುವುದು ನಿಮಗೆ ಕಣ್ಣಿಗೆ ಬಿದ್ದಿದೆ ಅದಕ್ಕೆ ಹೀಗೆ ಆಗಿದೆ ನೀವೇಲ್ಲಾ ಒಂದೆ ಎಂದರು. ಇದಕ್ಕೆ ಉತ್ತರಿಸಿದ ರಾಜು ಪೂಜಾರಿಯವರು ನಾಗರಾಜ ಗಾಣಿಗ ಅವರು ಪ್ರತಿ ವಾರ್ಡ್‌ನ ಕಾಮಗಾರಿ ಸೇರಿದಂತೆ ಎಲ್ಲಾ ವಿಚಾರಗಳಲ್ಲಿ ಮೂಗು ತೂರಿಸುವ ಕೆಲಸ ಮಾಡುತ್ತಿದ್ದಾರೆ, ಇದು ಸರಿಯೇ ಆಲೋಚಿಸಿ. ಇದು ಪೂರ್ವಾಗ್ರಹ ಪೀಡಿತರಾಗಿ ಮಾಡಿದ ದೂರಲ್ಲ ಈ ಬಗ್ಗೆ ನೀವು ನ್ಯಾಯಾಲಯದಲ್ಲಿ ತೀರ್ಮಾನ ಮಾಡಿಕೊಳ್ಳಿ, ವೈಯಕ್ತಿಕ ವಿಚಾರವಾಗಿ ಚರ್ಚೆ ಮಾಡಿ ಸಭೆಯ ಅಮೂಲ್ಯ ಸಮಯ ಹಾಳು ಮಾಡಬೇಡಿ ಎಂದರು. ಇಷ್ಟಾದರು ವೈಯಕ್ತಿಕ ಕೆಸರೇರಚಾಟ ಮುಂದುವರಿಯಿತು.

ಸಭೆ ಮುಂದುವರಿದು ಘನತ್ಯಾಜ್ಯ ವಿಲೇವಾರಿ ವಿಚಾರ ಪ್ರಸ್ತಾಪವಾದಾಗ ಶ್ರೀನಿವಾಸ ಅಮೀನ್ ಮಾತನಾಡಿ ಹಿಂದೆ ಇದೇ ಅಧ್ಯಕ್ಷರು ಸದಸ್ಯರಾಗಿದ್ದಾಗ ಕಸ ವಿಲೇವಾರಿ ವಿಚಾರದಲ್ಲಿ ಅಧಿಕ ಹಣ ನೀಡಲಾಗುತ್ತಿದೆ ಎಂದು ಧ್ವನಿ ಎತ್ತಿದ್ದರು. ಆದರೆ ಈಗ ಘನತ್ಯಾಜ್ಯ ವಿಲೇವಾರಿಗೆ ಸುಮಾರು ೮೫ ಸಾವಿರಕ್ಕೂ ಅಧಿಕ ಹಣ ಅಂದರೆ ಮೊದಲಿಗಿಂತ ಜಾಸ್ತಿ ಹಣ ನೀಡುತ್ತಿದ್ದಾರೆ ಇದು ಈಗ ಸಮ್ಮತೆವೇ ಎಂದು ಪ್ರಶ್ನಿಸಿದರು. ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು. ಉಳಿದಂತೆ ಪಟ್ಟಣ ಪಂಚಾಯಿತಿಯಲ್ಲಿರುವ ಅವಧಿ ಮೀರಿದ ಡೆಪಾಸಿಟ್‌ಗಳನ್ನು ಪಟ್ಟಣ ಪಂಚಾಯಿತಿ ನಿಧಿಗೆ ಹೊಂದಾಣಿಕೆ ಮಾಡುವ ಕುರಿತು, ಸಾಲಿಗ್ರಾಮ ಮೀನು ಮಾರುಕಟ್ಟೆ ನಿರ್ಮಾಣ ಕುರಿತು, ಅಂಗನವಾಡಿಗೆ ವಿದ್ಯುತ್‌ದೀಪ, ಅನಧಿಕೃತ ಅಂಗಡಿಗಳಿಂದ ಆಗುತ್ತಿರುವ ಕಸ ವಿಲೇವಾರಿ ಸಮಸ್ಯೆ ಮೊದಲಾದ ವಿಚಾರಗಳ ಕುರಿತು ಚರ್ಚೆ ನಡೆಯಿತು.

ಮುಖ್ಯಾಧಿಕಾರಿ ಶ್ರೀಪಾದ್ ಭಟ್, ಉಪಾಧ್ಯಕ್ಷ ಉದಯ ಪೂಜಾರಿ ಮತ್ತು . ರಾಘವೇಂದ್ರ ಗಾಣಿಗ ಹೊರತುಪಡಿಸಿ ಉಳಿದ ಸದಸ್ಯರು ಉಪಸ್ಥಿತರಿದ್ದರು.

Exit mobile version