Kundapra.com ಕುಂದಾಪ್ರ ಡಾಟ್ ಕಾಂ

ಶ್ರಾವಣ ಮಾಸದ ಚೂಡಿ ಪೂಜೆ: ಜಿಎಸ್‌ಬಿ ಸಮಾಜದ ಮುತ್ತೈದೆಯರ ಪ್ರಮುಖ ಆಚರಣೆ

?

ಕುಂದಾಪ್ರ ಡಾಟ್ ಕಾಂ ಲೇಖನ.
ಕರಾವಳಿ ಭಾಗದಲ್ಲಿ ಮುಖ್ಯವಾಗಿ ಗೌಡಸಾರಸ್ವತ ಬ್ರಾಹ್ಮಣ ಸಮಾಜದ ಮುತ್ತೈದೆಯರಿಗೆ ವರ್ಷದ ಉಳಿದ ಎಲ್ಲ ಮಾಸಗಳಿಗಿಂತ ಶ್ರಾವಣಮಾಸ ಪ್ರಮುಖವಾದದ್ದು. ಅದಕ್ಕೆ ಕಾರಣ ಅವರು ಶ್ರಾವಣಮಾಸ ಪೂರ್ತಿ ಶುಕ್ರವಾರ ಹಾಗೂ ಭಾನುವಾರ ಮಾಡುವ ಚೂಡಿ ಪೂಜೆ. ಮುತ್ತೈದೆಯರು ಚೂಡಿ ಪೂಜೆ ಮಾಡುವುದು ತುಳಸಿ ಗಿಡಕ್ಕೆ. ತುಳಸಿಯ ತೌರುಮನೆ ಗಂಗಾನದಿ ಎನ್ನುವ ನಂಬಿಕೆಯೂ ಇದೆ. ಇದು ಕರಾವಳಿ ಭಾಗದಲ್ಲಿ ಆಚರಿಸಲ್ಪಡುವ ವಿಶಿಷ್ಟವಾದ ಸಂಪ್ರದಾಯಗಳಲ್ಲೊಂದು.

ಮನೆಯ ಮುಂದೆ ತುಳಸಿಕಟ್ಟೆ ಕಟ್ಟಿ, ಅದರಲ್ಲಿ ಹುಲುಸಾಗಿ ಬೆಳೆದ ತುಳಸಿಗಿಡ ನೆಟ್ಟು ಪ್ರತಿದಿವಸ ಅದರ ದರ್ಶನ ಮಾಡುತ್ತಿದ್ದರೆ ಸರ್ವದೋಷಗಳ ನಿವಾರಣೆಯಾಗುವುದಂತೆ. ಯಾವುದೇ ರೀತಿಯ ಅನಿಷ್ಟ, ಕೆಟ್ಟ ದೃಷ್ಟಿ ಇದ್ದರೂ ಪರಿಹಾರವಾಗುವುದೆನ್ನುವ ನಂಬಿಕೆ ಶ್ರದ್ಧಾವಂತರಿಗಿದೆ. ಇದರಿಂದ ಅನೇಕ ಆರೋಗ್ಯದ ಲಾಭಗಳೂ ಉಂಟು. ತುಳಸಿ ಎಲೆಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಶರೀರದೊಳಗಿನ ಕಲ್ಮಶವೆಲ್ಲವೂ ವಿಸರ್ಜನೆಯಾಗಿ ಶರೀರ ಸ್ವಚ್ಛವಾಗುವುದು. ತುಳಸಿಯಿಂದ ಮನೆಯ ಸುತ್ತಲಿನ ವಾತಾವರಣದಲ್ಲಿ ಪರಿಶುದ್ಧ ಪ್ರಾಣವಾಯು ಆಮ್ಲಜನಕ ವಿಪುಲವಾಗಿ ದೊರಕುತ್ತದೆ. ಅಲ್ಲದೆ ತುಳಸಿ ಕ್ರಿಮಿನಾಶಕವೂ ಹೌದು! ಚರ್ಮರೋಗ, ವಾತ, ಗಂಟಲು ನೋವು, ನೆಗಡಿ, ಎದೆನೋವು ಇತ್ಯಾದಿ ರೋಗಗಳಿಗೆ ತುಳಸಿಯಿಂದ ತಯಾರಿಸಿದ ಔಷಧ ರಾಮಬಾಣ.

ತುಳಸಿಯ ಈ ರೀತಿಯ ಬಹೂಪಯೋಗಿ ಗುಣಧರ್ಮದ ಕಾರಣದಿಂದ ಮಹಿಳೆಯರು ಪ್ರತಿದಿವಸ ಸ್ನಾನ ಮಾಡಿದ ಕೂಡಲೇ ತುಳಸಿಕಟ್ಟೆಗೆ ನೀರು ಹಾಕಿ ಪ್ರದಕ್ಷಿಣೆ ಹಾಕುವ ಪದ್ಧತಿ ಬಂದಿರಬಹುದು. ಆ ವೇಳೆಯಲ್ಲಿ ತುಳಸಿಯಿಂದ ಉತ್ತಮ ಪರಿಣಾಮಗಳು ಅವರ ಮೇಲೆ ಆಗಬಹುದಲ್ಲವೆ?

ಚೂಡಿ ಎಂದರೇನು?: ನಿಜ, ಕರಾವಳಿ ಭಾಗದ ಮಹಿಳೆಯರಿಗೆ ಶ್ರಾವಣಮಾಸ ಬಂತೆಂದರೆ ಚೂಡಿ ಪೂಜೆ ನೆನಪಾಗುತ್ತದೆ. ಹೂವು, ಹುಲ್ಲುಗಳನ್ನು ಸೇರಿಸಿ ಕಟ್ಟುವುದಕ್ಕೆ ಚೂಡಿ ಎನ್ನುತ್ತಾರೆ. ಚೂಡಿಯೊಂದಿಗೆ ತುಳಸಿಕಟ್ಟೆ, ಬಾವಿಕಟ್ಟೆ ಹಾಗೂ ಹೊಸ್ತಿಲು ಪೂಜೆಯನ್ನು ಮಾಡುತ್ತಾರೆ. ಶ್ರಾವಣಮಾಸದ ಚೂಡಿಪೂಜೆಗೆ ಸೂರ್ಯದೇವರ ಹಾಗೂ ನಿಸರ್ಗದ ಪೂಜೆ ಎಂಬ ಹೆಸರೂ ಇದೆ. ಹೌದು ‘ಚೂಡಿ’ ಎಂದರೆ ಗರಿಕೆಹುಲ್ಲು, ವಿಷ್ಣುಕ್ರಾಂತಿ, ವಾರಾಹೀ, ಭೃಂಗರಾಜ, ಶಶಶ್ರುತಿ, ಸ್ಪರ್ಷಾಸನಾ, ಇಂದ್ರವಲ್ಲೀ, ಲಕ್ಷಿ?ಮ?, ಸಹದೇವಿ ಮತ್ತು ಭದ್ರಾ ಈ ಹತ್ತು ಹೂ(ದಶಪುಷ್ಪ)ಗಳನ್ನು ಬಾಳೆಗಿಡದ ಒಣನಾರಿನಿಂದ ಒಟ್ಟಾಗಿ ಕಟ್ಟುವ ಹೂವಿನ ಗುಚ್ಛ ಎನ್ನಬಹುದು. ಇವುಗಳ ದೆಸೆಯಿಂದ ಪಾಪ, ಬಡತನ, ಬಾಲಗ್ರಹಗಳು ದೂರವಾಗಿ, ತ್ರಿದೋಷಗಳು ನಾಶವಾಗುತ್ತವೆಂಬ ನಂಬಿಕೆ ಇದೆ.

ಆಚರಣೆ ಹೀಗಿರುತ್ತದೆ: ಶ್ರಾವಣಮಾಸದ ಪ್ರತಿ ಶುಕ್ರವಾರ ಮತ್ತು ಭಾನುವಾರ ಮುತೆದೆ ಬೆಳಗ್ಗೆ ಬೇಗ ಎದ್ದು ಮಂಗಲಸ್ನಾನಗೈದು, ಚೂಡಿ ಪೂಜೆ ಮಾಡುತ್ತಾಳೆ. ಮೊದಲು ಬಾವಿಕಟ್ಟೆಗೆ ಹೂ, ಅರಿಶಿಣ-ಕುಂಕುಮ ಹಚ್ಚಿ, ನೀರಿಗೂ ಅರ್ಪಿಸಿ ಶುದ್ಧ ನೀರನ್ನು ತಂದು, ತುಳಸಿಕಟ್ಟೆಯನ್ನು ತೊಳೆದು, ರಂಗೋಲಿ ಹಾಕಿ, ಹೊಸ್ತಿಲ ಮೇಲೆ ರಂಗೋಲಿಯನ್ನು ಬರೆದು, ಹೂವಿಟ್ಟು ಚೂಡಿ ಪೂಜೆ ಆರಂಭಿಸಬೇಕು.

ಆ ಬಳಿಕ ತುಳಸಿಯ ಮುಂದೆ ದೀಪವನ್ನು ಹಚ್ಚಿಡಬೇಕು. ತುಳಸಿಕಟ್ಟೆಗೆ ನೀರು ಹಾಕಿ, ತುಳಸಿಗೆ ಗಂಧ, ಹರಿದ್ರಾ-ಕುಂಕುಮಗಳನ್ನು ಹಚ್ಚಿ, ಹೂವಿಟ್ಟು ಅಲಂಕರಿಸಬೇಕು. ಕಟ್ಟಿದ ಚೂಡಿಗಳನ್ನು ತುಳಸಿಮಾತೆಗೆ ಅರ್ಪಿಸಿ, ಕಾಯಿ ಒಡೆದು, ಹಣ್ಣು-ಕಾಯಿ, ಪಂಚಕಜ್ಜಾಯವನ್ನು ನೈವೇದ್ಯ ಮಾಡಬೇಕು ಹಾಗೂ ಆರತಿ ಬೆಳಗಬೇಕು. ನಂತರ ತುಳಸಿಗೆ ಹಾಗೂ ಸೂರ್ಯದೇವನಿಗೆ ಅಕ್ಷತೆಯನ್ನು ಹಾಕುತ್ತ ತುಳಸಿಕಟ್ಟೆಗೆ ಐದು ಪ್ರದಕ್ಷಿಣೆಗಳನ್ನು ಮಾಡಬೇಕು. ನಂತರ ತೆಂಗಿನಮರಕ್ಕೆ ಒಂದು ಚೂಡಿ ಅರ್ಪಿಸಬೇಕು. ಮಡಿದ ಹಿರಿಯರ ಸ್ಮರಣೆ ಮಾಡಿ ಮನೆಯ ಮಾಡಿನ ಮೇಲೆ ಒಂದು ಚೂಡಿ ಇಡಬೇಕು. ಮನೆಯೊಳಗೆ ಪ್ರವೇಶಿಸುವಾಗ ಮನೆಯ ಹೆಬ್ಬಾಗಿಲಿನ ಹೊಸ್ತಿಲ ಪೂಜೆ ಮಾಡಿ ದೇವರಕೋಣೆಗೆ ಬಂದು ಸರ್ವದೇವರನ್ನು ಸ್ಮರಿಸಿ, ತನ್ನ ಮನೋಭಿಲಾಷೆಯನ್ನು ಹೇಳಿ ದೇವರಿಗೆ ಒಂದು ಚೂಡಿಯನ್ನು ಅರ್ಪಿಸಬೇಕು.

ಮೊದಲಿನ ಹೂವುಗಳು ಇಂದು ಸಿಗುವುದಿಲ್ಲ. ಆ ಕಾರಣದಿಂದ ಇಂದು ಚೂಡಿ ತಯಾರಿಸಲು ತೇರಿನ ಹೂವು, ಕರವೀರ, ರತ್ನಗಂಧಿ, ಗೊರಟೆ, ದಾಸವಾಳ, ಮಂದಾರ, ಶಂಖಪುಷ್ಪ, ಮಿಠಾಯಿ ಹೂವುಗಳೊಂದಿಗೆ ನಿಸರ್ಗದತ್ತವಾಗಿ ದೊರಕುವ ನೆಲನೆಲ್ಲಿ ಇತ್ಯಾದಿ ಗದ್ದೆಯ ಅಂಚಿನಲ್ಲಿ ಬೆಳೆಯುವ ಸಸ್ಯದ ಎಲೆಗಳನ್ನು ಬಳಸಿ ಚೂಡಿ ಕಟ್ಟುತ್ತಾರೆ.

ಹಿಂದಿನ ಕಾಲದಲ್ಲಿ ಬೆಳಗ್ಗೆ ಬೇಗ ಎದ್ದು ಗದ್ದೆಯ ಅಂಚಿನ ಮೇಲೆ ಚಿಗುರಿರುವ ಚೂಡಿಗೆ ಬೇಕಾಗುವ ಹೂವು ಹಾಗೂ ಪತ್ರೆಗಳನ್ನು ತಂದು, ಜೋಡಿಸಿ ಬಾಳೆಯ ನಾರಿನಿಂದ ಕಟ್ಟಿಟ್ಟರೆ ಅರ್ಧ ಕೆಲಸ ಮುಗಿದಂತಾಗುತ್ತಿತ್ತು. ಆ ಕಾಲದಲ್ಲಿ ಮನೆತುಂಬ ಮಕ್ಕಳಿರುತ್ತಿದ್ದರು. ಅವರೇ ಹೋಗಿ ಚೂಡಿ ಸಾಮಗ್ರಿಗಳನ್ನು ಕಿತ್ತು ತರುತ್ತಿದ್ದರು. ಇದರಿಂದ ಬಾಲ್ಯದಲ್ಲಿಯೇ ಮಕ್ಕಳಿಗೆ ತಮ್ಮ ಸುತ್ತಮುತ್ತಲಿನ ಮರ, ಗಿಡ, ಬಳ್ಳಿಗಳ ಪರಿಚಯವಾಗುತ್ತಿತ್ತು.

ದೂರದ ಊರಿನಲ್ಲಿರುವ ನೆಂಟರಿಗೆ ಅಂಚೆಯ ಮೂಲಕ ಚೂಡಿ ಕಳುಹಿಸುತ್ತಿದ್ದರು. ನಮ್ಮ ಹಿರಿಯರು ಸಹಬಾಳ್ವೆಗೆ ಎಷ್ಟೊಂದು ಮಹತ್ವ ನೀಡುತ್ತಿದ್ದರು ಎನ್ನುವುದು ಇದರಿಂದಲೇ ಅರ್ಥವಾಗುತ್ತದೆ. ಹೊಸದಾಗಿ ಲಗ್ನವಾದ ವಧುವು ಪ್ರಥಮ ಶುಕ್ರವಾರ ಅಥವಾ ಭಾನುವಾರ ಗಂಡನ ಮನೆಯಲ್ಲಿ ಹಾಗೂ ನಂತರದ ಶುಕ್ರವಾರ ಅಥವಾ ಭಾನುವಾರ ತವರುಮನೆಯಲ್ಲಿ ಚೂಡಿ ಪೂಜೆ ಮಾಡಿ, ನೆಂಟರಿಷ್ಟರಿಗೆ ಹಂಚುವ ಪದ್ಧತಿ ಕೂಡ ಇದೆ.

ಸಂಜೆ ವಧುವನ್ನು ದೇವಾಲಯಕ್ಕೆ ಕರೆದುಕೊಂಡು ಹೋಗಿ ಲಕ್ಷಿ?ಮ?ದೇವಿಗೆ ಫಲ-ತಾಂಬೂಲ ಸಹಿತ ಚೂಡಿ ಇರಿಸಿ ಬರುತ್ತಾರೆ. ಚೂಡಿ ಪೂಜೆ ಮಾಡುವಾಗ ಮನೆಯ ಹೊಸ್ತಿಲಿಗೆ ಪೂಜೆ ಮಾಡಿ ಚೂಡಿ ಇಡುವುದು ಸಹ ‘ಭಾಗ್ಯಲಕ್ಷಿ’ ಪೂಜೆಯೇ ಆಗಿದೆ. ಇತ್ತೀಚೆಗೆ ಸಾರ್ವಜನಿಕವಾಗಿ ಚೂಡಿ ಪೂಜನ, ಚೂಡಿ ಪ್ರದರ್ಶನ, ಚೂಡಿ ಸ್ಪರ್ಧೆಗಳು ನಡೆಯುತ್ತಿವೆ. ಒಟ್ಟಿನಲ್ಲಿ ಪ್ರಕೃತಿಗೆ ಸಂಬಂಧಿಸಿದ ಈ ಚೂಡಿ ಹಬ್ಬ ನಿಜಕ್ಕೂ ಕರಾವಳಿ ಭಾಗದ ವಿಶಿಷ್ಟವಾದ ಆಚರಣೆಯೇ ಸರಿ!

– ಅರಗೋಡು ಸುರೇಶ್ ಶೆಣೈ

?
Exit mobile version