Kundapra.com ಕುಂದಾಪ್ರ ಡಾಟ್ ಕಾಂ

ಕುಸುಮಾ ಫೌಂಡೇಶನ್ ‘ಕುಸುಮಾಂಜಲಿ 2016’ ಸಾಂಸ್ಕೃತಿಕ ಸಂಜೆ, ಪ್ರಶಸ್ತಿ ಪ್ರದಾನ

ಅಂತರಾಷ್ಟ್ರೀಯ ಸಮುದಾಯದೊಂದಿಗೆ ಸ್ವರ್ಧಿಸುವ ಜೊತೆಗೆ ಅಸ್ಮಿತೆ-ಸಾಂಸ್ಕತಿಕ ನೆಲೆಗಳೂ ಗಟ್ಟಿಗೊಳ್ಳಬೇಕಿದೆ: ಪೆರ್ಲ
ನೀರನ್ನು ಸಂರಕ್ಷಿಸದಿದ್ದರೆ ಜಲಕ್ಷಾಮದ ದಿನಗಳು ದೂರವಿಲ್ಲ: ಶ್ರೀಪಡ್ರೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಂದು ಪ್ರಪಂಚದ ಜನರ ಜೊತೆಗೆ ಸ್ವರ್ಧಿಸಬೇಕಾದ ದಿನಗಳು ಬಂದಿವೆ. ಕಲಿಕೆ ಎಂಬುದು ಶಾಲೆಯ ಪಾಠ-ಪಠ್ಯಗಳಿಗಷ್ಟೇ ಸೀಮಿತವಾಗಿರದೇ ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ ರಂಗದಲ್ಲಿ ಪ್ರಬಲವಾಗಿ ಬೆಳೆಯುವಂತೆ ಮಾಡಬೇಕಿದ್ದು, ನಮ್ಮ ಅಸ್ಮಿತೆ ಹಾಗೂ ಮೂಲ ಸಂಸ್ಕೃತಿಯ ನೆಲೆಗಳನ್ನು ಮರೆಯದೇ ಮುನ್ನಡೆಯಬೇಕಿದೆ ಎಂದು ಮಂಗಳೂರು ಆಕಾಶವಾಣಿ ನಿರ್ದೇಶಕ, ಸಾಹಿತಿ ಡಾ. ವಸಂತಕುಮಾರ್ ಪೆರ್ಲ ಹೇಳಿದರು.

ಅವರು ಕುಸುಮಾ ಫೌಂಡೇಶನ್ ಆಶ್ರಯದಲ್ಲಿ ನಾಗೂರಿನ ಕುಸುಮಾ ಗ್ರೂಪ್ ಆವರಣದಲ್ಲಿ ಜರುಗಿದ ‘ಕುಸುಮಾಂಜಲಿ 2016’ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿ ಜನಪದದಲ್ಲಿ ನಡೆಯುತ್ತಿದ್ದ ಗ್ರಾಮೋತ್ಸವ, ಊರ ಜಾತ್ರೆಗಳು ಸಾಂಸ್ಕೃತಿಕ, ಧಾರ್ಮಿಕ, ಕೃಷಿಪರ ಎಚ್ಚರವನ್ನು ಉಂಟು ಮಾಡುತ್ತಿದ್ದರೇ, ಕರಾವಳಿ ಜಿಲ್ಲೆಗಳಲ್ಲಿ ಶೈಕ್ಷಣಿಕ ಹಾಗೂ ಸಾಹಿತ್ತಿಕವಾದ ಆಧುನಿಕ ಸಾಂಸ್ಕೃತಿಕ ಎಚ್ಚರ ಉಂಟಾಗುತ್ತಿದೆ ಎಂದರು.

ತಾಲೂಕು ಮಟ್ಟದಲ್ಲಿ ವಿದ್ಯಾರ್ಥಿಗಳು ಸುಂದರ, ಸುಲಲಿತವಾಗಿ, ಮೇರುಕಲಾವಿದರ ಗಾಯನದ ಪ್ರಸ್ತುತಿಗೆ ಎರಡಿಲ್ಲದಂತೆ ಹಾಡಿದರುವುದು ಅವರಿಗಿರುವ ಉಜ್ವಲ ಭವಿಷ್ಯವನ್ನು ತೋರ್ಪಡಿಸುತ್ತಿದೆ. ಅದನ್ನು ಪೋಷಿಸಬೇಕಾದವರು ಪೋಷಕರು, ಗುರುಗಳು ಹಾಗೂ ಸಾಂಸ್ಕೃತಿಕ ನಾಯಕರುಗಳು. ಗಾನಕುಸುಮಾದಲ್ಲಿ ಆಯ್ಕೆಯಾಗಿ ಕುಸುಮಾಂಜಲಿಯಲ್ಲಿ ಹಾಡಿದ ಎಲ್ಲಾ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಹಾಡುವ ಅರ್ಹತೆ ಇರುವವರು. ಕುಸುಮಾಂಜಲಿ ವೇದಿಕೆಯ ಸಾರ್ಥಕ್ಯ ಇರುವುದೇ ಇಂತಲ್ಲಿ ಎಂದವರು ಶ್ಲಾಘಿಸಿದರು.

ಶಿಕ್ಷಣದ ವ್ಯಾಕ್ಯೆ ಬದಲಾಗಿದೆ. ಪುಸ್ತಕದ ಹುಳುಗಳಾಗಿ ಪಾಠ ಪಠ್ಯಗಳನ್ನು ಓದಿ ಅತ್ಯಧಿಕ ಅಂಕಗಳಿಸುವುದಷ್ಟೇ ಶಿಕ್ಷಣವಲ್ಲ. ಪಾಠಪಠ್ಯಕ್ಕೆ ಕೊಡವಷ್ಟೇ ಗಮನವನ್ನು ಪಾಠೇತರ ಚಟುವಟಿಕೆಗಳಿಗೆ ನೀಡುವುದೇ ನಿಜವಾದ ಶಿಕ್ಷಣ. ಒಂದು ಶಿಕ್ಷಣ ಪರಿಪೂರ್ಣವಾಗಬೇಕಾದರೆ ವಿದ್ಯಾರ್ಥಿ ಹೆತ್ತವರು ಹಾಗೂ ಅಧ್ಯಾಪಕರ ಪಾತ್ರ ಬಹುಮುಖ್ಯ ಎಂಬುದನ್ನು ಗಮನಿಸಿಬೇಕಿದೆ ಎಂದರು. ಕೃಷಿ ಸಂಸ್ಕೃತಿಯಿಂದ ವಿಮುಖರಾಗಿರುವ ರೈತರು ತೋಟಗಾರಿಕಾ ಸಂಸ್ಕೃತಿಯ ಕಡೆಗೆ ಬಳಕ ಕೈಗಾರಿಕಾ ಸಂಸ್ಕೃತಿಯ ಕಡೆಗೆ ಮುಖ ಮಾಡುತ್ತಿದ್ದೇವೆ. ನಗರ ಹಳ್ಳಿಗಳ ಕಂದಕ ಜಾಸ್ತಿಯಾಗುತ್ತಿದೆ. ಅಂತರಾಷ್ಟ್ರೀಯ ಸಮುದಾಯಗಳ ನಡುವಿನ ಸ್ವರ್ಧೆ, ಕೃಷಿ ಸಂಸ್ಕೃತಿಯಿಂದ ವಿಮುಖಗುತ್ತಿರುವ ಸಂಧಿಘಟ್ಟದಲ್ಲಿ ನಾವಿದ್ದೇವೆ. ಆದರೆ ನಮ್ಮ ಅಸ್ಮಿತೆಯನ್ನು, ಮೂಲ ಸಂಸ್ಕೃತಿಯ ನೆಲೆಗಳನ್ನು ಮರೆಯಬಾರದು ಎಂದವರು ಎಚ್ಚರಿಸಿದರು.

ಕುಸುಮಾಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅಡಿಕೆ ಪತ್ರಿಕೆಯ ಸಂಪಾದಕ, ಮಳೆನೀರು ಕೋಯ್ಲು ತಜ್ಞ ಶ್ರೀ ಪಡ್ರೆ, ಕರ್ನಾಟಕ ಕರಾವಳಿಯ ಮಳೆ ಶ್ರೀಮಂತ ಜಿಲ್ಲೆಗಳಲ್ಲಿ ಜಲಕ್ಷಾಮದ ದಿನಗಳು ದೂರವಿಲ್ಲ. ಬುದ್ಧಿವಂತರ ಜಿಲ್ಲೆ ಎಂದು ಹೇಳಿಕೊಳ್ಳುವ ಕರಾವಳಿಗರು ನೀರಿನ ಸಂರಕ್ಷಣೆಯಲ್ಲಿ ಹಿಂದಿದ್ದಾರೆ. ಇಲ್ಲಿ ನೀರಿನ ವ್ಯವಹಾರ ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.

ಮದಕಗಳ ಜಿಲ್ಲೆ ಎಂದೆನಿಸಿಕೊಂಡಿದ್ದ ಉಡುಪಿಯಲ್ಲಿ ಇಂದು ಮದಕಗಳು ದುಸ್ಥಿತಿಯಲ್ಲಿದೆ. ಜಲಕ್ಷಾಮದ ಬಗ್ಗೆ ಬಹಳ ಮಂದಿ ಮಾತನಾಡುತ್ತಾರೆ ಆದರೆ ಎಚ್ಚರಿಕೆಯಿಂದ ಕೆಲಸ ಮಾಡುವವರನ್ನು ಕಾಣುತ್ತಿಲ್ಲ. ಲಭ್ಯವಿರುವ ನೀರನ್ನು ಎಚ್ಚರಿಕೆಯಿಂದ ಬಳಸುವುದು. ಹರಿಯುವ ನೀರಿಗೆ ಅಲ್ಲಲ್ಲಿ ಒಡ್ಡುಗಳನ್ನು ಹಾಕಿ ನೀರು ನಿಲ್ಲಿಸಿ ಹರಿಯುವಂತೆ ಮಾಡುವುದರಿಂದ ಮಂದೆ ಎದುರಾಗಬಹುದಾದ ಬರದಿಂದ ತಪ್ಪಿಸಿಕೊಳ್ಳಬಹುದು ಎಂದರು.

ಕುಸುಮಾ ಗೂಪ್ ಪ್ರವರ್ತಕ ನಳಿನ್‌ಕುಮಾರ್ ಶೆಟ್ಟಿ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ಪಡ್ರೆ ಅವರಿಗೆ ಕುಸುಮಾಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಕುಸುಮಾ ಗೂಪ್ ಪ್ರವರ್ತಕ ನಳಿನ್‌ಕುಮಾರ್ ಶೆಟ್ಟಿ ಅವರ ತಂದೆ ತಾಯಿ ಕುಸುಮಾವತಿ ಶೆಟ್ಟಿ ಹಾಗೂ ಸುಧಾಕರ ಶೆಟ್ಟಿ, ಮಡದಿ ಪ್ರೀತಿ ನಳಿನ್‌ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಗಾನಕುಸುಮ ಸ್ವರ್ಧೆ ವಿಜೇತ ಸಿನಿಯರ್ ವಿಭಾಗದ ಕುಂದಾಪುರ ಬಿ.ಬಿ ಹೆಗ್ಡೆ ಕಾಲೇಜಿನ ವಿಜಯಲಕ್ಷ್ಮೀ, ಜ್ಯೂನಿಯರ್ ವಿಭಾಗದ ಅನೀಶ್ ಅವರಿಗೆ ಗಾನಕುಸುಮ ಪ್ರಶಸ್ತಿಯುನ್ನು ಪ್ರದಾನ ಮಾಡಲಾಯಿತು. ಕುಸುಮಾಂಜಲಿ ೨೦೧೬ರ ಚಾನೆಲ್ ಪಾರ್ಟ್ನರ್ ಶುಭ್ ಸಾಗರ್ ರೆಸ್ಟೋರೆಂಟ್ ನಿರ್ದೇಶಕ ಲಕ್ಷ್ಮಣ ಪೂಜಾರಿ ಪ್ರಶಸ್ತಿ ಪದಾನ ಮಾಡಿದರು. ಗಾನ ಕುಸುಮ ವಿಜೇತ ಹಾಗೂ ವೃತ್ತಿಪರ ಕಲಾವಿದರಿಂದ ಸುಮಧುರ ಗೀತೆಗಳ ಸಂಗೀತ ಕಾರ್ಯಕ್ರಮ, ಬಳಿಕ ಮಂಗಳೂರಿನ ಭರತಾಂಜಲಿ ನೃತ್ಯತಂಡದಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ಜರುಗಿತು.

 

Exit mobile version