Kundapra.com ಕುಂದಾಪ್ರ ಡಾಟ್ ಕಾಂ

ಗ್ರಾಮೀಣ ಕೃಷಿ ಪರಿಸರಕ್ಕೆ ಮೆರಗು, ಕೃಷಿಕರಿಗೆ ಬಲ ನೀಡಿದ ಹಸಿರು ಗೋಷ್ಠಿ

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಅದೊಂದು ಪಕ್ಕಾ ಗ್ರಾಮೀಣ ಕೃಷಿ ಸಂಸ್ಕೃತಿಯನ್ನು ನೆನಪಿಸುವ ಸನ್ನಿವೇಶ. ಕಿಂಡಿ ಅಣೆಕಟ್ಟಿನ ಹಿನ್ನೀರ ಪಕ್ಕದಲ್ಲೇ ಅಡಿಕೆ ಹಿಂಗಾರದ ಘಮ, ಕೆಂಪಡರಿದ ಅಡಿಕೆಗೊನೆ, ಎತ್ತರಕ್ಕೆ ಬೆಳೆದು ನಿಂತ ಕಾಳು ಮೆಣಸು ಬಳ್ಳಿ, ತೆಂಗು. ಅದರ ಕೆಳಗೇ ವಿಚಾರಕ್ಕೊಂದು ವೇದಿಕೆ. ಅಲ್ಲಿ ವೇದಿಕೆ, ಚಪ್ಪರದಿಂದ ಹಿಡಿದು ಕುಟೀರ ಊಟದ ವರೆಗೆ ಎಲ್ಲವೂ ಹಸಿರು ಸ್ನೇಹಿ.

ಬಸ್ರೂರು ಬಿ. ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನ ಹಾಗೂ ಕುಂದಾಪುರ ತಾಲೂಕು ಪ್ರಗತಿಪರ ಕೃಷಿಕರ ವೇದಿಕೆ ಭಾಂಡ್ಯ ಇಂದ್ರಪ್ರಸ್ತದಲ್ಲಿ ಆಯೋಜಿಸಿದ ನೆಲ, ಜಲ, ಕೃಷಿ ಉಳಿಸೋಣ ಬನ್ನಿ ಹಸಿರು ಗೋಷ್ಠಿ ಇಂತಹದ್ದೊಂದು ವಿನೂತನ ಕಾರ್ಯಕ್ರಮಕ್ಕೆ ಸಾಕ್ಷಿಯಾದುದಲ್ಲದೇ ರೈತನ ಸಮಸ್ಯೆಗಳ ಬಗೆಗೆ ಬೆಳಕು ಚೆಲ್ಲುತ್ತಾ ವಿಷಯ ತಜ್ಞರಿಂದ ಪರಿಹಾರವನ್ನೂ ಸೂಚಿಸುತ್ತಾ ಸಾರ್ಥಕ್ಯ ಕಂಡುಕೊಂಡಿತು.

ಕೃಷಿ ಕಾರ್ಮಿಕರ ಕೊರತೆಯಿಂದ ಹಡಿಲು ಬೀಳುತ್ತಿರುವ ಭತ್ತ ಕೃಷಿ, ಮಾರುಕಟ್ಟೆಯಲ್ಲಿ ಧಾರಣೆಗಳ ಏರಿಳಿತ ತೊಳಲಾಟದಲ್ಲಿ ಯಾವ ಬೆಳೆ ಬೆಳೆಯಬೇಕು ಎಂಬ ಜಿಜ್ಞಾಸೆ, ಹೆಚ್ಚುತ್ತಿರುವ ನೀರಿನ ಸಮಸ್ಯೆ, ಬರ, ಬಹು ಕೃಷಿ ಪದ್ಧತಿ, ಕೃಷಿಕರ ಯಶೋಗಾಥೆ ಮುಂತಾದವುಗಳ ಬಗೆಗೆ ವಿಷಯ ತಜ್ಞರು ಸುಧೀರ್ಘ ಮಾಹಿತಿ ನೀಡಿದರೆ, ಸ್ಥಳದಲ್ಲಿ ಕೃಷಿ ಸಮಸ್ಯೆ ಬಗ್ಗೆ ರೈತರೇ ನೇರವಾಗಿ ಪ್ರಶ್ನಿಸುವ ಮೂಲಕ ಸಮಸ್ಯೆಗೆ ಪರಿಹಾರಕ್ಕೆ ಅಸ್ಥೆ ತೋರಿಸಿದ್ದು ವಿಶೇಷವಾಗಿತ್ತು.

ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಅಡಿಕೆ ಬೆಳೆ ಬೆಲೆ-ಭವಿಷ್ಯ ವಿಷಯದ ಕುರಿತು ಮಾತನಾಡಿ ಅಡಿಕೆ ಬೆಳೆಯಲ್ಲಿ ಭಾರತವು ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಅಡಕೆ ಹೊಟ್ಟೆ ತುಂಬುವ ಉತ್ಪನ್ನವಾಗಿಲ್ಲದ ಕಾರಣ ಅದರ ಮೌಲ್ಯವರ್ಧಿತ ಅಂಶ ಪತ್ತೆಹಚ್ಚಿಸಲು ಸಂಘಟಿತ ಪ್ರಯತ್ನ ಮಾಡಬೇಕಿದೆ. ಅಡಿಕೆ ಉತ್ಪಾದನೆ ಹೆಚ್ಚಿದ್ದು, ಅಡಿಕೆ ತೋಟಗಳು ವಿಸ್ತರಣೆಯಿಂದ ಬೆಲೆ ವೈಪರೀತ್ಯಕ್ಕೆ ಕಾರಣವಾಗುತ್ತಿದೆ. ಅಡಕೆ ಜೊತೆ ಉಪಬೆಳೆಗಳಾದ, ಕಾಣು ಮೆಣಸು, ಕೋಕೋ, ಏಲಕ್ಕೆ ಮುಂತಾದವುಗಳನ್ನು ಬೆಳೆಯುವ ಮೂಲಕ ರೈತರು ಆದಾಯ ಹೆಚ್ಚಿಸಿಕೊಳ್ಳಬೇಕು. ಅಡಕೆ ಮೌಲ್ಯವರ್ಧನೆಗೆ ಅದರಲ್ಲಿ ಪೂರಕ ಅಂಶಗಳ ಅನ್ವೇಷಣೆಗೆ ಕ್ಯಾಂಪ್ಕೋ ಕ್ರಿಯಾಶೀಲವಾಗಿದೆ. ಅಡಕೆ ನಿರ್ದಿಷ್ಟ ಬೆಲೆ ನಿಗದಿಪಡಿಸುವ ಬಗ್ಗೆ ಹಾಗೂ ಹಾನಿಕಾರಕ ಲಾಭಿ ಬಗ್ಗೆ ಕ್ಯಾಂಪ್ಕೋ ಸ್ಪಷ್ಟ ಹೆಜ್ಜೆ ಇಡುತ್ತಿದೆ ಎಂದರು.

ಜಲ ಚಿಂತಕ ಶ್ರೀ ಪಡ್ರೆ ಜೀವ ಜಲ ಮುಂದಿನ ಭವಿಷ್ಯ ವಿಷಯದ ಕುರಿತು ಮಾತನಾಡಿ ನೆಲ, ಜಲ ಸಂರಕ್ಷಣೆಗೆ ಸ್ವಾಭಾವಿಕ ಅರಣ್ಯ ಪೂರಕವಾಗಿದ್ದು, ಇಂಗು ಗುಂಡಿಗಳ ಮೂಲಕವೂ ಸಂರಕ್ಷಣೆ ಸಾಧ್ಯವಿದೆ. ವಿದ್ಯುತ್, ಅರಣ್ಯ ನಾಶ ಹೀಗೆ ಹಲವು ಬಗೆಯ ಮನುಷ್ಯ ನಿರ್ಮಿತ ಸಮಸ್ಯೆಗಳಿಂದಾಗಿ ನೀರಿನ ಕೊರತೆ ಕಾಣಿಸಿಕೊಳ್ಳುತ್ತಿದೆ. ಅಂತರ್ಜಲ ಕುಸಿಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ನೆಲಕ್ಕೆ ಬೀಳುವ ಮಳೆ ನೀರು ಇಪ್ಪತ್ತನಾಲ್ಕು ಗಂಟೆಗಳಲ್ಲಿ ಸಮುದ್ರ ಸೇರುತ್ತದೆ. ಅದೇ ಮಣ್ಣಿನಲ್ಲಿ ಇಂಗಿದರೇ ಕರಾವಳಿ ಬಾಗದ ನೀರಿನ ಸಮಸ್ಯೆ ಬಹುಪಾಲು ನಿವಾರಣೆಯಾಗುತ್ತದೆ. ಜೊತೆಗೆ ನೀರಿನ ಹರಿವಿಕೆಯೊಂದಿಗೆ ಮಣ್ಣಿನ ಮೇಲ್ಪದರದ ಸವಕಳಿಯೂ ನಿಂತು ಭೂಮಿ ಫಲವತ್ತತೆ ಕಾಯ್ದುಕೊಳ್ಳುತ್ತದೆ. ಮಳೆ ಕೊಯ್ಲು ಮೂಲಕ ಜಲಸಂವರ್ಧನೆ ಜೊತೆ ಮನೆಯಿಂದಲೇ ನೀರಿನ ಬಳಕೆ ಬಗ್ಗೆ ಎಚ್ಚರಿಕೆ ಸಂದೇಶ ಹೊರಬರಬೇಕಿದೆ. ನೀರು ಬಡವರ ತುಪ್ಪದ ಹಾಗೆ. ನೀರಿನ ಚಿಂತನೆ ಪ್ರತಿ ಮನೆಯಿಂದ ಆರಂಭವಾಗಬೇಕಿದೆ. ಅದು ಹಾಹಾಕಾರವಿರು ಮೂರು ತಿಂಗಳಿಗಷ್ಟೇ ಸೀಮಿತವಾಗಬಾರದು. ಇತಿ ಮಿತಿಯಲ್ಲಿ, ಸೂಕ್ತ ರೀತಿಯಲ್ಲಿ ಬಳಸಿ ಉಳಿಸಿಕೊಳ್ಳುವುದರಿಂದ ನೀರಿ ಕೊರತೆ ನೀಗುತ್ತದೆ ಎಂದರು.

ಅಂಕಣಕಾರ ಡಾ. ನರೇಂದ್ರ ರೈ ದೇರ್ಲ ಕರಾವಳಿಯಲ್ಲಿ ಕೃಷಿ ಪಲ್ಲಟ ಪರಿಣಾಮಗಳು ವಿಷಯದ ಕುರಿತು ಮಾತನಾಡಿ ದುಡ್ಡೊಂಡಿದ್ದರೆ ಎಲ್ಲವೂ ಕೊಂಡುಕೊಳ್ಳಬಹುದು ಎಂಬ ಅಹಂ ಕರಾವಳಿಯ ಕೃಷಿ ಪಲ್ಲಟಕ್ಕೆ ಮೂಲಕ ಕಾರಣ. ವಾಣಿಜ್ಯ ಕೃಷಿಯಿಂದಾಗಿ ಮನುಷ್ಯ ಮನುಷ್ಯನ ನಡುವೆ ಗೋಡೆ ಸೃಷ್ಟಿಯಾಗುತ್ತಿದ್ದು, ಆಹಾರ ಧಾನ್ಯ ಉತ್ಪಾದನೆಯೂ ಕ್ಷೀಣಿಸುತ್ತಿದೆ. ಹಣದ ಪ್ರವೇಶದಿಂದ ಆರಂಭಗೊಂಡ ಕೃಷಿ ಪಲ್ಲಟದಿಂದ ಮನುಷ್ಯ ಮನುಷ್ಯನ ಸಂಬಂಧ ನಾಶವಾಗುತ್ತಿದೆ. ಆಧುನಿಕರಾದಂತೆಲ್ಲಾ ನೆಲದಿಂದ, ಹಸಿರಿನಿಂದ, ಬೇರಿನಿಂದ, ಕೃಷಿಯಿಂದ ದೂರವಾಗಿ ಮಾನಸಿಕ ಹಾಗೂ ನೈತಿಕ ಅಧಃಪತನದತ್ತ ಮುಖ ಮಾಡಿದ್ದೇವೆ.

ಮಾನಿಟರ್ ಹಿಡಿದು ಜಾಲಾಡುವ ಹುಡುಗಿ ಕುಳಿತ ಕಟ್ಟಡದ ಅಡಿಯಲ್ಲಿ ರೈತನ ಬದುಕಿತ್ತು. ಆಧುನಿಕ ಪರಂಪರೆ ನಮ್ಮನ್ನು ಸರ್ವನಾಶ ಮಾಡುತ್ತಿದೆ. ಕಲೆ ಮತ್ತು ಕೃಷಿ ಸಂಬಂಧ ಮತ್ತು ಸಂವಹನದಿಂದ ಬರುತ್ತದೆ ಎಂಬ ಪೂರ್ವಗೃಹಿಕೆಯನ್ನು ಆಧುನಿಕ ಶಿಕ್ಷಣ ಕಡಿದು ಹಾಕುತ್ತಿದೆ. ಕೃಷಿ ಎಂದಿಗೂ ಸಹವಾಸ ಪ್ರಣಿತವಾದದ್ದು. ಅದು ನೆಲದ ಮುಖೇಣ, ಒಡನಾಟ ಸಂಬಂಧಿದಿಂದ ಮಾತ್ರ ಕಲಿಯುವಂತದ್ದು. ಗಣಿತ-ವಿಜ್ಞಾನದಲ್ಲಿ ಅರ್ಥ ಹುಡುಕಿ ಹೊರಟು ಯಂತ್ರಗಳಾಗುತ್ತಿರುವ ನಾವುಗಳು ಸಂಸ್ಕೃತಿಯ ಅರ್ಥ ಹುಡುಕಬೇಕಿದೆ ಎಂದರು.

ಪರಿಸರ ಚಿಂತಕ ಶಿವಾನಂದ ಕಳವೆ ಕೃಷಿಕರ ಯಶೋಗಾಥೆ ವಿಷಯದ ಕುರಿತು ಕೃಷಿಯ ವಿಮುಖತೆಯ ಕಡೆಗೆ ಮಾತನಾಡುತ್ತಿರುವಾಗಲೇ ಕರ್ನಾಟಕದ ಪ್ರತಿ ಊರುಗಳಲ್ಲಿ ನೂರಾರು ಯಶೋಗಾಥೆಗಳು ದೊರೆಯುತ್ತವೆ. ಆರು ಇಂಚು ಮಳೆಯಾದರೆ ನಾಡಿಗೇ ಅನ್ನ ಕೊಡುವ ಶಕ್ತಿ ರೈತನಿಗಿದೆ. ಆದರೆ ಬದಲಾದ ಕಾಲಘಟ್ಟದಲ್ಲಿ ಕೃಷಿಗೆ ತೊಡಿಸಿದ ಯುನಿಫಾರ್ಮ್ ನೀತಿಯಿಂದಾಗಿ ಅನ್ನ ಕೊಡುವವನೇ ಉದ್ಯೋಗ ನೀಡಿ ಎಂದು ನಗರಗಳನ್ನು ಅರಸಿ ಹೋಗುತ್ತಿದ್ದಾನೆ ಎಂದರು.

ಕೃಷಿ ಎಂಬುದು ಹತ್ತು ತಲೆಮಾರುಗಳ ಜ್ಞಾನ. ಅದರ ಬಗೆಗೆ ಇಂದಿನ ತಲೆಮಾರು ಒಂದಿಷ್ಟು ಚಿಂತಿಸುತ್ತಿದೆ. ಕೃಷಿ ಸರಳವೂ ಅಲ್ಲ ಸುಲಭವೂ ಅಲ. ಅದೊಂದು ಒಂದು ತಪ್ಪಸಿದ್ದಂತೆ. ಇಲ್ಲಿ ಲಾಭ ಹುಡುಕುವುದು ತಕ್ಷಣಕ್ಕೆ ಸಾಧ್ಯವಿಲ್ಲ. ಮಾರುಕಟ್ಟೆ ನಡುವೆ ಗೆಲ್ಲವ ತಂತ್ರದ ಬಗೆಗೆ ಚನ್ನಾಗಿ ತಿಳಿಯಬೇಕಿದೆ. ಬೆಳೆ ವೈವಿಧ್ಯ ಸಂರಕ್ಷಣೆ ಮಾಡಿದವರು, ನೀರು ನಿರ್ವಹಣೆಯ ಚಿಂತನೆ, ಮಳೆ ನೀರು ಕೊಯ್ಲು, ಮರ ಬೆಳೆಸಿ, ಹೈನುಗಾರಿಕೆ ನಡೆಸುತ್ತಾ ಕೃಷಿಯಲ್ಲಿ ಗೆದ್ದವರು ಅನೇಕರಿದ್ದಾರೆ ಎಂದರು.

ಇದನ್ನೂ ಓದಿ ►  ನೆಲೆ ಜಲ ಕೃಷಿ ಉಳಿಸೋಣ ಬನ್ನಿ ಹಸಿರು ಗೋಷ್ಠಿ ಉದ್ಘಾಟನೆ – http://kundapraa.com/?p=20686

  

 

Exit mobile version