Kundapra.com ಕುಂದಾಪ್ರ ಡಾಟ್ ಕಾಂ

ಇತಿಹಾಸ ಪ್ರಸಿದ್ಧ ತಗ್ಗರ್ಸೆ ಕಂಬಳಗದ್ದೆಯಲ್ಲಿ ಸಾಂಪ್ರದಾಯಿಕ ನಾಟಿ ಕಾರ್ಯ

ಕುಂದಾಪ್ರ ಡಾಟ್ ಕಾಂ ವರದಿ.
ಬೈಂದೂರು: ನೂರಾರು ವರ್ಷಗಳ ಇತಿಹಾಸ ಹೊಂದಿರುವ, ಐತಿಹಾಸಿಕ ಕಂಬಳ ನಡೆಯುವ ತಗ್ಗರ್ಸೆ ಕಂಠದಮನೆ ಕುಟುಂಬಸ್ಥರ ಕಂಬಳಗದ್ದೆಯಲ್ಲಿ ಪ್ರತಿವರ್ಷದಂತೆ ಸಾಂಪ್ರದಾಯಿಕ ಕೃಷಿ ಚಟುವಟಿಕೆಗಳು ಆರಂಭಗೊಂಡಿದ್ದು, ನಾಟಿ ಕಾರ್ಯ ಪೂರ್ಣಗೊಂಡಿದೆ. ಕಂಠದಮನೆಯ ಕುಂಟುಂಬಿಕರಲ್ಲಿ ಹಿರಿಯವರಾದ ಟಿ. ನಾರಾಯಣ ಹೆಗ್ಡೆ ಅವರ ಮಾರ್ಗದರ್ಶನಲ್ಲಿ ನೂರಾರು ಮಂದಿ ಕೃಷಿ ಕಾರ್ಮಿಕರಿಂದ ವಾಡಿಕೆಯಂತೆ ಒಂದೇ ದಿನದಲ್ಲಿ ನಾಟಿ ಕಾರ್ಯ ಪೂರ್ಣಗೊಂಡಿದೆ. ಸಾಂಪ್ರದಾಯಿಕ ಕಾರ್ಯ ಚಾಲನೆ ನೀಡುವ ವೇಳೆಗೆ ಜಿಪಂ ಸದಸ್ಯ ಬಾಬು ಶೆಟ್ಟಿ ತಗ್ಗರ್ಸೆ, ಗ್ರಾಪಂ ಸದಸ್ಯ ಕಂಠದಮನೆ ಬಾಲಕೃಷ್ಣ ಹೆಗ್ಡೆ, ಕಂಠದಮನೆ ಸುಬಾಶ್ಚಂದ್ರ ಶೆಟ್ಟಿ, ಉದಯ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

ಸಾಂಪ್ರದಾಯಿಕ ಕೃಷಿ ಕಾರ್ಯ:
ಕಂಠದಮನೆಯ ಎದುರೇ 5.14 ಎಕರೆ ವಿಸ್ತೀರ್ಣವಾದ ಕಂಬಳಗದ್ದೆ ಇದ್ದು, ಇದು ದೇವರಗದ್ದೆ ಎಂಬ ನಂಬಿಕೆ ಸ್ಥಳೀಯರಲ್ಲಿದೆ. ಇಲ್ಲಿರುವ ವೀರಗಲ್ಲು, ಶಾಸನಗಳು ಇದು ಪುರಾತನವಾದುದು ಎಂಬುದಕ್ಕೆ ಪುಷ್ಠಿ ನೀಡುತ್ತದೆ. ಇಂದಿಗೂ ಕೂಡ ಇಲ್ಲಿ ಹಿಂದಿನ ಸಂಪ್ರದಾಯವನ್ನು ಆಚರಿಸಿಕೊಂಡು ಬರಲಾಗುತ್ತಿದ್ದು ಮಳೆಗಾಲ ಆರಂಭವಾಗುತ್ತಿದ್ದಂತೆ ನಾಟಿ ಕಾರ್ಯಕ್ಕೆ ತಯಾರಿ ನಡೆಯುತ್ತದೆ. ಇಡಿ ಗದ್ದೆಯನ್ನು ಒಂದೇ ದಿನದಲ್ಲಿ ನಾಟಿ ಮಾಡಬೇಕು ಎಂಬ ಸಂಪ್ರದಾಯವಿದ್ದು ಟ್ರಾಕ್ಟರ್ ಬಳಸಿ ಉಳುಮೆ ಮಾಡಲಾಗುತ್ತದೆ. ನೂರಾರು ಕೃಷಿ ಆಳುಗಳು ಒಂದೇ ದಿನದಲ್ಲಿ ಗದ್ದೆ ನಾಟಿ ಮಾಡಿ ಮುಗಿಸುತ್ತಾರೆ. ಈ ಕಾರ್ಯ ಶುದ್ಧಾಚಾರದಲ್ಲಿ ನಡೆಯುತ್ತದೆ. ಕುಂದಾಪ್ರ ಡಾಟ್ ಕಾಂ.

ಕಟಾವು ಕಾರ್ಯವು ಅಷ್ಟೇ. ಒಂದೇ ದಿನದಲ್ಲಿ ಮುಗಿಯಬೇಕು ಎಂಬ ವಾಡಿಕೆಯಿದ್ದು ನಾಟಿ ಹಾಗೂ ಕಟಾವು ಕಾರ್ಯದಲ್ಲಿ ಊರಿನ ಇತರ ಕೃಷಿಕರು ಭಾಗವಹಿಸಿ ಸಾರ್ಥಕ ಭಾವ ಹೊಂದುತ್ತಾರೆ. ನಾಟಿ ಮುಗಿದ ಬಳಿಕ ಕಾರ್ತಿಕ ಮಾಸದ ವೃಶ್ಚಿಕ ಸಂಕ್ರಾಂತಿಯಂದು ಸಾಂಪ್ರದಾಯಿಕ ಕಂಬಳ ನಡೆಯುತ್ತದೆ /ಕುಂದಾಪ್ರ ಡಾಟ್ ಕಾಂ/

 

Exit mobile version