Kundapra.com ಕುಂದಾಪ್ರ ಡಾಟ್ ಕಾಂ

8 ಗಂಟೆಗೆ ಪದವಿ ತರಗತಿಗಳು ಆರಂಭ: ಗ್ರಾಮೀಣ ವಿದ್ಯಾರ್ಥಿಗಳು ಅತಂತ್ರ

ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ರಾಜ್ಯ ಕಾಲೇಜು ಶಿಕ್ಷಣ ಇಲಾಖೆ ಸರಕಾರಿ ಪದವಿ ಕಾಲೇಜುಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದಲೇ ತರಗತಿ ಆರಂಭಿಸಬೇಕು ಎಂದು ಹೊರಡಿಸಿರುವ ಆದೇಶ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವರ್ಗದವರಿಗೆ ಕಗ್ಗಂಟಾಗಿ ಪರಿಣಮಿಸಿದ್ದು, ಆದೇಶ ಹಿಂಪಡೆಯಬೇಕೆಂಬ ಆಗ್ರಹ ಎಲ್ಲೆಡೆಯಿಂದಲೂ ಕೇಳಿ ಬರುತ್ತಿದೆ.

ಕಳೆದ ವಾರ ಕಾಲೇಜು ಶಿಕ್ಷಣ ಆಯುಕ್ತರು ಬೆಳಿಗ್ಗೆ 8 ಗಂಟೆಯಿಂದಲೇ ತರಗತಿ ಆರಂಭಿಸಬೇಕು ಎಂದು ಆದೇಶಿಸಿದ್ದರು. ಈ ಆದೇಶದಿಂದಾಗಿ ನಗರ ಭಾಗದ ವಿದ್ಯಾರ್ಥಿಗಳಿಗೆ ಅಂತಹ ತೊಂದರೆ ಆಗದಿದ್ದರೂ ಹತ್ತಾರು ಕಿ.ಮೀ ಬಳಸಿ ಬರಬೇಕಾದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ದೊಡ್ಡ ತಲೆನೋವಾಗಿ ಪರಣಮಿಸಿದೆ. ಇನ್ನು ಶೇ.80ರಷ್ಟು ಅತಿಥಿ ಉಪನ್ಯಾಸಕರೇ ಇರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ಉಪನ್ಯಾಸಕರ ಸಂಬಳ ಹಾಗೂ ನೇಮಕಾತಿಯ ವಿಚಾರವೇ ಅತಂತ್ರವಾಗಿರುವಾಗ, ಬೆಳಿಗ್ಗೆ 8 ರಿಂದಲೇ ತರಗತಿ ಆರಂಭಿಸಬೇಕೆಂದು ಆದೇಶಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಬೆಳಿಗ್ಗೆ ಬಸ್ ಸಂಪರ್ಕವಿಲ್ಲ, ಸುರಕ್ಷಿತವೂ ಅಲ್ಲ:
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಎಂಟು ಗಂಟೆ ತರಗತಿ ಆರಂಭವಾಗುವುದಾದರೇ ಬಸ್ ಸಂಪರ್ಕವೇ ದೊಡ್ಡ ಸವಾಲು. ಬೈಂದೂರು ಭಾಗದಿಂದ ಕುಂದಾಪುರದ ಸರಕಾರಿ ಕಾಲೇಜಿನ ಹಲವಾರು ವಿದ್ಯಾರ್ಥಿಗಳು ತೆರಳುತ್ತಿದ್ದು ಬೆಳಿಗ್ಗೆ 6:30ಕ್ಕೆಲ್ಲಾ ಮನೆಯಿಂದ ಹೊರಡಬೇಕಾಗುತ್ತದೆ. ಬೈಂದೂರಿನಿಂದ ಕುಂದಾಪುರ ಮತ್ತೆ ಅಲ್ಲಿಂದ ಬೇರೆ ಬಸ್‌ನಲ್ಲಿ ತೆರಳಬೇಕಾಗುತ್ತದೆ. ಆದರೆ ಅಷ್ಟು ಬೇಗ ಯಾವ ಬಸ್ ಸಂಪರ್ಕವೂ ಸರಿಯಾಗಿಲ್ಲ. ಇನ್ನೂ ಎಷ್ಟೋ ವಿದ್ಯಾರ್ಥಿಗಳು ಕಾಡು ಹಾದಿಯಲ್ಲಿ ನಿರ್ಜನ ಹಾದಿಯನ್ನು ಬಳಸಿ ಬರುತ್ತಾರೆ. ಇಷ್ಟು ಬೇಗ ತರಗತಿ ಆರಂಭಿಸಿದರೆ ವಿದ್ಯಾರ್ಥಿನಿಯರ ಸುರಕ್ಷತೆಯೂ ಸವಾಲಾಗಿ ಪರಿಣಮಿಸಲಿದೆ. ಉಳಿದಂತೆ ಅದೆಷ್ಟೋ ಹಳ್ಳಿಗಳಲ್ಲಿ ಮೊದಲ ಬಸ್ ಬರುವುದೇ ಎಂಟು ಗಂಟೆಯ ಬಳಿಕವಷ್ಟೇ. ಅಂತಹ ವಿದ್ಯಾರ್ಥಿಗಳು ಏನು ಮಾಡಬೇಕು ಎಂಬುದಕ್ಕೆ ಶಿಕ್ಷಣ ಇಲಾಖೆಯ ಬಳಿ ಉತ್ತರವಿಲ್ಲ.

ಹಾಜರಾತಿ ಕಡಿಮೆಯಾದರೆ ಹೊಣೆ ಯಾರು:
ಶಿಕ್ಷಣ ಇಲಾಖೆಯ ಈ ನಿರ್ಧಾರದಿಂದಾಗಿ ದೂರದ ವಿದ್ಯಾರ್ಥಿಗಳಿಗೆ ಬಸ್ ಸಂಪರ್ಕವಂತೂ ಕಷ್ಟಸಾಧ್ಯ. ಬೆಳಿಗ್ಗೆ ೮ ಗಂಟೆಗೆ ತರಗತಿ ಆರಂಭಗೊಂಡರೆ ಹಾಜರಾಗುವುದಂತೂ ದೂರದ ಮಾತು. ಆದರೆ ಹಾಜರಾತಿಯ ಕೊರತೆಯಾದರೆ ಅದಕ್ಕೆ ವಿದ್ಯಾರ್ಥಿಗಳೇ ಹೊಣೆಯಾಗುವರೇ? ಹಾಜರಾತಿಯ ಕೊರತೆಯಿಂದಾಗಿ ಪರೀಕ್ಷೆಗೆ ಹಾಜರಾಗಲು ಅನುಮತಿ ಸಿಗದಿದ್ದರೆ ಅದಕ್ಕಾರು ಹೊಣೆ. ಸಿಲಬಸ್ ಅರ್ಥವಾಗದಿದ್ದರೇ ಪ್ರಶ್ನಿಸುವುದು ಯಾರನ್ನು? ಯಾವಾಗ? ಇಂತಹ ನೂರಾರು ಪ್ರಶ್ನೆಗಳು ಉದ್ಭವಿಸಿವೆ.

ಒಟ್ಟಿನಲ್ಲಿ ನಗರಕೇಂದ್ರಿತವಾಗ ಆದೇಶದಿಂದಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ಗ್ರಾಮೀಣ ಭಾಗಕ್ಕೆ ಬೆಳ್ಳಂಬೆಳಿಗ್ಗೆ ಸೂಕ್ತ ಬಸ್ ಸಂಪರ್ಕವಿಲ್ಲ. ನಿರ್ಜನ ಪ್ರದೇಶದಲ್ಲಿ ನಡೆದು ಬರುವ ವಿದ್ಯಾರ್ಥಿನಿಯರಿಗೆ ರಕ್ಷಣೆಯೂ ಇಲ್ಲ. ಗ್ರಾಮೀಣ ಭಾಗದ ಸ್ಥಿತಿಗತಿಗಳ ಬಗೆಗೆ ಸರಿಯಾದ ಮಾಹಿತಿಯಿಲ್ಲದೇ ಕಾಲೇಜು ಶಿಕ್ಷಣ ಇಲಾಖೆಯ ಈ ಯಡವಟ್ಟು ಆದೇಶವನ್ನು ಹಿಂದೆಗೆದುಕೊಳ್ಳಬೇಕು ಮತ್ತು ಉಪನ್ಯಾಸಕ ಕೊರತೆ, ಕಾಲೇಜು ಮೂಲಭೂತ ಸೌಕರ್ಯಗಳನ್ನು ಒದಗಿಸುವತ್ತ ಗಮನ ಹರಿಸಬೇಕು ಎಂಬುದು ವಿದ್ಯಾರ್ಥಿಗಳ ಆಗ್ರಹ.

 

Exit mobile version