Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಹುತಾತ್ಮ ಯೋಧರಿಗೆ ಮೊಂಬತ್ತಿ ಬೆಳಗಿ ನಮನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಭಾರತ ದೇಶ ಎಂದಿಗೂ ಶಾಂತಿ ಬಯಸುತ್ತದೆ. ಆದರೆ ಪಾಕಿಸ್ತಾನದ ಭಯೋತ್ಪಾದರು ದೇಶ ಶಾಂತಿ ಕದಡುವ ಕೆಲಸಕ್ಕೆ ಮುಂದಾಗಿದ್ದಾರೆ. ಸೈನಿಕರ ನಿದ್ರೆಯಲ್ಲಿದ್ದಾಗ ಅವರ ಮೇಲೆ ದಾಳಿ ನಡೆಸಿ 18 ವೀರ ಸೈನಿಕರ ಸಾವಿಗೆ ಕಾರಣರಾದ ಕೃತ್ಯ ಖಂಡನೀಯವಾದುದು ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಬಿ.ಎಂ ಸುಕುಮಾರ ಶೆಟ್ಟಿ ಹೇಳಿದರು.

ಅವರು ಬೈಂದೂರು ಬಿಜೆಪಿ ಯುವಮೋರ್ಚಾ ವತಿಯಿಂದ ಇಲ್ಲಿನ ಬೈಪಾಸ್ ಬಳಿ ಆಯೋಜಿಸಲಾಗಿದ್ದ ‘ಯೋಧರಿಗೆ ನಮನ’ ಕಾರ್ಯಕ್ರಮದಲ್ಲಿ ಹುತಾತ್ಮ ಯೋಧನಿಗೆ ಪುಷ್ಪಾರ್ಚನೆಗೈದು, ಮೊಂಬತ್ತಿ ಬೆಳಗಿ ಮಾತನಾಡಿದರು.

ಬೈಂದೂರು ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು ಮಾತನಾಡಿ ನಮ್ಮ ದೇಶದ ಬುದ್ಧಿಜೀವಿಗಳಿಗೆ ದೇಶದ ಗಡಿಕಾಯ್ದು ದೇಶಕ್ಕಾಗಿಯೇ ವೀರ ಮರಣವನ್ನಪ್ಪುವ ಸೈನಿಕರಿಗಿಂತ ದೇಶದೊಳಗಿದ್ದುಕೊಂಡು ಐಕ್ಯತೆ ಹಾಗೂ ಸಾಮರಸ್ಯಕ್ಕೆ ಭಂಗ ತರುವವರ ಮೇಲೆಗೆ ಅನುಕಂಪ ಜಾಸ್ತಿಯಾಗುತ್ತಿದೆ. ಇದು ಖಂಡನೀಯವಾದುದು. ದೇಶದ ಒಗ್ಗಟ್ಟನ್ನು ಒಡೆಯುವ ಹುನ್ನಾರವನ್ನು ನಾವೆಲ್ಲರೂ ಒಕ್ಕೊರಲಿನಿಂದ ವಿರೋಧಿಸಬೇಕಿದೆ ಎಂದರು.

ಬೈಂದೂರು ಬಿಜೆಪಿ ಮಾಜಿ ಅಧ್ಯಕ್ಷ ಬಿ.ಎಸ್. ಸುರೇಶ್ ಶೆಟ್ಟಿ ಮಾತನಾಡಿ, ದೇಶದ ರಕ್ಷಣೆಗಾಗಿ ಸದಾ ಸಿದ್ಧರಿರುವ ಸೈನಿಕರ ಮೇಲೆ ಮಲಗಿದ್ದಾಗ ದಾಳಿ ನಡೆಸಿದ್ದು ಪಾಕಿಸ್ತಾನದ ಹೇಡಿತನವನ್ನು ಜಗಜ್ಜಾಹಿರುಗೊಳಿಸಿದೆ. ಜಗತ್ತಿನ ಎಲ್ಲಾ ರಾಷ್ಟ್ರಗಳು ಪಾಕಿಸ್ತಾನದ ಈ ಹಿನಾಯ ಕೃತ್ಯವನ್ನು ಖಂಡಿಸಿವೆ ಎಂದರು.

ಜಿ.ಪಂ ಸದಸ್ಯ ಬಾಬು ಶೆಟ್ಟಿ, ಬಿಜೆಪಿ ರಾಜ್ಯ ಪರಿಷತ್ ಸದಸ್ಯ ರಾಘವೇಂದ್ರ ಮೊಗವೀರ, ಚಂದ್ರಯ್ಯ ಆಚಾರ್, ವಿಕ್ರಮ್ ಪೂಜಾರಿ, ಸುಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಬೈಂದೂರು ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಉಪ್ಪುಂದ ಸ್ವಾಗತಿಸಿ ಪ್ರಸ್ತಾವನೆಗೈದು, ನಮಗಾಗಿ ಪ್ರಾಣತ್ಯಾಗ ಮಾಡಿ ವೀರಯೋಧರನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಎಲ್ಲವನ್ನೂ ತೊರೆದು ದೇಶ ಸೇವೆಯಲ್ಲಿ ತೊಡಗಿಕೊಳ್ಳುವ ಸೈನಿಕರ ಬೆಂಬಲಕ್ಕೆ ನಿಲ್ಲವು ಮೂಲಕ ಅವರ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಕೆಲಸಕ್ಕೆ ಮುಂದಾಗೋಣ. ಅವರ ತ್ಯಾಗ ಬಲಿದಾನಗಳನ್ನು ಸ್ಮರಿಸೋಣ ಎಂದರು. ಬೈಂದೂರು ಬ್ಲಾಕ್ ಬಿಜೆಪಿ ಕಾರ್ಯದರ್ಶಿ ದೀಪಕ್‌ಕುಮಾರ್ ಶೆಟ್ಟಿ ವಂದಿಸಿದರು. ಕಾರ್ಯಕ್ರಮದಲ್ಲಿ ೧೫೦ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು/ಕುಂದಾಪ್ರ ಡಾಟ್ ಕಾಂ ಸುದ್ದಿ/

Exit mobile version