ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಆರನೇ ತಾಲೂಕು ಪಂಚಾಯತ್ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಸದಸ್ಯರು ಅಧಿಕಾರಿಗಳು ಹಾಗೂ ತಾಪಂ ಕಾರ್ಯನಿರ್ವಣಾಧಿಕಾರಿ ವಿರುದ್ಧ ಗರಂ ಆದ ಪ್ರಸಂಗ ನಡೆಯಿತು. ಪ್ರತಿ ಸಭೆಗೂ ಅಧಿಕಾರಿಗಳು ಗೈರು ಹಾಜರಿ ಹಾಗೂ ತಾಲೂಕಿನಲ್ಲಿ ನಡೆಯುತ್ತಿರುವ ಕಾಮಗಾರಿಗಳ ಅವ್ಯವಸ್ಥೆಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ದೋರಣೆಯನ್ನು ಖಂಡಿಸಿದರು.
ಉತ್ತಮ ಗುಣಮಟ್ಟದ ಸೋಲಾರ್ ದೀಪಗಳ ಅಳವಡಿಸದೆ, ಕಳಪೆ ಮಟ್ಟದ ಸೋಲಾರ್ ದೀಪ ಅಳವಡಿಸುವುದರಿಂದ ಎನೂ ಪ್ರಯೋಜವಿಲ್ಲ. 13 ಸಾವಿರ ರೂ.ವೆಚ್ದದ ಸೋಲಾರ್ ದೀಪ ಕಳಪೆಯಾಗಿದ್ದು, ಆರು ತಿಂಗಳು ಕೂಡಾ ಉರಿಯೋದಿಲ್ಲ. ಸೋಲಾರ್ ದೀಪ ಅಳವಡಿಕೆ ಗ್ರಾಪಂಗೆ ನೀಡಿ, ವಿಸ್ವಾರ್ಹ ಕಂಪನಿಯಿಂದ ಉತ್ತಮ ಗುಣಮಟ್ಟದ ಸೋಲಾರ್ ಅಳವಡಿಕೆ ಮಾಡುವಂತೆ ಹಾಲಾಡಿ ಗ್ರಾಪಂ ಅಧ್ಯಕ್ಷ ಸರ್ವೋತ್ತಮ ಹೆಗ್ಡೆ, ತಾಪಂ ಸದಸ್ಯರಾದ ರಾಜು ದೇವಾಡಿಗ, ಉದಯ ಪೂಜಾರಿ, ಮಾಲತಿ, ಜಗದೀಶ್ ಪೂಜಾರಿ ಸಲಹೆ ಮಾಡಿದರು. ಗುಣಮಟ್ಟದ ಸೋಲಾರ್ ಅಳವಡಿಸಿ, ಐದು ವರ್ಷ ಅದರ ಮೈಂಟೇನ್ ಮಾಡುವ ಜೊತೆ, ಶೇ.20ರಷ್ಟು ಹಣ ಉಳಿಸಿಕೊಂಡು ಗುತ್ತಿಗೆದಾರರಿಗೆ ಪೇಮೆಂಟ್ ಮಾಡುವಂತೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.
ತಾಪಂ ಸಾಮಾನ್ಯ ಸಭೆ ಆರಂಭದಿಂದಲೂ ಆಕ್ಟ್ ಬುಕ್ ಕೇಳುತ್ತಿದ್ದೇವೆ. ಆರನೇ ಸಭೆ ನಡೆಯುತ್ತಿದ್ದರೂ ಇನ್ನೂ ಏಕೆ ಕೊಟ್ಟಿಲ್ಲ ಎಂದು ಸದಸ್ಯರಾದ ಉಮೇಶ್ ಶೆಟ್ಟಿ ಕಲ್ಗದ್ದೆ, ಕರಣ್ ಪೂಜಾರಿ, ಜಗದೀಶ್ ದೇವಾಡಿಗ, ಜ್ಯೋತಿ ಪುತ್ರನ್, ವಾಸುದೇವ ಪೈ, ಮೊದಲಾದವರು ಕಾರ್ಯನಿರ್ವಹಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಅನುದಾನದ ಕೊರತೆಯಿಂದ ಸದಸ್ಯರಿಗೆ ಆಕ್ಟ್ ಬುಕ್ ನೀಡಲಾಗಿಲ್ಲ ಎಂಬ ಇಒ ಉತ್ತರ ಸದಸ್ಯರ ಕೆರಳಿಸಿತು. ತಾಪಂನಲ್ಲಿ ಸ್ವಂತ ನಿಧಿಯಿದೆ. ಕಟ್ಟಡದ ವರಮಾನ ಬರುತ್ತದೆ ಅದರಲ್ಲಿ ಆಕ್ಟ್ ಬುಕ್ ಕೊಡಬಹುದು. ಬರೇ ಸಭೆ ನಡೆಸಿದರೆ ಸಾಲದು. ಎಷ್ಟು ದಿನದೊಳಗೆ ತರಿಸಿಕೊಡುತ್ತೀರಿ ಎನ್ನೋದು ಸ್ಪಷ್ಟಪಡಿಸಿ, ನಿರ್ಣಯ ತೆಗೆದುಕೊಳ್ಳುವಂತೆ ಪುಷ್ಪರಾಜ್ ಶೆಟ್ಟಿ ಪಟ್ಟು ಹಿಡಿದರು. ಇದಕ್ಕೆ ಸದಸ್ಯರು ದ್ವನಿಗೂಡಿಸಿದ್ದರಿಂದ ಒಂದು ತಿಂಗಳೊಳಗೆ ಪುಸ್ತಕ ವಿತರಿಸುವಂತೆ ಇಒ ಭರವಸೆ ನೀಡಿದ್ದು, ನಿರ್ಣಯ ತೆಗೆದುಕೊಳ್ಳಲಾಯಿತು.
ತಾಲೂಕು ಪಂಚಾಯತ್ ಒಂದನೇ ಹಂತದ ಕಾಮಗಾರಿ ಹಣ ಬಿಡುಗಡೆ ಆಗದೆ, ಎರಡನೇ ಹಂತದ ಕಾಮಗಾರಿ ಏಕೆ ಚಾಲೂ ಮಾಡಬೇಕಿತ್ತು. ಕ್ರಿಯಾಯೋಜನೆ ಆಗಿದ್ದು, ಇನ್ನೂ ಏಕೆ ಶುರುಮಾಡಿಲ್ಲ ಎಂದು ನಮ್ಮ ಜನ ಪ್ರಶ್ನಿಸುತ್ತಾರೆ. ಅವರಿಗೆ ಉತ್ತರ ಕೊಡೋದು ಯಾರು? ಅನುದಾನ ಇಲ್ಲದ ಮೇಲೆ ಕ್ರಿಯಾಯೋಜನೆ ಅವಶ್ಯ ಏನಿತ್ತು ಎಂದು ಇಒ ವಿರುದ್ಧ ಸದಸ್ಯರು ಹರಿಹಾಯ್ದರು.
ಅಂಗನವಾಡಿ ಸಂಗತಿ ಬಗ್ಗೆ ಈಗಿರುವ ಸಿಡಿಪಿಒ ಮಾಹಿತಿ ನೀಡುತ್ತಿಲ್ಲ. ಬೇರೊಬ್ಬರ ನೇಮಕ ಮಾಡುವ ಮೂಲಕ ಅಂಗನವಾಡಿ ಬಗ್ಗೆ ಸದಸ್ಯರು ಕೇಳಿದ ಮಾಹಿತಿ ನೀಡಬೇಕು ಎಂದು ಇಂದಿರಾ ಶೆಟ್ಟಿ ಒತ್ತಾಯಿಸಿದ್ದು, ಇದಕ್ಕೆ ದ್ವನಿ ಸೇರಿಸಿದ ಪುಷ್ಟರಾಜ್ ಶೆಟ್ಟಿ, ನಿಯಮ ಉಲ್ಲಂಘಿಸಿ, ಅಂಗನವಾಡಿ ಕಾರ‍್ಯಕರ್ತೆ ಹಾಗೂ ಸಹಾಯಕಿಯರ ನೇಮಕ ಮಾಡಲಾಗಿದೆ. ಸ್ಥಳೀಯರಲ್ಲದೆ ಹೊರ ಪ್ರದೇಶದವರಿಗೂ ಕೆಲಸ ನೀಡಿದ್ದು, ಮರು ನೇಮಕ ಮಾಡುವಂತೆ ಒತ್ತಾಯಿಸಿದ್ದು, ಪರಾಮರ್ಶಿಸುವ ಭರವಸೆ ಅಧಿಕಾರಿಗಳು ನೀಡಿದರು.
ಶಿರೂರು ಪಿಡಿಓ ತಲ್ಲೂರು ಗ್ರಾಪಂ ವರ್ಗಾವಣೆಗೊಳಿಸಲಾಗಿದೆ. ಅತೀ ದೊಡ್ಡ ಹಾಗೂ ಹೆಚ್ಚು ಆದಾಯ ಬರುವ ಗ್ರಾಪಂಗೆ ಪಿಯಿಲ್ಲದೆ ಗ್ರಾಮಸ್ಥರು ಪರಿತಪಿಸುವಂತಾಗಿದೆ. ಪಿಡಿಒ ಅವರನ್ನು ಶಿರೂರು ಗ್ರಾಪಂಗೆ ಮರು ನೇಮಕ ಮಾಡಬೇಕು. ಶಿರೂರು ಗ್ರಾಮದಲ್ಲಿ ಹಕ್ಕುಪತ್ರ ದಾಖಲೆ ಇದ್ದರೂ, ಅದರ ಹೆಚ್ಚಿನ ತನಿಖೆಗಾಗಿ ತಹಸೀಲ್ದಾರ್ ಕೊಂಡೊಯಿದಿದ್ದು, ತಕ್ಷಣ ಫಲಾನುಭವಿಗಳಿಗೆ ದಾಖಲೆ ಕೊಡಬೇಕು ಎಂದು ದಸ್ತಗೀರ್ ಸಾಹೇಬ್ ಹಾಗೂ ಪುಷ್ಪರಾಜ್ ಶೆಟ್ಟಿ ಒತ್ತಾಯಿಸಿರು.
ಸಾರಿಗೆ ಸಂಪರ್ಕ, 94-ಸಿ, ಅಕ್ರಮ ಸಕ್ರಮ, ಶಾಲಾ ಕಟ್ಟಡ ದುರಸ್ತಿ ಹಾಗೂ ಪೀಠೋಪಕರಣ, ಅಂಗನವಾಡಿ ಮುಂತಾದ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಯಿತು. ಕುಂದಾಪುರ ತಾಪಂ ಅಧ್ಯಕ್ಷೆ ಜಯಶ್ರೀ ಸುಧಾಕರ ಮೊಗವೀರ, ಉಪಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಕಡ್ಕೆ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಇಒ ಚೆನ್ನಪ್ಪ ಮೋಯಿಲಿ ಇದ್ದರು.