Kundapra.com ಕುಂದಾಪ್ರ ಡಾಟ್ ಕಾಂ

ಬೇಳೂರು: ನೀರಿನಲ್ಲಿ ಕದಡಿಹೋಯ್ತು ತಾಯಿ ಮಕ್ಕಳ ಬದುಕು, ಕೃಷಿ ಪ್ರೀತಿ

ಬೇಳೂರು ಗ್ರಾಮ ಪಂಚಾಯತ್ ದೇಲಟ್ಟು ನರಸಿಂಹ ಶೆಟ್ಟಿ ಅವರ ಕುಟುಂಬದಲ್ಲೀಗ ಅಕ್ಷರಶಃ ಸ್ಮಶಾನಮೌನ ಆವರಿಸಿಕೊಂಡಿದೆ. ಮಂಗಳವಾರ ಸಂಜೆಯ ತನಕವೂ ಮನೆಯಲ್ಲಿದ್ದ ಭಾರತಿ ಶೆಟ್ಟಿ ಹಾಗೂ ಅವರ ಇಬ್ಬರು ಮಕ್ಕಳಾದ ಪ್ರಥ್ವಿ ಹಾಗೂ ಪ್ರಜ್ಞಾ, ತಾವು ಪ್ರೀತಿಯಿಂದ ಮಾಡುತ್ತಿದ್ದ ಕಾಯಕದೊಂದಿಗೆ ವಿಧಿಯ ಕ್ರೂರಲೀಲೆಗೆ ಬಲಿಯಾದಂತಾಗಿದೆ. ಗದ್ದೆಗೆ ಬಿತ್ತನೆ ಮಾಡಲೆಂದು ಕೃಷಿ ಹೊಂಡದಲ್ಲಿ ನೆನೆ ಹಾಕಿದ್ದ ಬೀಜವನ್ನು ಮೇಲೆತ್ತಲು ತಾಯಿಯೊಂದಿಗೆ ತೆರಳಿದ್ದ ಮಕ್ಕಳು 5 ಚೀಲಗಳನ್ನು ಮೇಲೆತ್ತಿ ಕೊನೆಯ ಚೀಲವನ್ನು ಎಳೆದು ತರುವಾಗ ಅವಘಡ ಸಂಭವಿಸಿತ್ತು. ಮೂವರೂ ನೀರುಪಾಲಾಗಿ ಹೋಗಿದ್ದಾರೆ. ಈಜು ಕಲಿತಿದ್ದ ಸಹೋದರಿಯರು ಹಾಗೂ ಅವರ ತಾಯಿಗೆ ಕೃಷಿಹೊಂಡ ಹಾಗೂ ಅದರಲ್ಲಿದ್ದ ಅಂತರಗಂಗೆಯೇ ಮೃತ್ಯುವಾಗಿ ಪರಿಣಮಿಸಿದೆ. ಕುಂದಾಪ್ರ ಡಾಟ್ ಕಾಂ ವರದಿ.

ಕೃಷಿಯೆಂದರೆ ಪ್ರೀತಿ:
ದೇಲಟ್ಟು ನರಸಿಂಹ ಶೆಟ್ಟಿ ಹೇಳಿಕೇಳಿ ದೊಡ್ಡ ಕೃಷಿಕರು. ಅವರ ಕುಟುಂಬಿಕರು ಸಹಜವಾಗಿ ಕೃಷಿಯನ್ನೇ ಅವಲಂಬಿಸಿದ್ದರು. ನರಸಿಂಹ ಶೆಟ್ಟಿ ಅವರ ನಾಲ್ವರು ಮಕ್ಕಳಲ್ಲಿ ಓರ್ವರಾದ ಭಾರತಿ ಶೆಟ್ಟಿ ಅವರು ಅಂಪಾರಿನ ಸುರೇಂದ್ರ ಶೆಟ್ಟಿ ಅವರೊಂದಿಗೆ ವಿವಾಹವಾಗಿದ್ದರು. ತಂದೆಯ ಮನೆಯಲ್ಲಿಯೇ ತನ್ನ ಇಬ್ಬರು ಪುತ್ರಿಯೊಂದಿಗೆ ವಾಸವಾಗಿದ್ದರು. ಭಾರತಿ ಶೆಟ್ಟಿ ಅವರ ಇಬ್ಬರು ಮಕ್ಕಳಲ್ಲಿ ಹಿರಿಯ ಮಗಳು ಪ್ರಥ್ವಿ ಶೆಟ್ಟಿ ಬ್ರಹ್ಮಾವರದ ಎಸ್‌ಎಂಎಸ್ ಕಾಲೇಜಿನಲ್ಲಿ ಅಂತಿಮ ಬಿ.ಕಾಂ ಓದುತ್ತಿದ್ದರೇ, ಕಿರಿಯ ಮಗಳು ಪ್ರಜ್ಞಾ ಶೆಟ್ಟಿ ಕುಂದಾಪುರದ ಆರ್.ಎನ್. ಶೆಟ್ಟಿ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ ಮುಗಿಸಿ ಸಿಇಟಿ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಳು. ಅಕ್ಕತಂಗಿ ಈರ್ವರೂ ಓದಿನೊಂದಿಗೆ ತಾಯಿಯ ಕೃಷಿ ಚಟುವಟಿಕೆಯಲ್ಲಿ ನಿರಂತರವಾಗಿ ತೊಡಗಿಕೊಳ್ಳುತ್ತಿದ್ದರು. ಉಳುವೆ ಮಾಡುವುದಿರಲಿ, ನೆಟ್ಟಿ ಕಟಾವು ಏನೇ ಇರಲಿ ಸದಾ ಮುಂದಿರುತ್ತಿದ್ದರು.

ಟಿಲ್ಲರ್ ಚಲಾಯಿಸಿ ಉಳುಮೆ ಮಾಡುತ್ತಿದ್ದ ಸಹೋದರಿಯರು:
ಕೃಷಿ ಕಾರ್ಯ ಆರಂಭಗೊಳ್ಳುವ ಸಂದರ್ಭದಲ್ಲಿ ಪ್ರಥ್ವಿ ಹಾಗೂ ಪ್ರಜ್ಞಾ ಈರ್ವರೂ ಸಹೋದರಿಯರೂ ಟಿಲ್ಲರ್ ಮೂಲಕ ಗದ್ದೆ ಉಳುಮೆ ಮಾಡುತ್ತಿದ್ದರು. ಮನೆಯದ್ದ ಟಿಲ್ಲರ್ ಏರಿ ಯುವಕರನ್ನೂ ನಾಚಿಸುವಂತೆ ಚಲಾಯಿಸಿ ಉಳುವೆ ಕಾರ್ಯದಲ್ಲಿ ಮನೆಯವರಿಗೆ ನೆರವಾಗುತ್ತಿದ್ದರು.

ಹೈನುಗಾರಿಕೆಯಲ್ಲಿ ಸದಾ ಮುಂದು:
ಅಕ್ಕತಂಗಿಯರಿಬ್ಬರೂ ಕಾಲೇಜಿಗೆ ತೆರಳುತ್ತಿದ್ದರೂ ಬೆಳಿಗ್ಗೆ ಮತ್ತು ಸಂಜೆ ಮನೆ ಕೆಲಸ ಕೊಟ್ಟಿಗೆಯ ಕೆಲಸಗಳನ್ನು ಮಾಡಿಟ್ಟೆ ತೆರಳುತ್ತಿದ್ದರು. ಪ್ರತಿ ದಿನವೂ ಹಸುವಿನ ಹಾಲು ಕರೆದು ಸಮೀಪದ ಡೈರಿಗೆ ನೀಡುವುದನ್ನು ತಪ್ಪಿಸುತ್ತಿರಲಿಲ್ಲ. ಓದಿನ ನಡುವೆಯೂ ಬದುಕಿನ ಪಾಠ ಕಲಿಸುವ ಕಾಯಕದಲ್ಲಿ ತೊಡಗಿಕೊಂಡು ಮಾದರಿಯಾಗಿದ್ದರು.

ಮೊಬೈಲ್ ಬಳಸುತ್ತಿರಲಿಲ್ಲ:
ಪದವಿ ಓದುತ್ತಿದ್ದ ಅಕ್ಕ, ಪಿಯುಸಿ ಮುಗಿಸಿದ್ದ ತಂಗಿ ಈರ್ವರೂ ಮೊಬೈಲ್ ಬಳಸುತ್ತಿರಲ್ಲ. ಮೊಬೈಲ್ ಬಳಸದ ವಿದ್ಯಾರ್ಥಿಗಳೇ ಇಲ್ಲ ಎನ್ನುವ ಜಮಾನದಲ್ಲಿ ಓದು ಕೆಲಸದಲ್ಲಿಯೇ ನಿರತರಾಗಿರುತ್ತಿದ್ದ ಸಹೋದರಿಯರಿಗೆ ಮೊಬೈಲ್ ಬಳಸುವ ಅಗತ್ಯತೆಯೂ ಇದ್ದಿರಲಿಲ್ಲವೇನೋ.

ಒಂದೇ ಚಿತೆಯಲ್ಲಿ ತಾಯಿ ಮಕ್ಕಳ ಅಂತ್ಯಕ್ರಿಯೆ:
ಮೃತ ತಾಯಿ ಹಾಗೂ ಈರ್ವರು ಮಕ್ಕಳ ಅಂತ್ಯಕ್ರಿಯೆಯನ್ನು ಒಂದೇ ಚಿತೆಯಲ್ಲಿ ಮಾಡಲಾಯಿತು. ಮಧ್ಯದಲ್ಲಿ ತಾಯಿ ಅಕ್ಕ ಮಕ್ಕದಲ್ಲಿ ಮಕ್ಕಳ ಶವವನ್ನಿಟ್ಟು ಮನೆಯ ಮಕ್ಕದಲ್ಲಿಯೇ ಮೃತರ ಅಂತ್ಯಕ್ರಿಯೆ ನಡೆಸಲಾಯಿತು. ಕುಂದಾಪ್ರ ಡಾಟ್ ಕಾಂ ವರದಿ.

Also Read:

► ಕುಂದಾಪುರ: ಕೃಷಿಹೊಂಡದಲ್ಲಿ ಮುಳುಗಿ ತಾಯಿ ಇಬ್ಬರು ಮಕ್ಕಳ ಸಾವು –  http://kundapraa.com/?p=23221

► ಕೆರೆಯಲ್ಲಿ ಮುಳುಗಿ ತಂದೆ ಹಾಗೂ ಇಬ್ಬರು ಮಕ್ಕಳ ದುರ್ಮರಣ –http://kundapraa.com/?p=14030

 ತಾಯಿ ಮಕ್ಕಳು ಪ್ರಾಣಕಳೆದುಕೊಂಡ ಕೃಷಿಹೊಂಡ

Exit mobile version