Kundapra.com ಕುಂದಾಪ್ರ ಡಾಟ್ ಕಾಂ

ಐದು ತಲೆಮಾರು ಕಂಡ ಹಿರಿಯಜೀವಿ. ನೂರಾಎಂಟು ವರ್ಷದ ಪಣಿಯಜ್ಜಿ!

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಐದು ತಲೆಮಾರು ಕಂಡ ಹಿರಿಯ ಜೀವಿ. ಶತಾಯುಷಿ ಅಜ್ಜಿ ಸವೆಸಿದ ಬದುಕಿನ ಹಾದಿಯಲ್ಲಿ ಸಿಹಿಗಿಂತ ಕಹಿಯೇ ಹೆಚ್ಚು. ಬ್ರಿಟಿಷರ ದರ್ಬಾರ್ ಹಾಗೂ ಪ್ರಜಾಪ್ರಭುತ್ವ ಆಡಳಿತದ ಪರಿಕಂಡಿದ್ದ ಪಣಿಯಜ್ಜಿ ವಯಸ್ಸು ನೂರೂ.. ಮತ್ತೆಂಟು ಒಟ್ಟಿಗೆ ನೂರಾಎಂಟು!

ಕುಂದಾಪುರ ತಾಲೂಕು, ತೆಕ್ಕಟ್ಟೆ ಗ್ರಾಮ ಕಣ್ಣುಕೆರೆ ಸಮೀಪ ಕಾಡ್ತಿಮನೆ ನಿವಾಸಿ ಪಣಿಯಾ ಹೆಂಗಸಿಗೆ ಈಗ ಬರೋಬ್ಬರಿ ೧೦೮ ವರ್ಷ. ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು, ಮಿಮ್ಮಕ್ಕಳ ಕೂಡಾ ಕಂಡಿದ್ದಾರೆ. ಮಿಮ್ಮಕ್ಕ ಮದುವೆಯನ್ನೂ ಕಂಡಿದ್ದಾರೆ. ಆದರೆ ಅವರ ಕನಸಿನ ಮನೆ ನೋಡುವ ಭಾಗ್ಯ ಅಜ್ಜಿಗೆ ಸಿಕ್ಕಿಲ್ಲ ಎಂಬುದು ಮಾತ್ರ ಜೆಡ್ಡುಗಟ್ಟಿದ ನಮ್ಮ ಆಡಳಿತ ವ್ಯವಸ್ಥೆಯ ಕಾರ್ಯವೈಖರಿಗೆ ಹಿಡಿದ ಕನ್ನಡಿ.

ವಯಸ್ಸಿನ ಲೆಕ್ಕಾಚಾರ ಹೇಗೆ :
ಪಣಿಯ ಹೆಂಗಸಿನ ವಯಸ್ಸಿನ ಲೆಕ್ಕಾಚಾರಕ್ಕೆ ಜಾತಕ ಇಲ್ಲ. ಆದರೆ ವಯಸ್ಸಿನ ಲೆಕ್ಕಾಚಾರದಲ್ಲಿ ಮತ್ತೊಬ್ಬ ಮಹಿಳೆ ಜಾತಕ ಬರುತ್ತದೆ. ಪಣಿಯ ಹೆಂಗಸು ಹಾಗೂ ಚಾತ್ರಮನೆ ಸೀತಮ್ಮ ಸಮ ವಯಸ್ಕರು. ಪಣಿಯ ಹೆಂಗಸಿಗಿಂತ ಸೀತಮ್ಮ ಒಂದು ವರ್ಷದೊಡ್ಡವರಾಗಿದ್ದು, ಅವರ ಜಾತಕ ಲೆಕ್ಕಾಚಾರದಲಿ ಸೀತಮ್ಮ ಮೃತ ಪಡುವಾಗ ಅವರ ವಯಸ್ಸು ನೂರಾಏಳು. ಸೀತಮ್ಮ ಮೃತಪಟ್ಟು ಒಂದು ವರ್ಷವಾಗಿದ್ದು, ಅವರ ವಯಸ್ಸಿನ ಆಧಾರದಲ್ಲಿ ಪಣಿಯ ಹೆಂಗಸಿನ ವಯಸ್ಸು ಈಗ ನೂರಾಎಂಟು. ಪಣಿಯ ಹೆಂಗಸಿನ ದೊಡ್ಡ ಮಗಳಿಗೆ ೭೫ ಆಗಿದೆ. ಸೀತಮ್ಮ ಸಾಯುವಾಗ ಅವರಿಗೆ ೧೦೭ ಆಗಿದ್ದು, ಅವರು ಮೃತಪಟ್ಟು ಒಂದು ವರ್ಷವಾಗಿದ್ದರಿಂದ ನಮ್ಮತಾಯಿಗೆ ಈಗ ನೂರಾಎಂಟಾಗಿದೆ ಎಂದು ಪಣಿಯ ಹೆಂಗಸಿನ ಕಿರಿಯ ಮಗಳು ಸೀತಾ ವಿವರಣೆ. ಕುಂದಾಪ್ರ ಡಾಟ್ ಕಾಂ ವರದಿ.

ಪಣಿಯ ಹೆಂಗಸು ಪತಿ ಬಡಿಯ ಮಕ್ಕಳು ಚಿಕ್ಕವರಿದ್ದಾಗಲೇ ಮೃತಪಟ್ಟಿದ್ದರು. ಮೂವರು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳ ಕೂಲಿ ಮಾಡಿ ಸಾಕಿ-ಸಲಹಿದ್ದು ಪಣಿಯ ಅವರೇ. ಇರುವ ತುಂಡು ಭೂಮಿಯಲ್ಲಿ ಭತ್ತ ಬೆಳೆದು ಗಂಜಿಗೆ ದಾರಿ ಮಾ ಡಿಕೊಂಡರೆ, ಕೃಷಿ ಕೂಲಿ ಮಕ್ಕಳ ಪೋಷಣೆಯ ವರಮಾನವಾಗಿತ್ತು. ರಟ್ಟೆಕುಟ್ಟಿಯೇ ಮಕ್ಕಳ ಬೆಳೆಸಿದರು. ಪ್ರಸಕ್ತ ಮೂವರು ಹೆಣ್ಣು ಮಕ್ಕಳು ತಾಯಿ ಜೊತೆಗಿದ್ದು, ಒಬ್ಬ ಮಗನ ಕಣ್ಣೆದುರಿಗಿದ್ದು, ಮತ್ತೊಬ್ಬ ಒಬ್ಬ ಮಗ ಎಲ್ಲಿದ್ದಾನೆ ಎಂಬ ಬಗ್ಗೆ ಮಾಹಿತಿ ಇಲ್ಲ. ಪಣಿಯ ಹೆಂಗಸು ತನ್ನ ಇಬ್ಬರು ಅಳಿಯಂದಿರ ಕಳೆದು ಕೊಂಡಿದ್ದಾರೆ.

ಪಣಿಯ ಹೆಂಗಸಿನ ಕೂಡು-ಕುಟುಂಬ ಎಲ್ಲಾ ಒಟ್ಟಾದರೆ ಮನೆ ಜಾತ್ರೆಯಾಗುತ್ತದೆ. ಕಳೆದ ನಾಲ್ಕು ತಲೆಮಾರಿಂದ ವಾಸ ಮಾಡುತ್ತಿದ್ದರೂ, ಜಾಗ ಒಡೆಯ ವಕ್ಲುತಗಾದೆಯಲ್ಲಿ ಮನೆ ಕಟ್ಟುವ ಕನಸು ಸಾಕಾರವಾಗಲಿಲ್ಲ ಎಂಬ ನೋವು ಪಣಿಯ ಹೆಂಗಸು ಕಾಡುತ್ತಿದೆ. ಇರೋ ಒಂದೆಕ್ರೆಜಾಗದಲ್ಲಿ ಭತ್ತ ಬೆಳೆಯಲಾಗುತ್ತಿದ್ದು, ಪಣಿಯ ಹೆಂಗಸಿನ ಮಕ್ಕಳು ಕೂಲಿ ಮಾಡುತ್ತಾರೆ.

ಪಣಿಯ ಹೆಂಗಸಿಗೆ ಸರಕಾರ ದಿಂದ ಸಂಧ್ಯಾ ಸುರಕ್ಷಾಯೋಜನೆಯಲ್ಲಿ ಮಾಸಿಕ 500 ರೂ.ಬರುತ್ತಿದ್ದು, ಹೆಣ್ಣು ಮಕ್ಕಳಾದ ಕಾಡ ದೇವಾಡಿಗ, ಪದ್ದು ದೇವಾಡಿಗ ಹಾಗೂ ಸೀತಾ ದೇವಾಡಿಗ ತಾಯಿಅರೈಕೆ ಮಾಡುತ್ತಿದ್ದಾರೆ. ಪಣಿಯ ಹೆಂಗಸು ಮನೆಯತೂ ಬಟ್ಟಂಬಯಲು. ಅದರಲ್ಲೇ ಎಲ್ಲರ ವಾಸ. ಅಜ್ಜಿ ಮನೆ ಕನಸು ಈಡೇರುತ್ತಾ ಎನ್ನೋದು ಈಡೇರುತ್ತಾ ಕನಸಾಗೇ ಉಳಿಯುತ್ತಾ ಎನ್ನೋದು ಸದಸ್ಯದ ಪ್ರಶ್ನೆ.

ಇರೋದಕ್ಕೆ ಒಂದು ಮನೆ ಬೇಕು ಮಗಾ… ಮಣ್ಣಿನ ನೆಲ್ದಾಗೆ ಹೊರಳಾಡಿ ಸಾಕಾಯೀತು. ಪ್ರಾಣಹೋಪ್ಕು ಮುಂಚೆ ಹೊಸ ಮನೆ ಸೇರ‍್ಕ್. ಮನೀಗೆ ಗೋಡೆ, ಮಾಡು ಎಂತೂ ಇಲ್ಲ್ಯೇ. ಎಷ್ಟು ವರ್ರ‍್ಸಾ ಅಂತ ಜೋಪಡಿಯಾಗೆ ಬದುಕೂಕೆ ಆತ್ತ್. ಗಾಳಿ, ಮಳೆ ನೀರು ಎಲ್ಲಾ ಮನೀ ಒಳ್ಗೆ ಬತ್ತು. ನನ್ನ ಕೊನೆ ಆಸೀ ಅಂದ್ರೆ ಹೊಸ ಮನಿ ಕಟ್ಕು. ಅಷ್ಟಾರೆ ಸಾಕೇ. ನಾನ್ ಇಷ್ಟು ವರ್ಷ ಬದ್ಕಿಗೊಂದು ಅರ್ಥ ಬತ್ತ್. ನಮ್ಮ ಮಕ್ಕಳು ಮರಿಗ್ ಬೆಚ್ಚಗಿನ ಗೂಡು ಸೇರಿದ ಸಂತೃಪ್ತಿಯೂ ಸಿಕ್ಕುತ್ತು. – ಪಣಿಯ ಹೆಂಗಸು, ಶತಾಯುಷಿ ಮಹಿಳೆ ಕಣ್ಣುಕೆರೆ.

Exit mobile version