Kundapra.com ಕುಂದಾಪ್ರ ಡಾಟ್ ಕಾಂ

ಎನ್‌ಎಸ್‌ಯುಐ ವಿದ್ಯಾರ್ಥಿ ಸಂಘಟನೆ ಜಾತಿ, ಧರ್ಮದ ಭೇದವಿಲ್ಲ: ಸಚಿವ ಮಧ್ವರಾಜ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜಾತಿ, ಧರ್ಮ, ಲಿಂಗ ಭೇಧಗಳಿಲ್ಲದೇ ಎಲ್ಲರೂ ಸಮಾನರು ಎಂಬ ನೆಲೆಯಲ್ಲಿ ಸಂವಿಧಾನದ ಆಶಯದಂತೆ ನಡೆಯುತ್ತಿರುವ ಸಂಘಟನೆಗಳಲ್ಲಿ ನ್ಯಾಶನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾ ಅಗ್ರಸ್ಥಾನದಲ್ಲಿದೆ ಎಂದು ಮೀನುಗಾರಿಕಾ, ಯುವಜನ ಸೇವೆ, ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಇಲ್ಲಿನ ರಾಜರಾಜೇಶ್ವರಿ ಸಭಾಭವನದಲ್ಲಿ ಬೈಂದೂರು ಎನ್‌ಎಸ್‌ಯುಐ ಘಟಕದ ಆಶ್ರಯದಲ್ಲಿ ಜರುಗಿದ ವಿದ್ಯಾರ್ಥಿ ಸಮಾವೇಶ ಹಾಗೂ ಸಾಂಸ್ಕೃತಿಕ ವೈಭವ ಉದ್ಘಾಟಿಸಿ ಮಾತನಾಡಿ ಜಾತಿ, ಧರ್ಮ, ಭಾಷೆ ಎಂಬ ಹೆಸರಿನಲ್ಲಿ ಕೆಲವು ಸಂಘಟನೆಗಳು ದೇಶ ವಿಭಜಿಸುತ್ತಿರುವುದಲ್ಲದೇ ವಿದ್ಯಾರ್ಥಿಗಳನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಆದರೆ ಎನ್‌ಎಸ್‌ಯುಐ ಐಕ್ಯತೆಯಿಂದ ಕಾರ್ಯನಿರ್ವಹಿಸಿ ವಿದ್ಯಾರ್ಥಿಗಳನ್ನು ಭವಿಷ್ಯದ ನಾಯಕರನ್ನಾಗಿಸುತ್ತಿದೆ ಎಂದರು.

ರಾಜ್ಯ ಎನ್‌ಎಸ್‌ಯುಐ ಪ್ರಧಾನ ಕಾರ್ಯದರ್ಶಿ ಚೇತನ್ ಕೆ. ಅಧ್ಯಕ್ಷತೆವಹಿಸಿದ್ದರು. ಶಾಸಕ ಕೆ. ಗೋಪಾಲ ಪೂಜಾರಿ ಸಂಘಟನೆಯ ಪದಾಧಿಕಾರಿಗಳಿಗೆ ಶುಭಹಾರೈಸಿದರು. ಬೈಂದೂರು ಬ್ಲಾಕ್ ಅಧ್ಯಕ್ಷ ಎಸ್. ಮದನ್ ಕುಮಾರ್, ವಂಡ್ಸೆ ಬ್ಲಾಕ್ ಅಧ್ಯಕ್ಷ ಸಂಪೀಗೇಡಿ ಸಂಜೀವ ಶೆಟ್ಟಿ, ಜಿಪಂ ಸದಸ್ಯೆ ಗೌರಿ ದೇವಾಡಿಗ, ತಾಪಂ ಸದಸ್ಯ ರಾಜು ದೇವಾಡಿಗ ತ್ರಾಸಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್. ರಾಜು ಪೂಜಾರಿ, ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್ ಶೆಟ್ಟಿ, ಕೆಪಿಸಿಸಿ ಸದಸ್ಯ ಬಿ. ರಘುರಾಮ ಶೆಟ್ಟಿ, ಕಾರ್ಯದರ್ಶಿ ಹರೀಶ್ ಕಿಣಿ, ಎನ್‌ಎಸ್‌ಯುಐ ಸಂಚಾಲಕ ಮಣಿಕಂಠ, ಎನ್‌ಎಸ್‌ಯುಐ ಬೈಂದೂರು ಘಟಕದ ಅಧ್ಯಕ್ಷ ಪ್ರದೀಪ ಕುಮಾರ್, ವಂಡ್ಸೆ ಘಟಕದ ಅಧ್ಯಕ್ಷ ಮನೋಹರ್, ಶಂಕರನಾರಾಯಣ ಘಟಕದ ಅಧ್ಯಕ್ಷ ಜತೀನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ರೋಜಾ ಸ್ವಾಗತಿಸಿ ನಿರೂಪಿಸಿದರು. ಸಂಪ್ರೀತಾ ವಂದಿಸಿದರು. ನಂತರ ವಿದ್ಯಾಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Exit mobile version