Kundapra.com ಕುಂದಾಪ್ರ ಡಾಟ್ ಕಾಂ

ನಮ್ಮೂರಿನ ಚಂದದ ಕೊಡಿಹಬ್ಬ ನೋಡ ಬನ್ನಿ…

ಕುಂದಾಪ್ರ ಡಾಟ್ ಕಾಂ ಲೇಖನ.
ಕರ್ನಾಟಕ ಕರಾವಳಿಯ ಸಪ್ತ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೋಟೇಶ್ವರದಲ್ಲಿ ಕೊಡಿ ಹಬ್ಬದ ಸಂಭ್ರಮಕ್ಕೆ ಸಕಲ ಸಿದ್ಧತೆ ನಡೆದಿದೆ. ಕೋಟೇಶ್ವರ ಒಂದು ಪುರಾಣ ಪ್ರಸಿದ್ಧ ಕ್ಷೇತ್ರ. ಇಲ್ಲಿಯ ಇತಿಹಾಸಕ್ಕಿಂತ ಪುರಾಣ ಹೆಚ್ಚು ಆಕರ್ಷಕವಾದುದು. ಪರಶುರಾಮ ಸೃಷ್ಟಿಯ ಪುರಾಣ ಪ್ರಸಿದ್ಧ ಧ್ವಜಪುರ (ಕೋಟೇಶ್ವರ)ದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ ಸಪ್ತ ಕ್ಷೇತ್ರಗಳಲ್ಲಿ ಒಂದಾಗಿದೆ. ಸಹ್ಯಾದ್ರಿಯ ಪರಶುರಾಮ ಕ್ಷೇತ್ರದಲ್ಲಿ ನೂರು ಪವಿತ್ರ ತೀರ್ಥಗಳೂ ಎಂಬತ್ತು ಪುಣ್ಯ ಕ್ಷೇತ್ರಗಳೂ ಇವೆ. ಉಡುಪಿ, ಸುಬ್ರಹ್ಮಣ್ಯ, ಕುಂಭಾಸಿ, ಕೋಟೇಶ್ವರ, ಶಂಕರನಾರಾಯಣ, ಗೋಕರ್ಣ ಮತ್ತು ಕೊಲ್ಲೂರು ಈ ಏಳು ಕ್ಷೇತ್ರಗಳು ಮೋಕ್ಷದಾಯಕ ಪುಣ್ಯ ಸ್ಥಳಗಳೆಂದು ಪರಿಗಣಿಸಲ್ಪಟ್ಟಿವೆ. ಉಡುಪಿ ಜಿಲ್ಲೆಯ ಉತ್ತರ ತುದಿಯ ತಾಲೂಕು ಕೇಂದ್ರವಾದ ಕುಂದಾಪುರದಿಂದ ಕೋಟೇಶ್ವರವು 4 ಕಿ.ಮೀ. ದಕ್ಷಿಣದಲ್ಲಿದೆ. ಈ ಕ್ಷೇತ್ರದ ಪಶ್ಚಿಮದಲ್ಲಿ ಅರಬ್ಬಿ ಸಮುದ್ರ, ಉತ್ತರದಲ್ಲಿ ಕುಂದಾಪುರ, ಪೂರ್ವದಲ್ಲಿ ಕೋಣಿ-ಕಟ್ಕೆರೆ ಹಾಗೂ ದಕ್ಷಿಣದಲ್ಲಿ ಕುಂಭಾಸಿಯ ಭೌಗೋಳಿಕ ಮೇರೆಗಳಿವೆ.

ಪುರಾಣಗಳಲ್ಲಿ ಕೋಟೇಶ್ವರವನ್ನು ಧ್ವಜಪುರವೆಂದು ಕರೆಯಲಾಗಿದೆ. ಈಶ್ವರನು ತ್ರಿಪುರಾರಿ. ಕೋಟೇಶ್ವರವೂ ಸಮೀಪದ ತ್ರಿಪುರಗಳನ್ನು ಗೆದ್ದು ಅಲ್ಲಿಂದ ಕಪ್ಪಕಾಣಿಕೆಗಳನ್ನು ಪಡೆದು ಇಲ್ಲಿ ಧ್ವಜ ಹಾರಿಸುವ ರಥೋತ್ಸವವನ್ನು ಆಚರಿಸುವುದರಿಂದ ಇದು ಧ್ವಜಪುರವೆಂಬ ಅಭಿಪ್ರಾಯ ವ್ಯಕ್ತವಾಗಿದೆ. ಕೋಟೇಶ್ವರದ ಸುತ್ತಮುತ್ತ 68 ಶಿವ ಕ್ಷೇತ್ರಗಳಿದ್ದು ಅವುಗಳಲ್ಲಿ ಕೋಟಿಲಿಂಗೇಶ್ವರನ ಸನ್ನಿಧಾನವೇ ಅತ್ಯಂತ ಪ್ರಮುಖವಾದುದು. 68 ಕ್ಷೇತ್ರಗಳ ತಲೆವಣಿಯಾಗಿ ರಾರಾಜಿಸುತ್ತಾ ಇಲ್ಲಿ ಶಿವನ ಕೀರ್ತಿ ಧ್ವಜವು ಹಾರಾಡುತ್ತಿದೆಯೆಂಬ ಅರ್ಥದಲ್ಲಿ ಅದು ಧ್ವಜಪುರವೆನ್ನಿಸಿರಬಹುದೆಂಬ ಅಭಿಪ್ರಾಯ ಚಿಂತಕರದು. ವಸುರಾಜನು ದೇವಾಲಯದ ಮುಂದೆ 114 ಹಸ್ತ ಪ್ರಮಾಣದ ಧ್ವಜಸ್ತಂಭವೊಂದನ್ನು ನಿರ್ಮಿಸಿದ್ದನೆಂಬ ಹಿನ್ನಲೆಯಲ್ಲಿಯೂ ಧ್ವಜಪುರವೆಂಬ ಹೆಸರು ಬಂದಿರಬಹುದು ಎಂಬ ಅಭಿಪ್ರಾಯ ಕೂಡ ಕೇಳಿ ಬಂದಿದೆ. ಇತಿಹಾಸದ ದಾಖಲೆಗಳಲ್ಲಿದ್ದಂತೆ ಕೋಟೇಶ್ವರದ ಮೂಲ ಹೆಸರು ಕುಡಿಕೂರು. ಇದರ ಪಳೆಯುಳಿಕೆಗಾಗಿ ಇಂದಿಗೂ ಇಲ್ಲಿನ ಹಬ್ಬವನ್ನು “ಕೊಡಿಹಬ್ಬ”ವೆಂದೇ ಕರೆಯಲಾಗುತ್ತದೆ. ಈ ಕುಡಿ, ಕೊಡೆಯ ಸಂಸ್ಕøತ ರೂಪ ಧ್ವಜ. ಹಾಗಾಗಿ ಕುಡಿಕೂರನ್ನೇ ಸಂಸ್ಕøತದಲ್ಲಿ ಧ್ವಜಪುರವೆಂದು ಕರೆಯಲಾಗುತ್ತಿದೆ.

ಪ್ರತಿವರ್ಷ ವೃಶ್ಟಿಕಮಾಸದ ಹುಣ್ಣಿಮೆಯಂದು ಕೊಡಿಹಬ್ಬ ಅಥವಾ ಮಹಾರಥೋತ್ಸವ ಜರಗುವುದು. ಕೊಡಿಹಬ್ಬವೆಂಬ ಹೆಸರು ಪಡೆಯಲು ಒಂದು ಕಥೆಯೇ ಇದೆ. ಇದರ ಪ್ರಕಾರ ಮಾಹಿಷ್ಮತಿ ರಾಜ ರಾಜವಸುವು ಬ್ರಹ್ಮ ರಥೋತ್ಸವ ನಡೆಸುವುದೆಂದು ತೀರ್ಮಾನಿಸಿದಾಗ ಆ ಮೂಹೂರ್ತಕ್ಕೆ ರಥ ತಯಾರಾಗದ ಕಾರಣ ಕೊಡಿ(ಬಿದಿರು)ಯಿಂದ ರಥ ನಿರ್ಮಿಸಿ ರಥೋತ್ಸವ ಆರಂಭಿಸಿದನೆಂದು ಹೇಳಲಾಗುತ್ತಿದೆ. ಹೀಗೆ ಮೊದಲ ರಥೋತ್ಸವ ಕೊಡಿ ನಿರ್ಮಿತ ರಥದಿಂದ ಜರುಗಿರುವುದರಿಂದ ಇದನ್ನು ಕೊಡಿಹಬ್ಬವೆಂದು ಕರೆಯಲಾಗುತ್ತಿದೆಯಂತೆ ಇದರ ನೆನಪಿಗಾಗಿ ಒಂದು ಸಂಕೇತವಾಗಿ ಇಂದಿಗೂ ಬ್ರಹ್ಮ ರಥೋತ್ಸವದಲ್ಲಿ ಬಿದಿರಿನ ಕೊಡಿಯನ್ನು ರಥಕ್ಕೆ ಮೊದಲಾಗಿ ಕೊಂಡೊಯ್ಯುತ್ತಾರೆಂಬ ಮಾತೂ ಇದೆ. ಅಲ್ಲದೆ ದೀಪಾವಳಿ ಉತ್ಸವಕ್ಕೆ ಸ್ನಾನಕ್ಕೆಂದು ಹೋದಾಗ ದೇವರ ಮೂರ್ತಿ ಸಮುದ್ರದಲ್ಲಿ ಬಿದ್ದು ಹೋಗಿ ಅದು ಬಿದಿರಿನ ಬಲ್ಲೆಯೊಂದರಲ್ಲಿ ಸಿಕ್ಕಿರುವ ಕಾರಣ ಬಿದಿರಿನ ಕುಡಿಯನ್ನು ಮುಂದಿಟ್ಟುಕೊಂಡು ಉತ್ಸವ ಹೊರಡಿಸುವುದನ್ನು ಆರಂಭಿಸಿಲಾಯಿತೆಂಬ ಐತಿಹಾಸವೂ ಇದೆ. ಕುಂದಾಪ್ರ ಡಾಟ್ ಕಾಂ ಲೇಖನ.

ಕೋಟೇಶ್ವರದ ಸುತ್ತುಮುತ್ತಲಿನ ನವವಿವಾಹಿತರು ಬದುಕಿನ ಕುಡಿಯೊಡೆವ ಕ್ಷೇತ್ರವೆಂದೇ ನಂಬುಗೆ ತಳೆದವರಾಗಿ ಕೋಟಿತೀರ್ಥದಲ್ಲಿ ಸ್ನಾನಮಾಡಿ ದೇವರ ದರ್ಶನ ಪಡೆದು ಕಬ್ಬಿನ ಕೊಡಿಯನ್ನು ಒಟ್ಟಿಗೆ ಕೊಂಡೊಯ್ಯುತ್ತಾರೆ. ಈ ಹಬ್ಬ ವಿವಾಹಿತರಿಗೆ ಮಾತ್ರವಲ್ಲದೆ ಅವಿವಾಹಿತರಿಗೂ ಶ್ರೇಷ್ಠ ಏಕೆಂದರೆ ಈ ದಿನ ಹಲವಾರು ಮಂದಿ ತಮ್ಮ ಸಂಗಾತಿಗಳನ್ನು ಅರ್ಥಾತ್ ಮೇಳಾ ಮೇಳಿ ಕಾಣುತ್ತಾರೆ. ಅನೇಕ ವರ್ಷಗಳಿಂದ ಹಿಂದೆ ಕೊಡಿಹಬ್ಬ ಸುಮಾರು ಮೂರು ತಿಂಗಳುಕಾಲದವರೆಗೆ ನಡೆಯುತ್ತಿತ್ತಂತೆ. ಒಂದು ವ್ಯಾಪಾರಿ ಕೇಂದ್ರವಾಗಿಯೂ ಇದು ಪ್ರಸಿದ್ದಿ ಪಡೆದಿತ್ತು. ಘಟ್ಟ ಪ್ರದೇಶಗಳಿಂದಲೂ ಸಹ ವ್ಯಾಪಾರಕ್ಕೆ ಬರುತ್ತಿದ್ದರೆಂದು ಹಿರಿಯರ ನುಡಿ ಈಗ ರತೋತ್ಸವಾದಿ ಕಾರ್ಯಕ್ರಮಗಳು ಸುಮಾರು ಏಳುದಿನಗಳ ಕಾಲ ನಡೆಯುತ್ತಿದೆ. ಹದಿನೈದು ದಿನಗಳ ಮೊದಲು ರಥ ಮೂಹೂರ್ತ ಮಾಡಲಾಗುತ್ತದೆ. ಅಂಕುರಾರೋಹಣ, ಧ್ವಜಾರೋಹಣ, ಭೇರಿತಾಡನ, ಹೋಮಾದಿಗಳು, ವಾಹನೋತ್ಸವಗಳು ಪ್ರಮುಖ ಮೊದಲ ಘಟ್ಟಗಳಾಗಿವೆ.

ಈ ಕ್ಷೇತ್ರದ ಅಧಿದೇವ ಶ್ರೀ ಕೋಟಿಲಿಂಗೇಶ್ವರನ ಬ್ರಹ್ಮ ರಥೋತ್ಸವವೇ ಕೊಡಿ ಹಬ್ಬ. ವ್ಯವಹಾರಸ್ಥರಿಗೆ ಹೊಸ ಲೆಕ್ಕಚಾರ ಪ್ರಾರಂಭವಾಗಿ ಅಭಿವೃದ್ಧಿಯ ಕುಡಿಯೊಡೆಯುತ್ತದೆ, ಅವಿವಾಹಿತರಿಗೆ ಬಾಳಜೋಡಿ ಸಿಗುತ್ತದೆ, ನವ ವಿವಾಹಿತರಿಗೆ ಕರುಳ ಕುಡಿ ಚಿಗುರಿ ಸಂತಸ ಚಿಮ್ಮುತ್ತದೆ, ಕೃಷಿಕರಿಗೆ ಫಸಲು ತುಂಬಿ ಸಮೃದ್ಧಿಯ ಕುಡಿ ಮೊಳೆಯುತ್ತದೆ ಎಂಬ ನಂಬಿಕೆಯೇ ತಾಲೂಕಿನ ದೊಡ್ಡ ಈ ರಥೋತ್ಸವಕ್ಕೆ ಕೊಡಿ ಹಬ್ಬ ಎಂದು ಹೆಸರು ಬರಲು ಕಾರಣವಾಯಿತು.

ಇತಿಹಾಸ ಪ್ರಸಿದ್ದ ಮಾಹಿಷ್ಮತಿ ನಗರದ ಚಕ್ರವರ್ತಿ ವಸುದೇವ ತೀರ್ಥಯಾತ್ರೆ ನಡೆಸುತ್ತಾ ಈ ಭಾಗಕ್ಕೆ ಬಂದಾಗ ನಾರದರ ಉಪದೇಶದಂತೆ ಶ್ರೀ ಕೋಟಿಲಿಂಗೇಶ್ವರನನ್ನು ಪೂಜಿಸಿ, ಇಲ್ಲಿ ಭವ್ಯ ಶಿಲಾದೇಗುಲ ನಿರ್ಮಿಸಿದ ಎಂದು ಪುರಾಣದಲ್ಲಿ ತಿಳಿದುಬರುತ್ತದೆ. ದೇವಾಲಯದ ಎದುರು ಆತ ನೂರ ಹದಿನಾಲ್ಕು ಹಸ್ತ ಪ್ರಮಾಣದ ದ್ವಜಸ್ಥಂಭ ನಿರ್ಮಿಸಿದ. ಈ ದ್ವಜಸ್ಥಂಭದ ಖ್ಯಾತಿಯಿಂದಾಗಿ ಕೋಟೇಶ್ವರನಿಗೆ ದ್ವಜೇಶ್ವರ ಎಂದು ಹೆಸರು ಬಂದಿದೆ. ಈ ಕಾರಣಕ್ಕೆ ಊರಿಗೆ ದ್ವಜಪುರ ಎಂದು ಹೆಸರಾಯಿತು.

ಕೊಡಿ ಹಬ್ಬದ ಆಚರಣೆ ಪ್ರಾಚೀನಕಾಲದಿಂದಲೂ ನಡೆದು ಬಂದಿದೆ, ಬಸ್ರೂರಿನ ರಾಜ ವಸು ಚಕ್ರವರ್ತಿ ತನಗೆ ಸಂತಾನ ಭಾಗ್ಯ ಕರುಣಿಸಿದರೆ ಶ್ರೀ ಕೋಟಿಲಿಂಗೇಶ್ವರ ದೇವಾಲಯದ ಪುನರುತ್ಥಾನ ನಡೆಸುದಾಗಿ ಹರಕೆ ಹೊರುತ್ತಾನೆ. ಪುತ್ರ ಸಂತಾನವಾದಾಗ ಹರಕೆಯಂತೆ ದೇವಾಲಯವನ್ನು ಭವ್ಯವಾಗಿ ಪುನರ್ ನಿರ್ಮಿಸಿದ ಎಂದು ಇತಿಹಾಸ ತಜ್ಞರು ವಿವರಿಸುತ್ತಾರೆ. ಕುಂದಾಪ್ರ ಡಾಟ್ ಕಾಂ ಲೇಖನ.

ಭಾವೀ ಸಮೀರ ಶ್ರೀ ವಾದಿರಾಜ ಗುರುಗಳು ಬಾಲ್ಯದಿಂದಲೂ ಸಂಪರ್ಕಪಡೆದ ಕ್ಷೇತ್ರವಿದು. ಸಂಸ್ಕ್ರತದಲ್ಲಿ ಮೊದಲ ಪ್ರವಾಸ ಗ್ರಂಥ ಎಂದು ಹೆಸರು ಪಡೆದ ವಾದಿರಾಜರ ತೀರ್ಥ ಪ್ರಬಂಧದಲ್ಲಿ ಕೋಟೇಶ್ವರ ಕ್ಷೇತ್ರವನ್ನು ಬಹುವಾಗಿ ವರ್ಣಿಸಿದ್ದಾನೆ.

ವೃಶ್ಚಿಕ ಮಾಸದ ಪೂರ್ಣಿಮೆಯಂದು ಕೊಡಿಹಬ್ಬ. ಹಿಂದೆ ವಸು ಚಕ್ರವರ್ತಿ ರಥೋತ್ಸವ ನಡೆಸಲು ಸಂಕಲ್ಪಸಿದಾಗ ಬ್ರಹ್ಮರಥ ತಯಾರಾಗಿಲ್ಲ. ಆದ್ದರಿಂದ ಆತ ಬಿದಿರಿನ ರಥ ನಿರ್ಮಿಸಿ ವೃಶ್ಚಿಕ ಮಾಸದ ಪೂರ್ಣಿಮೆಯಂದೇ ಜಾತ್ರೆ ನಡೆಸಿದ ಅದರ ಸಂಕೇತವಾಗಿ ಇಂದಿಗೂ ಬ್ರಹ್ಮರಥೋತ್ಸವ ಪ್ರಾರಂಭದಲ್ಲಿ ಬಿದಿರಿನ ಕುಡಿಗಳನ್ನು ಪ್ರಥಮವಾಗಿ ರಥ ಏರಿಸಲಾಗುತ್ತದೆ.ಟಿಪ್ಪು ಸುಲ್ತಾನ್ ಈ ದೇವಾಲಯಕ್ಕೆ ಉಂಬಳಿ ನೀಡಿದ ಬಗ್ಗೆ ದಾಖಲೆಗಳಿವೆ. ಈ ನೆನಪಿಗಾಗಿ ರಥ ಹೊರಡುವ ಮುನ್ನ `ದೀವಟಿಗೆ ಸಲಾಂ’ ಎಂಬ ವಿಶಿಷ್ಟ ಆಚರಣೆ ನಡೆಸಲಾಗುತ್ತದೆ. ರಥೋತ್ಸವದ ಮುನ್ನ ಏಳು ದಿನಗಳ ಪರ್ಯಂತ ಸಂಜೆಯ ಉತ್ಸವ ಶ್ರೀ ದೇವರ ಪುರ ಮೆರವಣಿಗೆ, ಕಟ್ಟೆ ಪೂಜೆಗಳು ಜರಗುತ್ತದೆ. ಕೋಟೇಶ್ವರದ ಸುತ್ತುಮುತ್ತಲಿನ ನವವಿವಾಹಿತರು ಬದುಕಿನ ಕುಡಿಯೊಡೆವ ಕ್ಷೇತ್ರವೆಂದೇ ನಂಬುಗೆ ತಳೆದವರಾಗಿ ಕೋಟಿತೀರ್ಥದಲ್ಲಿ ಸ್ನಾನಮಾಡಿ ದೇವರ ದರ್ಶನ ಪಡೆದು ಕಬ್ಬಿನ ಕೊಡಿಯನ್ನು ಒಟ್ಟಿಗೆ ಕೊಂಡೊಯ್ಯುತ್ತಾರೆ. ಈ ಹಬ್ಬ ವಿವಾಹಿತರಿಗೆ ಮಾತ್ರವಲ್ಲದೆ ಅವಿವಾಹಿತರಿಗೂ ಶ್ರೇಷ್ಠ ಏಕೆಂದರೆ ಈ ದಿನ ಹಲವಾರು ಮಂದಿ ತಮ್ಮ ಸಂಗಾತಿಗಳನ್ನು ಅರ್ಥಾತ್ ಮೇಳಾ ಮೇಳಿ ಕಾಣುತ್ತಾರೆ. ಅನೇಕ ವರ್ಷಗಳಿಂದ ಹಿಂದೆ ಕೊಡಿಹಬ್ಬ ಸುಮಾರು ಮೂರು ತಿಂಗಳುಕಾಲದವರೆಗೆ ನಡೆಯುತ್ತಿತ್ತಂತೆ. ಒಂದು ವ್ಯಾಪಾರಿ ಕೇಂದ್ರವಾಗಿಯೂ ಇದು ಪ್ರಸಿದ್ದಿ ಪಡೆದಿತ್ತು. ಘಟ್ಟ ಪ್ರದೇಶಗಳಿಂದಲೂ ಸಹ ವ್ಯಾಪಾರಕ್ಕೆ ಬರುತ್ತಿದ್ದರೆಂದು ಹಿರಿಯರ ನುಡಿ ಈಗ ರತೋತ್ಸವಾದಿ ಕಾರ್ಯಕ್ರಮಗಳು ಸುಮಾರು ಏಳುದಿನಗಳ ಕಾಲ ನಡೆಯುತ್ತಿದೆ. ಹದಿನೈದು ದಿನಗಳ ಮೊದಲು ರಥ ಮೂಹೂರ್ತ ಮಾಡಲಾಗುತ್ತದೆ. ಅಂಕುರಾರೋಹಣ, ಧ್ವಜಾರೋಹಣ, ಭೇರಿತಾಡನ, ಹೋಮಾದಿಗಳು, ವಾಹನೋತ್ಸವಗಳು ಪ್ರಮುಖ ಮೊದಲ ಘಟ್ಟಗಳಾಗಿವೆ.

ವಿಶಾಲವಾದ ಕೆರೆ `ಕೋಟಿ ತೀರ್ಥ’: ಕರಾವಳಿಲ್ಲಿಯೇ ಅತ್ಯಂತ ದೊಡ್ಡದಾದ ಪುಷ್ಕರಣೆಯೆಂಬ ಅಭಿದಾನ ಪಡೆದ ಈ ಕೆರೆ ಸುಮಾರು 5 ಎಕರೆ ವೀಸ್ತೀರ್ಣದ ವಿಶಾಲವಾದ ಈ ಕೆರೆಗೆ ಸುತ್ತಕ್ಕಿ ತಳಿದರೆ ತಮ್ಮ ಇಷ್ಟಾರ್ಥ ಈಡೇರುತ್ತದೆ ಎಂಬ ನಂಬಿಕೆಯಿಂದ ಹಬ್ಬದ ದಿನ ಬೆಳಿಗ್ಗೆ 3 ಗಂಟೆಯಿಂದಲೇ ದೂರ ದೂರದ ಹರಕೆ ಹೊತ್ತ ಭಕ್ತಾಭಿಮಾನಿಗಳು ಕೆರೆಯಲ್ಲಿ ತೀರ್ಥ ಸ್ನಾನ ಮಾಡಿ ಮನೆಯಲ್ಲಿಯೇ ಬೆಳೆದ ಬತ್ತದ ಅಕ್ಕಿಯನ್ನು ಈ ಕೆರೆಯ ಸುತ್ತ ಪ್ರೋಕ್ಷಣೆ ಮಾಡುತ್ತಾರೆ. ಕುಂದಾಪ್ರ ಡಾಟ್ ಕಾಂ ಲೇಖನ.

ಕೋಟೇಶ್ವರ ಕೆರೆ, ವಂಡಾರು ಕಂಬಳ ಗದ್ದೆಗೂ ಸಂಬಂಧ ಇದೆ. ಇಲ್ಲಿ ನಡೆಯುವ ಹಬ್ಬದ ಸಂದರ್ಭದಲ್ಲಿ ವಂಡಾರು ಕಂಬಳ ಗದ್ದೆಯಲ್ಲಿ ಧೂಳು ಎಬ್ಬಿಸುತ್ತದೆ. ಹಾಗೆಯೇ ವಂಡಾರು ಕಂಬಳ ದಿನ ಕೋಟೇಶ್ವರ ಕರೆಯಲ್ಲಿ ಕಳಕು ಕಾಣಿಸಿಕೊಳ್ಳುತ್ತದೆ ಎಂಬುವುದು ಭಕ್ತರ ನಂಬಿಕೆ
ಕೊಡಿ ಹಬ್ಬಕ್ಕೆ ತಿಂಗಳು ಇರುವಾಗಲೇ ನಗರವಿಡೀ ಹಬ್ಬದ ಚಟುವಟಿಕೆ ಪ್ರಾರಂಭವಾಗಿದೆ. ಅಂಗಡಿ-ಮನೆಗಳಿಗೆ ಸುಣ್ಣ-ಬಣ್ಣಗಳಿಂದ ಸಿಂಗಾರದ ಗಡಿಬಿಡಿ. ಮನೆಯಲ್ಲಿರುವ ಮಹಿಳೆಯರಿಗೆ ತಿಂಡಿಗಳನ್ನು ತಯಾರಿಸಿ ಬಂಧುಗಳನ್ನು ಸ್ವಾಗತಿಸುವ ತಯಾರಿ, ಹರೆಯದವರಿಗೆ ಈ ಹಬ್ಬದಲ್ಲಿ ಜೋಡಿಗಳನ್ನು ಅರಸುವ ತವಕ ಒಟ್ಟಿನಲ್ಲಿ ಕೋಟೇಶ್ವರ ಪರಿಸರದಲ್ಲಿ ಹಬ್ಬದ ಜ್ವರ ಎಲ್ಲರಿಗೂ ಕಾಡಿದೆ.

ಚಿತ್ರ-ಲೇಖನ: ಸುಧಾಕರ್ ವಕ್ವಾಡಿ

Exit mobile version