Kundapra.com ಕುಂದಾಪ್ರ ಡಾಟ್ ಕಾಂ

ನಿಮ್ಮ ಪ್ರಯಾಣ ಸುಖಕರವಾಗಿರಲಿ

Travellingಪ್ರಯಾಣ ಮಾಡುವುದು ಎಲ್ಲರಿಗೂ ಪ್ರಿಯವಾದ ಸಂಗತಿ. ವಾರವಿಡೀ ಕೆಲಸದ ಒತ್ತಡದಿಂದ ದೂರವಿರಬೇಕು, ಕೆಲಸಗಳಿಂದ ವಿರಾಮ ಪಡೆಯಬೇಕು, ಬದಲಾವಣೆ ಬೇಕೆನಿಸಿದಾಗ ಎಲ್ಲಾದರೂ ಪ್ರಯಾಣ ಹೋಗಿ ಮೂಡ್ ಫ್ರೆಶ್ ಮಾಡಿಕೊಳ್ಳಬೇಕು ಎನಿಸುತ್ತದೆ.

ಪ್ರಯಾಣ ಹೋಗುವುದೆಂದರೆ ಸೂಕ್ತ ತಯಾರಿ, ಹಣ, ಸಮಯದ ಸರಿಯಾದ ಯೋಜನೆ ಹಾಕಿಕೊಳ್ಳಬೇಕು. ಇಲ್ಲದಿದ್ದರೆ ವಿಪರೀತ ಹಣ ಖರ್ಚಾಗಬಹುದು. ಪ್ರಯಾಣ ಗೊಂದಲಕ್ಕೀಡಾಗಬಹುದು. ಹಿತಮಿತ ಬಜೆಟ್‌ನಲ್ಲಿ ಒಳ್ಳೆಯ ಸ್ಥಳದಲ್ಲಿ ಸುತ್ತಾಡಿಕೊಂಡು ಬಂದರೆ ಮನಸ್ಸಿಗೆ ಖುಷಿಯಾಗುತ್ತದೆ. ಕಡಿಮೆ ಖರ್ಚಿನಲ್ಲಿ ಉತ್ತಮ ಪ್ರಯಾಣವನ್ನು ಹೇಗೆ ಯೋಜನೆ ಮಾಡಬಹುದು ಎಂಬುದಕ್ಕೆ ಇಲ್ಲಿವೆ ಟಿಪ್ಸ್.

ಆನ್‌ಲೈನ್ ಬುಕ್ಕಿಂಗ್: ಎಲ್ಲಿಗೆ ಪ್ರವಾಸ ಹೋಗುವುದು, ಯಾವಾಗ ಹೋಗುವುದು ಎಂದು ನಿರ್ಧರಿಸಿ ಏಜೆಂಟರ ಬಳಿ ಹೋಗಿ ಟಿಕೆಟ್ ಬುಕ್ ಮಾಡುವ ಬದಲು ಇಂಟರ್ನೆಟ್‌ನಲ್ಲಿ ಆನ್‌ಲೈನ್ ಬುಕ್ ಮಾಡಿದರೆ ಟಿಕೆಟ್ ಬೆಲೆ ಅಗ್ಗವಾಗುತ್ತದೆ. ಪ್ರವಾಸ ಹೋಗುವುದಕ್ಕೆ 20-30 ದಿನ ಮೊದಲೇ ಬುಕ್ ಮಾಡಿದರೆ ಉತ್ತಮ.

ವಸತಿ : ಪ್ರವಾಸ ಹೋದಲ್ಲಿ ಸುರಕ್ಷಿತ ಹಾಗೂ ನೆಮ್ಮದಿಯ ನೆಲೆ ಸಿಗಬೇಕಾದುದು ಅಗತ್ಯ. ಸರಿಯಾದ ಹೊಟೇಲ್‌ನ್ನು ಪರಿಶೀಲಿಸಿ ಡಿಸ್ಕೌಂಟ್ ಲೆಕ್ಕಾಚಾರ ಹಾಕಿ ಹೊಟೇಲನ್ನು ಬುಕ್ ಮಾಡಿಕೊಳ್ಳುವುದು ಒಳ್ಳೆಯದು.

ಆಫ್ ಸೀಸನ್ ಉತ್ತಮ: ರಜಾ ದಿನಗಳಲ್ಲಿ, ಹಬ್ಬಹರಿದಿನಗಳ ಸಮಯದಲ್ಲಿ ಪ್ರವಾಸಕ್ಕೆ ಹೋಗುವುದಕ್ಕಿಂತ ಹಣ ಉಳಿತಾಯಕ್ಕೆ ಇತರ ದಿನಗಳಲ್ಲಿ ಹೋಗುವುದು ಒಳಿತು. ಇದರಿಂದ ಬಸ್ಸು, ರೈಲು, ವಿಮಾನ ಟಿಕೆಟ್ ದರದಲ್ಲಿ ಕಡಿತವಾಗುವುದಲ್ಲದೆ ನಾವು ಹೋಗುವ ಸ್ಥಳವೂ ಜನಜಂಗುಳಿಯಿಂದ ತುಂಬಿರುವುದಿಲ್ಲ. ನಮಗೆ ಬೇಕಾದಂತೆ ಹೋಗಿ ಆರಾಮವಾಗಿ ನೋಡಿಕೊಂಡು ಬರಬಹುದು. ಖರ್ಚು ಕಡಿಮೆಯಾಗುತ್ತದೆ.

ಆಹಾರ: ಪ್ರವಾಸ ಹೋದಾಗ ಆಹಾರದ ಕಡೆ ಗಮನ ಹರಿಸುವುದು ಅಗತ್ಯ. ಪ್ರಮುಖ ಪ್ರವಾಸಿ ಸ್ಥಳದ ಸುತ್ತಮುತ್ತ ಇರುವ ಹೊಟೇಲ್‌ಗಳು ಸಾಮಾನ್ಯವಾಗಿ ದುಬಾರಿಯಾಗಿರುತ್ತದೆ. ಸಾಧ್ಯವಾದಷ್ಟು ಕೆಲವು ಆಹಾರ ತಿನಿಸುಗಳನ್ನು ಮನೆಯಿಂದ ಕಟ್ಟಿಕೊಂಡು ಹೋಗುವುದು ಒಳಿತು.

ಸ್ಥಳ ವೀಕ್ಷಣೆ: ಇರುವ ಸಮಯದಲ್ಲಿ, ಕಡಿಮೆ ವೆಚ್ಚದಲ್ಲಿ ಪ್ರವಾಸಕ್ಕೆ ತೆರಳಿದ ಜಾಗವನ್ನು ಸಂಪೂರ್ಣವಾಗಿ ವೀಕ್ಷಿಸಿ ಮಾಹಿತಿ ಸಂಗ್ರಹಿಸುವುದು ಮುಖ್ಯ. ಕೆಲವು ಸ್ಥಳಕ್ಕೆ ಉಚಿತ ಪಾಸ್‌ಗಳಿವೆಯೇ ಎಂದು ತಿಳಿದುಕೊಳ್ಳಬೇಕು.

ಸಾರಿಗೆ: ಪ್ರವಾಸ ಹೋದಲ್ಲಿ ಅಲ್ಲಿನ ಸುತ್ತಮುತ್ತಲ ಸ್ಥಳ ವೀಕ್ಷಿಸಲು ಟ್ಯಾಕ್ಸಿ, ಆಟೋ ಹಿಡಿಯುವ ಬದಲು ಸ್ಥಳೀಯ ಬಸ್ಸು, ರೈಲನ್ನು ಹತ್ತಬಹುದು. ಇದರಿಂದ ಖರ್ಚು ಕಡಿಮೆ ಮಾಡಬಹುದು ಹಾಗೂ ಸುರಕ್ಷತೆಯೂ ಹೆಚ್ಚು.

ಶಾಪಿಂಗ್: ಪ್ರವಾಸಿ ಸ್ಥಳಗಳ ಸುತ್ತಮುತ್ತ ಆದಷ್ಟು ಕಡಿಮೆ ಶಾಪಿಂಗ್ ಮಾಡುವುದು ಉತ್ತಮ. ಇಂತಹ ಸ್ಥಳಗಳಲ್ಲಿ ಸಾಮಾನ್ಯವಾಗಿ ಎಲ್ಲಾ ವಸ್ತುಗಳ ಬೆಲೆ ದುಪ್ಪಟ್ಟಾಗಿರುತ್ತದೆ.

ಮೊಬೈಲ್ ಬಳಕೆ: ಬೇರೆ ರಾಜ್ಯ, ಬೇರೆ ದೇಶಕ್ಕೆ ಹೋದರೆ ಮೊಬೈಲ್‌ನ ಕರೆನ್ಸಿ ಚಾರ್ಜ್ ದುಪ್ಪಟ್ಟಾಗುತ್ತದೆ. ಈ ಸಂದರ್ಭದಲ್ಲಿ ಸ್ಥಳೀಯ ಸಿಮ್ ಬಳಸಬಹುದು. ಬೇರೆ ದೇಶಕ್ಕೆ ಹೋಗುವುದಿದ್ದರೆ ಅಂತಾರಾಷ್ಟ್ರೀಯ ಸಿಮ್ ಬಳಸಬಹುದು.

ಮಕ್ಕಳ ಸುರಕ್ಷೆ: ಪ್ರವಾಸದ ಸಂದರ್ಭದಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುವುದಿದ್ದರೆ ಅವರ ಆಹಾರ, ಆಟಿಕೆ, ಬಟ್ಟೆಬರೆಗಳನ್ನು ಮನೆಯಿಂದ ಹೋಗುವಾಗ ತೆಗೆದುಕೊಂಡು ಹೋಗುವುದು ಒಳ್ಳೆಯದು. ಏಕೆಂದರೆ ಹೋದಲ್ಲಿ ತೆಗೆದುಕೊಂಡರೆ ದುಬಾರಿಯೆನಿಸುತ್ತದೆ.

ಕಡಿಮೆ ಲಗೇಜು: ಪ್ರಯಾಣಕ್ಕೆ ತೆರಳುವ ಸಂದರ್ಭದಲ್ಲಿ ಆದಷ್ಟು ಕಡಿಮೆ ಬಟ್ಟೆಬರೆಗಳನ್ನು, ವಸ್ತುಗಳನ್ನು ತೆಗೆದುಕೊಂಡು ಹೋದರೆ ನಮಗೆ ಆರಾಮವೆನಿಸುತ್ತದೆ. ಆದರೆ ಅಗತ್ಯ ವಸ್ತುಗಳನ್ನು ಮರೆಯಬಾರದು. ಸೋಪು, ಔಷಧಿ, ಕೆಲವು ಆಹಾರ ಪದಾರ್ಥಗಳು, ಪೆನ್ನು, ಪುಸ್ತಕ, ಕ್ರೆಡಿಟ್, ಡೆಬಿಟ್ ಕಾರ್ಡ್‌ಗಳು, ಗುರುತಿನ ಚೀಟಿ, ಅಗತ್ಯ ದೂರವಾಣಿ ಸಂಖ್ಯೆಗಳು ಇವೆಲ್ಲ ನಮ್ಮ ಜೊತೆಗಿದ್ದರೆ ಪ್ರಯಾಣ ಸುಖವಾಗಿರುತ್ತದೆ.

* ಸುಮನಾ ಉಪಾಧ್ಯಾಯ

Exit mobile version