ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣಕ್ಕೆ ಮೃತದೇಹವನ್ನು ಕೂಡಲೇ ಪೋಸ್ಟ್ ಮಾರ್ಟಮ್ ಮಾಡದೇ, ಆಸ್ಪತ್ರೆಯ ಶೈತ್ಯಾಗಾರ ಘಟಕದಲ್ಲಿ ಇರಿಸಲಾಗಿತ್ತು. ಆದರೆ ಶವಾಗಾರದಲ್ಲಿ ಶೈತ್ಯಾಗಾರ ದುರಸ್ತಿಯಲ್ಲಿಲ್ಲದ್ದರಿಂದ ಮೃತದೇಹ ಕೆಡುವ ಸ್ಥಿತಿಗೆ ತಲುಪಿದೆ ಎಂದು ಮೃತರ ಸಂಬಂಧಿಗಳು ಆಸ್ಪತ್ರೆಗೆ ಮುತ್ತಿಗೆ ಹಾಕಿ ಸಿಬ್ಬಂಧಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಕರಣ ನಡೆದಿದೆ.
ಹೊಸಾಡು ವಿದ್ಯಾನಗರ ನಿವಾಸಿ ಸಯ್ಯದ್ ಅಬ್ಬಾಸ್ (65) ಎಂಬುವವರು ತಮ್ಮ ಮನೆಯ ಸಮೀಪದ ಗೇರು ಹಾಡಿಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದರು. ಒಂದು ದಿನ ಹುಡುಕಾಡಿದ ಬಳಿಕ ಅವರ ಮೃತದೇಹ ಪತ್ತೆಯಾಗಿದ್ದು ಪೋಸ್ಟ್‌ಮಾರ್ಟಮ್ ಮಾಡಲು ಬೈಂದೂರು ಸರಕಾರಿ ಆಸ್ಪತ್ರೆಗೆ ಭಾನುವಾರ ರಾತ್ರಿ ಕೊಂಡೊಯ್ಯಲಾಗಿತ್ತು. ರಾತ್ರಿ ಡ್ಯೂಟಿ ಡಾಕ್ಟರ್ ಇಲ್ಲದೇ ಇದ್ದದ್ದರಿಂದ ಶೈತ್ಯಾಗಾರ ಘಟಕದಲ್ಲಿ ಶವವನ್ನಿರಿಸಲಾಗಿತ್ತು. ಬೆಳಿಗ್ಗೆ ಪೋಸ್ಟ್ ಮಾರ್ಟಮ್ ಮಾಡಲು ಮೊದಲು ಮೃತರ ಸಂಬಂಧಿಗಳು ಶವವನ್ನು ನೋಡುವ ವೇಳೆ ಹುಳಗಳು ಹರಿದಾಡುತ್ತಿದ್ದವು. ಇಷ್ಟಾದರೂ ಇಂದು ಪೋಸ್ಟ್ ಮಾರ್ಟಮ್ ಮಾಡಲು ಡ್ಯೂಟಿ ಡಾಕ್ಟರ್ ಇಲ್ಲ. ಆಸ್ಪತ್ರೆ ಸಿಬ್ಬಂಧಿಗಳ ಅಜಾಗರೋಕತೆ ಅವ್ಯವಸ್ಥೆಗೆ ಕಾರಣ ಎಂದು ಮೃತರ ಸಂಬಂಧಿಗಳು ಆರೋಪಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
- ಮೃತದೇಹವನ್ನು ಒಂದು ದಿನದ ಬಳಿಕ ಪೋಸ್ಟ್ ಮಾರ್ಟಮ್‌ಗೆ ತರಲಾಗಿದೆ. ಯಾವುದೇ ವ್ಯಕ್ತಿ ಮೃತಪಟ್ಟ 24 ಗಂಟೆಯೊಳಗೆ ದೇಹ ಡಿಕಂಪೋಸ್ ಆಗಲು ಆರಂಭವಾಗುತ್ತದೆ. ದೇಹದಲ್ಲಿ ಹುಳ ಕಾಣಿಸಿಕೊಳ್ಳುವುದು ಸಹಜ. ಅವರು ಶವಗಾರದಲ್ಲಿ ಇರಿಸುವಾಗ ಮೇಲ್ನೋಟಕ್ಕೆ ಕಾಣದಿದ್ದರೂ ದೇಹದ ಒಳಭಾಗದಿಂದಲೇ ಆ ಪ್ರಕ್ರಿಯೆ ಆರಂಭಗೊಂಡಿರುತ್ತದೆ. ನೆನ್ನೆ ಹೊರಗಿನ ಉಷ್ಟಾಂಶ 26 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು. ಆದರೆ ಶವಾಗಾರದ ಶಿಥಿಲೀಕರಣ ಘಟಕದಿಂದ ಮೃತದೇಹವನ್ನು ತೆಗೆಯುವಾಗ 18 ಡಿಗ್ರಿ ಸೆಲ್ಸಿಯಸ್ ಇತ್ತು. ಹಾಗಾಗಿ ಶೈತ್ಯಾಗಾರದಲ್ಲಿ ಇರಿಸಿದ ಮೇಲೆ ಮೃತದೇಹ ಡಿಕಂಪೋಸ್ ಆಗಿಲ್ಲ. ಸಾಮಾನ್ಯವಾಗಿ ಶೈತ್ಯಾಗಾರ 8 ಡಿಗ್ರಿಯಷ್ಟಿರಬೇಕು. ಶನಿವಾರವೂ ಬೇರೊಂದು ಮೃತದೇಹವನ್ನಿಟ್ಟಾಗ ಅದು ಸರಿಯಾಗಿಯೇ ಇತ್ತು. ನಿನ್ನೆ ಮಾತ್ರ ಅದು 18ಡಿಗ್ರಿಯಷ್ಟು ತೋರಿಸುತ್ತಿದೆ. ಕೂಡಲೇ ಅದರಲ್ಲಿನ ತೊಂದರೆ ಸರಿಪಡಿಸಲಾಗುವುದು. – ಡಾ. ಪ್ರಶಾಂತ್ ಭಟ್, ವೈದ್ಯಾಧಿಕಾರಿ ಬೈಂದೂರು ಸಮುದಾಯ ಆಸ್ಪತ್ರೆ
- ಸಮುದಾಯ ಆಸ್ಪತ್ರೆಯಲ್ಲಿ ವೈದ್ಯರು ಕಡ್ಡಾಯವಾಗಿ ಇರಬೇಕು. ರೋಗಿಗಳು ಚಿಕಿತ್ಸೆಗೆ ಬಂದಾಗ, ಪೋಸ್ಟ್ ಮಾರ್ಟಮ್‌ನಂತಹ ಪ್ರಕರಣಗಳು ಬಂದಾಗ ವೈದ್ಯರಿಲ್ಲ ಎಂಬ ಸಬೂಬು ನೀಡುವುದು ಸರಿಯಲ್ಲ. ತುರ್ತು ಅಗತ್ಯವಿರುವವರೇ ಆಸ್ಪತ್ರೆಗೆ ಬರುವುದು. ಅವರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯುವಂತೆ ಮಾಡುವ ಜವಾಬ್ದಾರಿ ವೈದ್ಯರಿಗಿದೆ. ತಾಲೂಕು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳು ಆಸ್ಪತ್ರೆಯಲ್ಲಿ ಎಲ್ಲಾ ಸಮಯದಲ್ಲಿ ಸಮುದಾಯ ಆಸ್ಪತ್ರೆಯಲ್ಲಿ ವೈದ್ಯರು ಇರುವಂತೆ ಕ್ರಮ ಕೈಗೊಳ್ಳಬೇಕು. ಶೈತ್ಯಾಗಾರವನ್ನು ಕೂಡಲೇ ದುರಸ್ತಿಗೊಳಿಸಬೇಕು. – ಎಸ್. ರಾಜು ಪೂಜಾರಿ, ಸದಸ್ಯರು, ಉಡುಪಿ ಜಿಲ್ಲಾ ಕೆಡಿಪಿ