Site icon Kundapra.com ಕುಂದಾಪ್ರ ಡಾಟ್ ಕಾಂ

ವೇಯ್ಟ್ ಲಿಫ್ಟರ್ ಮಂಜುನಾಥ ಮರಾಠಿ ಹೊಸೇರಿಗೆ ಹ್ಯಾಟ್ರಿಕ್ ಪದಕ

ಉದಯ ನಾಯ್ಕ ಕೆ | ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ವತಿಯಿಂದ ವಿಟ್ಲ ಶ್ರೀರಾಮ ಮಂದಿರದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಪುರುಷ ವೇಯ್ಟ್ ಲಿಪ್ಟಿಂಗ್ ಹಾಗೂ ಪುರುಷರ ದೇಹಧಾರ್ಡ್ಯ ಸ್ಪರ್ಧೆಯಲ್ಲಿ ಮಂಜುನಾಥ ಮರಾಠಿ ಹೊಸೇರಿ ವೇಯ್ಟ್ ಲಿಪ್ಟಿಂಗ್‌ನಲ್ಲಿ ಚಿನ್ನದ ಪದಕವನ್ನು ಹಾಗೂ ದೇಹದಾಡ್ಯ ಸ್ಪರ್ಧೆಯಲ್ಲಿ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನ ಪಡೆದಿರುತ್ತಾರೆ.

ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಪುರುಷ ವೇಯ್ಟ್ ಲಿಪ್ಟಿಂಗ್ 62ಕೆ.ಜಿ. ವಿಭಾಗದಲ್ಲಿ 245ಕೆ.ಜಿ. ಭಾರ ಎತ್ತುವುದರ ಮೂಲಕ ತಮ್ಮದೇ ಹೆಸರಿನಲ್ಲಿರುವ ಹಳೆಯ ದಾಖಲೆಯನ್ನ (240ಕೆ.ಜಿ.) ಮುರಿದಿರುವ ಮಂಜುನಾಥ, ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅತ್ಯುತ್ತಮ ವೇಯ್ಟ್ ಲಿಫ್ಟರ್ ಪ್ರಶಸ್ತಿಯನ್ನೂ ಬಾಚಿಕೊಳ್ಳುವ ಮೂಲಕ ಹ್ಯಾಟ್ರಿಕ್ ಪದಕವನ್ನ ತನ್ನ ಮುಡಿಗೇರಿಸಿಕೊಂಡಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಇತ್ತಿಚಿಗೆ ಮಂಗಳೂರಿನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ವೇಯ್ಟ್ ಲಿಪ್ಟಿಂಗ್ ಚಾಂಪಿಯನ್‌ಶಿಪ್‌ನ 69ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಬೆಸ್ಟ್ ಲಿಪ್ಟರ್ ಪ್ರಶಸ್ತಿಯನ್ನೂ ಅವರು ಪಡೆದುಕೊಂಡಿದ್ದರು. ಕುಂದಾಪುರ ತಾಲೂಕಿನ ಯಳಜಿತ ಗ್ರಾಮದ ಹೊಸೇರಿಯ ಕೃಷಿಕ ಬಚ್ಚ ಮರಾಠಿ ಹಾಗೂ ಪರಮೇಶ್ವರಿ ದಂಪತಿಯ ಮಗನಾದ ಮಂಜುನಾಥ ಮರಾಠಿ, ಪ್ರಸ್ತುತ ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪದವಿ ವ್ಯಾಸಾಂಗ ಮಾಡುತ್ತಿದ್ದಾರೆ. ರಾಜೇಂದ್ರ ಪ್ರಸಾದ್‌ರವರ ಮಾರ್ಗದರ್ಶನದಲ್ಲಿ ವೇಯ್ಟ್‌ಲಿಫ್ಟಿಂಗ್ ತರಬೇತಿಯನ್ನು ಪಡೆಯುತ್ತಿದ್ದಾರೆ.

 

Exit mobile version