Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಸರಕಾರಿ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಮ್ ಮಾಡಲು ವೈದ್ಯರಿಲ್ಲ. ಶೈತ್ಯಾಗಾರವೂ ಸರಿಯಿಲ್ಲ: ಮೃತರ ಸಂಬಂಧಿಗಳ ಆಕ್ರೋಶ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣಕ್ಕೆ ಮೃತದೇಹವನ್ನು ಕೂಡಲೇ ಪೋಸ್ಟ್ ಮಾರ್ಟಮ್ ಮಾಡದೇ, ಆಸ್ಪತ್ರೆಯ ಶೈತ್ಯಾಗಾರ ಘಟಕದಲ್ಲಿ ಇರಿಸಲಾಗಿತ್ತು. ಆದರೆ ಶವಾಗಾರದಲ್ಲಿ ಶೈತ್ಯಾಗಾರ ದುರಸ್ತಿಯಲ್ಲಿಲ್ಲದ್ದರಿಂದ ಮೃತದೇಹ ಕೆಡುವ ಸ್ಥಿತಿಗೆ ತಲುಪಿದೆ ಎಂದು ಮೃತರ ಸಂಬಂಧಿಗಳು ಆಸ್ಪತ್ರೆಗೆ ಮುತ್ತಿಗೆ ಹಾಕಿ ಸಿಬ್ಬಂಧಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಕರಣ ನಡೆದಿದೆ.

ಹೊಸಾಡು ವಿದ್ಯಾನಗರ ನಿವಾಸಿ ಸಯ್ಯದ್ ಅಬ್ಬಾಸ್ (65) ಎಂಬುವವರು ತಮ್ಮ ಮನೆಯ ಸಮೀಪದ ಗೇರು ಹಾಡಿಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದರು. ಒಂದು ದಿನ ಹುಡುಕಾಡಿದ ಬಳಿಕ ಅವರ ಮೃತದೇಹ ಪತ್ತೆಯಾಗಿದ್ದು ಪೋಸ್ಟ್‌ಮಾರ್ಟಮ್ ಮಾಡಲು ಬೈಂದೂರು ಸರಕಾರಿ ಆಸ್ಪತ್ರೆಗೆ ಭಾನುವಾರ ರಾತ್ರಿ ಕೊಂಡೊಯ್ಯಲಾಗಿತ್ತು. ರಾತ್ರಿ ಡ್ಯೂಟಿ ಡಾಕ್ಟರ್ ಇಲ್ಲದೇ ಇದ್ದದ್ದರಿಂದ ಶೈತ್ಯಾಗಾರ ಘಟಕದಲ್ಲಿ ಶವವನ್ನಿರಿಸಲಾಗಿತ್ತು. ಬೆಳಿಗ್ಗೆ ಪೋಸ್ಟ್ ಮಾರ್ಟಮ್ ಮಾಡಲು ಮೊದಲು ಮೃತರ ಸಂಬಂಧಿಗಳು ಶವವನ್ನು ನೋಡುವ ವೇಳೆ ಹುಳಗಳು ಹರಿದಾಡುತ್ತಿದ್ದವು. ಇಷ್ಟಾದರೂ ಇಂದು ಪೋಸ್ಟ್ ಮಾರ್ಟಮ್ ಮಾಡಲು ಡ್ಯೂಟಿ ಡಾಕ್ಟರ್ ಇಲ್ಲ. ಆಸ್ಪತ್ರೆ ಸಿಬ್ಬಂಧಿಗಳ ಅಜಾಗರೋಕತೆ ಅವ್ಯವಸ್ಥೆಗೆ ಕಾರಣ ಎಂದು ಮೃತರ ಸಂಬಂಧಿಗಳು ಆರೋಪಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

 

Exit mobile version